ಅದು 2ನೇ ವಿಶ್ವಯುದ್ಧದ ಕಾಲ, ಜಪಾನಿನಲ್ಲಿ ತೈಲದ ಅಭಾವ ತಲೆದೋರಿತ್ತು. ಆಗ ಜಪಾನಿಗರು ತಮ್ಮ ತಮ್ಮ ವಾಹನಗಳನ್ನು ಗ್ಯಾರೇಜಿನಲ್ಲಿಟ್ಟು ಪ್ರಯಾಣಕ್ಕೆ ಸೈಕಲ್ ಬಳಸುವ ಮೂಲಕ ತಮ್ಮ ಸರಕಾರಕ್ಕೆ, ಸೈನ್ಯಕ್ಕೆ ಒತ್ತಾಸೆಯಾಗಿ ನಿಂತರಂತೆ. ಆಮೇಲೆ ಜಪಾನ್ ಯುದ್ದವೇನೋ ಸೋತಿತು ಆದರೆ ಇಂದಿನವರೆಗೂ ಜಪಾನ್ ಒಳಗೆ ಅಮೇರಿಕಾ ಉತ್ಪಾದಿತ ವಸ್ತುಗಳು ಬರ ಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಇನ್ನು ಇದೇ ವಿಶ್ವಯುದ್ಧದ ವೇಳೆ ಬ್ರಿಟನ್ನಲ್ಲಿ ಅಧ್ಯಕ್ಷ ಚರ್ಚಿಲ್ ಕರೆಗೆ ಓಗೊಟ್ಟು ಜನ ಸೈನಿಕರಿಗಾಗಿ ಮೊಟ್ಟೆಗಳನ್ನು ಹಿಂತಿರುಗಿಸಿದ ಉದಾಹರಣೆ ಇದೆ. ಅದಕ್ಕೆ ಈ ದೇಶಗಳು ಇಂದು ಅಭಿವೃದ್ಧಿ ಹೊಂದಿದ ದೇಶಗಳು ಅನಿಸಿಕೊಂಡಿವೆ. ಇಂದು ಜಪಾನ್ ಹಿರೋಷಿಮಾ-ನಾಗಸಾಕಿ ಅಣು ದಾಳಿಯನ್ನು ಮೆಟ್ಟಿ ನಿಂತು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಂತಿದೆ ಅಂದರೆ ಅದಕ್ಕೆ ಆ ದೇಶದ ಜನರಲ್ಲಿರೋ ದೇಶಾಭಿಮಾನ, ರಾಷ್ಟ್ರೀಯ ಮನೋಭಾವವೇ ಕಾರಣ.
ಈಗ ವಿಷಯಕ್ಕೆ ಬರೋಣ. ಇತ್ತೀಚಿಗಿನ ಭಾರತ- ಚೀನಾ ವಿದ್ಯಮಾನಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಸಾಮಾಜಿಕ ತಾಣಗಳಲ್ಲಿ ಇದರ ಬಗ್ಗೆ ಹತ್ತು ಹಲವಾರು ವಿಮರ್ಶೆಗಳು ಆಗುತ್ತಲೇ ಇವೆ. ಅವುಗಳಲ್ಲಿ ಚೀನಾ ಸರಕುಗಳನ್ನು ನಿಷೇಧಿಸಬೇಕು ಅನ್ನೋದು ಒಂದು. ಇದು ಸರಿಯಾದ ಸಲಹೆ ಕೂಡ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ? ನಿಷೇಧಿಸಬೇಕಾದವರು ಯಾರು ? ಅನ್ನೋದು ಕಾಡುತ್ತಿರುವ ಪ್ರಶ್ನೆ.
2016ರ ಒಂದು ವರದಿಯ ಪ್ರಕಾರ ಚೀನಾ ಭಾರತದ ಮೇಲಿನ ತನ್ನ ಹೂಡಿಕೆಯನ್ನು 6 ಪಟ್ಟು ಹೆಚ್ಚಿಸಿದೆಯಂತೆ ಮತ್ತು ತನ್ನ ರಕ್ಷಣಾ ವೆಚ್ಚವನ್ನು 4 ಪಟ್ಟು. ಇನ್ನು ಭಾರತದಲ್ಲಿ ಚೀನಾ ಪರವಾಗಿರೋ ಎನ್ಜಿಓ, ಬುದ್ದಿಜೀವಿಗಳಿಗೆ ಎಷ್ಟು ಖರ್ಚು ಮಾಡುತ್ತಿರಬಹುದು ಅನ್ನೋದನ್ನು ನೀವೇ ಊಹಿಸಿಕೊಳ್ಳಿ. ಅಂದರೆ ನಮ್ಮ ಹಣ ನಮಗೆ ಗೊತ್ತಿಲ್ಲದಂತೆ ಬುಲೆಟ್ಗಳಾಗಿ ಮಾರ್ಪಾಟಾಗಿ ನಮ್ಮದೇ ಸೈನಿಕರನ್ನು ಕೊಲ್ಲುತ್ತಿವೆ.
