ಒರಿಸ್ಸಾದ ಬಲಸೋರ್ ಜಿಲ್ಲೆಯ ವಿಕಾಸ್ ದಾಸ್ ಮೂಲತಃ ಸಾಫ್ಟ್ವೇರ್ ಎಂಜಿನಿಯರ್. ಆದರೆ ಇಂದು ಆತ 17 ಸಾವಿರ ಬುಡಕಟ್ಟು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಒರ್ವ ಸಾಧಕ.
ಐಬಿಎಂನಲ್ಲಿ ಸೆಕ್ಯೂರಿಟಿ ಕನ್ಸಲ್ಟೆಂಟ್ ಆಗಿದ್ದ ಇವರು 2013ರ ಅಕ್ಟೋಬರ್ನಲ್ಲಿ ತನ್ನೂರು ಬಲ್ಸೋರ್ಗೆ ದುರ್ಗಾ ಪೂಜೆಗೆಂದು ಬಂದಿದ್ದ ಸಂದರ್ಭ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ಅವಮಾನಕ್ಕೊಳಗಾಗುವುದನ್ನು ನೋಡಿದರು. ಅಲ್ಲಿಂದ ಇವರ ಸಾಮಾಜಿಕ ಕಾರ್ಯದ ಪ್ರಯಾಣ ಆರಂಭಗೊಂಡಿತು.
ಬಾಲ್ಯದಿಂದಲೇ ವಸುದೇವ ಕುಟುಂಬಿಕಂ ಎಂಬುದನ್ನು ಕೇಳುತ್ತಾ ಬೆಳದಿದ್ದ ವಿಕಾಸ್, ಮತ್ತೊಂದೆಡೆ ತನ್ನೂರಿನ ಬುಡಕಟ್ಟು ಜನಾಂಗದವರ ಬಗ್ಗೆ ಇದ್ದ ತಾರತಮ್ಯಗಳನ್ನೂ ನೋಡಿದ್ದ. ಹೀಗಾಗೀ ಅವರ ಬದುಕನ್ನು ಬದಲಿಸಬೇಕೆಂಬ ಅದಮ್ಯ ಇಚ್ಛೆಯಿಂದ ತನ್ನ ಉದ್ಯೋಗವನ್ನೇ ತೊರೆದ.
ಬಡವರು, ಅನಕ್ಷರಸ್ಥರು, ಪೌಷ್ಠಿಕತೆ ರಹಿತರು ಎಂಬ ಕಾರಣಕ್ಕಾಗಿಯೇ ಬುಡಕಟ್ಟು ಜನರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ ಎಂಬುದನ್ನು ಅರಿತ ವಿಕಾಸ್, ಅವರ ಮಹಿಳೆಯರನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾದ. ಎರಡು ತಿಂಗಳು ಆ ಸಮುದಾಯದವರೊಂದಿಗೆ ಇದ್ದು, ಅವರ ಕಷ್ಟಗಳನ್ನು ಅರಿತುಕೊಂಡ. ಬಳಿಕ ತನ್ನೊಂದಿಗೆ ಕೈಜೋಡಿಸುವಂತೆ ಕಾರ್ಪೋರೇಟ್ ವಲಯದಲ್ಲಿದ್ದ ಸ್ನೇಹಿತರಿಗೆ ಮನವಿ ಮಾಡಿಕೊಂಡ. ಆಗ ರಚನೆಯಾಯಿತು 7 ಮಂದಿಯ ತಂಡ. ಈ ತಂಡ ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಮುಂದಾಯಿತು.
ವಿಕಾಸ್ ತನ್ನ ಉದ್ಯೋಗವನ್ನು ತೊರೆದು ತನ್ನೆಲ್ಲಾ ಉಳಿತಾಯವನ್ನು ಸೇರಿಸಿ ‘ವಟ ವೃಕ್ಷ ‘ಎಂಬ ಸಾಮಾಜಿಕ ಉದ್ಯಮವನ್ನು ಆರಂಭಿಸಿದರು.
