“1925” ಭಾರತ ನೂರಾರು ವರ್ಷದ ಬ್ರಿಟಿಷರ ದಾಸ್ಯದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಹಾತೊರೆಯುತ್ತಿದ್ದ ಸಂದರ್ಭ. ಅದಾಗಲೇ ಸಾವಿರಾರು ಹೋರಾಟಗಳ, ನೂರಾರು ಮಹಾಪುರುಷರ ಪರಿಶ್ರಮ, ಬಲಿದಾನಗಳ ಪರಿಣಾಮವಾಗಿ ಮುಂದಿನ ಹತ್ತಾರು ವರ್ಷಗಳಲ್ಲಿ ಭಾರತಮಾತೆ ಸ್ವಾತಂತ್ರಗೊಳ್ಳೋ ವಿಶ್ವಾಸ ಎಲ್ಲರಲ್ಲೂ ಮೂಡಿತ್ತು.
ಇತ್ತ ಹುಟ್ಟಿನಿಂದಲೂ ದೇಶಭಕ್ತನಾಗಿದ್ದ, ಬಾಲ್ಯ-ತಾರುಣ್ಯದಲ್ಲಿನ ಶಾಲಾ-ಕಾಲೇಜು ವಿದ್ಯಾಭ್ಯಾಸದ ಜೊತೆಜೊತೆಗೆ ದೇಶ ಕಾರ್ಯಕ್ಕೆ ಸಮಯವನ್ನು ಮುಡುಪಾಗಿಟ್ಟಿದ್ದ, ಸ್ವಾತಂತ್ರ್ಯ ಹೋರಾಟಗಳಲ್ಲಿ ಕ್ರಾಂತಿಕಾರಿಗಳ ಒಡನಾಡಿಯಾಗಿದ್ದ, ಅಂದಿನ ಕಾಂಗ್ರೆಸ್ಸಿನ ಮೂಲಕ ಜನರಲ್ಲಿ ದೇಶದ ಸ್ವತಂತ್ರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ, ಬಡತನದ ಕಷ್ಟದಲ್ಲೂ ಡಾಕ್ಟರ್ ಪದವಿಯನ್ನು ಪಡೆದಿದ್ದ ಓರ್ವ ದ್ರಷ್ಟಾರ ಡಾ||ಕೇಶವ ಬಲಿರಾಮ್ ಹೆಡಗೆವಾರರ ಚಿಂತನೆ ಈ ಮಣ್ಣಿನ ಭವಿಷ್ಯದ ಮೇಲಿತ್ತು. ಮುಂದಿನ ದಿನಗಳಲ್ಲಿ ದೇಶಕ್ಕೆ ಸ್ವತಂತ್ರವೇನೋ ಸಿಗಬಹುದು ಆದರೆ ಪದೇ ಪದೇ ಮತ್ತೊಬ್ಬರಿಂದ ಆಳ್ವಿಕೆಗೊಳಗಾಗುತ್ತಿರುವ ಸಮಾಜ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು..? ದೇಶದೊಳಗಿನ ಸಮಸ್ಯೆಗಳಾದ ಜಾತಿ-ವರ್ಣ ಭೇದಗಳ ನೀಗಿಸಲು, ಜನರಲ್ಲಿನ ದೇಶ ನಿಷ್ಠೆಯ ಕೊರತೆಯ ದೂರಗೊಳಿಸಲು ಏನು ಮಾಡಬೇಕು ? ಈ ದೇಶ ಹಿಂದಿನಂತೆ ವಿಶ್ವಗುರು ಸ್ಥಾನವ ಮತ್ತೆ ಪಡೆಯಲು ಏನಾಗಬೇಕು ? ಎಂಬೆಲ್ಲ ಪ್ರಶ್ನೆಗಳನ್ನು ಮನದಲ್ಲಿರಿಸಿಕೊಂಡು ಚರಿತ್ರೆಯ ತ್ರೀವ ಅಧ್ಯಯನ ಮತ್ತು ಹಲವಾರು ಮಹಾಪುರುಷರೊಡಗಿನ ವಿಚಾರವಿನಿಮಯದ ನಂತರ ಸಂಘಟನೆಯೊಂದನ್ನು ಪ್ರಾರಂಭಿಸುವ ನಿಲುವಿಗೆ ಬಂದರು.