ಹಾಗಾದರೆ ಇದಕ್ಕೆ ಪರಿಹಾರವೇನು ? ಸರಕಾರ ಚೀನಾ ಉತ್ಪನ್ನಗಳನ್ನು ನಿಷೇಧಿಸುತ್ತದೆ ಅಂದುಕೊಳ್ಳೋದು ಮೂರ್ಖತನವಾಗುತ್ತದೆ. ಅದಕ್ಕೆ ಅದರದ್ದೇ ಆದ ರಾಜತಾಂತ್ರಿಕ ಕಾರಣಗಳಿರಬಹುದು. ಆದರೆ ಒಂದು ನೆನಪಿಡಿ ಚೀನಾ ಪ್ರಪಂಚದ ಅತಿ ದೊಡ್ಡ ಉತ್ಪನ್ನ ಕೇಂದ್ರವಾಗಿರಬಹುದು ಆದರೆ ಆ ಉತ್ಪನ್ನಗಳ ಅತೀ ದೊಡ್ಡ ಮಾರುಕಟ್ಟೆ ಭಾರತ. ಅಂದರೆ ಚೆಂಡು ನಮ್ಮ ಅಂಗಳದಲ್ಲಿದೆ ಆಟ ನಮ್ಮ ಕೈಯಲ್ಲಿದೆ. ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಒಂದಿಷ್ಟು ಬದ್ಧತೆಯನ್ನು ತೋರಿಸಿದರೆ ಚೀನಾವನ್ನು ಮಣಿಸುವುದು ಕಷ್ಟಸಾಧ್ಯವಲ್ಲ.
ಚೀನಾ ಉತ್ಪನ್ನಗಳು ನಮ್ಮ ಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾಗಿದೆ ಅಂದರೆ ಕೆಲವೊಮ್ಮೆ ನಾವು ನಮಗೆ ಗೊತ್ತಿಲ್ಲದಂತೆ ಅವುಗಳನ್ನು ಉಪಯೋಗಿಸುತ್ತಿರುತ್ತೇವೆ. ಸಾಮಾಜಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ಮಾಹಿತಿ ನೀಡಬೇಕು ಮತ್ತು ಅವುಗಳಿಗೆ ಪರ್ಯಾಯವನ್ನು ಸೂಚಿಸಬೇಕು.
ಯಾವಾಗ ಜನ ಧರ್ಮ, ಭಾಷೆ, ಪ್ರಾಂತೀಯತೆಯಿಂದ ಹೊರಬಂದು ರಾಷ್ಟ್ರೀಯವಾದವನ್ನು ಅಳವಡಿಸಿಕೊಳ್ಳುತ್ತಾರೋ ಆಗ ಮಾತ್ರ ಇದು ಸಾಧ್ಯ. ಬುದ್ದಿಜೀವಿಗಳು ರಾಷ್ಟ್ರೀಯವಾದವನ್ನು ಯಾಕೆ ವಿರೋಧಿಸುತ್ತಾರೆ ಅನ್ನೋದು ನಿಮಗೀಗ ಅರ್ಥವಾಗಿರಬಹುದು. 1962 ರ ಯುದ್ಧದಲ್ಲಿ ಚೀನಾ ಪರ ಚಂದಾ ಎತ್ತಿದ ಮಂದಿ, ಗಾಯಾಳು ಸೈನಿಕರಿಗೆ ರಕ್ತ ಕೊಡಬೇಡಿ ಅಂತ ಅಭಿಯಾನ ನಡೆಸಿದ ಮಂದಿ ಇದಕ್ಕೂ ಅಡ್ಡ ಬಂದೇ ಬರುತ್ತಾರೆ. ಆದರೆ ಇವರಿಗೆ ಇವರ ಸಿದ್ಧಾಂತಗಳಿಗೆ ಎಷ್ಟು ಬೆಲೆ ಕೊಡಬೇಕು ಅನ್ನೋದನ್ನು ಜನ ಸಾಮಾನ್ಯ ಅರಿತ ದಿನ ಭಾರತ ವಿಶ್ವಗುರುವಾಗುವ ಬಗ್ಗೆ ಯೋಚಿಸಬಹುದು. ಚೀನಾ-ಪಾಕಿಸ್ಥಾನಗಳನ್ನು ಯಾವುದೇ ಯುದ್ಧವಿಲ್ಲದೆ ಮಣಿಸಬಹುದು. ಈ ಬಗ್ಗೆ ಯೋಚಿಸಬೇಕಾದ ಕಾಲ ಬಂದಿದೆ ಮತ್ತು ಯೋಚಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.