ವಿದ್ಯುತ್ ಅಭಾವ ಎದುರಿಸುತ್ತಿದ್ದರೂ ನಮ್ಮ ದೇಶದಲ್ಲಿ ವಿದ್ಯುತ್ ಕಳ್ಳತನದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ವಿದ್ಯುತ್ನ್ನು ನಿರಂತರವಾಗಿ ಕದಿಯುವ ಕಳ್ಳರು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡುತ್ತಿದ್ದಾರೆ. ಹೀಗಿದ್ದರೂ ಅದನ್ನು ತಡೆಯಲು ಸರ್ಕಾರ ಮುಂದಾಗುವುದಿಲ್ಲ.
ವಿದ್ಯುತ್ ಕಳ್ಳತನವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶದ ಕಾನ್ಪುರದ ಮಹಿಳಾ ಐಎಎಸ್ ಅಧಿಕಾರಿ ರಿತು ಮಹೇಶ್ವರಿ ಅವರು ನಿತ್ಯ ವಿದ್ಯುತ್ ಕಳ್ಳರೊಂದಿಗೆ ಹೋರಾಟ ಮಾಡುತ್ತಿದ್ದಾರೆ. ಇದುವರೆಗೆ ಅವರು 10 ಬಿಲಿಯನ್ ಡಾಲರ್ ಸರ್ಕಾರದ ಹಣವನ್ನು ಉಳಿಸಿದ್ದಾರೆ.
2011ರಲ್ಲಿ ಕಾನ್ಪುರ ವಿದ್ಯುತ್ ಸರಬರಾಜು ನಿಗಮಕ್ಕೆ ಅಧಿಕಾರಿಯಾಗಿ ನೇಮಿಸಲ್ಪಟ್ಟ ಅವರು ತಮ್ಮ ಹಿರಿಯ ಅಧಿಕಾರಿಗಳ ಆಶಯಕ್ಕೆ ವಿರುದ್ಧವಾಗಿ ಕಳ್ಳತನ ತಡೆಗೆ ಹೊಸ ಡಿಜಿಟಲ್ ಮೀಟರ್ನ್ನು ಅಳವಡಿಸಿದರು. ಇದರಿಂದ ವಿದ್ಯುತ್ ಕಳ್ಳತನಕ್ಕೆ ಕತ್ತರಿ ಬಿತ್ತು. ಆದರೆ ಅವರ ಕಾರ್ಯ ಇತರರಿಗೆ ಇಷ್ಟವಾಗಲಿಲ್ಲ. ಅದಕ್ಕಾಗಿ 11 ತಿಂಗಳಲ್ಲಿ ವರ್ಗಾವಣೆಗೊಂಡರು. ಆದರೂ ಛಲ ಬಿಡದ ರಿತು ಕಳೆದ 6 ವರ್ಷಗಳಿಂದ ವಿದ್ಯುತ್ ಕಳ್ಳರ ವಿರುದ್ಧ ಹೋರಾಡುತ್ತಲೇ ಇದ್ದಾರೆ.
ನೂರಾರು ಮಂದಿ ಕಳ್ಳರನ್ನು ಹಿಡಿದು, ಅವರ ವಿರುದ್ಧ ಕ್ರಮ ಜರುಗಿಸಿದ್ದಾರೆ. ಅಧಿಕಾರಿ ವರ್ಗ, ರಾಜಕಾರಣಿಗಳು ಅವರ ಕಾರ್ಯಕ್ಕೆ ನಿರಂತರ ಅಡ್ಡಿಯುಂಟು ಮಾಡುತ್ತಲೇ ಇದ್ದಾರೆ. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ಅವರು ವಿದ್ಯುತ್ ಉಳಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಪ್ರಧಾನಿಯವರ ಗಮನವನ್ನೂ ಈ ವಿಷಯದತ್ತ ಸೆಳೆಯಲು ಬಯಸುತ್ತಿದ್ದಾರೆ.
2019ರ ವೇಳೆ ಉತ್ತರಪ್ರದೇಶದ ವಿದ್ಯುತ್ ಕಳ್ಳತನದ ಪ್ರಮಾಣವನ್ನು ಶೇ.15ಕ್ಕೆ ಇಳಿಸುವ ಗುರಿ ಅವರದ್ದು. ಮುಂದಿನ ವರ್ಷಗಳಲ್ಲಿ ಕಳಪೆ ಮೀಟರ್ನಿಂದ ಸ್ಮಾರ್ಟ್ ಮೀಟರ್ ಕಡೆ ಹೊರಳುತ್ತಿರುವುದರಿಂದ ಕಳ್ಳತನ ಇಳಿಕೆಯ ಆಶಾವಾದ ಅವರಲ್ಲಿದೆ.
ಪ್ರಸ್ತುತ ಅವರು ದೆಹಲಿಯ ಸಬರ್ಪ್ಸ್ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.