ಶಕ್ತಿ ಮತ್ತು ಸುರಕ್ಷತೆಗಾಗಿ ಭಾರತದ ಪರಮಾಣು ಪ್ರಣಯ!
ಧಾರವಾಡ: ‘ಪರಮಾಣು’ ಶಕ್ತಿಯ ಅಪರಿಮಿತ ಆಗರ. ವಿಜ್ಞಾನದ ಸಾಧ್ಯತೆಗಳ ಅನಂತ ಕ್ಷಿತಿಜದ ಬೀಜ ರೂಪ. ಜವಾಬ್ದಾರಿಯಿಂದ ಬಳಸಿದಲ್ಲಿ ವಿಕಾಸ; ದುರ್ಬಳಕೆಗೆ ಇಳಿದಲ್ಲಿ ವಿನಾಶ ಎಂದು, ಖ್ಯಾತ ಭೌತ ವಿಜ್ಞಾನಿ ಹಾಗೂ ಹಿರಿಯ ಪತ್ರಕರ್ತ ಪ್ರೊ. ಶಿವಾನಂದ ಕಣವಿ ಅಭಿಪ್ರಾಯಪಟ್ಟರು.
ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ -ಸಿಡಿಎಸ್, ನಗರದ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್, ಭಾರತ ರತ್ನ ಸರ್ ಎಂ.ವಿಶ್ವೇಶ್ವರಾಯಾ ಸಭಾ ಭವನದಲ್ಲಿ ಆಯೋಜಿಸಿದ್ದ, ಭಾರತದ ಪರಮಾಣು ಪ್ರಣಯ; ಶಕ್ತಿ ಮತ್ತು ಸುರಕ್ಷತೆಗಾಗಿ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಪ್ರಾಪ್ತಿಯ ನಂತರ ಪರಮಾಣು ಶಕ್ತಿ ಸಂಚಯದ ಕುರಿತು, ಪರಿಮಿತ ಹಾಗೂ ಸುರಕ್ಷಿತ ಬಳಕೆಯ ಕುರಿತು ವ್ಯಾಪಕ ಸಂಶೋಧನೆಗಳು ನಡೆದದ್ದು ಹೆಮ್ಮೆಯ ಸಂಗತಿ ಎಂದರು.
ಡಾ.ಹೋಮಿ ಜಹಾಂಗೀರ ಭಾಭಾ, ಡಾ.ವಿಕ್ರಮ್ ಸಾರಾಭಾಯ್, ಡಾ.ರಾಜಾ ರಾಮಣ್ಣ, ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಹಾಗೂ ಟಾಟಾ ಸಂಸ್ಥೆಯ ಮಹತ್ವದ ಸಂಶೋಧನಾತ್ಮಕ ಕೊಡುಗೆಗಳಿಂದಾಗಿ, ಭಾರತೀಯ ಅಣು ವಿಜ್ಞಾನಿಗಳ ದೂರದೃಷ್ಟಿಯ ಫಲವಾಗಿ ಭಾರತ ಇಂದು ಜಗತ್ತಿನಲ್ಲಿ ತನ್ನ ಪರಮಾಣು ಸಾಮರ್ಥ್ಯ ತೋರುವಂತಾಗಿದೆ ಎಂದು ಪ್ರೊ. ಶಿವಾನಂದ ಕಣವಿ ಹೇಳಿದರು.
ಪರಮಾಣು ಅಪರಿಮಿತ ಶಕ್ತಿಯ ಸಾಧ್ಯತೆ ಹೊಂದಿದ್ದರೂ, ವಿಕಿರಣ ತ್ಯಾಜ್ಯದ ಫಲವಾಗಿ ಸಹಸ್ರಾರು ವರ್ಷಗಳ ಕಾಲ ತನ್ನ ಕೆಟ್ಟ ಪರಿಣಾಮ ಬೀರಬಹುದು. ೨ನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕ ದೇಶ ಜಪಾನ್ನ ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ಕರ್ನಲ್ ಲಯೋನೆಲ್ ಟಿಬೆಟ್ಸ್ ನೇತೃತ್ವದಲ್ಲಿ ಅಣು ಬಾಂಬ್ ಸಿಡಿಸಿದ ಘೋರ ಪರಿಣಾಮ ಇಂದಿಗೂ, ಮಾನವ ಇತಿಹಾಸದ ದುರಂತಗಳಲ್ಲಿ ಒಂದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ವಿಧ್ವಂಸಕ ಕೃತ್ಯಕ್ಕೂ ಬಳಕೆಯಾಗಬಹುದಾದ ಈ ಶಕ್ತಿ, ಮುಂದೊಂದು ದಿನ ಮನುಷ್ಯ ಕುಲದ ವಿನಾಶಕ್ಕೂ ಕಾರಣವಾಗಬಹುದು.. ಅವಿವೇಕಿಗಳ ಕೈಗೆ ಬ್ರಹ್ಮಾಸ್ತ್ರದಂತೆ ಎಂದು ಪ್ರೊ. ಕಣವಿ ಕಳವಳ ವ್ಯಕ್ತ ಪಡಿಸಿದರು.
