ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಿಂದ ಬಿ.ಆರ್.ಪಂತುಲುರವರು 1964 ರಲ್ಲಿ ಬಂಗಾಳಿ ಭಾಷೆಯ “ಮಾನೆ-ನ-ಮಾನೆ” ಎಂಬ ಕಥೆ ಆಧಾರಿತ ಸಿನಿಮಾವನ್ನು ನಿರ್ಮಾಣದ ಹೊಣೆ ಹೊತ್ತು ಬರೆದು, ಅವರೇ ನಿರ್ದೇಶಿಸಿದ್ದಾರೆ. ರಾಮಮೂರ್ತಿಯವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಬಿ.ಆರ್.ಪಂತುಲು, ಕಲ್ಯಾಣ್ ಕುಮಾರ್, ಜಯಲಲಿತ (ತಮಿಳುನಾಡಿನ ಮಾಜಿ ಮುಖ್ಯಮಂತ್ರಿ), ಎಂ.ವಿ.ರಾಜಮ್ಮ, ಬಾಲಕೃಷ್ಣ, ನರಸಿಂಹರಾಜು, ಜಯ, ಕೆ.ಎಸ್.ಅಶ್ವಥ್, ರಾಜಾಶಂಕರ್, ಚಿ.ಉದಯಶಂಕರ್ ಹಾಗೂ ಬೇಬಿ ವಿಶಾಲಾಕ್ಷಿರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಆರ್.ಎನ್.ಜಯಗೋಪಾಲ್ ಹಾಗೂ ವಿಜಯನಾರಸಿಂಹ ಬರೆದ ಹಾಡುಗಳಿಗೆ ಪಿ.ಬಿ.ಶ್ರೀನಿವಾಸ್, ಪಾಣಿಗ್ರಾಹಿ, ಸುಶೀಲಾ, ಸೂಲಮಂಗಲಂ ರಾಜಲಕ್ಷ್ಮಿ ಹಾಗೂ ಎಸ್.ಜಾನಕಿ ರವರು ದನಿಯಾಗಿದ್ದಾರೆ. ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ಸಂಭಾಷಣೆ ಬರೆದಿದ್ದಾರೆ. ಎಸ್.ಆರ್.ಪುಟ್ಟಣ್ಣ ಕಣಗಾಲ್ ಹಾಗೂ ಪಿ.ಎಲ್.ಸೆಲ್ವರಾಜ್ ರವರು ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾರವರು ನಟಿಸಿದ (ಬಾಲನಟಿಯಾಗಿ ಹೊರತುಪಡಿಸಿ) ಮೊದಲ ಕನ್ನಡ ಸಿನಿಮಾ. ಇದೇ ಸಿನಿಮಾವನ್ನು ತಮಿಳಿನಲ್ಲಿ “ಮುರಾದನ್ ಮುತ್ತು” ಎಂಬ ಹೆಸರಿನಲ್ಲಿ ಬಿ.ಆರ್.ಪಂತುಲುರವರೇ ನಿರ್ದೇಶಿಸಿದ್ದಾರೆ.
ಕಥೆ:
ದೇವತೆಯ ಗೊಂಬೆಗೆ ಕುಂಚದಿಂದ ಬಣ್ಣ ಲೇಪಿಸುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮಣ್ಣಿನಗೊಂಬೆ ತಯಾರಿಸುವ ರಂಗಣ್ಣನ (ಬಿ.ಆರ್.ಪಂತುಲು) ಕುಟುಂಬದಲ್ಲಿ ಹೆಂಡತಿ ಮೀನಾಕ್ಷಿ (ಎಂ.ವಿ.ರಾಜಮ್ಮ), ತಮ್ಮ ರಾಜ (ಕಲ್ಯಾಣ್ ಕುಮಾರ್), ತಂಗಿ ರಾಧ (ಕಲ್ಪನ) ಹಾಗೂ ಪುಟ್ಟ ಮಗಳು ಜಯಾ (ಬೇಬಿ ವಿಶಾಲಾಕ್ಷಿ) ಇರುತ್ತಾರೆ. ಎಲ್ಲರೂ ಒಟ್ಟಾಗಿ ಒಂದೇ ಸೂರಿನಡಿ ಜೀವನ ಸಾಗಿಸುತ್ತಿರುತ್ತಾರೆ. ಅಣ್ಣ-ಅತ್ತಿಗೆಯ ಪ್ರೀತಿಯಲ್ಲಿ ಬೆಳೆದ ರಾಜ ಸ್ವಲ್ಪ ಮುಂಗೋಪಿ, ದುಡುಕು ಸ್ವಭಾವದ ವ್ಯಕ್ತಿ. ಆದರೆ ಅಷ್ಟೇ ಒಳ್ಳೆಯ ಮನಸಿನವನು. ಅಣ್ಣನೂ ಅಷ್ಟೇ ತಮ್ಮನನ್ನು ಪದೆಪದೇ ನಿಂದಿಸಿದರೂ ಅವನ ಅಂತಃಕರಣದಲ್ಲಿ ತಮ್ಮನ ಮೇಲೆ ಅಮೋಘ ಮಮಕಾರ ಇರುತ್ತದೆ. ರಾಜ ಆಂಜನೇಯನ ಪರಮಭಕ್ತ, ಬ್ರಹ್ಮಚಾರಿ ಆಗುವ ಸಂಕಲ್ಪ ಮಾಡಿದವ. ಮನೆಯವರೆಲ್ಲ ಒಟ್ಟಿಗೆ ಕೂತು ಕೈತುತ್ತು ತಿನ್ನುವ ದೃಶ್ಯವೊಂದಿದೆ. ತಾಯಿ ಕರುಳಿನ ಮೀನಾಕ್ಷ್ಮಮ್ಮ, ತನ್ನ ಮಗಳ ಜೊತೆ ಮೈದುನ-ನಾದಿನಿಯರಿಗೂ ಕೈತುತ್ತು ಹಾಕುವ ದೃಶ್ಯ. “ಸೇವಂತಿಗೆ ಚಂಡಿನಂತಾ ಮುದ್ದು ಕೋಳಿ, ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ” ಎಂಬ ಗೀತೆಯಲ್ಲಿ ಈ ಅನುಬಂಧದ ದೃಶ್ಯ ಕಾಣಬಹುದು. ಒಂದು ಕುಟುಂಬದಲ್ಲಿ ಅತ್ತಿಗೆಯ ಪಾತ್ರ, ತಾಯಿಯ ಪಾತ್ರಕ್ಕೆ ಸಮನಾದುದು ಎಂದು ಇದೊಂದು ಒಳ್ಳೆಯ ಉದಾಹರಣೆ. ಈಗಲೂ ಎಲ್ಲಾ ಮನೆಗಳಲ್ಲಿ ಈ ಕೈತುತ್ತು ಹಾಕುವ ಸಂಪ್ರದಾಯವನ್ನು ರೂಢಿಸಿಕೊಂಡಲ್ಲಿ ಕೌಟುಂಬಿಕ ಕಲಹಗಳು ಕಡಿಮೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಷ್ಟೇ ಅಲ್ಲದೇ ಮನೆಯೊಳಗಿನ ಸದಸ್ಯರ ನಡುವೆ ಒಂದು ಅವಿನಾಭಾವ ಸಂಬಂಧ ಏರ್ಪಡುತ್ತದೆ. ಒಂದು ದಿನ ಮುನಿಸಿಕೊಂಡು ಹೊರಗೆ ಹೋದ ರಾಜ, ಕತ್ತಲಾದ ಮೇಲೆ ಹಿತ್ತಲ ಬಾಗಿಲಿನಿಂದ ಬಂದು ಹಸಿವು ನೀಗಿಸಿಕೊಳ್ಳಲು ಕುಳಿತಾಗ ಅಣ್ಣನ ಮಗಳು ಜಯ (ಬೇಬಿ ವಿಶಾಲಾಕ್ಷಿ) ರಾಜನಿಗೆ ಕೈತುತ್ತು ತಿನ್ನಿಸುತ್ತಾ, “ಸೇವಂತಿಗೆ ಚಂಡಿನಂತಾ” ಗೀತೆಯ ಬಹುಪಾಲು ಹಾಡುತ್ತಾಳೆ. ಅದೆಷ್ಟು ಚಂದ ಎನಿಸುತ್ತದೆ ಆ ದೃಶ್ಯಗಳು. ನಿಜಕ್ಕೂ ಮನೋಹರ.
ಹೀಗಿರುವಾಗ ಮೀನಾಕ್ಷ್ಮಮ್ಮಳ ಚಿಕ್ಕಮ್ಮ ಹಾಗೂ ಆಕೆಯ ಮಗಳು ಬೆಂಗಳೂರಿನಿಂದ ಆ ಹಳ್ಳಿಗೆ ಬರುತ್ತಾರೆ. ಸುಮಾರು 4 ತಿಂಗಳವರೆಗೆ ಇರಬೇಕೆಂದು ಬಂದಿರುತ್ತಾರೆ. ಮೀನಾಕ್ಷ್ಮಮ್ಮಳ ತಂಗಿ ರಾಣಿಗೆ (ಜಯಲಲಿತಾ) ರಾಜನ ಮೇಲೆ ಮೋಹ ಶುರುವಾಗುತ್ತದೆ. ಬ್ರಹ್ಮಚಾರಿ ಆಗುವ ಸಂಕಲ್ಪ ಮಾಡಿದ್ದ ಅವನು ಅವಳ ಅನುರಾಗಕೆ ಮೊದಲು ಒಪ್ಪದಿದ್ದರೂ ನಂತರ ಆಕೆಯನ್ನು ಮದುವೆಯಾಗಲು ಒಪ್ಪುತ್ತಾನೆ. ಒಂದು ದಿನ ಬೆಟ್ಟದ ಆಂಜನೇಯನ ಗುಡಿಗೆ ಅಣ್ಣನ ಮಗಳನ್ನು