ಎಲ್ಲಾ ಸಂಬಂಧಗಳನ್ನು ಮೀರಿದ ಬಂಧವಿದು. ಜಾತಿ-ಮತ, ಬೇಧ-ಭಾವಗಳ ಎಲ್ಲೆಗಳನ್ನು ಮೀರಿ ಬೆಳೆದು ಬಂದ ಪವಿತ್ರ ಬಾಂಧವ್ಯವಿದು. ಒಂದು ಅಪರೂಪದ ಬಂಧ ಈ ರಕ್ಷಾಬಂಧನ. ಇದರ ಹೆಸರ ಸೂಚಿಸುವಂತೆ ಇದು ಶ್ರೀರಕ್ಷೆಯ ಸಂಕೇತ. ಅಂದರೆ ಅಣ್ಣಾ ತಂಗಿಯನ್ನು ಎಂತಹ ಸಮಯದಲ್ಲೂ ರಕ್ಷಿಸುವವನು ಎಂಬಂರ್ಥವನ್ನು ನೀಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀಕೃಷ್ಣ ಮತ್ತು ದ್ರೌಪದಿಯ ಕಥೆಯಿರುವುದು ನಮಗೆಲ್ಲ ತಿಳಿದಿದೆ.
ಶ್ರೀಕೃಷ್ಣನು ತೋಟದಲ್ಲಿ ಕಬ್ಬನ್ನು ಕತ್ತರಿಸುತ್ತಿರುವಾಗ ಅಚಾನಕ್ಕಾಗಿ ತನ್ನ ಹೆಬ್ಬೆರಳಿಗೆ ಗಾಯವಾಗಿ ರಕ್ತ ಬರಲು ಆರಂಭವಾಯಿತು. ಇದನ್ನು ನೋಡುತ್ತಿದ್ದ ಸತ್ಯಭಾಮೆ ಔಷಧೋಪಚಾರಕ್ಕಾಗಿ ಬಟ್ಟೆಯನ್ನು ಹೋದಳು. ಇದನ್ನು ನೋಡಿದ ರುಕ್ಮಿಣಿ ಸಹ ಗಾಯಕ್ಕೆ ಹಚ್ಚಲು ಔಷಧಿ ತರಲು ಹೋದಳು. ಇದನ್ನು ಗಮನಿಸಿದ ದ್ರೌಪದಿ ತಕ್ಷಣ ತನ್ನ ಸೀರೆಯ ಅಂಚನ್ನು ಹರಿದು ಶ್ರೀಕೃಷ್ಣನ ಬೆರಳಿಗೆ ಕಟ್ಟಿದಳು. ಇದಕ್ಕೆ ಪ್ರತಿಯಾಗಿ ಕೃಷ್ಣನು ದ್ರೌಪದಿಗೆ ನಿನಗೆ ಯಾವಾಗಲೂ ನಾನು ಶ್ರೀರಕ್ಷೆಯಾಗಿರುತ್ತಾನೆ, ನಿನ್ನ ರಕ್ಷಣೆ ನನ್ನದು ಎಂದು ಹೇಳಿದನು. ಅದರಂತೆ ಅವನು ನಡೆದುಕೊಂಡನು ಸಹ. ದುಶ್ಯಾಸನ ದ್ರೌಪದಿಯ ವಸ್ತ್ರಾಪರಣ ಮಾಡುವ ಸಂದರ್ಭದಲ್ಲಿ ಶ್ರೀಕೃಷ್ಣನು ಅವಳಿಗೆ ಸುದೀರ್ಘವಾದ ಸೀರೆಯನ್ನು ನೀಡಿ ಅವಳ ಮಾನ ಕಾಪಾಡಿದ ಅನ್ನೋದು ಸಹ ನಿಮಗೆ ಗೊತ್ತಿರುವುದೆ. ಇಲ್ಲಿಂದಲೇ ಅಣ್ಣಾ ಅನ್ನೋ ಪದಕ್ಕೆ ಎಷ್ಟೊಂದು ತೂಕವಿದೆ ಎಂಬುದು ತಿಳಿಯುತ್ತದೆ. ಅಲ್ಲದೆ ಅವನ ಕರ್ತವ್ಯದ ಬಗ್ಗೆ ತಿಳಿಯುತ್ತದೆ. ಇದು ಮಹಾಭಾರತದ ಪ್ರಕಾರ ತಿಳಿದು ಬರುವ ಸನ್ನಿವೇಶವಾದರೆ ರಕ್ಷಾಬಂಧನಕ್ಕೆ ತನ್ನದೇ ಆದ ಮತ್ತೊಂದು ಇತಿಹಾಸವೂ ಇದೆ.
