ಇವಿಎಂ ಇವಿಎಂ ಇವಿಎಂ. ಎಲ್ಲಿ ನೋಡಿದರೂ ಅದೇ ಸುದ್ದಿ. ಒಂದು ಮಾತಿದೆ “ಒಂದೇ ಸುಳ್ಳನ್ನು ಪದೇ ಪದೇ ಹೇಳಿ ಅದನ್ನು ಸತ್ಯ ಮಾಡಬಹುದು” ಎಂದು. ಹಾಗೆಯೇ ಈ ಮಾಧ್ಯಮಗಳು ಇಂದು ಅಮೇರಿಕಾದಲ್ಲಿ, ನಿನ್ನೆ ಮತ್ತೊಂದು ಕಡೆ ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಹೇಳಿ ಹೇಳಿ ಜನರಿಗೆ ಅದು ಸತ್ಯ ಅನ್ನಿಸಿಬಿಟ್ಟಿದೆ.
ಮೂಲತಃ ಭಾರತದಲ್ಲಿ 1982ರಲ್ಲಿ ಕೇರಳದ ಉತ್ತರ ಪರವೂರ್ನಲ್ಲಿ ಇವಿಎಂ ಬಳಸಿದರು. ಸಂಪೂರ್ಣವಾಗಿ ಬಳಸಿದ್ದ ರಾಜ್ಯ ಗೋವಾ 1999ರಲ್ಲಿ. ಭಾರತದಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ದು, ಅಲ್ಲದೆ 1980ರ ನಂತರ ಉತ್ತರ ಪ್ರದೇಶ, ಬಿಹಾರ, ಜಮ್ಮು ಕಾಶ್ಮೀರ, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಗಳಲ್ಲಿ ನಡೆದ ಹಿಂಸಾಚಾರ, ಚುನಾವಣಾ ಅವ್ಯವಹಾರ ಮತ್ತು ಬ್ಯಾಲೆಟ್ ಪತ್ರಗಳ ವರ್ಗಾವಣೆ ಇವಿಎಂ ಅವಶ್ಯಕ ಎಂದು ತೋರಿಸಿತು. ಟಿ ಎನ್ ಶೇಷನ್ ಇವಿಎಂ ಅನುಮೋದಿಸಿದರು. BHEL ಮತ್ತು ECILಗಳು ಇವಿಎಂಗಳನ್ನು ಸುಜಾತ ರಂಗರಾಜನ್ ಮೇಲ್ವಿಚಾರಣೆಯಲ್ಲಿ ಉತ್ಪಾದಿಸಿ ದೇಶದ ಆರು ಪ್ರಮುಖ ನಗರಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗಲೂ ಯಾರಿಂದಲೂ ಏನನ್ನೂ ಮಾಡಲು ಸಾಧ್ಯವೇ ಆಗಲಿಲ್ಲ. ಆದರೆ ವಿಪಕ್ಷಗಳ ಇವಿಎಂ ದುರ್ಬಳಕೆ ಮಾಡಿಕೊಂಡಿದೆ ಎಂಬ ಅರ್ಜಿಗೆ ಓಗೊಟ್ಟು 2011ರಂದು ಚುನಾವಣಾ ಆಯೋಗಕ್ಕೆ ವಿವಿಪ್ಯಾಟ್ (Voter Verified Paper Audit Trial) ಬಳಕೆಗೆ ಸೂಚಿಸಿತು. ವಿವಿಪ್ಯಾಟ್ ಎಂದರೆ ನೀವು ಮತ ಹಾಕಿದ ನಂತರ ಮತಯಂತ್ರದ ಚಿಕ್ಕ ಗಾಜಿನ ಕಿಂಡಿಯಲ್ಲಿ ನೀವು ಯಾರಿಗೆ ಮತ ಹಾಕಿದ್ದೀರಿ ಎಂದು ತೋರಿಸುತ್ತದೆ. ಏಪ್ರಿಲ್ 9, 2019ರ ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಚುನಾವಣಾ ಆಯೋಗ 20625 ಇವಿಎಂಗಳಿಗೆ ವಿವಿಪ್ಯಾಟ್ ಸೇರಿಸಿತು. ಆದರೂ ವಿರೋಧ ಪಕ್ಷಗಳ ವರಾತ ನಿಲ್ಲಲ್ಲೇ ಇಲ್ಲ. ಸರಿ ಎಂದ ಆಯೋಗ, ಪ್ರಸಾದ್ ಸಮಿತಿಯ ವರದಿಯ ಪ್ರಕಾರ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಎದುರು ವಿವಿಪ್ಯಾಟ್ ಮತ್ತು ಮತಗಳ ಮಾದರಿ ತಾಳೆ ನೋಡುವಿಕೆಯನ್ನು ಈ ಬಾರಿಯಿಂದ ಆರಂಭಿಸಲಾಗುತ್ತಿದೆ.
