ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಮೊಟಕುಗೊಳಿಸಿದ್ದು ಮತ್ತು ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ್ದು ನರೇಂದ್ರ ಮೋದಿ ಸರ್ಕಾರದ ಅತೀದೊಡ್ಡ ನಿರ್ಧಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಸರ್ಕಾರದ ನಿರ್ಧಾರ ಬಗ್ಗೆ ಅಚಲ ನಂಬಿಕೆಯನ್ನು ವ್ಯಕ್ತಪಡಿಸಿರುವ ಪ್ರಧಾನಿ ಮೋದಿಯವರು, ದೇಶ ಮತ್ತು ಜಮ್ಮು ಕಾಶ್ಮೀರದ ಭವಿಷ್ಯವನ್ನು ಇದು ಉತ್ತಮವಾಗಿಡಲಿದೆ ಎಂದಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಮೋದಿಯವರು, “ಕಾಶ್ಮೀರದ ಬಗೆಗಿನ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಜನರ ಪಟ್ಟಿಯನ್ನೊಮ್ಮೆ ದಯಮಾಡಿ ನೋಡಿ, ಸಾಮಾನ್ಯ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು, ರಾಜಕೀಯ ವಂಶಗಳು, ಭಯೋತ್ಪಾದನೆಯ ಬಗ್ಗೆ ಸಹಾನುಭೂತಿ ಹೊಂದಿರುವವರು ಮತ್ತು ಪ್ರತಿಪಕ್ಷದ ಕೆಲವು ಸ್ನೇಹಿತರು ಪಟ್ಟಿಯಲ್ಲಿ ಇರುವವರು. ಭಾರತದ ಜನರು ತಮ್ಮ ರಾಜಕೀಯ ಆದ್ಯತೆಗಳನ್ನು ಲೆಕ್ಕಿಸದೆಯೇ , ಜಮ್ಮು, ಕಾಶ್ಮೀರ ಮತ್ತು ಲಡಾಖ್ ಬಗೆಗೆ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಬೆಂಬಲಿಸಿದ್ದಾರೆ. ಇದು ರಾಷ್ಟ್ರದ ಬಗೆಗಿನ ನಿರ್ಧಾರವೇ ಹೊರತು, ರಾಜಕೀಯದ ಬಗೆಗಿನ ನಿರ್ಧಾರ ಅಲ್ಲ. ಅಸಾಧ್ಯವೆಂದು ಈ ಹಿಂದೆ ಭಾವಿಸಲಾಗಿದ್ದ ಕಠಿಣ ಅಗತ್ಯ ನಿರ್ಧಾರಗಳು ಇಂದು ವಾಸ್ತವವಾಗುತ್ತಿರುವುದನ್ನು ಭಾರತದ ಜನರು ನೋಡುತ್ತಿದ್ದಾರೆ” ಎಂದಿದ್ದಾರೆ.
370ನೇ ವಿಧಿಯ ನಿಬಂಧನೆಗಳು ಭಾರತಕ್ಕೆ ಹೇಗೆ ಹಾನಿ ಮಾಡಿದೆ ಎಂಬುದನ್ನು ವಿವರಿಸಿರುವ ಮೋದಿ, “370 ಮತ್ತು 35 (ಎ) ವಿಧಿಗಳು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅನ್ನು ಹೇಗೆ ಸಂಪೂರ್ಣವಾಗಿ ಪ್ರತ್ಯೇಕಿಸಿವೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾದ ಸಂಗತಿಯಾಗಿದೆ. ಏಳು ದಶಕಗಳಿಂದ ಈ ವಿಧಿಗೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ನಾಗರಿಕರನ್ನು ಅಭಿವೃದ್ಧಿಯ ಫಲಗಳಿಂದ ದೂರವಿಡಲಾಯಿತು. ದೊಡ್ಡ ಅಘಾತವೆಂದರೆ, ಆದಾಯವನ್ನು ಹೆಚ್ಚಿಸುವ ಎಲ್ಲಾ ಆರ್ಥಿಕ ಮಾರ್ಗಗಳನ್ನು ಮುಚ್ಚಲಾಯಿತು. ನಮ್ಮ ವಿಧಾನವು ವಿಭಿನ್ನವಾಗಿದೆ – ಬಡತನದ ಕ್ರೂರತೆಯ ಬದಲು, ಜನರಿಗೆ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ನಾವು ನೀಡಬಯಸುತ್ತೇವೆ. ಅಲ್ಲಿ ಈಗ ನಾವು ಅಭಿವೃದ್ಧಿಗೆ ಅವಕಾಶವನ್ನು ನೀಡುತ್ತೇವೆ” ಎಂದಿದ್ದಾರೆ.