ಡಾ|| ಕೇಶವ ಬಲಿರಾಮ್ ಹೆಡಗೆವಾರರ ಆ ನಿರ್ಣಯದ ಫಲವೇ ಹಿಂದುತ್ವವ ಮೂಲಮಂತ್ರವನ್ನಾಗಿಸಿಕೊಂಡು 1925ರ ವಿಜಯದಶಮಿಯಂದು ಪ್ರಾರಂಭವಾದ `ರಾಷ್ಟ್ರೀಯ ಸ್ವಯಂಸೇವಕ ಸಂಘ’ ಆ ದಿನ 10-15 ತರುಣರು ಬೈಠಕ್ ನಡೆಸುವ ಮೂಲಕ ಕೇಶವರ ಸ್ವಗೃಹದ ಒಂದು ಕೋಣೆಯಲ್ಲಿ ಶುರುವಾದ ಸಂಘಟನೆ ವಾರಗಳ ತರುವಾಯ ಮೈದಾನದಲ್ಲಿ ನಿತ್ಯ ಶಾಖಾ ಸ್ವರೂಪ ಪಡೆಯಿತು. ಇಂದು RSS ಎಂದೇ ಚಿರಪರಿಚಿತವಾಗಿರುವ ಅದೇ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ನಿತ್ಯ ಶಾಖೆಗಳೊಂದಿಗೆ 40ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ಸಂಘಟನೆಗಳಿಗೆ ಮಾತೃ ಸಂಸ್ಥೆಯಾಗಿ, 30 ಇನ್ನಿತರ ದೇಶಗಳಲ್ಲೂ ತನ್ನ ಬಾಹುಗಳನ್ನು ಬೆಳೆಸಿದೆ. RSS ನಿತ್ಯಶಾಖೆಯ ಮೂಲಕ ಸ್ವಯಂಸೇವಕರಲ್ಲಿ ದೇಶಭಕ್ತಿ, ಸಮಾಜಸೇವೆ, ರಾಷ್ಟ್ರೀಯ ಚಿಂತನೆಗಳು ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಸಂಸ್ಕಾರಗಳನ್ನು ಬೆಳೆಸುತ್ತಿದೆ. ಶಾಖೆಯಲ್ಲಿ ಸದ್ಗುಣಗಳನ್ನು ಬೆಳಿಸಿಕೊಂಡ ಸ್ವಯಂಸೇವಕರು ವಿವಿಧ ಕ್ಷೇತ್ರಗಳಲ್ಲೂ ನಾಡಸೇವೆಯಲ್ಲಿ ನಿರತರಾಗಿದ್ದಾರೆ ಜೊತೆಗೆ ತಮ್ಮ ವ್ಯಕ್ತಿತ್ವದ ಮೂಲಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ದೇಶದ ರಕ್ಷಣೆ, ಸಾಮಾಜಿಕ ಸೇವೆ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ RSSನ ಸ್ವಯಂಸೇವಕರು ಜನಹಿತ ಕಾರ್ಯಗಳನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ರಾಷ್ಟ್ರಹಿತ ಬಯಸುವ ಲಕ್ಷಾಂತರ ಸ್ವಯಂಸೇವಕರು ‘ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ’ ಎಂಬ ಮನೋಭಾವದಲ್ಲಿ ತಮ್ಮ ವೈಯುಕ್ತಿಕ ಜೀವನದ ಜೊತೆಜೊತೆಗೆ ಸಮಾಜದೊಳಿತಿಗೂ ಸಮಯವನ್ನು ಮುಡುಪಾಗಿಟ್ಟಿದ್ದಾರೆ. ಇನ್ನು ಕೆಲವರಂತೂ ತಮ್ಮ ಪೂರ್ಣ ಜೀವನವನ್ನೇ ಸಮಾಜಸೇವೆಗಾಗಿ ಅರ್ಪಿಸಿದ್ದಾರೆ.
