ಬಾಗಲಕೋಟೆ: ಶಿವಯೋಗ ಮಂದಿರದಲ್ಲಿ ನಡೆದ ಗುರು,ವಿರಕ್ತರು ಹಾಗೂ ಭಕ್ತರ ಸದ್ಭಾವನಾ ಸಮಾವೇಶ ವೀರಶೈವ, ಲಿಂಗಾಯತ ಒಂದೇ ಎನ್ನುವ ಒಗ್ಗಟ್ಟಿನ ಮಂತ್ರ ಜಪಿಸುವ ಜತೆಗೆ ಗುರು,ವಿರಕ್ತರನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿತು.
ಸಮಾವೇಶದಲ್ಲಿ ಭಾಗವಹಿಸಿದ್ದ ಪಂಚಪೀಠಾಧೀಶರು ಹಾಗೂ ಮಠಾಧೀಶರು ಮಾತನಾಡಿ ಕೆಲವೇ ಕೆಲವರು ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಸದ್ಭಾವನಾ ಸಮಾವೇಶ ಶಕ್ತಿ ಪ್ರದರ್ಶನದ ಸಮಾವೇಶವಲ್ಲ. ಯಾರಿಗೋ ಉತ್ತರ ಕೊಡಲು ಸೇರಿದ್ದಲ್ಲ, ವೀರಶೈವ, ಲಿಂಗಾಯತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಸೇರಿದ ಸಭೆಯಾಗಿದೆ ಎಂದು ಗುರು, ವಿರಕ್ತರು ಹೇಳಿದರು.
ಸದ್ಭಾವನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು, ಸಮಾವೇಶವು ವೀರಶೈವ, ಲಿಂಗಾಯತರ ಐಕ್ತತೆಗೆ ರಹದಾರಿ ಆಗಲಿದೆ. ಒಡಕಿನ ಪ್ರಯತ್ನ ವಿಫಲತೆಗೆ ಸಾಕ್ಷಿ ಆಗಲಿದೆ ಎಂದರು.
ವೀರಶೈವ ಮೂಲ ಆಗಿದ್ದು, ಲಿಂಗಾಯತ ಅಲ್ಲ ಎಂದ ಅವರು ಎರಡರ ಮಧ್ಯೆ ಒಡಕು ಮೂಡಿಸಲು ಹೋರಟವರಿಗೆ ಸದ್ಭಾವನಾ ಸಮಾವೇಶ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದರು.
ಶಿವಯೋಗ ಮಂದಿರದ ಅಧ್ಯಕ್ಷರಾದ ಡಾ. ಸಂಗನಬಸವ ಶಿಯೋಗಿಗಳು, ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಲು ಹೊರಟವರ ಮನಪರಿವರ್ತನೆಗೆ ಶ್ರಮಿಸಲಾಗುವುದು. ಇದಕ್ಕಾಗಿ ಸಮನ್ವಯ ಸಮಿತಿಯೊಂದನ್ನು ರಚಿಸಲಾಗುವುದು. ಅಲ್ಲಿ ಸೌಹಾರ್ದ ಚರ್ಚೆ ನಡೆಸುವ ಮೂಲಕ ಅವರ ಮನವೊಲಿಸಿ ವೀರಶೈವ, ಲಿಂಗಾಯತರನ್ನೆಲ್ಲ ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಶ್ರೀಗಳು ಮಾತನಾಡಿ ಕೆಲವರು ಮೂರು ತಿಂಗಳ ಹಿಂದೆ ಹಚ್ಚಿದ ಪ್ರತ್ಯೇಕತೆ ಬೆಂಕಿ ಒಡಲಲ್ಲಿ ಹತ್ತು ಉರಿಯುತ್ತಿದೆ. ಅದನ್ನು ಆರಿಸಲು ಅಂದಿನಿಂದ ಇಂದಿನವರೆಗೂ ಸರಿಯಾಗಿ ಯಾರೂ ಊಟ,ನಿದ್ರೆ ಮಾಡಿಲ್ಲ. ಆ ಬೆಂಕಿ ಆರಿಸುವುದಕ್ಕಾಗಿಯೇ ಈ ಸಮಾವೇಶ ನಡೆದಿದೆ ಎಂದರು.
ಕಾಶಿಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು, ಲಿಂಗಾಯತ ಧರ್ಮವೇ ಅಲ್ಲ, ವೀರಶೈವ ಧರ್ಮವೇ ಧರ್ಮ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿವೆ.ಇವು ಒಂದನ್ನೊಂದು ಬಿಟ್ಟು ಇರಲಾರವು. ಹಾಗಾಗಿ ಒಡಕಿನ ಮಾತು ಬೇಡ ಎಂದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದ ಶ್ರೀಗಳು, ಹಾನಗಲ್ ಕುಮಾರೇಶ್ವರ ಶ್ರೀಗಳು ಅಖಿಲ ಭಾರತ ವೀರಶೈವ ಮಹಾ ಸಭೆ ಕಟ್ಟಿದ್ದು, ಶಿವಯೋಗ ಮಂದಿರ ಸ್ಥಾಪಿಸಿದ್ದು ಎಲ್ಲರೂ ಒಂದಾಗ ಹೋಗಲಿ ಎಂದೇ ಹೊತರು ಪ್ರತ್ಯೇಕವಾಗಿರಲು ಅಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಶಿವಯೋಗ ಮಂದಿರದಲ್ಲಿ ಕೇವಲ ಜಂಗಮ ಮಠಾಧೀಶರಿಗೆ ಶಿಕ್ಷಣ ನೀಡಲಾಗುತ್ತಿಲ್ಲ. ಭಕ್ತವರ್ಗದ ಅನೇಕರು ಇಲ್ಲಿ ವಟುಗಳಾಗಿ ಮಠಾಧೀಶರಾಗಿದ್ದಾರೆ ಎಂದರು.ವೀರಶೈವ,ಲಿಂಗಾಯತ ಇಬ್ಬರೂ ಒಟ್ಟಾಗಿರಬೇಕು ಎನ್ನುವುದು ಕುಮಾರೇಶ್ವರ ಶ್ರೀಗಳ ಆಶಯವಾಗಿತ್ತು ಎಂದರು.
ಉಜ್ಜಯನಿ ಪೀಠದ ಶ್ರೀಗಳು ಮಾತನಾಡಿ, ವೀರಶೈವ, ಲಿಂಗಾಯತ ಹಾಲು – ನೀರಿದ್ದಂತೆ. ಅವುಗಳು ಸಮನ್ವಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.
ಮುಂಡರಗಿ ಜಗದ್ಗುರುಗಳು, ಬೆಂಗಳೂರಿನ ವಿಭೂತಿಪೂರದ ಮಹಾಂತ ಸ್ವಾಮೀಜಿ, ಬಾಳೆಹೊಸೂರಿನ ದಿಂಗಾಲೇಶ್ವರ ಮಠ ಶ್ರೀಗಳು,ನ್ಯಾಯವಾದಿ ಗಂಗಾಧರ ಗುರುಮಠ, ಎಮ್ಮಿಗನೂರು ಶ್ರೀಗಳು ಮಾತನಾಡಿ ವೀರಶೈವ,ಲಿಂಗಾಯತ ಪ್ರತ್ಯೇಕತೆ ಮಾತು ಬೇಡ. ಎಲ್ಲರೂ ಒಟ್ಟಾಗಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕಿದೆ ಎಂದರು.
ನಾಡಿನ ನಾನಾ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮಠಾಧೀಶರು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೇಲಂಗಾಣದಿಂದ ಭಕ್ತರು ಆಗಮಿಸಿದ್ದರು. ಮೇಲ್ಮನೆ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಕಾಡದೇವರಮಠ, ಎಂ.ಕೆ. ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಎಂ.ಬಿ.ಹಂಗರಗಿ ಸೇರಿದಂತೆ ಅನೇಕ ಗಣ್ಯರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.