ತಾಯಿ ಭಾರತಿಯ ಮಡಿಲಿನಲ್ಲಿ ಹುಟ್ಟಿದ ಅನರ್ಘ್ಯ ರತ್ನ ಸುಖ್ದೇವ್ ಜನ್ಮದಿನವಿಂದು. ಭಾರತದ ಮಹಾನ್ ಕ್ರಾಂತಿಕಾರಿ ಸುಖ್ದೇವ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರೆನಿಸಿದ್ದಾರೆ.
ಭಾರತದ ಮಹಾನ್ ಕ್ರಾಂತಿಕಾರಕ ಸ್ವಾತಂತ್ರ ಹೋರಾಟಗಾರ, ಭಗತ್ ಸಿಂಗ್ ಮತ್ತು ರಾಜಗುರು ಅವರ ಒಡನಾಡಿ ಸುಖ್ದೇವ್ ಅವರು ಜನಿಸಿದ್ದು ಮೇ 15, 1907 ರಲ್ಲಿ. ಅವರ ಪೂರ್ಣ ಹೆಸರು ಸುಖ್ದೇವ್ ಥಾಪರ್. ತಂದೆ ರಾಮ ಲಾಲ್, ತಾಯಿ ಇಳಾ ದೇವಿ.
ಕ್ರಾಂತಿಕಾರಕ ಮನೋಭಾವ
ಚಿಕ್ಕಂದಿನಿಂದ ಬ್ರಿಟಿಷರು ಭಾರತೀಯರ ಮೇಲೆ ಹೇರುತ್ತಿದ್ದ ದಬ್ಬಾಳಿಕೆ ದೌರ್ಜನ್ಯವನ್ನು ಕಂಡ ಸುಖ್ದೇವ್ ಮಾನಸಿಕವಾಗಿ ಕ್ರಾಂತಿಕಾರಕ ಮನೋಭಾವವನ್ನು ಬೆಳೆಸಿಕೊಂಡರು. ಯೌವನದ ಪರ್ವ ಕಾಲದಲ್ಲಿ ಉಳಿದ ಯುವಕರು ತಮ್ಮ ವೈಯಕ್ತಿಕ ಕನಸುಗಳ ಬಗೆಗೆ ಮೋಹ ಪರವಶರಾಗಿದ್ದರೆ, ಈ ಯುವಕ ತಮ್ಮ ದೇಶದ ದಾಸ್ಯವನ್ನು ಕಿತ್ತೊಗೆಯುವ ಕನಸು ಕಂಡರು.
ಬ್ರಿಟಿಷರ ವಿರುದ್ಧ ಹೋರಾಟ
ಬ್ರಿಟಿಷರ ದುರಾಡಳಿತದ ಬಗ್ಗೆ ಹೋರಾಡಲು ಸುಖ್ದೇವ್ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸೇರಿಕೊಂಡರು. ಸದಸ್ಯರಾಗಿ ಹೆಸರು ನೊಂದಾಯಿಸಿ ಸುಮ್ಮನಿರಲಿಲ್ಲ. ಇಡೀ ಪಂಜಾಬಿನಲ್ಲಿ ಮತ್ತು ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಬಿರುಗಾಳಿಯಂತೆ ಸಂಚರಿಸಿ ದೇಶಕ್ಕಾಗಿ ಹೋರಾಡಬಲ್ಲ ಯುವಜನರ ತಂಡವನ್ನು ಕಟ್ಟಿದರು. ಲಾಹೋರಿನ ನ್ಯಾಷನಲ್ ಕಾಲೇಜಿಗೆ ಹೋಗಿ ಯುವಜನರಿಗೆ ದೇಶಕ್ಕಾಗಿ ಹೋರಾಡಲು ಕರೆಕೊಟ್ಟರು. ಭಾರತದ ಭವ್ಯ ಪರಂಪರೆಗಳ ಬಗ್ಗೆ ಯುವಜನರ ಮನಸ್ಸಿಗೆ ನಾಟುವಂತೆ ತಿಳಿವಳಿಕೆ ನೀಡಿದರು. ಇತರ ಕ್ರಾಂತಿಕಾರಿಗಳ ಜೊತೆಗೂಡಿ ಲಾಹೋರಿನಲ್ಲಿ ‘ನವಜವಾನ್ ಭಾರತ್ ಸಭಾ’ ಎಂಬ ತಂಡವನ್ನು ಕಟ್ಟಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ನಡೆಸಲು ಯುವ ಪಡೆಯನ್ನು ಕಟ್ಟಿದರು.
