ಸಮಾಜ ಸೇವೆ ಮಾಡಿ ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಗೆ, ಪಾತ್ರರಾದ ಜನಾರ್ದನ ಪ್ರತಾಪನಗರ (ಜನ್ನಣ್ಣ ಎಂದೇ ಜನಜನಿತರು) ಇವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 30 ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.
“ಶರಣರ ಸಾವನ್ನು ಮರಣದಲ್ಲಿ ಕಾಣು” ಎಂಬ ಮಾತಿನಂತೆ, ಇವರು ಮೃತರಾದರೆಂಬ ವಿಷಯವನ್ನು ತಿಳಿದ ತಕ್ಷಣ ಅಂತಿಮ ದರ್ಶನಕ್ಕೆ ಸಹಸ್ರಾರು ಜನರು ಸಾಲುಸಾಲಾಗಿ ಸಾಗಿಬಂದು ಅಗಲಿದ ಆತ್ಮಕ್ಕೆ ಬಾಷ್ಪಾಂಜಲಿಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಇವರ ತಂದೆ ದಿವಂಗತ ಶ್ರೀ ವಾಸುದೇವ ಆಚಾರ್ಯ. ಇವರ ತಾಯಿ ಶ್ರೀಮತಿ ನಾಗಮ್ಮ. ಇವರ ಶ್ರೀಮತಿ ಭುವನೇಶ್ವರಿ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಇವರ ಜನ್ಮಸ್ಥಳ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರತಾಪನಗರ. ಇವರಿಗೆ ಮೂವರು ತಮ್ಮಂದಿರು, ಇಬ್ಬರು ತಂಗಿಯಂದಿರು. 6 ನೇ ತರಗತಿಯಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡವರು. ತಂದೆಯ ನಿಧನಾನಂತರ ಇವರ ಚಿಕ್ಕಪ್ಪನಾದ ಶ್ರೀ ದಾಮೋದರ ಆಚಾರ್ಯರು ಇವರನ್ನೆಲ್ಲ ಸಾಕಿ ಸಲಹಿದರು. ಇನ್ನೊಬ್ಬ ಚಿಕ್ಕಪ್ಪ ಶ್ರೀ ಬಾಲಕೃಷ್ಣ ಆಚಾರ್ಯರು ಪ್ರತಾಪನಗರ ಶಾಖೆಯ ಮುಖ್ಯಶಿಕ್ಷಕರಾಗಿದ್ದರು. ಇವರು ಜನಾರ್ದನರನ್ನು ಶಾಖೆಗೆ ಕರೆತಂದರು. ಕಡು ಬಡತನದಲ್ಲಿ ಜನಿಸಿದ ಇವರು ಪಿಯುಸಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದರು. ನಂತರ ಸ್ವಲ್ಪ ಸಮಯ ಮಂಗಳೂರಿನಲ್ಲಿ ಸಂಘದ ವಿಸ್ತಾರಕರಾಗಿದ್ದರು. ಮಂಜೇಶ್ವರ ತಾಲೂಕಿನ ಸಹಕಾರ್ಯವಾಹರಾಗಿದ್ದಾಗ ಹಿರಿಯರು ಕೊಟ್ಟ ಶಾಖಾ ಗುರಿ 100. ಆ ಗುರಿಯನ್ನು ದಾಟಿ 103 ಶಾಖೆಗಳಾಗುವಂತೆ ಮಾಡುವಲ್ಲಿ ಸ್ವಯಂಸೇವಕರಿಗೆ ನೀಡಿದ ಪ್ರೇರಣೆ ಸ್ಮರಣೀಯ.
