ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾಪೀಠ ಪದವಿ ವಿಭಾಗ / ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ
ಹುಬ್ಬಳ್ಳಿ : ಚೈತನ್ಯ ಮತ್ತು ಪ್ರತಿಭೆ ಇದ್ದಲ್ಲಿ ಸೃಜನಶೀಲತೆ ಬೆಳಗುತ್ತದೆ. ಪಠ್ಯೇತರ ಚಟುವಟಿಕೆಗಳಿಂದ ಚೈತನ್ಯದ ಪ್ರಭೆ ಹರಡುತ್ತದೆ. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಮೈಗೂಡುತ್ತವೆ ಎಂದು, ಹಿರಿಯ ನಾಟಕಕಾರ, ನಿರ್ದೇಶಕ ಡಾ.ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ನಗರದ, ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ, ಮಹಿಳಾ ವಿದ್ಯಾಪೀಠದ, ಶ್ರೀಮತಿ ಮನೋರಮಾದೇವಿ ಜುಗಲ್ಕಿಶೋರ್ ಸೋಮಾನಿ ಕಲಾ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ, ಮಹಾತ್ಮ ಗಾಂಧಿ ಪ್ರಾರ್ಥನಾ ಮಂದಿರದಲ್ಲಿ ಇಂದು (ಶನಿವಾರ, ಆಗಸ್ಟ್ 5), ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಅನುಭವ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ. ಆದರೆ ಬದುಕೆಂಬ ವಿಶ್ವವಿದ್ಯಾಲಯದ ಶುಲ್ಕ ತುಂಬ ದುಬಾರಿ, ಎಂದರು.
ಬದುಕಿಗೆ ಶಿಕ್ಷಣ ಬೇಕು; ಆದರೆ, ಬಾಳಲು ಪಠ್ಯೇತರ ಚಟುವಟಿಕೆಗಳೇ ವಿದ್ಯಾರ್ಥಿಗಳಿಗೆ ಆಸರೆ. ಓದು ಯಾವತ್ತೂ ಒಗ್ಗಾಲು, ಬುದ್ಧಿ ಮುಕ್ಕಾಲು. ಅರಿವೇ ಗುರುವಾಗುವ, ನಮ್ಮ ವ್ಯಕ್ತಿತ್ವಕ್ಕೆ ಸಾಣೆ ಹಿಡಿಯುವ, ಸಮಾಜಮುಖಿ ಜೀವನ ವಿಧಾನ ಬೋಧಿಸುವ ಕಲೆಗಳಿಂದ ಜೀವನ ಶಿಕ್ಷಣ ಪ್ರಾಪ್ತಿಯಾಗುತ್ತದೆ ಎಂದು ಡಾ.ಶಶಿಧರ ನರೇಂದ್ರ ಹೇಳಿದರು.
‘ಅಂಬಿಕಾತನಯದತ್ತ’ ಬೆಂದು ಬದುಕಿದ ಕಾರಣ ಬೇಂದ್ರೆ ಆದವರು. ಸಮರಸವೇ ಜೀವನ ಎಂದು ಸಾರುವ ಮಟ್ಟಿಗೆ ಅವಧೂತ ಪ್ರಜ್ಞೆ ಸಾಧಿಸಿದ ಕವಿ ಎನಿಸಿದರು. ಬಡತನವನ್ನೇ ಹಾಸಿ-ಹೊದ್ದಿದ್ದರೂ, ಹೃದಯ ಶ್ರೀಮಂತಿಕೆ ಮೆರೆದು, ಯಾರಾದರೂ ಬದುಕಬಹುದು ಆದರೆ ಎಲ್ಲರೂ ಬಾಳಲಾರರು ಎಂಬುದನ್ನು ಸಾಧಿಸಿದ ಪರಿ ಮಾತ್ರ ಅನನ್ಯ. ಹಿರಿಯರು ಮೂಡಿಸಿದ ಹೆಜ್ಜೆ ಗುರುತುಗಳೇ ನಮ್ಮ ಬಾಳಿಗೆ ದಾರಿ ದೀವಿಗೆ. ಸಜ್ಜನರಾಗಿ, ಸಮಾಜಮುಖಿಯಾಗಿ, ಸುಸಂಸ್ಕೃತರಾಗಿ ಬಾಳಲು ಅಕ್ಷರದ ಜೊತೆಗೆ ಸಾಂಸ್ಕೃತಿಕ ವಾರಸುದಾರಿಕೆಯತ್ತ ನಾವು ಒಲವು ಬೆಳೆಸಿಕೊಳ್ಳಬೇಕು ಎಂದು ಡಾ. ಶಶಿಧರ ನರೇಂದ್ರ ನುಡಿದರು.
