
ಅದು ಜನವರಿ 30, 1971. ಮಧ್ಯಾಹ್ನ 1:05ಕ್ಕೆ, ಶ್ರೀನಗರ ವಿಮಾನ ನಿಲ್ದಾಣದಿಂದ ಜಮ್ಮುಗೆ ಹೊರಟಿತ್ತು ʼಗಂಗಾʼ ಎಂದು ಕರೆಯಲ್ಪಡುತ್ತಿದ್ದ ಇಂಡಿಯನ್ ಏರ್ಲೈನ್ಸ್ನ ಹಳೆಯ ಫೋಕರ್ F27-100 ಫ್ರೆಂಡ್ಶಿಪ್ ವಿಮಾನ. ಒಳಗೆ 26 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದ “ಗಂಗಾ” ಆಕಾಶಕ್ಕೆ ಏರಿದ ಕೆಲವೇ ನಿಮಿಷಗಳಲ್ಲಿ ಭಾರತ-ಪಾಕಿಸ್ತಾನದ ಇತಿಹಾಸವನ್ನೇ ಬದಲಾಯಿಸಿ ಬಿಟ್ಟಿತು! ಹೌದು ಹಾರಾಟದ ನಡುವೆಯೇ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಆದರೆ ಅಸಲಿಗೆ ಅದು ಹೈಜಾಕ್ ಆಗಿರಲಿಲ್ಲ. ಅದು ಭಾರತದ ಚಾಣಾಕ್ಷ ನಡೆಯಾಗಿತ್ತು. 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಭಾರತ ರೂಪಿಸಿದ ಯೋಜಿತ ನಡೆಯಾಗಿತ್ತು.
ಜಗತ್ತು ಹಿಂದೆಂದೂ ನೋಡಿರದ ರಾಜತಾಂತ್ರಿಕ ಚತುರತೆಯ ಪ್ರಸಂಗವೊಂದನ್ನು ಇಂದು ನಾವು ನಿಮ್ಮ ಮುಂದಿಡುತ್ತಿದ್ದೇವೆ
ಗಂಗಾ ವಿಮಾನ ಆಗಸಕ್ಕೆ ಹಾರುತ್ತಿದ್ದಂತೆ ಏಕಾಏಕಿ ಎದ್ದು ನಿಂತರು ಇಬ್ಬರು ಯುವಕರು – ಹಾಶಿಮ್ ಖುರೇಷಿ ಮತ್ತು ಅವರ ಸಹೋದರಿಯ ಮಗ ಅಶ್ರಫ್ ಖುರೇಷಿ. ಕೈಯಲ್ಲಿ ಪಿಸ್ತೂಲ್ ಮತ್ತು ಗ್ರೆನೇಡ್ ಝಳಪಿಸುತ್ತಾ, ಕಾಕ್ಪಿಟ್ಗೆ ನುಗ್ಗಿದರು. ಪೈಲಟ್ ಎಂ.ಎಸ್. ಕಚ್ರೂ ಅವರಿಗೆ ಬೆದರಿಕೆ ಹಾಕಿ, “ಲಾಹೋರ್ಗೆ ವಿಮಾನವನ್ನು ತಿರುಗಿಸಿ, ಇಲ್ಲದಿದ್ದರೆ ಸ್ಫೋಟಿಸುತ್ತೇವೆ!” ಎಂದರು. ಆದರೆ ಇಲ್ಲೊಂದು ರಹಸ್ಯವಿತ್ತು – ಆ “ಪಿಸ್ತೂಲ್” ಆಟಿಕೆಯದ್ದಾಗಿತ್ತು ಮತ್ತು ಗ್ರೆನೇಡ್ ಮರದಿಂದ ಮಾಡಿದ ನಕಲಿ ಗ್ರೆನೇಡ್ ಆಗಿತ್ತು!
