
ಕಾಲದ ಕನ್ನಡಿಯಲ್ಲಿ ಕೆಲವು ಕ್ಷಣಗಳು ಶಾಶ್ವತವಾಗಿ ಅಚ್ಚೊತ್ತಿ ಬಿಡುತ್ತವೆ. ಅಂತಹದ್ದೇ ಒಂದು ಅಪರೂಪದ ಹಾಗೂ ಅವಿಸ್ಮರಣೀಯ ಕ್ಷಣಕ್ಕೆ ಹರ್ಕೂರು ಗ್ರಾಮದ ಕೊರಗ ಸಮುದಾಯದ ಮನೆಯಂಗಳ ವೇದಿಕೆಯಾಯಿತು. ರಾಜಕಾರಣ ಎಂದರೆ ಕೇವಲ ಆಡಳಿತ, ಅಧಿಕಾರ ಅಥವಾ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗಳಿಗೆ ಸೀಮಿತವಾಗಬಾರದು. ಅದು ಮನುಷ್ಯರ ಮನಸ್ಸುಗಳನ್ನು ಬೆಸೆಯುವ ಸೇತುವೆಯಾಗಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕರವಸ್ತ್ರವಾಗಬೇಕು, ಇದಕ್ಕೆ ಅನ್ವರ್ಥ ಎಂಬಂತೆ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದಲ್ಲಿ ಕೈಗೊಂಡ ‘ಗ್ರಾಮ ವಾಸ್ತವ್ಯ’ ಒಂದು ಐತಿಹಾಸಿಕ ಮತ್ತು ಭಾವನಾತ್ಮಕ ಮೈಲಿಗಲ್ಲಾಗಿ ಗೋಚರಿಸುತ್ತಿದೆ.
ಅದು ಕೇವಲ ಒಂದು ರಾತ್ರಿಯ ವಾಸ್ತವ್ಯವಾಗಿರಲಿಲ್ಲ; ಬದಲಾಗಿ ಶತಮಾನಗಳಿಂದ ಬೆಳೆದು ಬಂದಿದ್ದ ಸಾಮಾಜಿಕ ಅಂತರವನ್ನು ಅಳಿಸಿ ಹಾಕುವ ಪ್ರಾಮಾಣಿಕ ಪ್ರಯತ್ನವಾಗಿತ್ತು. ಕೊರಗ ಸಮುದಾಯದ ಬಂಧುಗಳ ಮನೆಯಂಗಳದಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದು, ಅವರೊಂದಿಗೆ ಸಹಪಂಕ್ತಿ ಭೋಜನ ಮಾಡಿದ್ದು ಮತ್ತು ಮುಕ್ತ ಮನಸ್ಸಿನಿಂದ ಸಂವಾದ ನಡೆಸಿದ್ದು, ಆ ಪರಿಸರದಲ್ಲಿ ಅವಿಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿತು.

ದಶಕಗಳಿಂದ ಸಮಾಜದ ಅಂಚಿನಲ್ಲಿದ್ದರೂ, ಈ ನೆಲದ ಸಂಸ್ಕೃತಿಯ ಆಳವಾದ ಬೇರುಗಳನ್ನು ಹೊಂದಿರುವ ಕೊರಗ ಸಮುದಾಯ ಇಂದು ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತಿದೆ. ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಈ ಬಂಧುಗಳನ್ನು, ಉಳಿದ ಸಮಾಜ ಇಂದು ಪ್ರೀತಿಯಿಂದ, ಗೌರವದಿಂದ ಬರಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಶಾಸಕರ ಈ ನಡೆ ಒಂದು ಪ್ರತ್ಯಕ್ಷ ಸಾಕ್ಷಿ. ಅಧಿಕಾರದ ಯಾವುದೇ ಹಮ್ಮುಬಿಮ್ಮಿಲ್ಲದೆ, ಕೊರಗ ಬಂಧುಗಳ ನೋವು-ನಲಿವುಗಳನ್ನು ಶಾಸಕರು ಖುದ್ದಾಗಿ ಆಲಿಸಿದ ರೀತಿ, ಆ ಸಮುದಾಯದಲ್ಲಿ ಹೊಸ ಭರವಸೆಯ ಬೆಳಕನ್ನು ಮೂಡಿಸಿದೆ.
ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಂದು ಪ್ರತಿಪಾದಿಸಿದ “ಸರ್ವವ್ಯಾಪಿ, ಸರ್ವ ಸ್ಪರ್ಶಿ” ಎಂಬ ಏಕಾತ್ಮ ಮಾನವತಾವಾದ ಮತ್ತು ಪ್ರಧಾನಿ ಮೋದಿಯವರ “ಸಬ್ಕಾ ಸಾತ್ ಸಬ್ಕಾ ವಿಕಾಸ್” ಎಂಬ ಆಶಯಗಳ ಸಾಕಾರದಲ್ಲಿ ಬೈಂದೂರು ಗೆದ್ದಂತಿದೆ. ಆ ಉಪೇಕ್ಷಿತ ಸಮಾಜ ಬಯಸುವುದು ಅನುಕಂಪವನ್ನಲ್ಲ, ಬದಲಾಗಿ ತಮ್ಮತನದ ಗುರುತಿಸುವಿಕೆ ಮತ್ತು ಸಮಾನತೆಯ ಅಪ್ಪುಗೆಯನ್ನು ಎಂಬುದನ್ನು ಶಾಸಕರ ನಡೆ ತೋರಿಸಿಕೊಟ್ಟಿದೆ.

ಬೈಂದೂರಿನ ಈ ವಿದ್ಯಮಾನ ಸಾರ್ವಜನಿಕ ಸಮಾಜದಲ್ಲಿ ಹೊಸ ಬದಲಾವಣೆಯ ಮನ್ವಂತರಕ್ಕೆ ನಾಂದಿ ಹಾಡಿದೆ. ಜನಪ್ರತಿನಿಧಿಯೊಬ್ಬರು ಸಮಾಜದ ಕಟ್ಟಕಡೆಯ ಮನೆಯ ಹೊಸ್ತಿಲು ದಾಟಿ ಒಳಬಂದು, “ನಾವು ನಿಮ್ಮೊಂದಿಗಿದ್ದೇವೆ” ಎಂದು ಹೇಳುವ ಮೂಲಕ ತೋರಿದ ಈ ಬದ್ಧತೆ ಇಡೀ ಸಮಾಜಕ್ಕೆ ಹೊಸ ಪ್ರೇರಣೆ. ಸಮಾನತೆ, ಪ್ರೀತಿ ಮತ್ತು ವಿಶ್ವಾಸದ ತಳಹದಿಯ ಮೇಲೆ ಬಲಿಷ್ಠ ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಹರ್ಕೂರಿನ ಈ ವಾಸ್ತವ್ಯ ಮುನ್ನುಡಿ ಬರೆದಿದೆ ಎಂದರೆ ಅತಿಶಯೋಕ್ತಿಯಲ್ಲ.
ಶೋಧನ್ ಕುಂದಾಪುರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