ಡಾ. ದ.ರಾ.ಬೇಂದ್ರೆ ಅವರ ಕೃತಿತ್ವ-ವ್ಯಕ್ತಿತ್ವ ಆಧಾರಿತ ದೃಶ್ಯ ರೂಪಕ ‘ಅಂಬಿಕಾತನಯದತ್ತ’ ಪ್ರಸ್ತುತ ಪಡಿಸಿದ, ಆಕಾಶವಾಣಿ ಹಾಗೂ ದೂರದರ್ಶನದ ಹಿರಿಯ ಕಲಾವಿದ ಅನಂತ ದೇಶಪಾಂಡೆ ಅವರು, ‘ಬಾರೋ ಸಾಧನಕೇರಿಗೆ.. ಮರಳಿ ನನ್ನೀ ಊರಿಗೆ..’, ‘ಇನ್ನು ಯಾಕ ಬರಲಿಲ್ಲಾಂವಾ.. ಹುಬ್ಬಳ್ಳಿಯಾಂವಾ’, ‘ನೀ ಹಿಂಗ ನೋಡಬ್ಯಾಡಾ ನನ್ನ..’ ಮೊದಲಾದ ಹಾಡುಗಳ ಮೂಲಕ, ಕವಿಯ ಪ್ರತಿಮೆಗಳನ್ನು ಸಾಕ್ಷೀಕರಿಸಿದರು.
ಅಧ್ಯಕ್ಷತೆ ವಹಿಸಿದ್ದ, ಮಹಿಳಾ ವಿದ್ಯಾಪೀಠದ ವಿಶ್ವಸ್ಥೆ ಅಮಲಕ್ಕಾ ಕಡಗದ ಅವರು, ಹೆಣ್ಣು ಮಕ್ಕಳೇ ನಿಜಾರ್ಥದಲ್ಲಿ ನಮ್ಮ ಸಂಸ್ಕೃತಿಯ ವಾರಸುದಾರರು. ತಾಯಿಯ ಸಂಸ್ಕಾರದಿಂದಲೇ ಮಕ್ಕಳು ಸಮಾಜಮುಖಿ ಜೀವನ ರೂಪಿಸಿಕೊಳ್ಳಬಲ್ಲರು. ಕಲಿಕೆಯ ಸಾರ್ಥಕ್ಯ ಜೀವನ ರೂಪಿಸಿಕೊಳ್ಳುವುದರಲ್ಲಿದೆ ಎಂದರು.
ಮಹಿಳಾ ವಿದ್ಯಾಪೀಠದ ಪರವಾಗಿ ಡಾ.ಶಶಿಧರ ನರೇಂದ್ರ ಹಾಗೂ ಅನಂತ ದೇಶಪಾಂಡೆ ಅವರನ್ನು ವಿಶ್ವಸ್ಥರಾದ ಅಮಲಕ್ಕಾ ಕಡಗದ ಸನ್ಮಾನಿಸಿದರು. ಕವಿವಿಯಿಂದ ಸಮಾಜಶಾಸ್ತ್ರ ನಿಕಾಯದಲ್ಲಿ ಪಿಎಚ್ಡಿ ಸಂಪಾದಿಸಿದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆನಂದ ಕಾನಪೇಟ ಅವರನ್ನು ಗಣ್ಯರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.
ಪ್ರಾಚಾರ್ಯ ಡಾ.ಡಿ.ಬಿ.ಮಣಕಟ್ಟಿ ಪ್ರಾಸ್ತಾವಿಕ, ವಿವಿಧ ಸಾಂಸ್ಕೃತಿಕ ಸಂಘಗಳಿಗೆ ಕಾರ್ಯದರ್ಶಿಗಳಾಗಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪ್ರೊ.ರಾಜೇಶ್ವರಿ ತೋಟಗಿ ಪ್ರಮಾಣ ವಚನ ಬೋಧಿಸಿದರು. ಪ್ರೊ. ಹರ್ಷವರ್ಧನ ಶೀಲವಂತ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಕೋರಿಶೆಟ್ಟರ್ ನಿರೂಪಿಸಿದರು. ಪ್ರೊ. ಮಂಜುನಾಥ ಬಾಗಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.