ಪ್ರಯಾಣಿಕರಲ್ಲಿ ಭಯ ಆವರಿಸಿತು. ಅಪಹರಣಕಾರರು ಕೂಗಿದರು: “ನ್ಯಾಷನಲ್ ಲಿಬರೇಶನ್ ಫ್ರಂಟ್ನ 36 ಕೈದಿಗಳನ್ನು ಬಿಡುಗಡೆ ಮಾಡಿ! ಇಲ್ಲದಿದ್ದರೆ ವಿಮಾನವನ್ನು ಸ್ಪೋಟಿಸಿ ಬಿಡುತ್ತೇವೆ”. ಅಲ್ಲದೇ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಜುಲ್ಫಿಕರ್ ಭುಟ್ಟೋ ಅವರೊಂದಿಗೂ ಸಭೆ ನಡೆಸಬೇಕು ಎಂಬ ಬೇಡಿಕೆ ಇಟ್ಟರು.
ಕೊನೆಗೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಪಾಕಿಸ್ತಾನಿ ಅಧಿಕಾರಿಗಳು ಸಂಸತದಿಂದಲೇ ವಿಮಾನವನ್ನು ಸ್ವಾಗತಿಸಿದರು. ಕಾಶ್ಮೀರಿ “ಸ್ವಾತಂತ್ರ್ಯ ಹೋರಾಟಗಾರರ” ಕೃತ್ಯ ಇದೆಂದು ಅವರು ಅಂದುಕೊಂಡು ಹಿರಿ ಹಿರಿ ಹಿಗ್ಗಿದರು. ಭುಟ್ಟೋ ಸ್ವತಃ ವಿಮಾನ ನಿಲ್ದಾಣಕ್ಕೆ ಬಂದರು. ಮಾತುಕತೆ ನಡೆದ ನಂತರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು. ರಸ್ತೆ ಮೂಲಕ ಅವರನ್ನು ಅಮೃತ್ಸರ್ಗೆ ಕಳುಹಿಸಲಾಯಿತು.
ಆದರೆ ಅಲ್ಲಿ ಆಘಾತಕಾರಿ ಘಟನೆಯೊಂದು ನಡೆದು ಹೋಯಿತು! ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ ಕೂಡಲೇ, ವಿಮಾನ ಸುಟ್ಟುಹೋಯಿತು. ಇನ್ನೊಂದೆಡೆ ಹಾಶಿಮ್ ಮತ್ತು ಅಶ್ರಫ್ರನ್ನು “ವೀರರು” ಎಂದು ಪರಿಗಣಿಸಿ ಪಾಕಿಸ್ಥಾನ ಅವರಿಗೆ ರಾಜಾತಿಥ್ಯ ನೀಡಿತು.
ಘಟನೆಯ ಬಳಿಕ ಭಾರತದಾದ್ಯಂತ ಇದು ಪಾಕಿಸ್ತಾನದ ಭಯೋತ್ಪಾದನಾ ಕೃತ್ಯ ಎಂಬ ಸುದ್ದಿ ಹರಡಿತು. ಪರಿಣಾಮವಾಗಿ ಭಾರತ ಸರ್ಕಾರ ರಾತ್ರೋರಾತ್ರಿ ಎಲ್ಲಾ ಪಾಕಿಸ್ತಾನಿ ವಿಮಾನಗಳಿಗೆ ಭಾರತೀಯ ವಾಯುಪ್ರದೇಶವನ್ನು ಮುಚ್ಚಿತು!
