ಉಜಿರೆ : ಇಡೀ ದೇಶ ಇದೀಗ ಸ್ವಚ್ಛತೆಯ ಆಂದೋಲನದ ಗುಂಗಿನಲ್ಲಿದೆ. ಸ್ವಚ್ಛತೆಯ ಅಗತ್ಯತೆಯನ್ನು ಮನಗಾಣಿಸುವ ಪ್ರಯತ್ನ ಸೆಲಬ್ರಿಟಿಗಳು, ಸರ್ಕಾರಿ ಜಾಹಿರಾತುಗಳ ಮೂಲಕ ನಿರಂತರವಾಗಿದೆ. ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಗಮನ ಸೆಳೆದ ಶ್ರೀಸಾಮಾನ್ಯರೊಬ್ಬರ ಸೈಕಲ್ ಯಾನ ಸ್ವಚ್ಛತೆಯ ಪ್ರಜ್ಞೆ ಅಳವಡಿಸಿಕೊಳ್ಳುವ ಮಹತ್ವದ ಸಂದೇಶ ಸಾರಿತು.
ದೇಶದ ಸರ್ಕಾರಿ ವಲಯವು ಸ್ವಚ್ಛತೆಯ ಪರ ಅಭಿಯಾನ ಆರಂಭಿಸುವ ಎಷ್ಟೋ ವರ್ಷಗಳ ಹಿಂದೆಯೇ ಈ ಸೈಕಲ್ಯಾನ ಶುರುವಾಗಿದೆ. ಒಟ್ಟು 16 ವರ್ಷಗಳ ಸುದೀರ್ಘಾವಧಿಯ ದೇಶ ಪರ್ಯಟನೆಯ ಮೌಲಿಕ ಸಂದೇಶಗಳ ಉದ್ದೇಶ ಈ ಯಾನದ ಜೊತೆಗಿರುವುದನ್ನು ಸೈಕಲ್ ಸ್ಪಷ್ಟಪಡಿಸುತ್ತಿದೆ. ಲಕ್ಷದೀಪೋತ್ಸವದ ಆರಂಭದ ದಿನದಂದು ಚಿಕ್ಕಮಗಳೂರಿನ ಕಡೆಗೆ ಹೊರಟ ಸಂದರ್ಭದಲ್ಲಿ ಈ ಸೈಕಲ್ ಹಲವರನ್ನು ಸೆಳೆಯಿತು.
ಅರಸೀಕೆರೆ ತಾಲೂಕಿನ ಅಮರಗಿರಿಯ ಮಾಲೇಕಲ್ ತಿರುಪತಿ ಗ್ರಾಮದ 72 ವಯಸ್ಸಿನ ಉಮಾಪತಿ ಮೊದಲಿಯಾರ್ ಈ ಸೈಕಲ್ ಜೊತೆಗೆ ಗುರುತಿಸಿಕೊಂಡ ಶ್ರೀಸಾಮಾನ್ಯ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 50ನೇ ವರ್ಷದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದವರು. ತಮ್ಮ ಸೈಕಲ್ ಯಾನದ ಮೂಲಕ ಆಕರ್ಷಿಸಿದವರು. ಇಲ್ಲಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಮೂರು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಸೈಕಲ್ ಮೂಲಕವೇ ಪರ್ಯಟನೆ ನಡೆಸಿ ಸ್ವಚ್ಛತೆಯ ಪ್ರಜ್ಞೆ ಬಿತ್ತುವ ಉದಾತ್ತ ಉದ್ದೇಶದೊಂದಿಗಿರುವವರು.
