ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು, ಪ್ರಶಿಕ್ಷಣ/ ವಿದ್ಯಾ ವಿಷಯಕ ಪರಿಷತ್ಗೆ ಸದಸ್ಯರಾಗಿ ರಂಗಭೂಮಿಯ ಹಿರಿಯ ಕಲಾವಿದೆ ಪರಿಮಳಾ (ಫಕ್ಕೀರಮ್ಮ) ಕಲಾವಂತ ನೇಮಕ
ಧಾರವಾಡ : ಗ್ರಾಮೀಣ ಪ್ರತಿಭೆ, ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ, ರಂಗ ಗೀತೆಗಳ ಕಣಜ, ಪರಿಮಳಾ ಕಲಾವಂತ (ಫಕ್ಕೀರಮ್ಮ ಬಸವರಾಜ ತಿರ್ಲಾಪೂರ) ಅವರನ್ನು, ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪ್ರಶಿಕ್ಷಣ/ ವಿದ್ಯಾವಿಷಯಕ ಪರಿಷತ್ಗೆ ಮೂರು ವರ್ಷಗಳ ಅವಧಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿ, ಆದೇಶ ಹೊರಡಿಸಿದೆ.
ಮೂಲತಃ ಗದಗ ಜಿಲ್ಲೆ ಶಿರಹಟ್ಟಿಯವರಾದ ಕಲಾವಿದೆ ಪರಿಮಳಾ ಕಲಾವಂತ ಅವರು, ಆಕಾಶವಾಣಿ ಹಾಗೂ ದೂರದರ್ಶನದ ‘ಬಿ-ಹೈ’ ಶ್ರೇಣಿ ನಾಟಕ ಕಲಾವಿದೆ. ಸಂಗೀತದಲ್ಲಿ ಸ್ನಾತಕೋತ್ತರ ಪದವಿ. ಕಿರು ತೆರೆ ಹಾಗೂ ಚಲನಚಿತ್ರಗಳಲ್ಲಿ, ಸಾಕ್ಷ್ಯಚಿತ್ರ ಮತ್ತು ರಾಷ್ಟ್ರೀಯ ನಾಟಕಗಳಲ್ಲಿ ಪ್ರಧಾನ ಭೂಮಿಕೆ, ಹಿನ್ನೆಲೆ ಧ್ವನಿ ಒದಗಿಸಿದ ಹಿರಿಮೆ.
೨೫೦ಕ್ಕೂ ಹೆಚ್ಚು ನಾಟಕ, ೧೫೦೦ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸಿದ, ವೃತ್ತಿ ರಂಗಭೂಮಿ ಸೇರಿದಂತೆ ಬೀದಿ ನಾಟಕ, ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಪ್ರಚುರ ಪಡಿಸುವ ಕಲಾ ತಂಡಗಳ ನಿರ್ದೇಶಕಿಯಾಗಿ, ವಿಶಿಷ್ಟ ಛಾಪು ಮೂಡಿಸಿದವರು.
ವೃತ್ತಿ ರಂಗಭೂಮಿಯ ಹೆಸರಾಂತ ನಟ ಬಸವರಾಜ ತಿರ್ಲಾಪೂರ ಅವರನ್ನು ವರಿಸಿದ ಬಳಿಕ, ದಂಪತಿ ಉತ್ತರ ಕರ್ನಾಟಕದಲ್ಲಿ ಕಳೆದ ೪೦ ವರ್ಷಗಳಿಂದ ಗಣನೀಯ ರಂಗಸೇವೆಗೈಯುತ್ತ ಬಂದಿದ್ದಾರೆ. ಬಡ ಕಲಾವಿದರಿಗೆ ಸರ್ಕಾರದ ಸೌಲಭ್ಯ ದೊರಕಿಸುವ, ಸಹೃದಯರ ಸಹಾಯದಿಂದ ದೇಣಿಗೆ ಸಂಗ್ರಹಿಸಿ, ಸಹಾಯ ಹಸ್ತ ಚಾಚುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತ ಬಂದಿದ್ದಾರೆ.
ಅಭಿನಂದನೆ: ಹಿರಿಯ ನಾಟಕಕಾರ ಡಾ. ಶಶಿಧರ ನರೇಂದ್ರ, ಆಕಾಶವಾಣಿ ಧಾರವಾಡದ ಕಾರ್ಯಕ್ರಮ ನಿರ್ವಾಹಕ ಅನಿಲ ದೇಸಾಯಿ, ಕಲಾವಿದ ರವಿ ಕುಲಕರ್ಣಿ, ಅರವಿಂದ ಕುಲಕರ್ಣಿ, ಹರ್ಷವರ್ಧನ ಶೀಲವಂತ, ಗೋಪಾಲ ಉಣಕಲ್, ವಿಷಯಾ ಜೇವೂರ, ಸೇರಿದಂತೆ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯ ಹಿರಿ-ಕಿರಿಯ ಕಲಾವಿದರು, ರಂಗಭೂಮಿಯ ಹಿರಿಯಕ್ಕ ಪರಿಮಳಾ ಕಲಾವಂತ ಅವರನ್ನು ಅಭಿನಂದಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ: ಶ್ರೀಮತಿ ಪರಿಮಳಾ ಕಲಾವಂತ – 9342136225 ಅಥವಾ ಶ್ರೀ ಬಸವರಾಜ ತಿರ್ಲಾಪೂರ – 9342136227 ಅವರನ್ನು ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.