ಅಂದು ಸ್ವಾಮಿ ವಿವೇಕಾನಂದರು ಕೇಳಿದ ಉಕ್ಕಿನ ನರಗಳುಳ್ಳ, ರಾಷ್ಟ್ರಭಕ್ತ ಮನಸ್ಸಿನ…, ಸುಭಾಷ್ ಚಂದ್ರರು ಕೇಳಿದ್ದ ಭಾರತಿಗಾಗಿ ರಕ್ತ ನೀಡಲೂ ಹಿಂಜರಿಯದ ಗಟ್ಟಿಗುಂಡಿಗೆಯ ತರುಣರು RSSನಲ್ಲಿ ತಯಾರಾಗುತ್ತಾ ಬಂದಿದ್ದಾರೆ. ದೇಶಕ್ಕಾಗಿ ಬದುಕುವ ಅವಶ್ಯವಿದ್ದಲ್ಲಿ ಪ್ರಾಣತ್ಯಾಗಕ್ಕೂ ಒಲ್ಲೆಯನ್ನದ ಮನೋಬಲವ ಸ್ವಯಂಸೇವಕರು ಮೈಗೂಡಿಸಿಕೊಳ್ಳುತ್ತಿದ್ದಾರೆ. ಒಂದು ದೇಶ ಮೇಲ್ಬರಬೇಕಾದರೆ ಅಲ್ಲಿನ ಸಮಾಜ ಸುಸ್ಥಿತಿಗೆ ಬರಬೇಕು. ಸಮಾಜ ಸುಧಾರಿಸಬೇಕಾದರೆ ಅಲ್ಲಿನ ವ್ಯಕ್ತಿ-ವ್ಯಕ್ತಿ ಉತ್ತಮರಾಗಬೇಕು ಈ ನಿಟ್ಟಿನಲ್ಲಿ ಜನಮನದ ವ್ಯಕ್ತಿತ್ವ ರೂಪಿಸುವ ‘ವ್ಯಕ್ತಿತ್ವ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ’ ಮಾಡುವ ಕಾರ್ಯದಲ್ಲಿ ನಿರತವಾಗಿರುವ “ರಾಷ್ಟ್ರೀಯ ಸ್ವಯಂಸೇವಕ ಸಂಘ” ಈ ವಿಜಯದಶಮಿಯಂದು 92ನೇ ವಸಂತಕ್ಕೆ ಬರಲಿದೆ. ಪುರಾಣಕಾಲದಿಂದಲೂ ಧರ್ಮಕಾರ್ಯಗಳಿಗೆ ವಿಜಯ ನೀಡುತ್ತಾ ಬಂದಿರುವ ನವರಾತ್ರಿಯ ದಶಮಿಯು RSS ಜನ್ಮದ ಶುಭದಿನವೂ ಆಗಿದೆ. ದೇಶ-ಧರ್ಮಗಳ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ, ಭಾರತ ವಿಶ್ವಗುರುವಾಗಬೇಕೆಂಬ ಗುರಿಯನ್ನಿಟ್ಟುಕೊಂಡಿರುವ “ರಾಷ್ಟ್ರೀಯ ಸ್ವಯಂಸೇವಕ ಸಂಘ” ವಿಜಯಿಯಾಗಲಿ ಎಂಬ ಆಶಯದೊಂದಿಗೆ ವಿಜಯದಶಮಿ ಹಾಗೂ ಸಂಘಸ್ಥಾಪನ ದಿನದ ಶುಭಾಶಯಗಳು.
||ಭಾರತ್ ಮಾತಾ ಕೀ ಜಯ್||
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.