ಈ ವಾಯು ಮಾರ್ಗ ನಿಷೇಧ ಪಾಕಿಸ್ತಾನಕ್ಕೆ ದೊಡ್ಡ ಏಟು ನೀಡಿತು. ಪೂರ್ವ ಪಾಕಿಸ್ತಾನಕ್ಕೆ (ಇಂದಿನ ಬಾಂಗ್ಲಾದೇಶ) ಸೈನ್ಯ, ಶಸ್ತ್ರಾಸ್ತ್ರಗಳು ಮತ್ತು ಸರಬರಾಜುಗಳನ್ನು ಭಾರತದ ಆಕಾಶದ ಮೇಲೆ ವಿಮಾನದ ಮೂಲಕ ಸಾಗಿಸುವುದು ಅತಿ ಸುಲಭ ಮಾರ್ಗವಾಗಿತ್ತು . ಈಗ ಅದು ಬಂದ್! ಪಾಕಿಸ್ತಾನಿ ವಿಮಾನಗಳು ಶ್ರೀಲಂಕಾ ಮೂಲಕ ಹೋಗಬೇಕಾಯಿತು – ಸಮಯ ಮೂರು ಪಟ್ಟು ಹೆಚ್ಚು, ಇಂಧನ ಖರ್ಚು ಹೆಚ್ಚು. ಇದು ಪಾಕಿಸ್ತಾನಿ ಸೈನ್ಯದ ಚಲನೆಯನ್ನು ನಿಧಾನಗೊಳಿಸಿತು, ಪ್ರತ್ಯೇಕಿಸಿತು. ಡಿಸೆಂಬರ್ 1971ರಲ್ಲಿ ಯುದ್ಧ ಪ್ರಾರಂಭವಾದಾಗ, ಪಶ್ಚಿಮ ಪಾಕಿಸ್ತಾನದಿಂದ ಪೂರ್ವಕ್ಕೆ ಸಹಾಯ ತಲುಪಲಾಗಲಿಲ್ಲ. ಫಲಿತಾಂಶ? ಬಾಂಗ್ಲಾದೇಶದ ಸ್ವಾತಂತ್ರ್ಯ ಮತ್ತು ಭಾರತದ ಐತಿಹಾಸಿಕ ಗೆಲುವು!
ಆದರೆ ಇಲ್ಲಿ ದೊಡ್ಡ ಟ್ವಿಸ್ಟ್ ಇದೆ. ಇದು ನಿಜವಾದ ಹೈಜಾಕ್ ಅಲ್ಲ! 13 ವರ್ಷಗಳ ನಂತರ, ಮಾಜಿ RAW ಅಧಿಕಾರಿ ಆರ್.ಕೆ ಯಾದವ್ ಅವರ ಪುಸ್ತಕ ಮಿಷನ್ R&AWನಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ಇದು ಭಾರತದ RAWನ ಯೋಜಿತ “ಫಾಲ್ಸ್ ಫ್ಲ್ಯಾಗ್” ಕಾರ್ಯಾಚರಣೆ! ಇದರ ಮಾಸ್ಟರ್ಮೈಂಡ್: RAWನ ಮೊದಲ ಮುಖ್ಯಸ್ಥ R.N. ಕಾವೊ. ಹಾಶಿಮ್ ಖುರೇಷಿ RAWಗೆ ಡಬಲ್ ಏಜೆಂಟ್ ಆಗಿದ್ದವರು. ಅವರಿಗೆ ಆಟಿಕೆ ಬಂದೂಕು ನೀಡಿ, ವಿಮಾನವನ್ನು ಲಾಹೋರ್ಗೆ ತರಲು ಆದೇಶಿಸಲಾಗಿತ್ತು. ವಿಮಾನವನ್ನು ಸುಟ್ಟುಹಾಕುವುದು ಕೂಡ ಯೋಜನೆಯ ಭಾಗವೇ ಆಗಿತ್ತು!
ಈ “ಹೈಜಾಕ್” ಭಾರತಕ್ಕೆ ಪಾಕಿಸ್ತಾನಿ ವಿಮಾನಗಳನ್ನು ನಿಷೇಧಿಸಲು ಸರಿಯಾದ ನೆಪ ನೀಡಿತು. ಇದು 1971ರ ಬಾಂಗ್ಲಾದೇಶ ಮುಕ್ತಿ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿತು – ಸಾವಿರಾರು ಜೀವಗಳನ್ನು ಉಳಿಸಿತು.
ಇದು RAWನ ಗೂಢ ಯುದ್ಧತಂತ್ರವಾಗಿತ್ತು.ಒಂದು ಹಳೆಯ ವಿಮಾನದ “ಅಪಹರಣ” ಇಡೀ ಉಪಖಂಡದ ಭೂಪಟವನ್ನೇ ಬದಲಾಯಿಸಿತು!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