ರಜಪೂತರ ಕಾಲದಲ್ಲಿ ಮುಸ್ಲಿಂ ಅರಸರು ಹೆಚ್ಚಾಗಿ ಆಕ್ರಮಣ ಮಾಡುತ್ತಿದ್ದರು. ಆಗ ಅವರು ಆಸ್ಥಾನದಲ್ಲಿರುವ ಸಿರಿ-ಸಂಪತ್ತು, ವಜ್ರ-ವೈಡೂರ್ಯವನ್ನು ವಶಪಡಿಸಿಕೊಂಡು ಹೋಗುವಂತೆ ಆಸ್ಥಾನದ ರಾಣಿಯರನ್ನು ಮತ್ತು ಅಲ್ಲಿಯ ಸೇವಕಿಯರನ್ನು ಸಹ ತಮ್ಮ ಆಸ್ಥಾನಕ್ಕೆ ಬಲವಂತವಾಗಿ ಎಳೆದೊಯ್ದು ದಾಸಿಯರಂತೆ ನಡೆಸಿಕೊಳ್ಳುತ್ತಿದ್ದರು. ಅವರೊಟ್ಟಿಗೆ ಹೋಗಲಾಗದೆ ಅನೇಕ ಮಹಿಳೆಯರು ಸಾಮೂಹಿಕವಾಗಿ ಚಿತೆಗೆ ಹಾರುತ್ತಿದ್ದರು. ಆಕ್ರಮಣ ಮುಂದುವರೆಯುತ್ತಲೇ ಇತ್ತು. ಹೀಗಾಗಿ ಇಲ್ಲಿಯ ಹೆಣ್ಣುಮಕ್ಕಳು ಆಕ್ರಮಣದ ಸಮಯದಲ್ಲಿ ಮುಸ್ಲಿಂ ಅರಸರಿಗೆ ತಮ್ಮ ರೇಷ್ಮೆ ಸೀರೆಯ ನೂಲನ್ನು ಕತ್ತರಿಸಿ ಅವರ ಕೈಗೆ ಕಟ್ಟಿ ಅಣ್ಣಾ ಎಂದು ಸಂಬೋಧಿಸುತ್ತಿದ್ದರು. ಆಗ ಆ ಅರಸರ ಕಾಮದೃಷ್ಟಿ ಬದಲಾಗಿ ಅವರು ತಂಗಿಯಂದು ತಿಳಿದು ಅವರನ್ನು ಬಿಟ್ಟು ಹೋಗುತ್ತಿದ್ದರಂತೆ. ಇದಕ್ಕಾಗಿಯೇ ಇದನ್ನು ನೂಲ ಹುಣ್ಣಿಮೆ ಎಂದು ಕರೆಯುತ್ತಾರೆ.
ಇತಿಹಾಸ, ಮಹಾಭಾರತವನ್ನು ಮೆಲಕು ಹಾಕಿದಾಗ ಕಂಡು ಬರುವ ಸತ್ಯಾಂಶಗಳನ್ನು ನೋಡಿದರೆ ಅದೇ ಪಾವಿತ್ರ್ಯ ಇಂದಿಗೂ ಇದೆ. ಈ ಹಬ್ಬ ಭಾರತ ಮತ್ತು ನೇಪಾಳಗಳಲ್ಲಿ ತಲತಲಾಂತರದಿಂದ ಆಚರಿಸುತ್ತಲೇ ಬಂದಿದ್ದಾರೆ. ಈ ಹಬ್ಬ ಯಾವಾಗಲೂ ಶ್ರಾವಣಮಾಸದಲ್ಲೇ ಬರುತ್ತದೆ. ಈ ಹಬ್ಬದ ಆಚರಣೆ ಒಂದೊಂದು ಊರಲ್ಲಿ ಒಂದೊಂದು ರೀತಿ. ಆಚರಣೆ ವಿಭಿನ್ನವಾಗಿದ್ದರು ಉದ್ದೇಶ ಮಾತ್ರ ಅಣ್ಣ- ತಂಗಿಯನ್ನು ಕಾಪಾಡುವುದೇ ಆಗಿರುತ್ತದೆ.
