ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಿಂದ ನಾಟಕವನ್ನಾಗಿ ಪ್ರದರ್ಶಿಸುತ್ತಿದ್ದ “ಬೇಡರ ಕಣ್ಣಪ್ಪ” ಎಂಬ ನಾಟಕವನ್ನು 1954 ರಲ್ಲಿ ಎ.ವಿ.ಎಂ. ಪ್ರೊಡಕ್ಷನ್ಸ್ ರವರೊಂದಿಗೆ ಗುಬ್ಬಿ ಕರ್ನಾಟಕ ಫಿಲಂಸ್ ಅಡಿಯಲ್ಲಿ ಗುಬ್ಬಿ ವೀರಣ್ಣ ರವರು ನಿರ್ಮಾಣ ಮಾಡಿದರು. ಹೆಚ್.ಎಲ್.ಎನ್.ಸಿಂಹ ರವರು ನಿರ್ದೇಶನ ಮಾಡುತ್ತಾರೆ. ಜಿ.ವಿ.ಅಯ್ಯರ್ ರವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ತಾನೂ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಾರೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಪಂಡರೀಬಾಯಿ, ಜಿ.ವಿ.ಅಯ್ಯರ್, ನರಸಿಂಹರಾಜು, ಹಾಗೂ ಸಂಧ್ಯಾ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಆರ್.ಸುದರ್ಶನಮ್ ರವರ ಸಂಗೀತವಿದ್ದು, ಲಾವಣಿ ವಿದ್ವಾನ್ ಎಸ್.ನಂಜಪ್ಪ ರವರ ಸಾಹಿತ್ಯದ 13 ಗೀತೆಗಳಿವೆ. ಈ ಗೀತೆಗಳಿಗೆ ಸಿ.ಎಸ್.ಜಯರಾಮನ್, ಎಂ.ಎಲ್.ವಸಂತಕುಮಾರಿ, ಟಿ.ಎಸ್.ಭಗವತಿ, ಟಿ.ಎ.ಮೋತಿ ಹಾಗೂ ಪಿ.ಸುಶೀಲ ರವರು ದನಿಯಾಗಿದ್ದಾರೆ. “ಅತ್ಯುತ್ತಮ ಚಿತ್ರ” ಪ್ರಶಸ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ತನ್ನದಾಗಿಸಿಕೊಂಡಿದೆ.
ಅದುವರೆಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದ “ಮುತ್ತುರಾಜ್” ಎಂಬ ದೈತ್ಯ ಪ್ರತಿಭೆ “ರಾಜಕುಮಾರ” ಎಂಬ ಹೆಸರಿನಲ್ಲಿ ಕನ್ನಡ ಚಿತ್ರರಸಿಕರಿಗೆ ಪರಿಚಯವಾಯಿತು. ಪ್ರಥಮ ಸಿನಿಮಾದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದ ಹಿರಿಮೆ ಅವರದ್ದು. ಅಷ್ಟೇ ಅಲ್ಲ, ಜಿ.ವಿ.ಅಯ್ಯರ್, ಪಂಡರೀಬಾಯಿ ಹಾಗೂ ನರಸಿಂಹರಾಜು ಸೇರಿದಂತೆ ಅನೇಕರು ಸಿನಿಮಾ ರಂಗಕ್ಕೆ ಪರಿಚಯವಾದದ್ದು ಇದೇ ಸಿನಿಮಾದಿಂದ. ರಾಜಕುಮಾರ್ – ನರಸಿಂಹರಾಜು ರವರ ಜೋಡಿ ಹಾಗೂ ರಾಜಕುಮಾರ್ – ಪಂಡರೀಬಾಯಿ ಜೋಡಿಯ ಮೋಡಿ ಶುರುವಾಗಿದ್ದು ಈ ಸಿನಿಮಾದಿಂದ. ಈ ಸಿನಿಮಾ ತೆರೆಕಂಡು 64 ವರುಷಗಳೇ ಆದರೂ ಈ ಕಾಲಕ್ಕೂ ಸಲ್ಲುವಂತಹ ಉತ್ತಮ ಸಂಭಾಷಣೆ ಸಿನಿಮಾದಲ್ಲಿದೆ.
ರಾಜಕುಮಾರ್ ರವರೇ ನಾಯಕನಟನಾಗಿ ತೆಲುಗಿನ”ಕಾಳಹಸ್ತಿ ಮಹಾತ್ಮ್ಯಂ” (1954) ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಕನ್ನಡೇತರ ಸಿನಿಮಾದಲ್ಲಿ ರಾಜ್ ಕುಮಾರ್ ರವರು ನಟಿಸಿದ್ದು ಬಹುಶಃ ಇದೊಂದೇ ಸಿನಿಮಾ ಇರಬಹುದು. ನಂತರ 1955 ರಲ್ಲಿ “ವೇದನ್ ಕಣ್ಣಪ್ಪ” ಎಂದು ತಮಿಳಿನಲ್ಲಿ ಹಾಗೂ ೧೯೭೬ ರಲ್ಲಿ “ಭಕ್ತ ಕನ್ನಪ್ಪ” (ಕೃಷ್ಣಂರಾಜು ರವರ ಅಭಿನಯದಲ್ಲಿ) ಎಂಬ ಹೆಸರಿನಲ್ಲಿ ತೆಲುಗಿನಲ್ಲಿ ರಿಮೇಕ್ ಆಯಿತು.
ಕಥೆ:
“ನಲಿಯುವ ಬಾ ಇನಿಯಾ” ಎನ್ನುವ ಯುಗಳಗೀತೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ರಾಜ್ ಕುಮಾರ್ ಹಾಗೂ ಪಂಡರೀಬಾಯಿ ಅವರ ಮೊದಲ ಯುಗಳಗೀತೆ ಅದು. ಗಂಧರ್ವ ಲೋಕದ ಮಣಿಮಂತನು (ರಾಜ್ ಕುಮಾರ್) ಶರ್ಮಿಷ್ಠೆಯ (ಪಂಡರೀಬಾಯಿ) ಆಸೆಯಂತೆ ಹೂವೊಂದನ್ನು ತನ್ನ ಬಾಣದ ಸಹಾಯದಿಂದ ಕೊಯ್ದುಕೊಡಲು ಹೋದಾಗ, ಅಕಸ್ಮಾತ್ ನವಿಲೊಂದು ಅಡ್ಡಬಂದು ಸಾವನ್ನಪ್ಪುತ್ತದೆ. ಆ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪರಮೇಶ್ವರನ ಬಳಿ ಈ ಜೋಡಿ ನಿವೇದಿಸಿಕೊಂಡಾಗ, “ಅದೊಂದು ಕೆಟ್ಟ ಗಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾಗಳಿಗೆ ಎಂದು ನೀನೇಕೆ ಸಂತೋಷದಿಂದ ಇರಬಾರದು” ಎಂದು ಪರಮೇಶ್ವರನು ಪ್ರಶ್ನಿಸುತ್ತಾನೆ. ಪ್ರತಿಯೊಬ್ಬರೂ ತಮ್ಮ ಜೀವನದ ಕೆಟ್ಟ ಕ್ಷಣಗಳು ಎಂದು ವ್ಯಥೆಪಡುವ ಸಮಯಕ್ಕೆ ನೆನಪಿಸಿಕೊಳ್ಳಬೇಕಾದ ಮಾತುಗಳಿವು. ಈ ಜೋಡಿಯು “ದಿಣ್ಣಪ್ಪ-ನೀಲ”ರಾಗಿ ಭೂಲೋಕದಲ್ಲಿ ಹುಟ್ಟುತ್ತಾರೆ. ಬೇಡರ ಕುಲದಲ್ಲಿ ಇಬ್ಬರೂ ಬೆಳೆಯುತ್ತಾರೆ. ಮದುವೆಯೂ ಆಗುತ್ತದೆ. ಗುಂಪಿನಲ್ಲಿ ಸ್ವಾರ್ಥ ಬುದ್ದಿಯ ಮೇಲುಗೈಯಿಂದ ದಿಣ್ಣ ಹಾಗೂ ಲೀಲರನ್ನು ಬಹಿಷ್ಕಾರ ಹಾಕುತ್ತಾರೆ. ಆಗ ದಿಣ್ಣ ತನ್ನ ಹೆಂಡತಿಯ ಬಳಿ ” ಕೈ ಹಿಡಿದವಳು ಹೂಂ ಅಂದ್ರೆ ಪ್ರಪಂಚಾನೇ ಗೆಲ್ಲಬಹುದು” ಎಂದು ಹೇಳುತ್ತಾನೆ. ಗಂಡ-ಹೆಂಡತಿ ನಡುವೆ ಈ ಪರಿಯ ಸಾಮರಸ್ಯವಿದ್ದರೇ, ಯಾರ ಸಂಸಾರದಲ್ಲೇ ಆಗಲೀ ತೊಂದರೆಗಳ ಸುಳಿವಿರುವುದಿಲ್ಲ. ಉಟ್ಟ ಬಟ್ಟೆ, ಶಿವನ ಪೋಟೊ ಹಾಗೂ ತಮ್ಮದೆನ್ನುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಅಲ್ಲಿಂದ ಕಾಳಹಸ್ತಿ ಕಡೆ ಬರುತ್ತಾರೆ.
