ಪರಿಸರ ಸ್ನೇಹಿ ಬಣ್ಣಗಳಿಂದ ಓಕುಳಿ / ಹೋಳಿ ಹಬ್ಬಕ್ಕೆ ಪ್ರತಿ ಮನೆಯಿಂದ ಬಣ್ಣಗಳ ಅಡುಗೆ!
ಧಾರವಾಡ : ಬಣ್ಣಗಳ ಹಬ್ಬ ಹೋಳಿ ಮತ್ತೆ ಬಂದಿದೆ. ಸಪ್ತ ವರ್ಣಗಳ ಕುಣಿತಕ್ಕೆ ಓಕುಳಿ ಸಜ್ಜಾಗಿದೆ. ಮನಸ್ಸಿನಲ್ಲಿ ಕಾಮನಬಿಲ್ಲು ಕುಣಿಯುತ್ತಿದೆ. ಈ ಹಬ್ಬ ಈಗ ಕೇವಲ ಗಂಡಸರ ಹಬ್ಬವಾಗಿ ಉಳಿದಿಲ್ಲ!
ಹುಣ್ಣಿಮೆಯ ಮಾರನೇ ದಿನ ಮಾರ್ಚ್ 2 ಶುಕ್ರವಾರ ಧಾರವಾಡದಲ್ಲಿ ಬಣ್ಣ. ಹುಬ್ಬಳ್ಳಿಯಲ್ಲಿ ಐದು ದಿನ ಬಣ್ಣವಾದರೂ, ಅಧಿಕೃತವಾಗಿ ಮಾರ್ಚ್ 5, ಸೋಮವಾರ ಬಹುತೇಕ ಪ್ರಮುಖ ಬಡಾವಣೆಗಳಲ್ಲಿ ಓಕುಳಿ ನಿಗದಿಯಾಗಿದೆ.
ಹಬ್ಬದಾಚರಣೆ ಕಳೆಗಟ್ಟಬೇಕು. ಹೊಸ ಅರ್ಥ ಹಬ್ಬ ಧ್ವನಿಸಬೇಕು. ಜಾತಿ, ಮತ, ಪಂಥ, ಮೇಲು-ಕೀಳು, ಧರ್ಮದ ಗೋಡೆಗಳು ಇನ್ನಿಲ್ಲವಾಗಿ, ಬಣ್ಣಗಳು ಸಮಸಮಾಜದ ಭ್ರಾತೃತ್ವ ಮೆರೆಸಬೇಕು ಎಂಬುದು ಎಲ್ಲರ ಸದಾಶಯ. ಶಾಂತಿಯುತವಾಗಿ ಆಚರಿಸುವ ಮನವಿ ಮತ್ತು ಬಿಗಿ ಪೊಲೀಸ್ ಬಂದೋಬಸ್ತ್ ಹಬ್ಬಗಳಿಗೆ ಅನವಶ್ಯವಾಗಬೇಕು. ಅರ್ಥಾತ್, ಸಂಭ್ರಮ ಮೇಲುಗೈ ಸಾಧಿಸಬೇಕು. ಎಲ್ಲರೂ ಕೂಡಿ ಸಂತೋಷದಿಂದ ಹಬ್ಬದಲ್ಲಿ ಪಾಲ್ಗೊಳ್ಳುವಂತಾಗಬೇಕು. ಕೋಮು ಸೌಹಾರ್ದ ನೆಲೆಗೊಳ್ಳಬೇಕು. ಸೇಡಿಗೆ ವೇದಿಕೆಯಾಗಬಾರದು.
ಹೀಗೊಂದು ಅನುಕರಣೀಯ ಮತ್ತು ಮಾದರಿ ಪ್ರಯತ್ನಕ್ಕೆ ನಗರದ ಕೆಲಗೇರಿ ಬಳಿಯ ಗಾಯತ್ರಿಪುರಂ ಬಡಾವಣೆಯ ನಿವಾಸಿಗಳು ಮುಂದಾಗಿದ್ದಾರೆ. ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಪತ್ನಿ ನಿರ್ಮಲಾ ತಮ್ಮ ಇಬ್ಬರು ಮಕ್ಕಳೊಂದಿಗೆ ಈ ಯೋಜನೆಗೆ ಶರಾ ಬರೆದಿದ್ದಾರೆ. ಪರಿಸರ ಸ್ನೇಹಿ, ತ್ವಚೆಗೆ ಹಿತಕಾರಿಯಾಗಬಲ್ಲ ಹೂವು, ಹಣ್ಣು, ತರಕಾರಿ ಮತ್ತು ಪಲ್ಯ ಬಳಸಿ ದ್ರವ ಮತ್ತು ಒಣ ರೂಪದ ಬಣ್ಣ ತಯಾರಿಸಲು ಈಗಾಗಲೇ ಶುರು ಮಾಡಿದ್ದಾರೆ.