ಅಂದಿನ ದ್ರೌಪದಿಯ ಸೀರೆಯ ಅಂಚು ಮತ್ತು ರಜಪೂತ ಮಹಿಳೆಯರ ರೇಷ್ಮೆ ನೂಲಿನ ಆಧುನಿಕ ರೂಪವೇ ರಾಖಿ. ಇನ್ನು ವಾಸ್ತವದಲ್ಲಂತೂ ಈ ಹಬ್ಬ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಹೆಚ್ಚು ಸಂಭ್ರಮ. ತನ್ನ ನೆಚ್ಚಿನ ಸಹೋದರನಿಗೆ ಯಾವ ಮಾದರಿಯ ರಾಖಿ ಖರೀದಿಸಬೇಕೆಂದು ಗೊಂದಲಕ್ಕೆ ಸಿಲುಕುತ್ತಾರೆ. ಇದಕ್ಕಾಗಿಯೇ ವಾರನುಗಟ್ಟಲೇ ಮಾರ್ಕೆಟ್ಗೆ ಹೋಗುವವರು ಇದ್ದಾರೆ. ದಿನವೂ ಮಾರ್ಕೆಟ್ನಲ್ಲಿ ಹೊಸ ಮಾದರಿಯ ರಾಖಿ ಬರುತ್ತಲೇ ಇರುತ್ತವೆ ಆದರೆ ಎಲ್ಲದಕ್ಕಿಂತ ಚಂದವಾದುದನ್ನೆ ತಾನು ತನ್ನ ಅಣ್ಣನಿಗೋ ಅಥವಾ ತಮ್ಮನಿಗೋ ಕಟ್ಟಬೇಕೆಂಬುದು ಪ್ರತಿ ಅಕ್ಕ ಅಥವಾ ತಂಗಿಯ ಮನಸ್ಥಿತಿ. ಇನ್ನು ಅನೇಕ ಮಹಿಳೆಯರು ತಾವೇ ಸ್ವತಃ ತಮ್ಮ ಕೈಯಿಂದಲೇ ಸುಂದರವಾದ ರಾಖಿಯನ್ನು ತಾವೇ ತಯಾರಿಸುತ್ತಾರೆ. ಇನ್ನು ಈ ವಿಷಯದಲ್ಲಿ ಅಣ್ಣಂದಿರು ಹಿಂದೆ ಬಿದ್ದಿಲ್ಲ. ಅವರು ತಮ್ಮ ನೆಚ್ಚಿನ ಸಹೋದರಿಯರಿಗೆ ಏನಾದರೂ ವಿಶೇಷವಾದ ಉಡುಗೊರೆ ಕೊಡಬೇಕೆಂದು ಅಂದುಕೊಂಡಿರುತ್ತಾರೆ. ಇದು ಒಂದು ರೀತಿಯಲ್ಲಿ ತುಂಬಾ ವಿಶೇಷವಾದ ಹಬ್ಬ. ಯಾಕೆಂದರೆ ಇಲ್ಲಿ ಮಾತ್ರವೇ ಸಹೋದರ-ಸಹೋದರಿಗೆ ಉಡುಗೊರೆ ಕೊಡುವಂತ ಹಬ್ಬ.