“ಜಮ್ಮು, ಕಾಶ್ಮೀರ ಮತ್ತು ಲಡಾಖ್ನಲ್ಲಿನ ನನ್ನ ಸಹೋದರಿ ಮತ್ತು ಸಹೋದರರು ಯಾವಾಗಲೂ ಉತ್ತಮ ಭವಿಷ್ಯವನ್ನು ಹೊಂದಲು ಬಯಸಿದ್ದರು, ಆದರೆ 370 ನೇ ವಿಧಿ ಅವರನ್ನು ಶಕ್ತಗೊಳಿಸಲಿಲ್ಲ. ಮಹಿಳೆಯರು ಮತ್ತು ಮಕ್ಕಳು, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಇದರಿಂದ ಅನ್ಯಾಯವಾಗಿದೆ. ಮುಖ್ಯವಾಗಿ, ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರ ನವೀನ ಕೌಶಲಗಳ ಬಳಕೆಯನ್ನು ಮಾಡಲಾಗಿಲ್ಲ. ಈಗ, ಬಿಪಿಓಗಳಿಂದ ಹಿಡಿದು ಸ್ಟಾರ್ಟ್ಅಪ್ಗಳವರೆಗೆ, ಆಹಾರ ಸಂಸ್ಕರಣೆಯಿಂದ ಪ್ರವಾಸೋದ್ಯಮದವರೆಗೆ, ಅನೇಕ ಕೈಗಾರಿಕೆಗಳು ಇಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ ಮತ್ತು ಸ್ಥಳೀಯ ಯುವಕರಿಗೆ ಅವಕಾಶಗಳು ಇದರಿಂದ ಸೃಷ್ಟಿಯಾಗಲಿವೆ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕೂಡ ಅರಳಲಿದೆ” ಎಂದಿದ್ದಾರೆ.
“ಸ್ಥಳೀಯ ಜನರ ಆಶಯ, ಅವರ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿಯೇ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅಭಿವೃದ್ಧಿ ಹೊಂದುತ್ತದೆ ಎಂದು ನಾನು ನನ್ನ ಸಹೋದರ, ಸಹೋದರಿಯರಿಗೆ ಸ್ಪಷ್ಟವಾಗಿ ಭರವಸೆ ನೀಡಲು ಬಯಸುತ್ತೇನೆ. ಈ ಪ್ರದೇಶಕ್ಕೆ ಪೂರಕವಾದ ಬೆಳವಣಿಗೆಗೆ ಮೊದಲ ಮತ್ತು ಅಗ್ರಗಣ್ಯವಾದ ಆದ್ಯತೆಯನ್ನು ನಾವು ನೀಡುತ್ತೇವೆ. 370 ಮತ್ತು 35 (ಎ) ವಿಧಿಗಳು ಜನರನ್ನು ಕಟ್ಟಿಹಾಕಿದ ಸರಪಳಿಗಳಂತೆ ಇದ್ದವು. ಈ ಸರಪಳಿಗಳು ಈಗ ಮುರಿದುಹೋಗಿವೆ, ಜನರು ಅವುಗಳ ಪ್ರಾಬಲ್ಯದಿಂದ ಹೊರಬಂದಿದ್ದಾರೆ ಮತ್ತು ಇನ್ನು ಮುಂದೆ ಅವರು ತಮ್ಮದೇ ಆದ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ” ಎಂದು ಪ್ರಧಾನಿ ಅಚಲ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.