ಧಾರವಾಡ : ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ಇವರ ವತಿಯಿಂದ 29-11-2017 ರಂದು ಸಂಜೆ 6 ಕ್ಕೆ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ, ಧಾರವಾಡ ಇಲ್ಲಿ ‘ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಚಿಂತಕ, ಸಂಶೋಧಕ ಹಾಗೂ ನೆಲಮೂಲ ಸಸ್ಯಶಾಸ್ತ್ರಜ್ಞ ಡಾ. ಕೇಶವ ಹೆಗಡೆ ಕೊರ್ಸೆ, ಶಿರಸಿ ಹಾಗೂ ಪರಿಸರಾಸಕ್ತ ತಂತ್ರಜ್ಞಾನಿ, ಸಾಕ್ಷ್ಯಚಿತ್ರ ನಿರ್ದೇಶಕರಾದ ಶ್ರೀ ಅಶ್ವಿನಿಕುಮಾರ ಭಟ್, ಗಾಳಿ ಮನೆ, ಬೆಂಗಳೂರು ಇವರು ಉಪಸ್ಥಿತರಿರಲಿದ್ದಾರೆ. ಮೊದಲಿಗೆ 45 ನಿಮಿಷಗಳ ಸಾಕ್ಷಚಿತ್ರ ಪ್ರದರ್ಶನವಿರಲಿದೆ.
ಡಾ. ಕೇಶವ ಹೆಗಡೆ ಕೊರ್ಸೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ.
ಔಷಧೀಯ ಸಸ್ಯಗಳ ಜೈವಿಕ ತಂತ್ರಜ್ಞಾನದಲ್ಲಿ ಪಿಎಚ್ಡಿ ಪದವಿ ಸಂಪಾದಿಸಿದ ಸಸ್ಯ ಶಾಸ್ತ್ರಜ್ಞ ಶ್ರೀ ಕೇಶವ ಹೆಗಡೆ, ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊರ್ಸೆಯವರು. ಕಳೆದ ಎರಡು ದಶಕಗಳಿಂದ ಸಂಶೋಧನೆ ಮತ್ತು ಅಧ್ಯಾಪನದಲ್ಲಿ ತೊಡಗಿರುವ ಮೇಧಾವಿ ಪ್ರಾಧ್ಯಾಪಕ. ಪಶ್ಚಿಮ ಘಟ್ಟದ ಪಾರಿಸಾರಿಕ ವಾತಾವರಣ, ಘಟ್ಟದ ಸುಸ್ಥಿರತೆ ಮತ್ತು ನೈಸರ್ಗಿಕ ಧಾರಣಾಶಕ್ತಿ, ತಪ್ಪಲಿನಲ್ಲಿ ಪಲ್ಲವಿಸಿದ ಔಷಧೀಯ ಸಸ್ಯಗಳ ಸ್ಥಿತಿ-ಗತಿ ಬಗ್ಗೆ ನಿರಂತರ ಅಧ್ಯಯನ ನಿರತರು. ಅಂತಾರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಶೋಧನಾ ಪತ್ರಿಕೆಗಳಲ್ಲಿ 12 ವಿಶಿಷ್ಠ ಪ್ರಬಂಧಗಳನ್ನು ಮಂಡಿಸಿದ ಹಿರಿಮೆ. ರಾಜ್ಯದ ಅತ್ಯುತ್ತಮ ಏರ್ ಇಂಡಿಯಾ ಶಿಕ್ಷಕ ಪ್ರಶಸ್ತಿ (2006), ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ (2008), ಅಮೆರಿಕೆಯ ಫುಲ್ಬ್ರೈಟ್ ಸ್ಕಾಲರ್ಶಿಪ್ (2012), ಪಶ್ಚಿಮ ಘಟ್ಟ ಕಾರ್ಯಪಡೆಯ ತಜ್ಞ ಸದಸ್ಯ (2008-13), ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರದ ತಜ್ಞ ಸದಸ್ಯರಾಗಿ ಡಾ. ಕೇಶವ ಹೆಗಡೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಶಿರಸಿಯಲ್ಲಿ ‘ಸೃಜನ ಶಿಕ್ಷಣ ಕೇಂದ್ರ’ವನ್ನು ಮುನ್ನಡೆಸುತ್ತಿರುವ ಇವರು, ಉಜಿರೆಯ ಎಸ್ಡಿಎಂ ಸ್ನಾತಕ ಮತ್ತು ಸ್ನಾತಕೋತ್ತರ ಸಸ್ಯಶಾಸ್ತ್ರ ಅಧ್ಯಯನ ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಯುವ ಸಸ್ಯ ಶಾಸ್ತ್ರಜ್ಞರನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. ಪಶ್ಚಿಮ ಘಟ್ಟ ಮತ್ತು ಅಘನಾಶಿನಿ ನದಿಯ ನೈಸರ್ಗಿಕ ಧಾರಣಾ ಶಕ್ತಿ-ಸಾಮರ್ಥ್ಯಗಳ ಕುರಿತು ತಮ್ಮ ಅನಿಸಿಕೆ ಮಂಡಿಸಲಿದ್ದಾರೆ. ಮಿಂಚಂಚೆ: keshavakorse@gmail.com
ಶ್ರೀ ಅಶ್ವಿನಿಕುಮಾರ ಭಟ್ ಗಾಳಿ ಮನೆ, ಬೆಂಗಳೂರು.