ರಾಜ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅದೇನನ್ನೋ ಕಂಡು ಹೆದರಿದ ಜಯಾ, ಮನೆಗೆ ಬಂದಾಗ ವೈದ್ಯೋಪಚಾರ ಫಲಿಸದೆ ಕೊನೆಯುಸಿರೆಳೆಯುತ್ತಾಳೆ. ಮನೆಗೆ ಅತಿಥಿಯಾಗಿ ಮೀನಾಕ್ಷ್ಮಮ್ಮಳ ಚಿಕ್ಕಮ್ಮ ಬಂದ ನಂತರ ಆ ತುಂಬು ಕುಟುಂಬದಲ್ಲಿ ಮನಸ್ತಾಪಗಳು ಹೆಚ್ಚಾಗಿ, ಒಂದೊಂದೆ ತೊಂದರೆಗಳು ಹೆಚ್ಚಾಗುತ್ತದೆ. ಅನಗತ್ಯವಾಗಿ ಆಕೆ ಪ್ರತಿಯೊಂದು ವಿಷಯದಲ್ಲೂ ಮೂಗು ತೂರಿಸುತ್ತಾಳೆ. ಆಕೆಯಿಂದಾಗಿ ಕುಟುಂಬ ಕಲಹ ಉಂಟಾಗಿ ರಾಜ ತನ್ನ ತಂಗಿ ರಾಧಳನ್ನು ಕರೆದುಕೊಂಡು ಮನೆಬಿಟ್ಟು ಹೋಗುತ್ತಾನೆ. ಈ ನಡುವೆ ರಂಗಣ್ಣನ ಕೋಪದಿಂದ ಮೀನಾಕ್ಷಿಯ ಚಿಕ್ಕಮ್ಮ ರಾಣಿಯನ್ನು ಕರೆದುಕೊಂಡು ಪಟ್ಟಣಕ್ಕೆ ವಾಪಾಸ್ಸು ಹೋಗುತ್ತಾಳೆ. ಮನೆಯಿಂದ ಹೊರಬಂದ ರಾಜ ತನ್ನ ತಂಗಿಗೆ ಜಮೀನ್ದಾರನ ತಮ್ಮ (ರಾಜಾರಾಮ್) ನಿಗೆ ಮದುವೆ ಮಾಡಿಕೊಡಲು ಅಣಿ ಮಾಡುತ್ತಾನೆ. ತಂಗಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಜಮೀನ್ದಾರನು (ಅಶ್ವಥ್) ರಾಣಿಯನ್ನು ಮದುವೆ ಮಾಡಿಕೊಡಲು ಒಪ್ಪುತ್ತಾನೆ. ಇದನ್ನು ಅರಿತ ರಂಗಣ್ಣ-ಮೀನಾಕ್ಷಮ್ಮ ರವರು ಬಂದು ಸಮಸ್ಯೆ ತಿಳಿಗೊಳಿಸಿ ರಾಜ-ರಾಣಿಯರಿಗೆ ಮದುವೆ ಮಾಡಿಸುತ್ತಾರೆ. ಇಲ್ಲಿಗೆ ಕಥೆ ಸುಖಾಂತ್ಯ ಕಾಣುತ್ತದೆ.
ಬಾಲಕೃಷ್ಣ-ನರಸಿಂಹರಾಜು ಜೋಡಿ ಕಚಗುಳಿ ಇಡುತ್ತಾದರೂ, ಅವರೊಂದಿಗೆ ಸೇರಿ ಕಲ್ಯಾಣ್ ಕುಮಾರ್ ತುಂಬಾ ನಗಿಸುತ್ತಾರೆ. ಕುಟುಂಬದ ಎಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ ಸಿನಿಮಾ ಇದು.
ಸಿನಿಮಾ ನೋಡಲೇಬೇಕೆಂಬುದಕ್ಕೆ ಕಾರಣಗಳು:
1. ಅಣ್ಣ-ಅತ್ತಿಗೆಯ ಪಾತ್ರ ಒಂದು ಕುಟುಂಬದಲ್ಲಿ ಎಷ್ಟು ಮಹತ್ವದ್ದು ಅನ್ನುವುದನ್ನು ತಿಳಿಯಲು.
2. ಅಣ್ಣ-ತಮ್ಮಂದಿರ ನಡುವೆ ಇರಬೇಕಾದ ಬಾಂಧವ್ಯ ಮಧುರವಾಗಿಸುವ ಬಗೆ ಹೇಗೆ ಎಂಬುದನ್ನು ತಿಳಿಯಲು.
3. ಕೌಟುಂಬಿಕ ಸಮಸ್ಯೆಗಳು ಇದಿರಾದಾಗ ಎದುರಿಸುವ ಬಗೆ ಹೇಗೆ ಎಂಬುದ ತಿಳಿಯಲು.
4. ಕೋಪದ ಕೈಗೆ ಬುದ್ದಿ ಕೊಟ್ಟರೆ ಆಗುವ ತೊಂದರೆಗಳ ಕುರಿತಂತೆ ಅರಿಯಲು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.