ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಬಹ್ರೇನ್ನಲ್ಲಿ “ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್” ನೀಡಿ ಗೌರವಿಸಲಾಯಿತು. ಗಲ್ಫ್ ರಾಷ್ಟ್ರದ ಪ್ರವಾಸದಲ್ಲಿದ್ದ ಮೋದಿ ಅವರು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ವಿವಿಧ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಮಾತುಕತೆಯನ್ನೂ ನಡೆಸಿದ್ದಾರೆ. ಬಹ್ರೇನ್ಗೆ ಭೇಟಿ ನೀಡಿದ ಭಾರತದ ಮೊತ್ತ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಪ್ರಶಸ್ತಿಯನ್ನು ಸ್ವೀಕರಿಸುವಾಗ ಪ್ರಧಾನಿ ಮೋದಿ, “ಇದು ಇಡೀ ಭಾರತಕ್ಕೆ ಸಂದ ಗೌರವವಾಗಿದೆ. ಇದು ಬಹ್ರೇನ್ ಸಾಮ್ರಾಜ್ಯ ಮತ್ತು ಭಾರತದ ನಡುವಿನ ನಿಕಟ ಮತ್ತು ಸ್ನೇಹ ಸಂಬಂಧದ ಸಂಕೇತವಾಗಿದೆ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಭೇಟಿಯನ್ನು ನೀಡಿದ್ದ ವೇಳೆ ಮೋದಿಯವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಜಾಯೆದ್’ ಅನ್ನು ನೀಡಿ ಗೌರವಿಸಲಾಯಿತು. ಅದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್ನ ಅತ್ಯುನ್ನತ ಗೌರವ “ರೂಲ್ ಆಫ್ ನಿಶಾನ್ ಇಝುದ್ದೀನ್”, ಪ್ಯಾಲೆಸ್ಟೈನ್ನ ಗ್ರ್ಯಾಂಡ್ ಕಾಲರ್, ಅಫ್ಘಾನಿಸ್ತಾನದ ಅಮೀರ್ ಅಬ್ದುಲ್ಲಾ ಖಾನ್ ಪ್ರಶಸ್ತಿ ಮತ್ತು ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ಅಜೀಜ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಹಲವು ಸಂಸ್ಥೆಗಳ ಪ್ರಶಸ್ತಿಗಳು, ಗೌರವಗಳು ಅವರಿಗೆ ಒಲಿದು ಬಂದಿದೆ.
ಪ್ರಾದೇಶಿಕ ಶಕ್ತಿಯಿಂದ ಜಾಗತಿಕ ಕೊಡುಗೆದಾರ ಎನ್ನುವ ಮಟ್ಟಕ್ಕೆ ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಕೀರ್ತಿಯು ಮೋದಿಯವರದ್ದಾಗಿದೆ. ಭಾರತದ ಘನತೆಯನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮೋದಿಯವರಿಗೆ ಸಿಕ್ಕ ನಿರ್ದಿಷ್ಟ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತವೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಪ್ಯಾಲೆಸ್ಟೈನ್ ಪ್ರಧಾನಿ ಮೋದಿಯವರನ್ನು ಗೌರವಿಸುತ್ತಿದೆ ಮತ್ತು ಒಂದು ಅರ್ಥದಲ್ಲಿ ಭಾರತದ ಕಡೆಗಿನ ಇಸ್ಲಾಮಿಕ್ ರಾಷ್ಟ್ರಗಳ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗುತ್ತಿದೆ ಎಂಬುದಕ್ಕೆ ಇವುಗಳು ಉದಾಹರಣೆಗಳಾಗಿವೆ.
ಅಂತರ್ಗತವಾಗಿ ನಿಧಾನಗತಿಯಲ್ಲಿ ಸಾಗುವ ವಿದೇಶಿ ರಾಜತಾಂತ್ರಿಕ ಸಂಬಂಧಗಳ ಯಥಾಸ್ಥಿತಿಯ ವಿರುದ್ಧ ನಿರಂತರ ಹೋರಾಟವನ್ನು ನಡೆಸಬೇಕಾದ ಅಗತ್ಯವಿರುತ್ತದೆ, ಆದರೆ, ಈ ವಿಷಯದಲ್ಲಿ ಪ್ರಧಾನಿ ಮೋದಿಯವರ ಪ್ರಾಯೋಗಿಕ ಮತ್ತು ಪೂರ್ವಭಾವಿ ವಿಧಾನವು ಭಾರತೀಯ ರಾಜತಾಂತ್ರಿಕ ಪ್ರಯತ್ನಗಳಿಗೆ ಶೀಘ್ರ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಏಷ್ಯಾದ ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಭಾರತದ ಸ್ನೇಹ ಸಂಬಂಧವು ಒಂದು ಗಮನಾರ್ಹ ಉದಾಹರಣೆಯಾಗಿದೆ. ಭಾರತದಲ್ಲಿ ಮೋದಿಯವರನ್ನು ಒಂದು ನಿರ್ದಿಷ್ಟ ವಿಭಾಗದ ಮಾಧ್ಯಮಗಳು ‘ಮುಸ್ಲಿಂ ವಿರೋಧಿ’ ಎಂದು ಚಿತ್ರಿಸಿದವು. ಆದರೆ ಜಾಗತಿಕ ಮಟ್ಟದಲ್ಲಿ, ಇಸ್ಲಾಮಿಕ್ ರಾಷ್ಟ್ರಗಳು ಪ್ರಶಸ್ತಿ ಮತ್ತು ಗೌರವಗಳನ್ನು ನೀಡುವ ಮೂಲಕ ಪ್ರಧಾನಿ ಮತ್ತು ಭಾರತಕ್ಕೆ ಗೌರವವನ್ನು ಸಲ್ಲಿಸುತ್ತಿವೆ.
ಈ ಗೌರವಗಳು ಇನ್ನಷ್ಟು ಆಸಕ್ತಿದಾಯಕವಾಗುವುದು ಅದನ್ನು ಮೋದಿಯವರು ಸ್ವೀಕರಿಸಿದ ಸಂದರ್ಭದಿಂದಾಗಿ. 370 ನೇ ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿದ ನಂತರ ಪಾಕಿಸ್ಥಾನವು ಭಾರತದ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಬಹ್ರೇನ್ನ “ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್” ಮತ್ತು ಯುಎಇಯ ‘ಆರ್ಡರ್ ಆಫ್ ಜಾಯೆದ್’ ಪ್ರಶಸ್ತಿಗಳು ಭಾರತದ ಪ್ರಧಾನಿಗೆ ಸಂದಿವೆ. ಪಾಕಿಸ್ಥಾನವು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಧಾರ್ಮಿಕ ಹೋರಾಟವನ್ನು ಸೃಷ್ಟಿಸುವ ಬಗ್ಗೆ ಮಾತನ್ನಾಡುತ್ತಿದೆ. ಆದರೆ ಗಲ್ಫ್ ಇಸ್ಲಾಮಿಕ್ ರಾಷ್ಟ್ರಗಳು ಈ ಪ್ರಶಸ್ತಿಗಳ ಮೂಲಕ ಭಯೋತ್ಪಾದಕ ರಾಷ್ಟ್ರವನ್ನು ಮೂಲೆಗುಂಪು ಮಾಡಿರುವುದಲ್ಲದೇ, ಅದರ ಕಟ್ಟುಕಥೆಗಳನ್ನು ತಿರಸ್ಕರಿಸಿದೆ. ಭಾರತವನ್ನು ಗೌರವಾದರಗಳಿಂದ ಕಾಣುತ್ತಿದೆ.
ಪ್ರಧಾನಿ ಮೋದಿಯವರ “ನವೀನ ವಿದೇಶಾಂಗ ನೀತಿ” ಮುಸ್ಲಿಂ ಜಗತ್ತಿನೊಂದಿಗೆ ಭಾರತದ ಸಂಬಂಧವನ್ನು ಅಭೂತಪೂರ್ವ ಮಟ್ಟದಲ್ಲಿ ಅನುಕೂಲಕರ ಸ್ಥಾನಕ್ಕೆ ತಂದಿದೆ ಎಂದು ಹಲವಾರು ತಜ್ಞರು ಅಭಿಪ್ರಾಯಿಸುತ್ತಾರೆ.
“ಮುಸ್ಲಿಂ ಜಗತ್ತಿಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರ ವೈಯಕ್ತಿಕ ರಾಜತಾಂತ್ರಿಕ ಪ್ರಭಾವವು ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಿದೆ. ಇದು ಭಾರತಕ್ಕೆ ಗಣನೀಯ ಪ್ರಮಾಣದ ಹೂಡಿಕೆಯನ್ನು ತಂದುಕೊಟ್ಟಿದೆ. ಹಜ್ ಕೋಟಾದ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಪಶ್ಚಿಮ ಏಷ್ಯಾದ ಜೈಲುಗಳಲ್ಲಿ ಬಂಧಿಯಾಗಿದ್ದ ಹಲವಾರು ಕೈದಿಗಳು ಮತ್ತೆ ತವರಿಗೆ ಮರಳಿ ಪ್ರೀತಿಪಾತ್ರರೊಂದಿಗಿರಲು ಕಾರಣವಾಗಿದೆ ”ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಅದೇನೇ ಇರಲಿ, ಇಸ್ಲಾಮಿಕ್ ಜಗತ್ತು ಪಾಕಿಸ್ಥಾನದ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಮತ್ತು ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ದೃಢವಾಗಿ ನಿಂತಿದೆ ಎಂಬ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ತನ್ನ ಹೇಡು ಮಿಲಿಟರಿ ಆಡಳಿತವನ್ನು ಶಾಶ್ವತಗೊಳಿಸಲು ಪಾಕಿಸ್ಥಾನವು ತಾನು ಕೆಲವು ದಶಕಗಳಿಂದ ಪ್ರತಿಪಾದಿಸುತ್ತಾ ಬರುತ್ತಿರುವ ‘ಮುಸ್ಲಿಂ ಉಮ್ಮಾ’ ಸಿದ್ಧಾಂತವು ಧ್ವಂಸವಾಗಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾಗದೆ ಪಾಕಿಸ್ಥಾನ ತೊಳಲಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.