ಪಶ್ಚಿಮ ಘಟ್ಟದ ತಪ್ಪಲು ಗಾಳಿಮನೆಯಲ್ಲಿ ಬೇರು ಹೊಂದಿ, ಬೆಂಗಳೂರಿನಲ್ಲಿ ಹೂವು-ಹಣ್ಣು ಹೊದ್ದು ಬದುಕು ಕಟ್ಟಿಕೊಂಡವರು ಶ್ರೀ ಅಶ್ವಿನಿಕುಮಾರ ಭಟ್. ತಂತ್ರಾಂಶ ಅಭಿವೃದ್ಧಿ ಪಡಿಸುವ ಸಾಫ್ಟವೇರ್ ಕಂಪೆನಿಯಲ್ಲಿ ಪ್ರಬಂಧಕರಾಗಿರುವ ತಂತ್ರಜ್ಞಾನಿ. ಕಳೆದೊಂದು ದಶಕದಿಂದ ವನ್ಯಜೀವಿ, ಛಾಯಾಚಿತ್ರ ಮತ್ತು ಸಾಕ್ಷಚಿತ್ರ ನಿರ್ಮಾಣದಲ್ಲಿ ಶ್ರದ್ಧೆಯಿಂದ ತೊಡಗಿದವರು. ನೇಚರ್ ಇನ್ ಫೋಕಸ್ ನಿಯತಕಾಲಿಕೆ ಕೊಡಮಾಡುವ ವಾರ್ಷಿಕ ಛಾಯಾಗ್ರಾಹಕ ಪ್ರಶಸ್ತಿ -೨೦೧೫ ಸೇರಿದಂತೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಯುವ ಪರಿಸರವಾದಿ. ಬಿಬಿಸಿ ವೈಲ್ಡ್ಲೈಫ್ ಫೋಟೊಗ್ರಾಫರ್ ಆಫ್ ದಿ ಇಯರ್ ಪ್ರಶಸ್ತಿಗೆ ಹಲವು ಬಾರಿ ಅಚಿತಿಮ ಹಂತದ ವರೆಗೆ ನಾಮನಿರ್ದೇಶನಗೊಂಡವರು. ‘ಕ್ರಿಯೇಟಿವ್ ನೇಚರ್ ಫೋಟೊಗ್ರಫಿ’ ಹಾಗೂ ’ಲ್ಯಾಂಡ್ಸ್ಕೇಪ್ ವಿಝಾರ್ಡ್ಸ್’ ಎಂಬೆರೆಡು ಸಂಸ್ಥೆಗಳ ಸ್ಥಾಪಕ, ಪ್ರೇರಕ ಶಕ್ತಿ ಅಶ್ವಿನಿಕುಮಾರ. ‘ಅಘನಾಶಿನಿ’ ಚಲನಚಿತ್ರದಷ್ಟು ಉದ್ದವಿರುವ ಸಾಕ್ಷಚಿತ್ರ ಇವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಈಗಾಗಲೇ ಸಾಕಷ್ಟು ಹೆಸರುಗಳಿಸಿರುವುದು ಇವರ ಸೃಜನಶೀಲತೆಗೆ ಸಾಕ್ಷಿ. ಸಾಕ್ಷಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ನಮ್ಮೊಂದಿಗೆ ಸಂವಾದ ನಡೆಸಲಿದ್ದಾರೆ. ಮಿಂಚಂಚೆ: sumasutaha@gmail.com
ಮನಿಗೆ ಹಂಡೆ ಹೆಂಗ ಆಸರನೋ.. ಹಂಗ ಊರಿಗೆ ಊರ ಮುಂದಿನ ಕೆರಿ.. ಅಭಿವೃದ್ಧಿಯ ಹೆಸರಿನಲ್ಲಿ ನೀರಿನಾಸರೆ ಕಳೆದುಕೊಳ್ಳುತ್ತಿರುವ, ಹಿರೀಕರ ನೀರ ನೆಮ್ಮದಿ ಇನ್ನೆಲ್ಲಿಯದು? ಎಂಬ ನಿರಾಶಾಭಾವ ನಮ್ಮನ್ನು ಕಾಡುತ್ತಿರುವ ಹೊತ್ತಿನಲ್ಲಿ, ಮಾನವ ಕೇಂದ್ರಿತ ’ಅಭಿವೃದ್ಧಿ’ಯ ಪಾಪನಾಶಿನಿಯಾಗಿ ನದಿ ’ಅಘನಾಶಿನಿ’ ತನ್ನ ಧಾರಣಾ ಶಕ್ತಿಯ ಮೂಲಕ ಪಶ್ಚಿಮಘಟ್ಟದ ಆಶ್ರಯದಲ್ಲಿ ಸಲಹುತ್ತಿರುವ ಪರಿಯ ಅನನ್ಯತೆ ಸಾಕ್ಷಚಿತ್ರ ಮತ್ತು ಸಂವಾದದ ಕೇಂದ್ರಬಿಂದು. ನದಿಯನ್ನು ಉಳಿಸಿಕೊಂಡೇ ಅಭಿವೃದ್ಧಿ ಸಾಧಿಸುವ ಪರ್ಯಾಯಗಳಿಲ್ಲವೇ? ನದಿ, ಸರೋವರ ನೈಸರ್ಗಿಕವಾಗಿಯೇ ನಮ್ಮ ಆಧುನಿಕ ಸಿದ್ಧ ‘ವಾಣಿಜ್ಜಿಕ ಮಾದರಿ’ಗಳಿಗೆ ಅನುಕರಣಾ ಯೋಗ್ಯವಾಗಿ, ಬದುಕುವ-ಬಾಳುವ ತಂತ್ರಜ್ಞಾನ ಶತಶತಮಾನಗಳಿಂದ ಮೈಗೂಡಿಸಿಕೊಂಡ ಪರಿ ಎಂತಹುದು? ಬನ್ನಿ ಅರಿಯುವ ಪ್ರಯತ್ನದ ಭಾಗವಾಗೋಣ.
ಮಾಹಿತಿಗೆ: 9886521664 ಅಥವಾ 9480248486 ಅಥವಾ 9449454972
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.