ಮಂಗಳೂರು ವಿಭಾಗದ ಸಹಕಾರ್ಯವಾಹರಾಗಿದ್ದ ಇವರು ಕಾರ್ಯಕರ್ತರಿಗೆಲ್ಲ Source of information ಹಾಗೂ Source of inspiration. “ಪರಗುಣ ಪರಮಾಣೂನ್ ಪರ್ವತೀಕೃತ್ಯ ನಿತ್ಯಂ” ಎಂಬಂತೆ ಇತರರಲ್ಲಿರುವ ಸಣ್ಣ ಒಳ್ಳೆಯತನವನ್ನೂ ಗುರುತಿಸಿ ಅದನ್ನು ಮಹತ್ತಾಗಿಸಿ ಕಾರ್ಯಕರ್ತರಿಗೆ ಪ್ರೇರಣೆ ದೊರೆಯುವಂತೆ ಹೇಳುವುದರಲ್ಲಿ ನಿಪುಣರು. ಸದಾ ನಗುಮುಖ. ಯಾರು ಎಷ್ಟು ಹೊತ್ತಿಗೆ ಕರೆದರೂ ಧಾವಿಸುವ ಪ್ರವೃತ್ತಿ. ಯಾರ ಮನೆಗೆ ಹೋದರೂ ಆ ಮನೆಯವರೆಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾದವರು. ಹಿರಿಯರಲ್ಲಿ ಶ್ರದ್ಧೆ, ಕಿರಿಯರಲ್ಲಿ ಪ್ರೀತಿ ಇವರ ನೀತಿಯಾಗಿತ್ತು. ಪ್ರಾಯಕ್ಕೆ ಬಂದ ಹುಡುಗ ಹುಡುಗಿಯರಿಗೆ ಸಂಬಂಧವನ್ನು ಒದಗಿಸಿಕೊಟ್ಟು ಮದುವೆಯ ಮಧ್ಯವರ್ತಿಯ ಸ್ಥಾನವನ್ನು ತುಂಬಿ ಹಲವಾರು ಕುಟುಂಬಗಳಿಗೆ ಬೆಳಕಾದವರು. ಆರೋಗ್ಯದ ಸಮಸ್ಯೆ ತನಗೇ ಇದ್ದರೂ ಇನ್ನೊಬ್ಬರ ಆರೋಗ್ಯ ಸುಧಾರಣೆಗೆ ದಾರಿ ತೋರಿಸಿಕೊಟ್ಟವರು. ಮನೆಗಳಿಗೆ ಹೋದಾಗ ಆ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿ ಅದಕ್ಕೆ ಯಾರಿಂದ ಪರಿಹಾರ ದೊರೆಯುವುದೆಂಬ ಬಗ್ಗೆ ಮಾಹಿತಿ ನೀಡಿದವರು. ಮಂಗಲ್ಪಾಡಿಯಲ್ಲಿ ಸೇವಾಭಾರತಿ ಸಂಸ್ಥೆಯನ್ನು ಸ್ಥಾಪಿಸಿ ಆಂಬುಲೆನ್ಸ್ ಸೇವೆಗೆ ಪ್ರೇರಣೆಯಾದವರು. ಗ್ರಾಮ ವಿಕಾಸ ಗ್ರಾಮವಾಗಿ ಪ್ರತಾಪನಗರವು ಒಂದಿಷ್ಟು ಪರಿವರ್ತನೆಯಾಗಿದ್ದರೆ ಅದರಲ್ಲಿ ಜನ್ನಣ್ಣನ ಪಾತ್ರವೂ ಇದೆ. ಇವರು ಗೃಹಸ್ಥರಾಗಿದ್ದರೂ ಸಹ ತಮ್ಮ ದಿನದ ಹೆಚ್ಚಿನ ಸಮಯವನ್ನು ನಿರಂತರವಾಗಿ ಸಮಾಜ ಕಾರ್ಯಕ್ಕೆ ಕೊಟ್ಟು ಸಾಧನೆಯ ಉತ್ತುಂಗಕ್ಕೆ ಏರಿ ಸಾಧಕರ ಸಾಲಿನಲ್ಲಿ ಸಾಗಿ ಮಹಾನ್ ವ್ಯಕ್ತಿಯಾದರು ನಮ್ಮ ಈ ಜನ್ನಣ್ಣ. ಅವರು ಸಮಾಜದ ಬಗ್ಗೆ ಇಟ್ಟುಕೊಂಡಿದ್ದ ಅದೆಷ್ಟೋ ಕನಸುಗಳು ಅಪೂರ್ಣವಾಗಿವೆ. ಅವುಗಳನ್ನು ಪೂರ್ತಿಗೊಳಿಸುವ ಸಂಕಲ್ಪದೊಂದಿಗೆ ಸಮಾಜ ಕಾರ್ಯಕ್ಕೆ ಹೆಚ್ಚು ಸಮಯ ಕೊಡುವುದೇ ಜನ್ನಣ್ಣನಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.