ಗುಡಿಸಲೊಂದನು ನಿರ್ಮಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ, ನಾಲ್ಕಾರು ದಿನಗಳಿಂದ ಕಾಡುತ್ತಿದ್ದ ಉಪವಾಸದ ಬೇಗೆಯನ್ನು ತಣಿಸಲು ಬೇಟೆಯೊಂದನ್ನು ಹುಡುಕಿಕೊಂಡು ಹೋಗುತ್ತಾನೆ ದಿಣ್ಣ (ರಾಜ್ ಕುಮಾರ್). ಬೇಟೆ ಸಿಗದೇ ಹತಾಶನಾದ ದಿಣ್ಣನಿಗೆ ಶಾಸ್ತ್ರಿಗಳ ಮಗ ಕಾಶಿ (ನರಸಿಂಹರಾಜು) ಪರಿಚಯವಾಗಿ, ಈಶ್ವರನನ್ನು ಬೇಡಿಕೊಳ್ಳಲು ತಿಳಿಸುತ್ತಾನೆ. ಆಗ ಮೂಡಿಬಂದ ಗೀತೆಯೇ “ಶಿವಪ್ಪ ಕಾಯೋ ತಂದೆ”. ಈ ಗೀತೆ ಹಸಿದವರ ಪಾಲಿಗೆ ಅನ್ನ ಕೊಟ್ಟ ಗೀತೆ ಅಂದರೆ ತಪ್ಪಾಗಲಾರದು. ಹಸಿವೆಯ ಕ್ರೂರತೆ ಹಾಗೂ ಅದು ಕಲಿಸುವ ಪಾಠದ, ಬದುಕಿನ ನಿಜದರ್ಶನ ಮಾಡಿಸುತ್ತೆ. ದಿಣ್ಣನ ಮೊರೆಗೆ ಸೋತ ಈಶ್ವರನು ಬೇಟೆ ಸಿಗುವಂತೆ ಮಾಡುತ್ತಾನೆ. ಈಶ್ವರನಿಗೆ ಕೊಟ್ಟ ಮಾತಿನಂತೆ ತಾನು ತಂದ ಬೇಟೆಯಲ್ಲಿ ಅರ್ಧ ಪಾಲು ಬೇಯಿಸಿ ತಂದು ನೈವೇದ್ಯ ಮಾಡುತ್ತಾನೆ. ಇತ್ತ ಸುಂದರಿಯೊಂದಿಗೆ ವಿಲಾಸಿ ಜೀವನ ನಡೆಸುತ್ತಿದ್ದ ಶಾಸ್ತ್ರಿಗಳು (ಜಿ.ವಿ.ಅಯ್ಯರ್), ಒಮ್ಮೆ ಈಶ್ವರನಿಗೆ ಅರ್ಪಿಸಿದ್ದ ಕಂಠೀಹಾರವನ್ನು ಕದ್ದು ಸುಂದರಿಗೆ ನೀಡುವ ಪ್ರಸಂಗ ಒದಗಿಬರುತ್ತದೆ. ಅದನ್ನು ಕದ್ದು, ಸುಂದರಿಗೆ ತಂದುಕೊಡುತ್ತಾರೆ. ಆ ಕಳ್ಳತನದ ಆರೋಪವನ್ನು ದಿಣ್ಣನ ಮೇಲೆ ಹೊರಿಸಿ, ಊರ ಮುಖಂಡರಿಂದ ಶಿಕ್ಷೆಗೊಳಪಡಿಸುತ್ತಾನೆ. ಕಾಶಿಯ ಸಹಾಯದಿಂದ ಊರ ಮುಖಂಡರಿಗೂ ನಿಜವಾದ ತಪ್ಪಿತಸ್ಥನ ಬಗ್ಗೆ ತಿಳಿದು, ಶಾಸ್ತ್ರಿಗಳನ್ನೇ ಹಿಡಿದು ಹೊಡೆಯಲು ಮುಂದಾಗುತ್ತಾರೆ ಊರ ಜನ. ಆರೋಪಮುಕ್ತನಾದ ದಿಣ್ಣ ಈಶ್ವರನ ಗುಡಿಗೆ ಬಂದಾಗ ಲಿಂಗದಲ್ಲಿ ಎರಡು ಕಣ್ಣುಗಳು ಮೂಡುತ್ತವೆ. ಒಂದು ಕಣ್ಣಲ್ಲಿ ರಕ್ತ ಸುರಿಯುತ್ತಿರುತ್ತದೆ. ಹಿಂದೂ ಮುಂದೂ ಯೋಚಿಸದೇ ತನ್ನ ಕಣ್ಣನ್ನು ಕಿತ್ತು ಈಶ್ವರನಿಗೆ ಅರ್ಪಿಸುತ್ತಾನೆ. ನಂತರ ಮತ್ತೊಂದು ಕಣ್ಣಲ್ಲೂ ರಕ್ತ ಸುರಿಯುತ್ತದೆ. ಗುರುತಿಗಾಗಿ ತನ್ನ ಕಾಲ್ಬೆರಳನ್ನು ಲಿಂಗದ ಮೇಲೆ ಒತ್ತಿಹಿಡಿದು ಇನ್ನೊಂದು ಕಣ್ಣನ್ನು ಸಹ ಕಿತ್ತು ಆ ಲಿಂಗಕ್ಕೆ ಅರ್ಪಿಸುತ್ತಾನೆ ದಿಣ್ಣ. ಆಗ ಇವನ ನಿಷ್ಕಲ್ಮಶ ಭಕ್ತಿಗೆ ಪ್ರತ್ಯಕ್ಷನಾದ ಈಶ್ವರನು, ದಿಣ್ಣನಿಗೆ ಎರಡೂ ಕಣ್ಣುಗಳನ್ನು ಪ್ರಸಾದಿಸುತ್ತಾನೆ ಹಾಗೂ “ಬೇಡರ ಕಣ್ಣಪ್ಪ” ಎಂದೇ ಕೀರ್ತಿ ಅಮರವಾಗಲಿ ಎಂದು ಆಶೀರ್ವದಿಸುತ್ತಾನೆ.
ಸಿನಿಮಾ ನೋಡಲೇಬೇಕೆಂಬುದಕ್ಕೆ ಕಾರಣಗಳು:
1. ಹಸಿವು ಎಂದರೇನು? ಹಸಿವೆಯು ಕಲಿಸುವ ಪಾಠ ಎಂಥದ್ದು? ಬಡತನದ ಬೇಗುದಿ ಯಾವ ತರಹ ಇರುತ್ತದೆ ಎಂಬುದರ ನಿಜ ಅರ್ಥ ಹುಡುಕಿಕೊಳ್ಳಲು.
2. ಡಾಂಭಿಕ ಹಾಗೂ ನಿಜ ಭಕ್ತಿಯ ನಡುವೆ ಇರುವ ವ್ಯತ್ಯಾಸವೇನು? ಎಂದು ತಿಳಿಯಲು.
3. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನೊಳಗೊಂಡ ಸಂಭಾಷಣೆಗಳು ಈ ಸಿನಿಮಾದಲ್ಲಿವೆ.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.