ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರುಷಗಳಿಂದ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿಯಾನ ನಡೆಸುತ್ತಿರುವುದು ನಿಮಗೆ ತಿಳಿದ ವಿಚಾರವೇ. ಪ್ರತಿ ಭಾನುವಾರ ಸ್ವಚ್ಛತೆಗಾಗಿ ಮಂಗಳೂರು ನಗರದಲ್ಲಿ ಶ್ರಮದಾನ, ಪ್ರತಿನಿತ್ಯ ಮನೆ ಭೇಟಿ, ಸ್ವಚ್ಛ ಗ್ರಾಮ ಹಾಗೂ ಶಾಲಾ ವಿದ್ಯಾರ್ಥಿಗಾಗಿ ಸ್ವಚ್ಛ ಮನಸ್ಸು ಎಂಬ ಅಭಿಯಾನಗಳು ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಅಭೂತಪೂರ್ವ ಸ್ಪಂದನೆ ದೊರೆಯುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಮಕ್ಕಳಲ್ಲಿ ಸ್ವಚ್ಛತೆಯ ಕುರಿತು ಅರಿವನ್ನುಂಟುಮಾಡಲು ಮನರಂಜನೆಯ ಜೊತೆಗೆ ಮನಪರಿವರ್ತನೆಗಾಗಿ ಸ್ವಚ್ಛತೆಗಾಗಿ ಜಾದೂ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ನೂರು ಶಾಲೆಗಳಲ್ಲಿ ಉಚಿತವಾಗಿ ಪ್ರತಿದಿನ ಎರಡು ಪ್ರದರ್ಶನಗಳಂತೆ ಸುಮಾರು ಎರಡು ತಿಂಗಳಗಳ ಕಾಲ ಈ ಜಾದೂ ಕಾರ್ಯಕ್ರಮ ಜರುಗಲಿದೆ. ಸುಮಾರು ಒಂದು ಲಕ್ಷ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶಪಥವನ್ನು ಮಾಡಿಸಲಾಗುತ್ತದೆ. ತದನಂತರ ಸ್ವಚ್ಛತೆಯ ಕುರಿತ ಮಾಹಿತಿ ಪತ್ರ ನೀಡಲಾಗುವುದು.
ಸ್ವಚ್ಛತೆಗಾಗಿ ಜಾದೂ: ಎಳೆ ಮನಸ್ಸಿನಲ್ಲಿ ಬಿತ್ತಿದ ಭಾವನೆಗಳು ಹೆಚ್ಚು ಫಲಪ್ರದವಾಗಬಲ್ಲವು. ಆ ದೆಸೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಸ್ವಚ್ಛ ಮನಸ್ಸು ಎಂಬ ಅಭಿಯಾನವನ್ನು ಕಳೆದ ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ 108 ಶಾಲೆಗಳಲ್ಲಿ ಅಯೋಜನೆ ಮಾಡಲಾಗುತ್ತಿದೆ. ಈ ಬಾರಿ ಜಾದೂವಿನ ಮೂಲಕ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮದ ಆಯೋಜನೆ. ಸ್ವಚ್ಛತೆಯ ಮಹತ್ವ, ಇರುವುದೊಂದೆ ಭುವಿ, ಕಸದಿಂದ ರಸ, ಪ್ಲಾಸ್ಟಿಕ್ ಎಂಬ ಮಹಾಮಾರಿ, ನಮ್ಮ ತ್ಯಾಜ್ಯ ನಮ್ಮ ಹೊಣೆ, ಸ್ವಚ್ಛತಾ ಶಪಥ, ರಾಷ್ಟ್ರಪ್ರೇಮ ಈ ವಿಷಯಗಳ ಕುರಿತು ಜಾಗೃತಿ ಜಾದೂ ನಡೆಯಲಿಕ್ಕಿದೆ. ಸುಮಾರು ಒಂದು ಗಂಟೆಯ ಕಾಲ ನಡೆಯುವ ಪ್ರದರ್ಶನವನ್ನು ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗ ಆಯಾ ಶಾಲೆಗಳಿಗೆ ತೆರಳಿ ಪ್ರದರ್ಶಿಸಲಿದ್ದಾರೆ. ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಶಾಲೆಗಳಿಗಾಗಿ ಈ ಕಾರ್ಯಕ್ರಮವು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ ಹಾಗೂ ಮಧ್ಯಾಹ್ನ ಸೇರಿ ಎರಡು ಪ್ರದರ್ಶನಗಳಂತೆ ಸುಮಾರು ಎರಡು ತಿಂಗಳಗಳ ಕಾಲ ಈ ಮ್ಯಾಜಿಕ್ ಶೋಗಳು ನಡೆಯಲಿವೆ. ಈಗಾಗಲೇ ಶಾಲೆಗಳ ಸಂಪರ್ಕ ಹಾಗೂ ಸಮಯ ನಿಗದಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಕಾರ್ಯಕ್ರಮಕ್ಕೆ ಎಮ್. ಆರ್. ಪಿ. ಎಲ್ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ಉದ್ಘಾಟನಾ ಕಾರ್ಯಕ್ರಮ: ಈ ಕಾರ್ಯಕ್ರಮದ ಉದ್ಘಾಟನೆ 14-6-2018 ಗುರುವಾರ ಪೂರ್ವಾಹ್ನ 11 ಗಂಟೆಗೆ ಟಿ ಎ ರಮಣ ಪೈ ಸಭಾಭವನ ಕೊಡಿಯಾಲ್ ಬೈಲ್ನಲ್ಲಿ ನಡೆಯಲಿದೆ. ಸಾನಿಧ್ಯವನ್ನು ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಅಧ್ಯಕ್ಷರು, ರಾಮಕೃಷ್ಣ ಮಠ ಮಂಗಳೂರು ಇವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಡಾ. ಎಂ ಆರ್ ರವಿ, ಐಎಎಸ್ ಸಿಇಓ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರು ನೆರವೇರಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಶ್ರೀ ರಂಗನಾಥ್ ಭಟ್ ಕಾರ್ಯದರ್ಶಿಗಳು, ಕೆನರಾ ಹೈಸ್ಕೂಲ್ ಅಸೋಶಿಯೆಶನ್ ಮಂಗಳೂರು ಆಗಮಿಸಲಿದ್ದಾರೆ. ಶ್ರೀ ಕುದ್ರೋಳಿ ಗಣೇಶ್ ಪ್ರಖ್ಯಾತ ಜಾದೂ ಕಲಾವಿದರು, ಶ್ರೀ ಉಮಾನಾಥ್ ಕೋಟೆಕಾರ್ ಮುಖ್ಯ ಸಂಯೋಜಕರು ಸ್ವಚ್ಛ ಮಂಗಳೂರು ಅಭಿಯಾನ ಇವರುಗಳು ಉಪಸ್ಥಿತರಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸ್ವಚ್ಛತೆಗಾಗಿ ಜಾದೂ ಪ್ರಥಮ ಪ್ರದರ್ಶನ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.