ಪ್ರಸಿದ್ಧ ಕ್ರಾಂತಿಕಾರಕ ಚಟುವಟಿಕೆಗಳು
ಸುಖ್ದೇವ್ ಇತರರಿಗೆ ಬೋಧಿಸುವುದು ಮಾತ್ರವಲ್ಲದೆ ನೇರವಾಗಿ ಸ್ವಯಂ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಅವುಗಳಲ್ಲಿ ಪ್ರಮುಖವೆಂದರೆ 1928 ರಲ್ಲಿ ನಡೆದ ಲಾಹೋರ್ ಒಳಸಂಚು ಮತ್ತು 1929 ರಲ್ಲಿ ನಡೆಸಿದ ‘ಸೆರೆಮನೆಯ ಉಪವಾಸ ಸತ್ಯಾಗ್ರಹ’. ‘ಲಾಹೋರ್ ಒಳಸಂಚು’ ಅಥವಾ ‘ಲಾಹೋರ್ ಕಾನ್ಸ್ಪಿರೆಸಿ ಕೇಸ್’ ಎಂದು ಪ್ರಸಿದ್ಧಿ ಪಡೆದ ಪ್ರಕರಣವಂತೂ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದಂತಹ ಘಟನೆಯಾಗಿದೆ. ಸುಖ್ದೇವ್ ಅವರು ಭಗತ್ ಸಿಂಗ್ ಮತ್ತು ಶಿವರಾಮ್ ರಾಜಗುರು ಅವರ ಜೊತೆಗೂಡಿ ಲಾಲಾ ಲಜಪತರಾಯರನ್ನು ಲಾಠಿ ಏಟಿನಿಂದ ಕೊಂದ ಬ್ರಿಟಿಷ್ ಪೋಲೀಸ್ ಕಾರ್ಯಾಚರಣೆಯ ಪ್ರತೀಕವಾಗಿ ಬ್ರಿಟಿಷ್ ಪೋಲೀಸ್ ಅಧಿಕಾರಿಯಾದ ಜೆ ಪಿ ಸಾಂಡರ್ಸ್ ಎಂಬಾತನನ್ನು ಹತ್ಯೆಗೈದರು. 1929ರಲ್ಲಿ ನವದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲಿನಲ್ಲಿ ಬಾಂಬ್ ಎಸೆದ ಘಟನೆಯಲ್ಲಿ ಈ ಮೂರ್ವರಿಗೂ ಬ್ರಿಟಿಷ್ ಆಡಳಿತ ಮರಣ ದಂಡನೆ ವಿಧಿಸಿತು.
ನೇಣು ಕುಣಿಕೆಗೆ ಕೋರಳೊಡ್ಡಿದಾಗ
ಮಾರ್ಚ್ 23, 1931 ರಂದು ಈ ಮೂರ್ವರು ಮಹಾನ್ ಯುವಕರಾದ ಭಗತ್ ಸಿಂಗ್, ಸುಖದೇವ್ ಥಾಪರ್, ಶಿವರಾಮ್ ರಾಜಗುರು ನಗುನಗುತ್ತಾ ನೇಣುಗಂಬದ ಹಗ್ಗದ ಕುಣಿಕೆಗೆ ತಮ್ಮ ಕೊರಳೊಡ್ಡಿದರು. ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಂಡಾಗ ಈ ಯುವ ಮಹಾತ್ಮ ಸುಖ್ದೇವ್ರ ವಯಸ್ಸು ಕೇವಲ 24.
(ಸಂಗ್ರಹ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.