
ಬೆಂಗಳೂರು: 6 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಅಬಕಾರಿ ಹಗರಣದ ಸಮರ್ಪಕ ತನಿಖೆ ಆಗಲೇಬೇಕು. ಹೈಕೋರ್ಟಿನ ಹಾಲಿ ನ್ಯಾಯಾಧೀಶರು ಅಥವಾ ಸಿಬಿಐನಿಂದ ಇದರ ತನಿಖೆ ಆಗಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ, ದುಷ್ಟ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದರಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ನಾಯಕರಾದ ಸುರೇಶ್ ಬಾಬು, ಭೋಜೇಗೌಡರು ಸೇರಿ ಎರಡೂ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು ಎಲ್ಲರೂ ಇದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಗೂಂಡಾಗಳು ಸದನದಲ್ಲಿ ಮಾನ್ಯ ರಾಜ್ಯಪಾಲರ ಜೊತೆ ಗೂಂಡಾ ವರ್ತನೆ ತೋರಿದ್ದನ್ನು ದೇಶದ ಜನರು ನೋಡಿದ್ದಾರೆ ಎಂದು ತಿಳಿಸಿದರು.
ಅಬಕಾರಿ ಹಗರಣದಲ್ಲಿ ಸ್ವತಃ ಅಬಕಾರಿ ಸಚಿವರ ಹೆಸರು ಕೇಳಿಬರುತ್ತಿದೆ. ಅಬಕಾರಿ ಸಚಿವರ ಕುಟುಂಬದ ಸದಸ್ಯರ ಹೆಸರು ಕೇಳಿಬರುತ್ತಿದೆ. ಅದರ ನಡುವೆಯೂ ಮುಖ್ಯಮಂತ್ರಿಗಳು ಸದನದಲ್ಲಿ ಚರ್ಚೆ ಮಾಡಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಮುಂದಾಗಿದೆ. ಇದನ್ನು ನಾನು ಪದೇಪದೇ ಹೇಳುತ್ತಿದ್ದೇನೆ. ಗ್ರಾಮೀಣ ಭಾಗದ ದಿನಸಿ ಅಂಗಡಿಯಲ್ಲಿ ಸಹ ಹೆಂಡ ಮಾರಾಟ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರು ತಮ್ಮ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳಲು ಹಾಗೂ ಗ್ಯಾರಂಟಿಗಳಿಗಾಗಿ ಹಣ ತುಂಬಿಸಿಕೊಳ್ಳಲು ಕಳೆದ ಎರಡೂವರೆ ವರ್ಷಗಳಲ್ಲಿ ಶೇ 35 ರಷ್ಟು ಗುರಿ ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಆ ಸ್ಥಾನಕ್ಕೆ ಬರಲು ಕೋಟಿ ಕೋಟಿ ಲಂಚ ಇರದೇ ಸಾಧ್ಯವಿಲ್ಲವಾಗಿದೆ ಎಂದು ಆರೋಪಿಸಿದರು.
ಇದೆಲ್ಲದರ ಪರಿಣಾಮವಾಗಿ ಗ್ರಾಮೀಣ ಭಾಗದ ದಿನಸಿ ಅಂಗಡಿಯಲ್ಲಿ ಸಹ ಹೆಂಡ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಸರ್ಕಾರದ ಬೊಕ್ಕಸವನ್ನು ಈ ರೀತಿ ತುಂಬಿಸಿಕೊಳ್ಳಲು ಅವಕಾಶ ಮಾಡಿದ್ದಾರೆ. ಇಂಥ ನಾಚಿಕೆಗೇಡಿನ ಲಜ್ಜೆಗೆಟ್ಟ ಸರ್ಕಾರವನ್ನು ಕರ್ನಾಟಕವು ಇತಿಹಾಸದಲ್ಲಿ ಎಂದೂ ನೋಡಿರಲಿಲ್ಲ ಎಂದು ನುಡಿದರು.
ಜನರು ಇದಕ್ಕೆ ಶಾಪ ಹಾಕುತ್ತಿದ್ದಾರೆ. ಜನರ ಕಲ್ಯಾಣದ ಕುರಿತು ಚಿಂತನೆ ಮಾಡಬೇಕಾದ ಮುಖ್ಯಮಂತ್ರಿಗಳು ಇವತ್ತು ಗ್ಯಾರಂಟಿ, ಗ್ಯಾರಂಟಿ ಎಂದು ಹೇಳಿಕೊಂಡು ಗ್ರಾಮೀಣ ಭಾಗದ ಬಡ ಕುಟುಂಬದ ಜೀವನವನ್ನು ಹಾಳು ಮಾಡಲು ಮುಂದಾದುದು ದುರ್ದೈವ ಎಂದು ಟೀಕಿಸಿದರು. ನಾವು ಅನೇಕ ವಿಷಯಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು. ಅದರ ಕುರಿತು ಸೂಕ್ತವಾದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರು ಮತ್ತು ಈ ಸರಕಾರದವರು ಮಾನ್ಯ ರಾಜ್ಯಪಾಲರನ್ನು ಜೀತದಾಳು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ ಗೌರವಾನ್ವಿತ ರಾಜ್ಯಪಾಲರನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡಿದ್ದರು ಎಂಬುದನ್ನು ದೇಶವೇ ನೋಡಿದೆ ಎಂದು ಗಮನ ಸೆಳೆದರು. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ 90 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು ಎಂದು ತಿಳಿಸಿದರು.
ಇದಲ್ಲದೇ ಮಾನ್ಯ ರಾಜ್ಯಪಾಲರಿಗೆ ಜಂಟಿ ಅಧಿವೇಶನದ ಸಂದರ್ಭದಲ್ಲಿ ಅಪಮಾನ ಮಾಡಿರುವುದು, ದುರ್ವರ್ತನೆ ತೋರಿದ್ದು, ಅಲ್ಲದೇ ಅವರು ಮಾಡಿದ್ದೇ ಸರಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇವತ್ತು ಮಾನ ಮರ್ಯಾದೆ ಬಿಟ್ಟು ಪಾದಯಾತ್ರೆ ಮಾಡಿ ಮುತ್ತಿಗೆ ಹಾಕುತ್ತಾರಂತೆ. ಯಾವ ಪುರುಷಾರ್ಥಕ್ಕಾಗಿ ಮುತ್ತಿಗೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರಕ್ಕೆ ಎರಡೂವರೆ ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ಮುಳುಗಿದ ಸಿದ್ದರಾಮಯ್ಯನವರ ಸರಕಾರ ಇಡೀ ವ್ಯವಸ್ಥೆಯನ್ನೇ ಹಾಳುಗೆಡವಿದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಬಿಜೆಪಿ-ಜೆಡಿಎಸ್ನ ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


