ಜಮ್ಮು ಕಾಶ್ಮೀರ ಭಾರತದಲ್ಲೊಂದಾಗುವ ಕ್ಷಣವನ್ನು ಸಮಸ್ತ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ದಿಟ್ಟ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ನರೇಂದ್ರ ಮೋದಿ ಸರ್ಕಾರಕ್ಕೆ ಜೈಕಾರ ಹಾಕುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಹೋರಾಟಕ್ಕೆ, ಭಾರತೀಯರ ಕೂಗಿಗೆ ಸಿಕ್ಕ ಜಯ ಎಂದು ಈ ಕ್ಷಣವನ್ನು ಬಣ್ಣಿಸಲಾಗುತ್ತಿದೆ. ಆದರೆ ಈ ಸಂಭ್ರಮಾಚರಣೆಯ ನಡುವೆ, ಇದುವರೆಗೆ ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಇರಿಸಿದ ಅತೀ ಪ್ರಮುಖರನ್ನು ನಾವು ಮರೆಯುತ್ತಿದ್ದೇವೆ. ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಪಾಕಿಸ್ಥಾನಿಗಳು ಭಾರತ ಭೂಲೋಕದ ಸ್ವರ್ಗವನ್ನು ಅಕ್ಷರಶಃ ನರಕ ಮಾಡಿ ಭಾರತದಿಂದ ಅದನ್ನು ಕಿತ್ತುಕೊಳ್ಳಲು ನಡೆಸಿದ ಪ್ರಯತ್ನವನ್ನು ಜೀವದ ಹಂಗು ತೊರೆದು ವಿಫಲಗೊಳಿಸುತ್ತಾ ಬಂದವರನ್ನು ನಾವು ಮರೆಯುತ್ತಿದ್ದೇವೆ. ಮನೆ ಮಠ, ಬಂಧು ಬಾಂಧವರಿಂದ ದೂರವಾಗಿ ಕಾಶ್ಮೀರಕ್ಕಾಗಿ ಹಗಲು ರಾತ್ರಿ ದುಡಿಯುತ್ತಿರುವವರನ್ನು ಮರೆಯುತ್ತಿದ್ದೇವೆ. ಹೌದು, ನಾವು ನಮ್ಮ ಯೋಧರನ್ನು ಮರೆಯುತ್ತಿದ್ದೇವೆ.
ಉದ್ರಿಕ್ತ ಪ್ರತ್ಯೇಕತಾವಾದಿಗಳ ಕಲ್ಲೇಟು ತಿನ್ನುತ್ತಾ, ಪಾಕಿಸ್ಥಾನಿ ಸೈನಿಕರ ಗುಂಡೇಟನ್ನು ಎದುರಿಸುತ್ತಾ, ಭಯೋತ್ಪಾದಕರ ದಾಳಿಯನ್ನು ಹಿಮ್ಮೆಟ್ಟಿಸುತ್ತಾ ಕೊರೆವ ಚಳಿಯ ನಡುವೆ ಹಗಲು ರಾತ್ರಿ ಎನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವರಂತೆ ಕಾಶ್ಮೀರವನ್ನು ಕಾಯುತ್ತಿರುವ ಯೋಧರನ್ನು ಸಂಭ್ರಮಾಚರಣೆಯ ನಡುವೆ ನಾವು ಮರೆಯುತ್ತಿದ್ದೇವೆ.
ಯೋಧರಿಲ್ಲದೇ ಇರುತ್ತಿದ್ದರೆ ಜಮ್ಮುಕಾಶ್ಮೀರ ಭಾರತದ ಭಾಗವಾಗಿ ಇದುವರೆಗೆ ಉಳಿಯುತ್ತಿತ್ತೇ? ಖಂಡಿತಾ ಇಲ್ಲ. ನಿತ್ಯ ಗಲಾಟೆ, ದೊಂಬಿ ಎಬ್ಬಿಸಿ ಕಣಿವೆಯ ನೆಮ್ಮದಿಯನ್ನೇ ಸಾಯಿಸಿದ್ದ ಪ್ರತ್ಯೇಕತಾವಾದಿಗಳಿಗೆ ಇದುವರೆಗೆ ಜಮ್ಮ ಕಾಶ್ಮೀರವನ್ನು ಪ್ರತ್ಯೇಕಿಸಲು ಸಾಧ್ಯವಾಗಿಲ್ಲ ಎಂದರೆ ಅದಕ್ಕೆ ಕಾರಣೀಕರ್ತರು ನಮ್ಮ ಯೋಧರು. ಗಡಿಯಲ್ಲಿ ಹೊಂಚು ಹಾಕಿ ಅವಕಾಶ ಸಿಕ್ಕಾಗ ಒಳನುಸುಳುವ ಭಯೋತ್ಪಾದಕರಿಗೆ ಕಾಶ್ಮೀರವನ್ನು ಆಕ್ರಮಿಸಲು ಸಾಧ್ಯವಾಗಿಲ್ಲ ಎಂದರೆ ಅದಕ್ಕೆ ಕಾರಣ ನಮ್ಮ ಯೋಧರು. ಎರೆಡೆರಡು ಬಾರಿ ದಂಡೆತ್ತಿ ಬಂದರೂ ಪಾಕಿಸ್ಥಾನಕ್ಕೆ ಕಾಶ್ಮೀರದ ಒಂದು ತುಂಡನ್ನೂ ಸ್ವಾಧೀನ ಪಡಿಸಿಕೊಳ್ಳಲಾಗಿಲ್ಲ ಎಂದರೆ ಅದಕ್ಕೆ ಕಾರಣ ನಮ್ಮ ಯೋಧರು. ಹೌದು, ನಮ್ಮ ಯೋಧರು ಇಲ್ಲದೇ ಇರುತ್ತಿದ್ದರೆ ಕಾಶ್ಮೀರ ಇಂದು ನಮ್ಮದಾಗಿರುತ್ತಿರಲಿಲ್ಲ. ಅದು ಎಂದೋ ಪರರ ಸ್ವತ್ತಾಗುತ್ತಿತ್ತು.
ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿಡುವ ಕಾಯಕದಲ್ಲಿ ಜೀವತ್ತೆತ್ತು ಅಮರರಾದ ಯೋಧರ ಸಂಖ್ಯೆ ಬಹಳಷ್ಟಿದೆ. ನಿತ್ಯ ಪಾಕಿಸ್ಥಾನ ಸೈನಿಕರೊಂದಿಗೆ, ಭಯೋತ್ಪಾದಕರೊಂದಿಗೆ, ಪ್ರತ್ಯೇಕತಾವಾದಿಗಳೊಂದಿಗೆ ಹೋರಾಡ ಬೇಕಾದ ಅನಿವಾರ್ಯತೆಯಲ್ಲಿ ನಮ್ಮ ಯೋಧರಿದ್ದಾರೆ. ಭಯೋತ್ಪಾದಕ ದಾಳಿಗೆ, ಪಾಕಿಸ್ಥಾನಿ ಕುತಂತ್ರಕ್ಕೆ ಎಷ್ಟೋ ಸೈನಿಕರು ಹುತಾತ್ಮರಾಗಿ ಹೋಗಿದ್ದಾರೆ, ಪ್ರತ್ಯೇಕತಾವಾದಿಗಳ ಕಲ್ಲೇಟಿಗೆ ಗಾಯಗೊಂಡ ಯೋಧರ ಸಂಖ್ಯೆಯೂ ಅಪಾರವಿದೆ. ಭಾರತದ ಕಿರೀಟ ಜಮ್ಮು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುತ್ತಿದ್ದ ಸಂವಿಧಾನದ 370ನೇ ವಿಧಿಗೆ ತಿಲಾಂಜಲಿ ಹಾಕಿದ ಐತಿಹಾಸಿಕ ನಿರ್ಧಾರದ ಹಿಂದೆ ವೀರ ಯೋಧರ ತ್ಯಾಗವಿದೆ. ಈ ನಿರ್ಧಾರ ಅವರ ಬಲಿದಾನಕ್ಕೆ ಸಂದ ಜಯವೂ ಆಗಿದೆ.
ಇದು ಸಂಭ್ರಮಿಸಬೇಕಾದ ಕ್ಷಣ ಮಾತ್ರವಲ್ಲ, ಕಾಶ್ಮೀರಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಬೇಕಾದ ದಿನವೂ ಹೌದು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಂದ ಹಿಡಿದು ನರೇಂದ್ರ ಮೋದಿಯವರೆಗೆ ಕಾಶ್ಮೀರವನ್ನು ಭಾರತದೊಂದಿಗೆ ಬೆಸಯಲು ಅನೇಕರು ಸಾಕಷ್ಟು ಶ್ರಮಿಸಿದ್ದಾರೆ. ಅವರೂ ಈ ಸಂದರ್ಭದಲ್ಲಿ ಅಭಿನಂದಾರ್ಹರು. ಕಾಶ್ಮೀರವನ್ನು ಭಾವನಾತ್ಮಕವಾಗಿ ಬೆಸೆಯುವ ಕ್ರಮವನ್ನು ಎಂದೋ ತೆಗೆದುಕೊಳ್ಳಬೇಕಾಗಿತ್ತು. ಆದರೆ ಸಂವಿಧಾನದಲ್ಲಿ ತಾತ್ಕಾಲಿಕವಾಗಿ ಸೇರ್ಪಡೆಗೊಳಿಸಿದ್ದ ಕಲಂ 370, 35ಎ ಅನ್ನು ಇಲ್ಲಿಯವರೆಗೆ ಎಳೆದು ತಂದು ಹಿಂದಿನವರು ದೊಡ್ಡ ಪ್ರಮಾದವನ್ನೇ ಎಸಗಿದ್ದಾರೆ. ಇತಿಹಾಸದ ಪ್ರಮಾದಗಳನ್ನು ತಿದ್ದಿಕೊಂಡು ಜಮ್ಮು ಕಾಶ್ಮೀರವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಬದ್ಧತೆಯನ್ನು ಪ್ರಸ್ತುತ ಕೇಂದ್ರ ಸರ್ಕಾರ ತೋರಿಸಿದ್ದು ನಿಜಕ್ಕೂ ಐತಿಹಾಸಿಕ ದಿಟ್ಟ ನಡೆಯೇ ಸರಿ. ಆದರೆ ಈ ಕಾರ್ಯದಲ್ಲಿ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ ಯೋಧರನ್ನು ನಾವು ಸ್ಮರಿಸಲೇ ಬೇಕಿದೆ. ಘೋಷಣೆಯ ಮೊದಲೂ, ಘೋಷಣೆಯ ಬಳಿಕವೂ ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸೈನಿಕರು ಅವಿರತ ಶ್ರಮಪಡುತ್ತಿದ್ದಾರೆ. ಮುಂದೆಯೂ ಪಡುತ್ತಾರೆ. ಅವರ ಶ್ರಮ, ಬಲಿದಾನ, ತ್ಯಾಗಗಳು ವ್ಯರ್ಥವಾಗದಿರಲಿ, ಅವರ ಬಗೆಗಿನ ಹೆಮ್ಮೆ ನಮ್ಮಲ್ಲಿ ಸದಾ ಇರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.