ಇಲ್ಲಿ ಬಡತನ-ಸಿರಿತನ ಮುಖ್ಯವಾಗುವುದೇ ಇಲ್ಲ. ಎಂತಹ ಸಂದರ್ಭದಲ್ಲಿದ್ದರೂ ಸರಿಯೇ ಸಹೋದರನಾದವನು ತನ್ನ ಪ್ರೀತಿಯ ತಂಗಿಗೆ ಚಿಕ್ಕದಾದ ಉಡುಗೊರೆ ಕೊಡುತ್ತಾನೆ. ಉಡುಗೊರೆ ಚಿಕ್ಕದೋ-ದೊಡ್ಡದೋ ಅದು ಇಲ್ಲಿ ಮುಖ್ಯವಾಗಲ್ಲ ಆದರೆ ಆ ಉಡುಗೊರೆಯಲ್ಲಿರುವ ಅಣ್ಣನ ಪ್ರೀತಿ ಮಾತ್ರ ಮಾತಿಗೆ ನಿಲುಕದು, ತೂಕಕ್ಕೆ ಸರಿ ಹೊಂದದು, ವರ್ಣಿಸಲಾಗದು, ಕಲ್ಪನೆಗೂ ಮೀರಿದ್ದು. ಅಂತಹ ಅಪರೂಪದ ಬಾಂಧವ್ಯ.
ಇನ್ನು ಮದುವೆಯಾಗಿ ಗಂಡನ ಮನೆಗೆ ಹೋದವರಿಗಂತೂ ಇದು ತುಂಬಾನೇ ವಿಶೇಷ. ಯಾಕೆಂದರೆ ಈ ಹಬ್ಬದ ನೆಪದಲ್ಲಾದರೂ ಅವರು ತಮ್ಮ ತವರುಮನೆಗೆ ಬರಬಹುದೆಂಬ ಆಸೆ. ಅಣ್ಣನಿಗೆ ರಾಖಿ ಕಟ್ಟುವ ನೆಪದಲ್ಲಾದರೂ ಎಲ್ಲರನ್ನು ನೋಡಬಹುದು, ಎಲ್ಲರೊಟ್ಟಿಗೆ ಪ್ರೀತಿಯ ಮಾತುಗಳನ್ನಾಡಬಹುದು ನಲುಮೆಯಿಂದ ಊಟ ಮಾಡಬಹುದು ಎಂಬ ಆಸೆಯ ಗಣಿಯನ್ನೇ ಹೊತ್ತು ಬರುತ್ತಾರೆ ಹೆಣ್ಣುಮಕ್ಕಳು. ಈ ಹಬ್ಬದ ಹಿಂದಿನ ದಿನ ಎಲ್ಲರ ಮನೆಯಲ್ಲೂ ಖಂಡಿತ ಮದುವೆಯಾದ ಹೆಣ್ಣುಮಕ್ಕಳಿಗೆ ತಪ್ಪದೆ ಫೋನ್ ಮಾಡ್ತಾರೆ. ನಾಳೆ ಬೇಗ ಬಂದ್ ಬೀಡು. ನಿನಗಾಗಿ ಕಾಯ್ತಿರ್ತಿನಿ ಅನ್ನೋ ಅಣ್ಣನ ಮಾತಿನ ಮಮತೆ ತವರುಮನೆಯ ಸೆಳೆತವನ್ನು ಹೆಚ್ಚಾಗಿಸುತ್ತದೆ. ಇನ್ನು ಅನಿವಾರ್ಯವಾಗಿ ಹೆಣ್ಣುಮಕ್ಕಳು ಬರದಿರುವ ಪ್ರಸಂಗ ಬಂದರೆ ಅಣ್ಣನೇ ಅಲ್ಲಿಗೆ ಹೋಗುತ್ತಾನೆ.
