ಶಾರದಾ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಮಂಗಳೂರು : 63 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯು ಸಮಸ್ತ ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸುವ, ಕರ್ನಾಟಕದಿಂದ ಬೇರ್ಪಟ್ಟ ಕನ್ನಡದ ನೆಲಗಳನ್ನು ಒಂದುಗೂಡಿಸಿ ಸಮಸ್ತ ಕನ್ನಡಿಗರಲ್ಲಿ ಬಾಂದವ್ಯದ ಬೆಸುಗೆಯನ್ನು ಬೆಸೆಯುವ ಪೇರಣಾದಾಯಕ ಉತ್ಸವವಾಗಲಿ ಎಂಬುದಾಗಿ ಹಿರಿಯ ನ್ಯಾಯವಾದಿ, ಹರಿಕಥಾ ಪರಿಷತ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ, ಕೀರ್ತನ ಕೇಸರಿ ಶ್ರೀ ಕೆ. ಮಹಾಬಲ ಶೆಟ್ಟಿಯವರು ಆಶಯ ವ್ಯಕ್ತಪಡಿಸಿದರು. ಮಂಗಳೂರು ನಗರದ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡಿಗರಾದ ನಮ್ಮಲ್ಲಿ ಕನ್ನಡ ಭಾಷಾಭಿಮಾನ ಕಿಚ್ಚು ಇರಬೇಕು ಮತ್ತು ಆ ಕಿಚ್ಚನ್ನು ಪ್ರಜ್ವಲಿಸುವ ಕೆಚ್ಚು ನಮ್ಮ ಮನದಲ್ಲಿರಬೇಕು. ದೇಹದ ಕಣ-ಕಣದ ಪೋಷಣೆಗೆ ಹನಿ-ಹನಿ ರಕ್ತದ ಅವಶ್ಯಕತೆಯಿದ್ದಂತೆ ನಾಡು-ನುಡಿ, ನೆಲ-ಜಲದ ರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗನ ಶ್ರಮದ ಅವಶ್ಯಕತೆ ಇದೆ. ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಕನ್ನಡ ನೆಲದಿಂದ ಬೇರ್ಪಟ್ಟು ಅನ್ಯ ಭಾಷಾ ಪ್ರಾಂತಗಳಿಗೆ ಅನ್ಯಾಯವಾಗಿ ಸೇರಿಹೋದ ನಮ್ಮ ಕನ್ನಡದ ನೆಲವನ್ನು ಮರಳಿ ಪಡೆಯುವಂತಾಗಬೇಕು ಎಂದ ಅವರು ಕಾಸರಗೋಡಿನಲ್ಲಿ ಕನ್ನಡ ಭಾಷಾ ಜ್ಞಾನದ ಸಂವೃದ್ಧಿಗೆ ಕರಾವಳಿಯ ಯಕ್ಷಗಾನದ ಕೊಡುಗೆ ಅಪಾರವೆಂದ ಅವರು, ಪುರಾಣ ಜ್ಞಾನ, ಭಾಷಾ ಶುದ್ಧತೆಗಾಗಿ, ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯ ಕಡೆ ಆಸಕ್ತಿ ತೋರಬೇಕೆಂದು ವಿನಂತಿಸಿದರು. ಕನ್ನಡ ನಮ್ಮ ನಿತ್ಯ ಬದುಕಿನ ವ್ಯವಹಾರದಲ್ಲಿ ಸ್ಥಾನ ಪಡೆಯಲಿ ಎಂದು ಆಶಿಸಿದರು.
ಹೆತ್ತ ತಾಯಿಯನ್ನು ಪ್ರೀತಿಸುವಂತೆ ನಮ್ಮ ಮಾತೃ ಭಾಷೆಯನ್ನು ಪ್ರೀತಿಸಬೇಕು. ಆಂಗ್ಲ ಭಾಷೆ ಕೇವಲ ಶಿಕ್ಷಣ ಮಾಧ್ಯಮವಾಗಿದೆ. ಕನ್ನಡಿಗ ವಿದ್ಯಾರ್ಥಿಗಳು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ವಿನಯಶೀಲತೆ, ಉತ್ತಮ ಚಾರಿತ್ರ್ಯ, ಗುರು-ಹಿರಿಯರ ಬಗ್ಗೆ ಗೌರವದ ಭಾವನೆ, ದೇಶ ಪ್ರೇಮ ಇತ್ಯಾದಿ ಉತ್ತಮ ಸಂಗತಿಗಳನ್ನು ರೂಡಿಸಿಕೊಳ್ಳಬೇಕು ಎಂಬುದಾಗಿ ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ. ಪುರಾಣಿಕರು ಈ ಸಂದರ್ಭ ವಿದ್ಯಾರ್ಥಿಗಳಿಗೆ ಕರೆ ಇತ್ತರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯ, ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಸಿಯೇಶನ್ನಿನ ಕಾರ್ಯದರ್ಶಿ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ಕೆ. ಬಾಲಕೃಷ್ಣ ಭಾರದ್ವಾಜ್, ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀ ಮಹಾಬಲೇಶ್ವರ ಭಟ್, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿಯವರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಕು| ಧೃತಿ ಡಿ. ರೈ ಸ್ವಾಗತಿಸಿದಳು. ಕು| ಅಂಕಿತ ರಾಜ್ಯೋತ್ಸವ ಆಚರಣೆಯ ಮಹತ್ವದ ಕುರಿತು ಕಿರು ಭಾಷಣಗೈದಳು. ಕು| ವೈಷ್ಣವಿ ಎಸ್. ಧನ್ಯವಾದವಿತ್ತಳು. ಕು| ಸಂಸ್ಕೃತಿ ಕಾರ್ಯಕ್ರಮ ನಿರ್ವಹಣೆಗೈದಳು. ಶಾರದಾ ವಿದ್ಯಾಲಯ ಹಾಗೂ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾಂದರ್ಭಿಕವಾಗಿ ಪ್ರಾರ್ಥನೆ, ನಾಡಗೀತೆ, ರೈತಗೀತೆ, ಕನ್ನಡಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಮಾರಂಭವನ್ನು ಚಂದಗಾಣಿಸಿದರು. ರಾಷ್ಟ್ರಗೀತೆಯೊಂದಿಗೆ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಶುಭ ಸಮಾಪ್ತಿಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.