ಒಟ್ಟು 104 ನಿವೇಶನಗಳಿರುವ ಈ ಬಡಾವಣೆಯಲ್ಲಿ, 12 ಮನೆಗಳಿವೆ. ಒಟ್ಟು ಜನಸಂಖ್ಯೆ 60. ಆಪ್ತೇಷ್ಠರನ್ನು ಸೇರಿಸಿ 120. ಪ್ರತಿ ಮನೆಯಿಂದ ತಲಾ 5 ಲೀಟರ್ ಬಣ್ಣ ತಯಾರಿಸಿಕೊಳ್ಳಲು ಯೋಜಿಸಿದ್ದಾರೆ. ಸ್ವತಃ ಮಂಜುನಾಥ ಹಿರೇಮಠ ಅವರ ಕುಟುಂಬ ಸುಮಾರು 40 ಲೀಟರ್ ಪರಿಸರ ಸ್ನೇಹಿ ಬಣ್ಣ ತಯಾರಿಸುತ್ತಿದೆ! ಮಕ್ಕಳೇ ಇದಕ್ಕೆ ಒತ್ತಾಸೆಯಾಗಿರುವುದು ವಿಶೇಷ. ಎಲ್ಲ ಮನೆಗಳ ತಾಯಂದಿರು ತಮ್ಮ ಮಕ್ಕಳೊಂದಿಗೆ ಈಗಾಗಲೇ ಸಾಮೂಹಿಕವಾಗಿ ಓಕುಳಿಯ ಬಣ್ಣ ತಯಾರಿಗೆ ಅಣಿಯಾಗಿದ್ದಾರೆ.
ಬಡಾವಣೆ ನಿವಾಸಿ, ಮಂಗಳಗೌರಿ ಹಿರೇಮಠ ಅವರು ತಮ್ಮ ಅನಿಸಿಕೆ ಹಂಚಿಕೊಂಡು, ಮಕ್ಕಳು ಹೋಳಿ ಹಬ್ಬದೊಳಗ ಹಚ್ಚಿಕೊಂಡು ಬಂದ ಬಣ್ಣ ತೆಗಿಲಿಕ್ಕೆ ಸಾಕುಬೇಕಾಗ್ತದ ತಾಯಂದಿರಿಗೆ. ಸುನೇರಿ, ಗ್ರೀಸ್, ಆಯಿಲ್ ಪೇಂಟ್, ವಾರ್ನಿಸ್ ಕೂದಲ ಕಿತ್ತು ಬರುವಂಗ ಸ್ಥಿತಿ. ವಾರಗಟ್ಟಲೆ ಅವರ ಮುಖ, ಮೈಮೇಲೆ ಬಣ್ಣದ ಕಲೆ.. ಈ ಸರ್ತೇಕ, ನಾವ ಯಾಕ ಬಣ್ಣ್ಣಾ ತಯಾರ ಮಾಡಿಕೋಬಾರ್ದು ಅಂತ ಯೋಚನೆ ಮಾಡಿ, ಮಕ್ಕಳ ಸಲುವಾಗಿ ಈ ಕೆಲಸಕ್ಕೆ ಮುಂದಾಗೇವಿ..
ಕೆಮ್ಮಣ್ಣು ನೀರಿನಲ್ಲಿ ಕಲಸಿ ಹಚ್ಚುವ ವಿಧಾನ ದೊಡ್ಡವರದು. ಕೆಮ್ಮಣ್ಣು ಹೆಚ್ಚು ನೀರಿನಲ್ಲಿ ಕಲೆಸಿ ಪಿಚಕಾರಿ ಮೂಲಕ ಚಿಮ್ಮುವುದು ಸಣ್ಣವರ ಇನ್ನೊಂದು ವಿಧಾನ. ಕೆಮ್ಮಣ್ಣು ಮತ್ತು ಇದ್ದಿಲು ಪುಡಿಗೆ ಟೆಮೊಟೋ ರಸ ಬೆರೆಸಿ ವಿಧ ವಿಧವಾದ ಗಾಢ ಮತ್ತು ತಿಳಿ ಬಣ್ಣ ತಯಾರಿಸಬಹುದು. ಕೆಮ್ಮಣ್ಣಿಗೆ ಅನಾನಸ್ ರಸ ಸೇರಿಸಿ ಬಳಿದರೆ ಧಗಧಗಿಸುವ ಬಿಸಿಲಿಗೆ ತಂಪೆರೆದ ಅನುಭವ. ಮಂಜುನಾಥ ಹಿರೇಮಠ ಕುಟುಂಬ ಈ ಬಣ್ಣಗಳನ್ನು ತಯಾರಿಸುವ ಗುತ್ತಿಗೆ ಪಡೆದಿದ್ದಾರೆ! ಕಾರಣ, ತುಸು ಅನುಭವ ಮತ್ತು ಕೌಶಲ್ಯ ಬೇಕು.
