
ಬೆಂಗಳೂರು: ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ. ಈಗ ಇದು ಒಂದು ಬೆಂಗಳೂರಲ್ಲ; 5 ಬೆಂಗಳೂರು ಎಂದು ಟೀಕಿಸಿದರು.
ಜಿಬಿಎ (ಗ್ರೇಟರ್ ಬೆಂಗಳೂರು) ಚುನಾವಣೆ ತಯಾರಿ ಸಂಬಂಧ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರಿನ ಅಮರ್ ಕನ್ವೆನ್ಷನ್ ಸಭಾಂಗಣದಲ್ಲಿ ಇಂದು ಪ್ರಮುಖರ ‘ಸಂಕಲ್ಪ’ ಸಭೆ ನಡೆಯಿತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನಮನದಿಂದ ಈಗ ಕಾಂಗ್ರೆಸ್ ಹೊರಟು ಹೋಗಿದೆ. ಹೆಣ್ಮಕ್ಕಳು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರಕಾರವನ್ನು ಸಹಿಸಿಕೊಳ್ಳಬೇಕಾದ ನೋವು ನಮಗಿದೆ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ಸುಮಾರು 400 ಬೂತ್ಗಳಿದ್ದು, 4 ಲಕ್ಷ ಮತದಾರರಿದ್ದಾರೆ. ಬೂತ್ ಮಟ್ಟದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ವಿನಂತಿಸಿದರು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ಕೆಲವು ಕುತಂತ್ರಗಳಿಗೆ ನಾವು ಸಮರ್ಥ ಉತ್ತರ ಕೊಡಲಾಗಲಿಲ್ಲ ಎಂದು ವಿಶ್ಲೇಷಿಸಿದರು.
ನಾನು ಕಳೆದ 46-47 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ಸಿನಲ್ಲಿ ಹತ್ತಾರು ಜನರು ಟಿಕೆಟ್ಗಾಗಿ ಪ್ರಯತ್ನ ಮಾಡುತ್ತಾರೆ. ಒಬ್ಬರಿಗೆ ಟಿಕೆಟ್ ಕೊಟ್ಟರೆ ಇನ್ನುಳಿದವರು ಸೇರಿ ಸೋಲಿಸಿ ಬಂದು ಸಿಹಿ ತಿನ್ನುವುದನ್ನು ನಾನು ಗಮನಿಸಿದ್ದೇನೆ. ಬಿಜೆಪಿ ಹಾಗಲ್ಲ; ಗೆಲ್ಲಿಸಿ ಬಂದು ಸಿಹಿ ತಿನ್ನುತ್ತೇವೆ ಎನ್ನುತ್ತಿದ್ದರು. ಈ ಕ್ಷೇತ್ರದಲ್ಲಿ ಮತ್ತು ಈಚಿನ ದಿನಗಳಲ್ಲಿ ಕೆಲವೆಡೆ ಕಾಂಗ್ರೆಸ್ಸಿನ ಆ ಜಾಡ್ಯ ನಮಗೂ ಅಂಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಜನಸಂಖ್ಯೆ ಹೆಚ್ಚಾದಂತೆ ನಗರ ಬೆಳೆದಿದೆ. ಇವತ್ತು ಸ್ಥಳೀಯರಿಗಿಂತ ಬಹುಸಂಖ್ಯಾತರು ಯಾರೆಂದರೆ ಅದು ಹೊರಗಿನವರು. ಬೆಂಗಳೂರು ಆರ್ಥಿಕವಾಗಿ ಬೆಳೆಯುತ್ತಿದೆ. ಕೈಗಾರಿಕೀಕರಣ ನಡೆದಿದೆ. ಹೊರಗಿನವರ ವಲಸೆ ಹೆಚ್ಚಾಗಿ ಅದು ಬೆಳೆಯುತ್ತ ಸಾಗಿದೆ. ಕೆಂಪೇಗೌಡರ ಬೆಂಗಳೂರು ಬೆಳವಣಿಗೆಗೆ ಕಡಿವಾಣ ಹಾಕಿ ತುಮಕೂರು, ಮಂಡ್ಯದಂಥ ಊರು ಬೆಳೆಯುವಂತೆ ನೋಡಬೇಕಿತ್ತು ಎಂದು ತಿಳಿಸಿದರು. ಗುಲ್ಬರ್ಗ, ಧಾರವಾಡ ಬೆಳೆಯಲಿ ಎಂಬ ಭಾವನೆ ಬರಲೇ ಇಲ್ಲ. ಮುಂದೆ ಇದು ಉಸಿರಾಟದ ತೊಂದರೆಗೆ ಕಾರಣ ಆದೀತೆಂದು ಎಚ್ಚರಿಸಿದರು.
ಕಾಂಗ್ರೆಸ್ಸಿನ ಈಗಿನ ಸರಕಾರ ಜನರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಸಾವಿರಾರು ಜನರಿಗೆ ಅವಕಾಶ ಕಲ್ಪಿಸಬಹುದು ಎಂದು ತಿಳಿಸಿದರು. ಅಧಿಕಾರಕ್ಕೆ ಬರದೇ ಇದ್ದರೆ ಹೋರಾಟಗಳು ಮುಂದುವರೆಯುತ್ತವೆ. ಸರಕಾರದ ನ್ಯೂನತೆಗಳ ವಿರುದ್ಧ ನಾವು ಹೋರಾಟ ಮುಂದುವರೆಸಬೇಕು ಎಂದು ಮನವಿ ಮಾಡಿದರು.
ಚುನಾವಣೆಗಾಗಿ ಪಕ್ಷವನ್ನು ಅಣಿ ಮಾಡುವುದು, ಶಕ್ತಿ ವರ್ಧನೆ, ಬಿಎಲ್ಎ 2 ಗಳು ಯಾವ ರೀತಿ ಕೆಲಸ ಮಾಡಬೇಕೆಂಬ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು. ನೀವೆಲ್ಲರೂ ನೈಜ ಸಂಕಲ್ಪ ಮಾಡಿದ್ದರೆ ತಮ್ಮೇಶ್ ಗೌಡರು ಇವತ್ತು ಶಾಸಕರಾಗುತ್ತಿದ್ದರು ಎಂದು ನುಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ ಅವರು ಮಾತನಾಡಿ, ಸ್ಥಳೀಯ ಶಾಸಕರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಅಭಿಯಾನ ನಡೆಸುವುದಾಗಿ ಹೇಳಿದರು. ಶಾಸಕ, ಮಂತ್ರಿಯಾಗಿ ವೈಫಲ್ಯ, ಭ್ರಷ್ಟಾಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನ್ನು ಶೇರ್ ಮಾಡುವಂತೆ ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


 
			
