ಉಜಿರೆ : ಪುಟ್ಟ ಹೆಜ್ಜೆಗಳಲ್ಲಿ ಗೆಜ್ಜೆ ನಾದ. ಮುಗ್ಧ ಮುಖದಲ್ಲಿ ದಶಾವತಾರದ ಭಾವ. ಮದ್ದಳೆ, ಚಂಡೆ ತಾಳಕ್ಕೆ ಬಾಲ ಕೃಷ್ಣನಿಂದ ವಿಶ್ವಶಾಂತಿಯ ಸಂದೇಶ. ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಾಪನೆಯ ಅಭಯ.
ಈ ದೃಶ್ಯಾವಳಿ ಕಂಡುಬಂದಿದ್ದು ಧರ್ಮಸ್ಥಳದ ಕಾರ್ತೀಕ ಮಾಸದ ದೀಪೋತ್ಸವದ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಲಲಿತಕಲಾ ಉತ್ಸವದಲ್ಲಿ. ಬಾಲಪ್ರತಿಭೆ ತುಳಸಿ ಹೆಗಡೆ ಪ್ರಸ್ತುತಪಡಿಸಿದ ವಿಶ್ವಶಾಂತಿ ಯಕ್ಷಗಾನ ರೂಪಕದಲ್ಲಿ.
ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ತಡೆಯಬೇಕಿದೆ. ಮನುಕುಲಕ್ಕೆ ಶಾಂತಿಯುತ ನೆಮ್ಮದಿಯ ಜೀವನ ನೀಡಬೇಕು. ಅಧರ್ಮವನ್ನು ಮೆಟ್ಟಿ ವಿಶ್ವದಲ್ಲಿ ಧರ್ಮ ಸ್ಥಾಪನೆಯಾಗಬೇಕಿದೆ. ಇಂಥ ಸಂದರ್ಭದಲ್ಲಿ ಪ್ರದರ್ಶಿತವಾದ ತುಳಸಿ ಹೆಗಡೆ ಯಕ್ಷಗಾನ ವಿಶ್ವಶಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿತು.
ಶಿರಸಿ ತಾಲೂಕಿನ ಬೆಟಕೊಪ್ಪದ ಶ್ರೀಮತಿ ಗಾಯತ್ರಿ ಮತ್ತು ಶ್ರೀ ರಾಘವೇಂದ್ರ ಅವರ ಮಗಳಾದ ತುಳಸಿ ತಮ್ಮ 3 ನೇ ವಯಸ್ಸಿನಿಂದಲೇ ಯಕ್ಷಗಾನದ ಅಭಿರುಚಿಯನ್ನು ಬೆಳೆಸಿಕೊಂಡರು. ತಮ್ಮ 8 ನೇ ವರ್ಷದಲ್ಲಿ ತುಳಸಿ ಹೆಗಡೆ ನೀಡಿದ ಈ ನೃತ್ಯ ರೂಪಕ ವಿಷ್ಣುವಿನ ದಶಾವತಾರಗಳನ್ನು ಅನಾವರಣಗೊಳಿಸಿತು. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಕಂಕಣ ಕಟ್ಟಿದ ಶ್ರೀ ರಾಮ ಕೃಷ್ಣರ ಧರ್ಮದ ನಡೆಗಳ ಮಹತ್ವವು ಕಾರ್ಯಕ್ರಮಕ್ಕೆ ಆಗಮಿಸಿದ ಕಲಾಭಿಮಾನಿಗಳ ಮನಮುಟ್ಟಿತು.
ಕಾಲ ಬದಲಾದಂತೆ ಸಕಲ ಜೀವಚರಗಳ ಜೀವನವೂ ಬದಲಾಗುತ್ತದೆ. ಪ್ರಕೃತಿ ಸ್ವಾರ್ಥದ ಭಾವದಲ್ಲಿ ನಶಿಸುವ ಸ್ಥಿತಿ ತಲುಪುತ್ತದೆ. ಸಾಮಾಜಿಕ ಅಭದ್ರತೆ, ಕೊಲೆ, ಸುಲಿಗೆ, ಪ್ರಕೃತಿ ವಿಕೋಪಗಳು ತಲೆದೂರುತ್ತಿವೆ. ವಿಶ್ವದಲ್ಲಿ ಅಶಾಂತಿ ಮನೆಮಾಡಿದೆ. ಈ ಸಂದರ್ಭದಲ್ಲಿ, ತುಳಸಿಯವರ ವಿಶ್ವಶಾಂತಿ ಯಕ್ಷಗಾನ ರೂಪಕ ಶ್ರೀಕೃಷ್ಣ ತಾನಿದ್ದೇನೆ ಎಂಬ ಅಭಯ ನೀಡುವಂತೆ ಪ್ರಕಟಗೊಂಡಿತು.