ಹಸಿರು ಬಣ್ಣ ತಯಾರಿಸಲು ಪಾಲಕ್ ಮತ್ತು ಕಂಪಿಗಾಗಿ ಪುದಿನ, ಕೆಂಪು ಬಣ್ಣಕ್ಕಾಗಿ ಬೀಟ್ರೂಟ್ ರಸ ಹಿಂಡಿ ಅದಕ್ಕೆ ಟೊಮೆಟೋ ರಸ ಸೇರಿಸುವ ಗುತ್ತಿಗೆ ಮತ್ತೊಂದು ಕುಟುಂಬ ಪಡೆದುಕೊಂಡಿದೆ! ಬೀಟ್ರೂಟ್ ಹಿಂಡಿದ ಚರಟ ಹಾಗೆಯೇ ಮುಖಕ್ಕೆ ಬಳಿದರೂ ಗಾಢವಾಗಿ ಅಂಟುತ್ತದೆ. ಬಣ್ಣದ ಪೇಸ್ಟ್ ಕೈಗೆ, ದ್ರವ ಬಣ್ಣ ಪಿಚಕಾರಿಗೆ! ಹಾಗೆಯೇ, ಹಳದಿ ಬಣ್ಣಕ್ಕಾಗಿ, ಅರಿಶಿನ ಬೇರು ಕುಟ್ಟಿ ಪುಡಿಮಾಡಿ ನೀರಲ್ಲಿ ಕಲೆಸಿ ಬಳಸುವುದು ಒಂದು ವಿಧವಾದರೆ, ಟೊಮೆಟೋ ರಸ ಸೇರಿಸಿ ಪಿಚಕರಿಸಿದರೆ ಬಟ್ಟೆಗೆ ಅಂಟಿದ ಬಣ್ಣ ತುಂಬ ಗಾಢ. ನೀರಿನಿಂದ ತೊಳೆಯದ ಹೊರತು ಹೋಗದು.
ಬಣ್ಣ ತಯಾರಿಕೆಯಲ್ಲಿ ಪಾಲ್ಗೊಂಡ ಬಡಾವಣೆಯ ಇನ್ನೋರ್ವ ಗೃಹಿಣಿ ಮಂಗಳಗೌರಿ ಶಿಸಾಂಬ್ರಿಮಠ ಅವರು, ಇದು ಮೊದಲೇ ಸಲ ನಾವು ಇಂಥ ಬಣ್ಣ ಬಳಸಿ ಓಕಳಿ ಆಡತಿರೋದು.. ಇಷ್ಟು ದಿನ ಪೇಟೆಯೊಳಗಿನ ಬಣ್ಣ ದುಡ್ಡು ಕೊಟ್ಟು ಖರೀದಿಸಿ ತಂದು ಮಕ್ಕಳು ಆಡತಿದ್ರು.. ನಮಗು ಚೂರು ಹಚ್ಚತಿದ್ರು.. ಮೂಖ, ಮೈ ಉರಿದು ಕೆಂಪಾದ ಅನುಭವ ಆಗ್ತಿತ್ತು. ಅದಕ್ಕಾಗಿ ನಾವ ಬಣ್ಣ ತಯಾರಿಸೋದು ಅಂತ ತೀರ್ಮಾನ ಮಾಡಿದೆವು. ಈ ಸರ್ತೆ ನಾವೂ ಆಡತೇವಿ.. ಅಂದ್ರು.
ವಿವಿಧ ಬಣ್ಣಗಳ ಹೂವು ಮತ್ತು ಎಲೆ ಸಹ ಸಂಗ್ರಹಿಸಿ ಬಿಸಿಲಿಗೆ ಒಣಗಿಸಲಾಗುತ್ತಿದ್ದು, ಥರಹೇವಾರಿ ಬಣ್ಣದ ಪಕಳೆಗಳು ಈ ಬಾರಿ ಓಕುಳಿ ರಂಗೇರಿಸುವುದರಲ್ಲಿ ಸಂಶಯವಿಲ್ಲ. ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ಬಣ್ಣಗಳನ್ನು ಬಳಸುವ, ಹಬ್ಬವನ್ನು ಆಚರಿಸುವ ಬಗೆ ಮತ್ತು ವಿಧಾನ ತಿಳಿ ಹೇಳುವಲ್ಲಿ ತಾಯಂದಿರು ಹೊಂದಿರುವ ಕಾಳಜಿ ಮೆಚ್ಚುವಂತಹುದು.