ಸೈಯದ್ ಸೂಜಾ ಎಂಬ ಸ್ವಘೋಷಿತ ತಂತ್ರಜ್ಞ The India Todayಗೆ ಬರೆದ ಲೇಖನದಲ್ಲಿ ಭಾರತೀಯ ರಾಜಕೀಯ ಪಕ್ಷಗಳು ಇವಿಎಂ ದುರ್ಬಳಕೆ ಮಾಡಿಕೊಂಡಿವೆ ಎಂದು ಘೋಷಿಸಿದ. ಆದರೆ ಆತ ಅದಕ್ಕೆ ಬೇಕಾದ ಸಾಕ್ಷಿ ಪುರಾವೆ ಒದಗಿಸಲಿಲ್ಲ. ಅದು ಕೇವಲ ಒಂದು ಪ್ರಚಾರ ಪಡೆಯುವ ಗಿಮಿಕ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗ ಆತನ ಮೇಲೆ ದೆಹಲಿಯಲ್ಲಿ FIR ದಾಖಲಿಸಿತು.
ಹಿಂದೊಮ್ಮೆ ಚುನಾವಣಾ ಆಯೋಗ ಎಲ್ಲಾ ಪಕ್ಷಗಳಿಗೂ ಇವಿಎಂ ಅನ್ನು ಪರೀಕ್ಷಿಸಿ, ಅದನ್ನು ದುರ್ಬಳಕೆ ಮಾಡಬಹುದು ಎಂದು ಧೃಡಪಡಿಸಲು ಅವಕಾಶವನ್ನು ನೀಡಿತ್ತು. ಆದರೆ ಯಾವ ಪಕ್ಷವೂ ಅದನ್ನು ಸಾಕ್ಷೀಕರಿಸಲು ಆಗಲಿಲ್ಲ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಡ ಅಷ್ಟೇ ಏಕೆ ಕರ್ನಾಟಕ ರಾಜ್ಯ ಚುನಾವಣಾ ಫಲಿತಾಂಶ ಬಂದಾಗಲೂ ವಿಪಕ್ಷಗಳು ಇವಿಎಂ ಕುರಿತು ದನಿ ಎತ್ತಲಿಲ್ಲ. ಯಾವಾಗ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದವೋ ಶುರುವಾಯಿತು ಹಳೇ ರೋಗ.