ವಿಶ್ವಶಾಂತಿ ಕೇವಲ ಮನುಕುಲದ ನೆಮ್ಮದಿಗೆ ಸೀಮಿತವಲ್ಲ. ಸಮಾಜದಲ್ಲಿ ಒಳಿತು ಕಾಣಲು, ಇಲ್ಲಿರುವ ಸಕಲವೂ ಉತ್ತಮ ರೀತಿಯಲ್ಲಿರಬೇಕಾಗಿದೆ. ವಿಷ್ಣು ಜಲದಲ್ಲಿ ತೊಂದರೆ ಉಂಟಾದಾಗ ಮತ್ಸ್ಯಾವತಾರವನ್ನೆತ್ತಿ ಜಲಚರಗಳನ್ನು ರಕ್ಷಿಸಿದ, ಜಲದಿಂದ ತೊಂದರೆಯಾದಾಗ ಕೂರ್ಮಾವತಾರವನ್ನೆತ್ತಿದ, ನೆಲಕ್ಕೆ ತೊಂದರೆಯಾದಾಗ ವರಾಹಾವತಾರವನ್ನೆತ್ತಿದ, ವಾಮನನಾದ, ದುಷ್ಟ ಶಿಕ್ಷಣೆಗೆ ನರಂಸಿಂಹನಾದ, ನ್ಯಾಯಯುತ ಬದುಕು ಕಲಿಸಲು ರಾಮಾವತಾರವನ್ನೆತ್ತಿದ್ದ. ಅಧರ್ಮಗಳಿಂದ ಶಿಷ್ಟರನ್ನು ರಕ್ಷಿಸಲು ಶ್ರೀ ಕೃಷ್ಣನಾಗಿ ಧರ್ಮ ಸ್ಥಾಪನೆ ಮಾಡಿದ. ಭಗವಂತ ಹೀಗೆ ಅವತಾರಗಳ ಮೂಲಕ ಪ್ರತಿ ಕಾಲದಲ್ಲೂ ಸಮಾಜಕ್ಕೆ ಒಳಿತನ್ನು ನೀಡಿದ. ಮುಂದೆಯೂ ಶ್ರೀ ರಾಮಕೃಷ್ಣರು ಮನೆಮನೆಗೆ ಬಂದು ಧರ್ಮದ ರಕ್ಷಣೆ ಮಾಡುತ್ತಾ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾನೆ ಎಂದು ಯಕ್ಷಗಾನ ರೂಪಕ ಸಮಾಜಕ್ಕೆ ಒಳಿತನ್ನು ಬಯಸಿತು.
ಪುಟ್ಟ ಬಾಲೆಯ ಈ ರೂಪಕ ಲಕ್ಷದೀಪೋತ್ಸವದಲ್ಲಿ ಪ್ರಸ್ತುತ ಸಾಮಾಜದಲ್ಲಿ ನಡೆಯುತ್ತಿರುವ ಅಹಿತಕರ ಸಂಗತಿಗಳನ್ನು ತಡೆದು, ಮನುಕುಲಕ್ಕೆ ಹಾಗೂ ಸಕಲ ಜೀವಗಳಿಗೆ ನೆಮ್ಮದಿಯ ಜೀವನದ ಅಭಿಲಾಷೆಯನ್ನು ಸಾಕಾರಗೊಳಿಸಬಹುದೆಂಬ ಆಶಯ ವ್ಯಕ್ತಪಡಿಸಿತು. ಸುಮಾರು 100 ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿದ ತುಳಸಿ ವಿಶ್ವಶಾಂತಿ ಯಕ್ಷಗಾನ ರೂಪಕವನ್ನು ಪ್ರದರ್ಶಿಸಿದ ಮೊದಲ ಬಾಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾರ್ಯಕ್ರಮದಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆ ಅವರ ಕಂಠದಲ್ಲಿ ಶ್ರೀ ಕೃಷ್ಣನ ಲೀಲೆಗಳು ಅದ್ಭುತವಾಗಿ ಮೂಡಿಬಂದವು. ಶಂಕರ ಭಾಗವತರು ಮದ್ದಳೆ ಹಾಗೂ ವಿಘ್ನೇಶ್ವರ ಕೆಸರಕೊಪ್ಪ ಛಂಡೆ ಸಾಥ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.