ಅಷ್ಟೇ ಅಲ್ಲ, ಅಂದು ಬಡಾವಣೆಯ ಕಾಮ ದಹನ ಹಾಗೂ ಬಣ್ಣ ಆಡಲು ಆಗಮಿಸುವ ಆಪ್ತೇಷ್ಠರಿಗೆ ಉದ್ಯಾನದಲ್ಲಿ ತಂಪು ಪಾನೀಯ ಹಾಗೂ ಲಘು ಉಪಾಹಾರದ ವ್ಯವಸ್ಥೆ ಸಹ ಎಲ್ಲ ಕುಟುಂಬದವರೆಲ್ಲ ಸೇರಿ ಮಾಡಿಕೊಂಡಿದ್ದಾರೆ. ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ರ ವರೆಗೆ ಓಕುಳಿ ಮುಹೂರ್ತ ನಿಗದಿಯಾಗಿದೆ. ನೀವೂ ಬನ್ನಿ.. ನಿಮ್ಮವರನ್ನೂ ಕರೆ ತನ್ನಿ.. ಆದರೆ, ಮೊದಲೇ ತಿಳಿಸಿ (ಮಂಜುನಾಥ ಹಿರೇಮಠ ಸಂಪರ್ಕ: 98807 87122)
ಪ್ಯಾಟಿಯೊಳಗ ರಾಸಾಯನಿಕ ಮಿಶ್ರಿತ ಬಣ್ಣಗಳ ಮಾರಾಟ ಭರ್ಜರಿ ಆಗೇತಿ. ಅವುಗಳನ್ನ ಬಳಸುವಾಗ ಅಪ್ಪಿತಪ್ಪಿ ಕಣ್ಣು, ಮೂಗು ಮತ್ತು ಬಾಯಿಯೊಳಗ ಹೋದರ, ಚರ್ಮಕ್ಕ ತಾಗಿದರ ಪ್ರಾಥಮಿಕ ಚಿಕಿತ್ಸೆ ಅವಶ್ಯಕತೆ ಬೀಳಬಹುದು. ಮಕ್ಕಳ ಹಿತದೃಷ್ಟಿಯಿಂದ ಅರ್ಥಪೂರ್ಣವಾಗಿ, ಆರೋಗ್ಯ ಪೂರ್ಣವಾಗಿ ಮತ್ತು ಪರಿಸರ ಸ್ನೇಹಿಯಾಗಿ ಓಕುಳಿ ಆಚರಿಸಲಿಕ್ಕೆ ಈ ವ್ಯವಸ್ಥೆ ಮಾಡಿಕೊಂಡೇವಿ.. ಸಾಬೂನಿಲ್ಲದೇ ಈ ಬಣ್ಣಗಳನ್ನು ತೊಳೆದುಕೊಳ್ಳಬಹುದು. ತ್ವಚ ರಕ್ಷಕ ಮತ್ತು ಆರೋಗ್ಯ ವರ್ಧಕ ಬಣ್ಣಗಳನ್ನೇ ತಯಾರಿಸಿ, ಬಳಸಿಕೊಳ್ಳಲಾಗುತ್ತಿದೆ. ಎಲ್ಲರೂ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಬಣ್ಣಗಳಿವು.
ಮಂಜುನಾಥ ಹಿರೇಮಠ, ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಕರು, ಕೆಲಗೇರಿ
ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ಓಕುಳಿ ಆಡುವ ಈ ವಿಧಾನ ನಮ್ಮೆಲ್ಲರ ಆದ್ಯತೆಯಾಗಬೇಕು. ಕ್ರಿಯಾಶೀಲ ಗೆಳೆಯರು ಬಳಗದ ೮೫ಕ್ಕೂ ಹೆಚ್ಚು ಮಕ್ಕಳು ಅಂದು ಈ ಬಣ್ಣದಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಾವಿದ ಮಂಜುನಾಥ ಹಿರೇಮಠ ನಮ್ಮ ಆಶಯಗಳನ್ನು ಜೀವಂತವಿರಿಸಿದ್ದಾರೆ. ಅವರಿಗೆ ಅಭಿನಂದನೆ.
ಮುಕುಂದ ಮೈಗೂರ, ಪರಿಸರವಾದಿ, ಅಧ್ಯಕ್ಷರು, ಕ್ರಿಯಾಶೀಲ ಗೆಳೆಯರು ಬಳಗ, ಧಾರವಾಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.