ಸೈಕಲ್ನ ಹ್ಯಾಂಡಲ್ ಮೇಲೆ ಗಾಂಧೀಜಿಯವರ ಭಾವಚಿತ್ರದೊಂದಿಗಿನ ’ಸ್ವಚ್ಛ ಕರ್ನಾಟಕ ಸ್ವಚ್ಛ ಭಾರತ್ ಆಂದೋಲನ’ ಎಂಬ ಉಲ್ಲೇಖದೊಂದಿಗಿನ ವಿವರಗಳು ಉಮಾಪತಿ ಅವರ ಸೈಕಲ್ ಯಾನದ ಸ್ವಚ್ಛತೆಯ ಪರವಾದ ಮಾಹಿತಿಯನ್ನು ದಾಟಿಸುತ್ತವೆ. 2003 ರಲ್ಲಿ ಈ ಸೈಕಲ್ ಯಾನ ಶುರುವಾಗಿರುವ ಇತಿಹಾಸವನ್ನು ಕಟ್ಟಿಕೊಡುತ್ತವೆ. ಸತತ 14 ವರ್ಷಗಳಿಂದಲೂ ಈ ಯಾನದ ಮೂಲಕ ದೇಶದಲ್ಲೆಲ್ಲಾ ಸ್ವಚ್ಛತೆಯ ಮಹತ್ವವನ್ನು ಸಾರುತ್ತಿರುವ ವಿಶೇಷತೆಗೆ ಕನ್ನಡಿ ಹಿಡಿಯುತ್ತವೆ. ಅಷ್ಟೇ ಅಲ್ಲ, ಇನ್ನೂ ಎರಡು ವರ್ಷ ಈ ಯಾನ ಮುಂದುವರೆದು 2019 ರ ಹೊತ್ತಿಗೆ ಪೂರ್ಣಗೊಳ್ಳಲಿರುವುದನ್ನು ದೃಢಪಡಿಸುತ್ತವೆ.
ಪ್ರತಿ ವರ್ಷ ಒಂಭತ್ತು ತಿಂಗಳುಗಳ ಕಾಲ ಎಲೆಕ್ಟ್ರಿಷಿಯನ್ ವೃತ್ತಿ ನಿರ್ವಹಿಸುವ ಉಮಾಪತಿ ಉಳಿದ ಮೂರು ತಿಂಗಳ ಅವಧಿಯಲ್ಲಿ ಉದಾತ್ತ ಉದ್ದೇಶದ ಈ ಸೈಕಲ್ ಯಾನ ಆರಂಭಿಸುತ್ತಾರೆ. 2003 ರಲ್ಲಿ ಈ ಯಾನ ಆರಂಭಿಸಿದ ಇವರು ಸೈಕಲ್ ಮೂಲಕವೇ ದೆಹಲಿಯವರೆಗೆ ಪಯಣಿಸುತ್ತಾರೆ. ಪರಿಸರ ಸಂರಕ್ಷಣೆಯ ಸಂದೇಶವೂ ಈ ಸ್ವಚ್ಛತೆಯ ಪ್ರಜ್ಞೆ ಮೂಡಿಸುವ ಹಾದಿಯಲ್ಲಿ ರವಾನೆಯಾಗುತ್ತದೆ. ಇಲ್ಲಿಯವರೆಗೆ 30860 ಕಿ.ಮೀ ಪರ್ಯಾಟನೆ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಇನ್ನೂ 2019 ವರೆಗೆ ಈ ಪರ್ಯಟನೆ ನಡೆಸಲಿದ್ದಾರೆ.
ಸ್ವಚ್ಛತೆಯಲ್ಲಿ ಧರ್ಮಸ್ಥಳ ಅಗ್ರಗಣ್ಯವೆನ್ನಿಸಿದೆ. ದಕ್ಷಿಣ ಕನ್ನಡದಲ್ಲಿ ಸ್ವಚ್ಛತೆಯನ್ನು ಕಂಡಾಗ ತುಂಬಾ ಖುಷಿಯಾಯಿತು. ಅದರಲ್ಲೂ ಉಡುಪಿ ಬಹಳ ನನಗೆ ಇಷ್ಟವಾಯಿತು. ಸ್ವಚ್ಛತೆಗೆ ಆದ್ಯತೆ ನೀಡಿರುವ ಧರ್ಮಸ್ಥಳ ಮಾದರಿ ಎನ್ನಿಸಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮೆಚ್ಚುಗೆಗೆ ಪಾತ್ರವಾಗಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.
ವರದಿ-ಚಿತ್ರಗಳು: ರಾಜೇಶ್ವರಿ ಬೆಳಾಲು, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು ಉಜಿರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.