ಇವಿಎಂ ದುರ್ಬಳಕೆ ಮಾಡಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಎರಡು ರೀತಿಯ ಕಾರಣಗಳ ನೀಡಬಹುದು. ಮೊದಲನೆಯದಾಗಿ ಇವಿಎಂಗಳಿಗೆ ನೀಡುವ ಭಧ್ರತೆ ಮತ್ತು ವ್ಯವಸ್ಥೆ. BHEL ಮತ್ತು ECIL ನಿಂದ ಹೊರಟು ಯಂತ್ರಗಳು ಜಿಲ್ಲಾ ಕಛೇರಿಗಳ ಸ್ಟ್ರಾಂಗ್ ರೂಂಗಳ ಸೇರುತ್ತವೆ. ದಿನದ 24/7 ಗಂಟೆಗಳೂ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲಾಗುತ್ತದೆ. ಮತದಾನಕ್ಕೆ ಮೂರು ವಾರಗಳು ಇರುವಾಗ ಚುನಾವಣಾ ಕ್ಷೇತ್ರಗಳ ಸ್ಟ್ರಾಂಗ್ ರೂಂಗಳಿಗೆ ವರ್ಗಾಯಿಸಲಾಗುತ್ತದೆ. ಅಲ್ಲೂ ಕೂಡ ಯಾವ ಯಂತ್ರ, ಯಾವ ಮತಗಟ್ಟೆಗೆ ಎಂದು ಮೊದಲೇ ನಿರ್ಧರಿಸುವುದಿಲ್ಲ. ನಂತರ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಕರೆಸಿ ಅವರ ಎದುರಿಗೆ ಇವಿಎಂಗಳ ಹಂಚಲಾಗುತ್ತದೆ. ಯಾವುದೇ ಪಕ್ಷ 1000 ಮತಗಳ ಮಾಡಿ ಒಂದು ಇವಿಎಂ ಅನ್ನು ಪರೀಕ್ಷಿಸಬಹುದು. ಹೀಗೆ ಪರೀಕ್ಷಿಸಿ ಸೀಲ್ ಮಾಡಿ, ನಿರ್ದಿಷ್ಟ ಗುರುತಿನ ಸಂಖ್ಯೆ ನೀಡಿದ ಮೇಲೆಯೇ ಇವಿಎಂಗಳ ಬೂತ್ ಗಳಿಗೆ ಒಯ್ಯಲಾಗುತ್ತದೆ. ಮತದಾನದ ದಿನ, ಪ್ರತಿನಿಧಿಗಳು 50 ಮತಗಳವರೆಗೆ ಪ್ರಯತ್ನಿಸಿ ಪರೀಕ್ಷಿಸಬಹುದು. ಮತದಾನದ ನಂತರ ಮತಗಳ ಸಂಖ್ಯೆ ಮತ್ತು ಮತಗಟ್ಟೆ ಸಂಖ್ಯೆ ಇನ್ನಿತರ ವಿವರಗಳನ್ನು ಎಲ್ಲಾ ಪಕ್ಷಗಳ ಪ್ರತಿನಿಧಿಗಳಿಗೂ ನೀಡಲಾಗುತ್ತದೆ. ನಂತರವಷ್ಟೇ ಇವಿಎಂಗಳ ಮತ್ತೆ ಸ್ಟ್ರಾಂಗ್ ರೂಂಗೆ ಒಯ್ಯಲಾಗುತ್ತದೆ. ಚುನಾವಣಾ ಆಯೋಗ ಇಲ್ಲಿ ಒಂದು ವಿಶೇಷ ಅಧಿಕಾರವನ್ನು ನೀಡಿದೆ. ಅದೇನೆಂದರೆ ಯಾವುದೇ ಪಕ್ಷ ಬಯಸಿದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಇವಿಎಂ ಅನ್ನು ಕಾಯಬಹುದು.
ವೈಜ್ಞಾನಿಕವಾಗಿ ನೋಡುವುದಾದರೆ ಇವಿಎಂ ನಲ್ಲಿ ಎರಡು ವಿಭಾಗಗಳಿದ್ದು, ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೊಟಿಂಗ್ ಯುನಿಟ್. ಕಂಟ್ರೋಲರ್ ಒಮ್ಮೆ ಅವುಗಳನ್ನು ಒಂದು ಯಂತ್ರಕ್ಕೆ ಅಳವಡಿಸಿದ ಮೇಲೆ ಉತ್ಪಾದಕರು ಕೂಡ ಅದನ್ನು ಬದಲಾಯಿಸಲು ಆಗುವುದಿಲ್ಲ. ಮತದಾನ ಮುಗಿದ ನಂತರ ಎರಡೂ ಯುನಿಟ್ಗಳನ್ನು ಸಂಬಂಧಿತ ಅಧಿಕಾರಿಗಳ ಎದುರು ಮತ್ತು ಪಕ್ಷಗಳ ಪ್ರತಿನಿಧಿಗಳ ಎದುರು ಬೇರ್ಪಡಿಸಿ ಇಡಲಾಗುತ್ತದೆ. ಇದಾದ ಮೇಲೆ ಮತ ಚಲಾಯಿಸಲು ಬರುವುದಿಲ್ಲ. ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಒತ್ತಾಯಪೂರ್ವಕವಾಗಿ ತೆರೆಯಲು ಪ್ರಯತ್ನಿಸಿದರೆ ಅವು ಬಂದ್ ಆಗಿಬಿಡುತ್ತವೆ. ಹಾಗೂ ಅದರೊಳಗಿನ ಒಂದು ಗಡಿಯಾರ ಈ ಎಲ್ಲ ಚಟುವಟಿಕೆಗಳನ್ನು ದಾಖಲಿಸುತ್ತದೆ. ಮತ್ತು ಫಲಿತಾಂಶದ ಸಮಯದಲ್ಲಿ ರಿಸಲ್ಟ್ ಗುಂಡಿಯನ್ನು ಒತ್ತಿದಾಗ ಫಲಿತಾಂಶ ಪಡೆಯಲು ಸಾಧ್ಯ. ಆದರೆ ಈ ರೀತಿ ಮಾಡುವ ಮೊದಲು ಅಧಿಕಾರಿಗಳು ಮತ್ತು ಪಕ್ಷಗಳ ಪ್ರತಿನಿಧಿಗಳ ಕರೆಸಿ ಮತಗಳ ಹೊಂದಿಸಿ ನೋಡುತ್ತಾರೆ. ಯಾವ ಮತಗಟ್ಟೆ, ಟ್ಯಾಗ್ಗಳು ಮತ್ತು ಸೀಲ್ಗಳು ಸರಿಯಾಗಿ ಇದ್ದರೆ ಮಾತ್ರ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಫಲಿತಾಂಶಕ್ಕಾಗಿ ಸೀಲ್ ಮಾಡಿದ ಕ್ಲೋಸ್ ಬಟನ್ ಅನ್ನು ಒಡೆದು ಒತ್ತಲಾಗುತ್ತದೆ. ಯಾವುದೇ ರೀತಿಯಲ್ಲೂ ಅಂತರ್ಜಾಲಕ್ಕೆ ಸಂಪರ್ಕಿತವಾಗದ ಇವಿಎಂ ಅನ್ನು ದುರ್ಬಳಕೆ ಮಾಡಲು ಹೇಗೆ ಸಾಧ್ಯ?
ಅಲ್ಲದೆ ಅಂತಿಮವಾಗಿ ಹೇಳುವುದಾದರೆ ಇಷ್ಟು ಸ್ಪಷ್ಟವಾಗಿ ಮತ್ತು ಯಾವುದೇ ಗೊಂದಲಗಳಿಗೂ ಅವಕಾಶ ಇಲ್ಲದೆ ನಡೆಯುವ ಭಾರತದ ಇವಿಎಂಗಳನ್ನು ಫಿಜಿ, ನೇಪಾಳ, ಭೂತಾನ್, ಕೀನ್ಯ ಮತ್ತು ನಮೀಬಿಯ ಸೇರಿದಂತೆ ಅನೇಕ ದೇಶಗಳು ಖರೀದಿಸುತ್ತವೆ. ಇಷ್ಟಾಗಿಯೂ ಭಾರತದ ವಿಪಕ್ಷಗಳು ಯಾವಾಗೆಲ್ಲಾ ಅವರಿಗೆ ಋಣಾತ್ಮಕ ಫಲಿತಾಂಶ ಬಂದಿದೆಯೋ ಆಗೆಲ್ಲಾ ಇವಿಎಂ ದುರ್ಬಳಕೆ ಆಪಾದನೆ ಮಾಡುತ್ತವೆ. ಅದಕ್ಕೆ ಎಡಪಂಥೀಯ ಮಾಧ್ಯಮಗಳು ಅದನ್ನು ದೊಡ್ಡದು ಮಾಡಿ ತೋರಿಸುತ್ತವೆ. ಆದರೆ ಇಲ್ಲಿಯ ತನಕ ಯಾವ ಪಕ್ಷವೂ ಅದನ್ನು ಸಾಕ್ಷೀಕರಿಸಲು ಆಗಲಿಲ್ಲ. ಇವಿಎಂ ಅನ್ನು ದೂಷಿಸುವುದು ಸೆಕ್ಷನ್ 505(1)(b) ಪ್ರಕಾರ ಒಂದು ಕಾನೂನಾತ್ಮಕ ಅಪರಾಧವೂ ಹೌದು.
✍ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.