ಬಳಿಕ 100-200 ಮಂದಿಯಿದ್ದ ಸಣ್ಣ ಬುಡಕಟ್ಟು ಪ್ರದೇಶದಲ್ಲಿ ಅವರ ತಂಡ ಕಾರ್ಯವನ್ನು ಆರಂಭಿಸಿತು. ಅಲ್ಲಿನ ಮಹಿಳೆಯರು ತಿಳಿದಿರುವಂತಹ ಕರಕುಶಲ, ಕೈಮಗ್ಗ, ಸಾವಯವ ಬೆಳೆ, ಹರ್ಬಲ್ ಮತ್ತು ಸೌಂದರ್ಯ ವರ್ಧಕಗಳ ಉತ್ಪಾದನೆಯನ್ನು ಆರಂಭಿಸಲಾಯಿತು. ವಟ ವೃಕ್ಷ ವತಿಯಿಂದ ತರಬೇತಿಯನ್ನೂ ನೀಡಲಾಯಿತು. ಈ ವಸ್ತುಗಳ ಡೋರ್ ಟು ಡೋರ್ ಮಾರ್ಕೆಟಿಂಗ್ಗೆ ಕೂಡ ಬುಡಕಟ್ಟು ಜನರನ್ನೇ ಬಳಸಲಾಯಿತು. ಈ ಮೂಲಕ ಅವರು ಸ್ವಾವಲಂಬಿಗಳಾದರು. ಆದಾಯ ಗಳಿಸಲಾರಂಭಿಸಿದರು.
ಒಂದು ಸಣ್ಣ ಪ್ರದೇಶದಲ್ಲಿ ಆರಂಭವಾದ ಈ ವಟ ವೃಕ್ಷ ಸಾಮಾಜಿಕ ಉದ್ಯಮ ಇದೀಗ ಒರಿಸ್ಸಾ, ಪಶ್ಚಿಮಬಂಗಾಳ, ಜರ್ಖಾಂಡ್, ಛತ್ತೀಸ್ಗಢದ ವಿವಿಧ ಜಿಲ್ಲೆಗಳಿಗೆ ಹಬ್ಬಿದ್ದು, 17 ಸಾವಿರ ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ನೀಡುತ್ತಿದೆ. 73 ತಂಡಗಳು ವಟ ವೃಕ್ಷದ ಸದಸ್ಯರುಗಳಾಗಿವೆ.
ದುರ್ಗಾ ಪೂಜೆಯ ವೇಳೆ ವಿಕಾಸ್ ಅವರ ಮುಂದೆ ಅವಮಾನಕ್ಕೊಳಗಾದ ಬುಡಕಟ್ಟು ಮಹಿಳೆ ಸುಕಿಮ ಮಾಜ್ಹಿ ಇದೀಗ ನಿಜವಾದ ಅರ್ಥದಲ್ಲಿ ಉದ್ಯಮಿಯಾಗಿ ಪರಿವರ್ತನೆಯಾಗಿದ್ದಾಳೆ.
ನಾವೆಲ್ಲಾ ಸಮಾಜದಲ್ಲಿನ ಕೆಟ್ಟತನವನ್ನು ನೋಡುತ್ತೇವೆ. ಬದಲಾವಣೆ ತರಬೇಕು ಎಂಬ ಬಯಕೆಯೂ ನಮಗಿರುತ್ತದೆ. ಆದರೆ ನಮ್ಮಿಂದ ಇದು ಸಾಧ್ಯವೇ? ನಾನೊಬ್ಬನೇ ಇದನ್ನು ಮಾಡಬಲ್ಲನೇ? ವಿಫಲಗೊಂಡರೇ ಏನು ಮಾಡುವುದು? ಎಂಬಿತ್ಯಾದಿ ಚಿಂತೆಗಳು ನಮ್ಮನ್ನು ಆವರಿಸುತ್ತದೆ. ಹೀಗಾಗಿ ಮೊದಲ ಹೆಜ್ಜೆ ತೆಗೆಯಲು ಹಿಂದೇಟು ಹಾಕುತ್ತೇವೆ. ನಾನೂ ಮೊದಲ ಹೆಜ್ಜೆ ಇಟ್ಟಾಗ ಕೈಯಲ್ಲಿ ಹೆಚ್ಚಿನ ಹಣವಿರಲಿಲ್ಲ. ಆದರೂ ಬದಲಾವಣೆ ತರುವ ಆಸೆ ಇತ್ತು. ಪ್ರಯತ್ನಿಸೋಣ. ಪ್ರಯತ್ನಿಸಿ ಸೋತರೂ ಪರವಾಗಿಲ್ಲ ಎಂಬ ದೃಢ ಮನಸ್ಸಿನಿಂದ ಹೆಜ್ಜೆ ಇಟ್ಟೆ ಎಂದು ವಿಕಾಸ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.