ವಿವೇಕವಿರುವ ಭಾರತದಂತಹ ದೇಶ ಪರಮಾಣು ಶಕ್ತಿಯನ್ನು ಸಂಚಯಿಸಿ, ಬಳಸುವ ಪರಿಗೂ ಇತರೆ ಮುಂದುವರೆದ ರಾಷ್ಟ್ರಗಳು ಬಳಸಬಹುದಾದ ಪರಿಗೂ ಸಾಕಷ್ಟು ವ್ಯತ್ಯಾಸವಿದೆ. ಪರಮಾಣು ಶಕ್ತಿಯನ್ನು ನಿಯಂತ್ರಿಸಿ ಬಳಸುವ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ವಿಶ್ವವ್ಯಾಪಿ ಸಂಶೋಧನೆಗಳು ನಡೆದಿವೆ. ಈ ಸಮಶೋಧನೆಗಳು ‘ಪಾಥ್ ಬ್ರೆಕಿಂಗ್’ ಎನಿಸಿದಲ್ಲಿ, ಹೊಸ ಲೋಕವೇ ಅನಾವರಣಗೊಳ್ಳಲಿದೆ. ನೈಸರ್ಗಿಕ ಮತ್ತು ನವೀಕರಿಸಲಾಗದ ಇಂಧನಗಳ ಮೇಲಿನ ಅವಲಂಬನೆ ಮತ್ತು ಒತ್ತಡ ಕ್ರಮೇಣ ಕಡಿಮೆ ಮಾಡಬಹುದು ಎಂದರು.
ಉತ್ತರ ಕೋರಿಯಾ, ಚೈನಾ ಸೇರಿದಂತೆ ಅನೇಕ ಮುಂದುವರಿದ ರಾಷ್ಟ್ರಗಳು ಅವ್ಯಾಹತವಾಗಿ ಪರಮಾಣು ಮತ್ತು ಬಾಂಬ್ಗಳ ಪರೀಕ್ಷೆಯಲ್ಲಿ ತೊಡಗಿರುವುದು ಖೇದನೀಯ. ಈ ಧೋರಣೆ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ತರದಲ್ಲಿ ವ್ಯಾಪಕ ಬಿಕ್ಕಟ್ಟು ಮತ್ತು ಹಗೆತನಕ್ಕೆ ಕಾರಣವಾಗಬಹುದು. ಈ ದೇಶಗಳ ಅರ್ಥ ವ್ಯವಸ್ಥೆ ಸಹ ಡೋಲಾಯಮಾನವಾಗಿ, ಗಂಭೀರ ಪರಿಸ್ಥಿತಿ ಎದುರಿಸುವಂತಾಗಬಹುದು ಎಂದು ಪ್ರೊ. ಕಣವಿ ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಸಿಡಿಎಸ್ ಸಂಚಾಲಕ, ದಿವಾಕರ ಹೆಗಡೆ ಅವರು, ಪರಿಸರ ಸ್ನೇಹಿ ಮತ್ತು ಸುಸ್ಥಿರವಾದ ಅಭಿವೃದ್ಧಿಯೆಡೆಗೆ ನಮ್ಮ ನಡೆ ಇರಬೇಕು. ಮನುಷ್ಯನ ಹೆಜ್ಜೆ ಈ ಭೂಮಿಯ ಮೇಲೆ ಪುಟ್ಟದಿದ್ದಷ್ಟೂ ಕ್ಷೇಮ. ಇಂಗಾಲದ ಹೆಜ್ಜೆಗಳು ಈಗಾಗಲೇ ಕೃಷಿ, ಅನ್ನದ ಬಟ್ಟಲು, ಉಸಿರಾಡುವ ಗಳಿ ಹಾಗೈ ಕುಡಿಯುವ ನೀರನ್ನು ಕಲುಷಿತ ಗೊಳಿಸಿರುವ ಹಿನ್ನೆಲೆ, ಹೊಸ ಅಸ್ತ್ರವಾಗಿ ಪರಮಾಣು ಶಕ್ತಿ ಹೊರಹೊಮ್ಮಿದಲ್ಲಿ ಅಷ್ಟೇ ಗಂಭೀರ ಸಮಸ್ಯೆಗಳನ್ನು ನಾವು ಎದುರಿಸಬೇಕಾಗಬಹುದು ಎಂದರು.
ಹಿರಿಯ ಕವಿ, ಚೆಂಬೆಳಕಿನ ಚೆನ್ನವೀರ ಕಣವಿ, ಸಿಡಿಎಸ್ ಸಂಯೋಜಕ ಹರ್ಷವರ್ಧನ್ ಶೀಲವಂತ ಪಾಲ್ಗೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಆಗಿದ್ದ ಡಾ.ಎಸ್.ಎಸ್.ಪಟಗುಂದಿ ಅವರು ಅತಿಥಿಗಳಿಗೆ ಧಾರವಾಡ ಫೇಡೆಯನ್ನು ಕಾಣಿಕೆಯಾಗಿ ನೀಡಿ, ಗೌರವಿಸಿದರು.
ವಿಶೇಷ ಆಹ್ವಾನಿತರು, ಗಣ್ಯರು, ವಿಷಯ ತಜ್ಞರು, ಪ್ರಾಧ್ಯಾಪಕರು ಹಾಗೂ ರಾಷ್ಟ್ರೋತ್ಥಾನ ಶಾಲೆ, ಗರಗದ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.