ಈ ಸಂದರ್ಭದಲ್ಲಿ ಎಲ್ಲಾ ವೈಮನಸ್ಸುಗಳು ದೂರವಾಗುತ್ತವೆ. ಪ್ರೀತಿ-ವಿಶ್ವಾಸದ ಹಕ್ಕಿ ರೆಕ್ಕೆ ಬಿಚ್ಚಿ ಹಾರಾಡುತ್ತದೆ. ಗರಿ ಬಿಚ್ಚಿ ಮನಸ್ಸು ಕುಣಿಯುತ್ತದೆ. ಬೆಳಕು ಹರಿಯುತ್ತಿದ್ದಂತೆ ಮನೆತುಂಬಾ ಹಬ್ಬದ ವಾತಾವಾರಣ. ಬೇಗ ಎದ್ದು ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ದೇವರ ಪೂಜೆ ಮಾಡಿ ಅಣ್ಣ-ತಮ್ಮಂದಿರ ಆರೋಗ್ಯ, ಆಯುಷ್ಯ, ಐಶ್ವರ್ಯವನ್ನು ಕಾಪಾಡು ಎಂದು ಮನಸಾರೆ ಬೇಡಿಕೊಳ್ಳುವ ಮತ್ತು ಹಾರೈಸುವ ಕರ್ತವ್ಯ ಹೆಣ್ಣಮಕ್ಕಳದ್ದು. ಇದು ದೊಡ್ಡವರ ಮನಸ್ಥಿತಿಯಾದರೆ ಚಿಕ್ಕ ಮಕ್ಕಳು- ಅಮ್ಮಾ ಅಣ್ಣಾ ಎಲ್ಲಿದಾನೆ ಕರಿ ಬೇಗ ನಾನವನಿಗೆ ರಾಖಿ ಕಟ್ಟಬೇಕು, ಅವನು ನನಗೇನು ಕೊಡ್ತಾನೆ ಎಂದು ಕೇಳುವ ಮನಸ್ಥಿತಿ. ಇದಂತೂ ನಿಷ್ಕಲ್ಮಶವಾದ ಪ್ರೀತಿ. ಇನ್ನು ಚೆಂದ. ಯಾಕಂದರೆ ಮಕ್ಕಳಿಗೆ ಇದು ಉಡುಗೊರೆಯ ಹಬ್ಬ. ಅವಕ್ಕೇನು ತಿಳಿಯದು. ಈ ಸಮಯವಂತೂ ಅತ್ಯದ್ಭುತ. ಅಮ್ಮ- ಅಪ್ಪನೆದುರಲ್ಲಿ ಮಕ್ಕಳ ಖುಷಿ ಹೇಳತೀರದು ಅದರಂತೆ ಅಪ್ಪ-ಅಮ್ಮ ಸಹ ಇವರು ಸದಾ ಹೀಗೆ ಇರಲಿ ಎಂದು ಹಾರೈಸುವ ಖುಷಿ.
ಆ ದಿನ ಸಹೋದರಿಯರು ದೇವರೆದುರಲ್ಲಿ ಸಹೋದರನ್ನು ಕುಳ್ಳಿರಿಸಿ ವಸ್ತ್ರ ಹಾಸಿ ಅವನಿಗೆ ತಿಲಕವಿಟ್ಟು, ಅಕ್ಷತೆ ಹಾಕಿ ಪ್ರೀತಿಯಿಂದ ರಾಖಿ ಕಟ್ಟಿ, ಸಿಹಿ ತಿನಿಸಿ ಆರತಿ ಬೆಳಗಿ ಯಾವಾಗಲೂ ಚೆನ್ನಾಗಿರು ಎಂದು ಹಾರೈಸುತ್ತಾರೆ. ಇದಕ್ಕೆ ಪ್ರತಿಯಾಗಿ ಅವನು ಇವರಿಗೂ ಸಿಹಿ ತಿನಿಸಿ ಉಡುಗೊರೆಯನ್ನು ನೀಡುತ್ತಾನೆ. ಈ ರೀತಿ ಕೇವಲ ಒಡಹುಟ್ಟಿದವರು ಮಾತ್ರವಲ್ಲ ಅಣ್ಣಾ-ತಂಗಿಯದು ಭಾವಿಸಿದ ಪ್ರತಿಯೊಬ್ಬರು ಮಾಡುತ್ತಾರೆ. ಅದಕ್ಕೆ ಇದು ಜಾತಿ-ಮತಗಳನ್ನು ಮೀರಿದ ಬಂಧ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.