News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧಾರವಾಡದಲ್ಲಿ ಬೀಜದುಂಡೆ; ಕೋಟಿ ವೃಕ್ಷ ಆಂದೋಲನಕ್ಕೆ ಚಾಲನೆ

ಧಾರವಾಡ, ಜೂ. 4: ನಾಲ್ಕು ಸಾವಿರ ವರ್ಷಗಳ ಹಿಂದೆ ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧ ಸರಳ ಮತ್ತು ನೇರವಾಗಿತ್ತು. ಸಕಾಲದಲ್ಲಿ ಬೀಜ ಬಿತ್ತುವುದು ಆಮೇಲೆ ಫಲ ಪಡೆಯುವುದು ಅಷ್ಟೇ ಕೃಷಿಯಾಗಿತ್ತು. ಆದರೆ, ತಾಂತ್ರಿಕ ಸುಧಾರಣೆ ಆದಂತೆಲ್ಲ, ಈಗ ಮನುಷ್ಯ ಮತ್ತು ಭೂಮಿಯ ಮಧ್ಯೆ ನೂರೊಂದು ಕೊಂಡಿಗಳೂ, ಕ್ಲಿಷ್ಟ ವ್ಯವಸ್ಥೆಗಳೂ ತೂರಿಕೊಂಡಿವೆ. ಹಾಗಾಗಿ, ಬೀಜದುಂಡೆ ರೂಪಿಸಿ, ಬಿತ್ತರಿಸುವ ಮೂಲಕ ಸಂಬಂಧ ಮರು ಬೆಸೆಯುವ ಆಂದೋಲನ..!

ನಗರದ ಶಿವಕೃಪಾ ಟ್ರಸ್ಟ್ ಹಾಗೂ ಸಮರ್ಥ ಭಾರತ ಟ್ರಸ್ಟ್ ಸಹಯೋಗದಲ್ಲಿ ಇಂದು (ಭಾನುವಾರ ಜೂನ್ 4,2017), ರಾಮನಗರದ ಭಾರತೀಯ ವಿದ್ಯಾ ಪ್ರಸಾರಕ ಮಂಡಳದ ಭಗಿನಿ ನಿವೇದಿತಾ ಶಾಲೆಯ ಆವರಣದಲ್ಲಿ ನಡೆದ ಸಾಂಘಿಕ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 85ಕ್ಕೂ ಹೆಚ್ಚು ಸ್ವಯಂಸೇವಕರು ಬೀಜದುಂಡೆ (ಸೀಡ್ ಬಾಲ್)ಗಳನ್ನು ತಯಾರಿಸಿದರು. ಕೋಟಿ ವೃಕ್ಷ ನೆಡುವ ಆಂದೋಲನದ ಭಾಗವಾಗಿ ಬೀಜದುಂಡೆ ರೂಪಿಸುವ ಈ ಕಾರ್ಯಾಗಾರ ಜರುಗಿತು.

ಭೂಮಿಯ ಆರೋಗ್ಯ ದಿನ ದಿನಕ್ಕೆ ಹದಗೆಡುತ್ತಿದೆ. ನಿಸರ್ಗವನ್ನು ಬಗ್ಗು ಬಡಿದೇ ಅಭಿವೃದ್ಧಿ ಸಾಧಿಸ ಹೊರಟ ಆಧುನಿಕ ಮಾನವರ ದಾಳಿಗೆ ನೆಲ ನಲುಗಿದೆ. ಗಿಜಿಗಿಡುವ ೬೮೫ ಕೋಟಿ ಜನರ ಆಸೆ-ದುರಾಸೆಗಳ ಪೂರೈಕೆಗೆಂದು ಗಾಳಿ, ಮಣ್ಣು, ಅಂತರ್ಜಲವಷ್ಟೇ ಅಲ್ಲ ದೂರದ ಹಿಮಖಂಡಗಳೂ ಕಲುಷಿತವಾಗುತ್ತಿವೆ. ಅಂತರಿಕ್ಷದ ಓಝೋನ್ ರಕ್ಷಾ ಕವಚವೂ ಛಿದ್ರವಾಗುತ್ತಿದೆ.

ಇತಿಮಿತಿ ಮೀರಿದ ಈ ಮಾನವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ವಿಚಾರ ಈಗ ಸಾರ್ವತ್ರಿಕ ಅರಿವು ಮೂಡಿಸುತ್ತಿದೆ. ಹಾಗಾಗಿ ಬೀಜದುಂಡೆ ಅಭಿಯಾನ. ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರದಲ್ಲಿ ಮಾತ್ರ ಏನೂ ಇಲ್ಲ! ಹಾಗಾಗಿ, ವಿವಿಧ ತಳಿಯ ಬೀಜಗಳನ್ನು ಬಳಸಿಕೊಂಡು, ಬೀಜದುಂಡೆ (ಸೀಡ್ ಬಾಲ್) ತಯಾರಿಸುವ ಈ ಕಾರ್ಯಾಗಾರ ನಡೆಯಿತು.

ಹಲಸು, ಮಾವು, ನೇರಳೆ, ಕಕ್ಕಿ, ಹುಲಗಲ ಹೀಗೆ ಒಟ್ಟು 5 ಪ್ರಜಾತಿಯ ಬೀಜಗಳನ್ನು, ಸಗಣಿ ಮತ್ತು ಎರೆಹುಳು ಗೊಬ್ಬರ, ಪಂಚಗವ್ಯ, ಮಣ್ಣು ಮತ್ತು ಉಸುಕು ಹದವಾಗಿ ಮಿಶ್ರಣ ಮಾಡಿಕೊಂಡು, 85ಕ್ಕೂ ಹೆಚ್ಚು ಸ್ವಯಂ ಸೇವಕರು ಕೆಸರಿನಲ್ಲಿ ಮಿಂದೆದ್ದು ಸಾವಿರದ ನೂರಾ ಎಪ್ಪತ್ತೊಂಭತ್ತು (1,179) ಬೀಜದುಂಡೆಗಳನ್ನು ನಿರ್ಮಿಸಿದ್ದು ವಿಶೇಷ.

ವಿಭಾಗ ಶಾರೀರಿಕ್ ಶಿಕ್ಷಣ ಪ್ರಮುಖ್, ಹಿರಿಯ ನ್ಯಾಯವಾದಿ ವೆಂಕಟೇಶ ಕರಿಕಲ್, ನಗರ ಸೇವಾ ಪ್ರಮುಖ್ ಸಂತೋಷ ಪೂಜಾರಿ, ರವಿ ಕಾಮತ್, ಅಮರ್ ಟಿಕಾರೆ, ಜಗದೀಶ ಹಿರೇಮಠ, ಮಹೇಶ ಸದರೆ, ಸಂತೋಷ ಸಾಬಳೆ, ರಾಜು ಚಂದನಕರ, ಶ್ರೀಷ ಬಳ್ಳಾರಿ ಹಾಗೂ ಹರ್ಷವರ್ಧನ ಶೀಲವಂತ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top