ಪಲಕ್ಕಾಡ್: ಅರಣ್ಯ ನಾಶ, ಜಾಗತಿಕ ತಾಪಮಾನ, ಪರಿಸರ ನಾಶದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ ಅದರ ಸಂರಕ್ಷಣೆಗೆ ಮುಂದಾಗುವವರು ಮಾತ್ರ ಕೆಲವೇ ಕೆಲವರು. ಅಂತಹ ಪರಿಸರ ಸಂರಕ್ಷರಲ್ಲಿ ಒಬ್ಬರು ಕೇರಳದ ಆಟೋ ಡ್ರೈವರ್ ಶ್ಯಾಮ್ ಕುಮಾರ್.
ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದ ಇವರನ್ನು ವೃಕ್ಷಾರ್ಯುವೇದಂ ಎಂಬ 2 ಸಾವಿರ ವರ್ಷಗಳ ಹಳೆಯ ಪುಸ್ತಕ ಅಪ್ಪಟ ಪರಿಸರ ಪ್ರೇಮಿಯನ್ನಾಗಿ ಬದಲಾಯಿಸಿತು. ಈ ಪುಸ್ತಕದ ಮೂಲಕ ಅವರು ವಿವಿಧ ಮರಗಳ ಮತ್ತು ಅರಣ್ಯಗಳ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿದುಕೊಂಡರು. ತಕ್ಷಣವೇ ಅವರು ಅರಣ್ಯವನ್ನು ಸಂರಕ್ಷಿಸಲೇ ಬೇಕು, ಅದಕ್ಕೆ ನಾನು ಏನಾದರು ಮಾಡಲೇ ಬೇಕೆಂಬ ಪಣತೊಟ್ಟರು.
ಪಲಕ್ಕಾಡ್ನ ತೆನ್ಕುರೀಸಿ ಗ್ರಾಮದಲ್ಲಿ ವಾಸಿಸಿರುವ ಇವರು ತಮ್ಮ ಗ್ರಾಮಕ್ಕೆ ಯಾವೆಲ್ಲಾ ಮರಗಳನ್ನು ಬೆಳೆಸಬಹುದು ಎಂಬ ಬಗ್ಗೆ ಸಂಶೋಧನೆಗಳನ್ನು ಕೈಗೊಂಡರು. ತನ್ನ ಗ್ರಾಮದಲ್ಲಿ ಸಾಮಾನ್ಯವಾಗಿ ಕಂಡು ಬರುವ ಪ್ರಾಣಿ, ಪಕ್ಷಗಳಿಗೆ ಯಾವ ಮರ ಉತ್ತಮ ಎಂಬುದನ್ನು ಅರಿತುಕೊಂಡು ಅದರಂತೆ ತಮ್ಮ ಮನೆಯ ಸುತ್ತಮುತ್ತ ನೆರಳು, ಹಣ್ಣುಗಳನ್ನು ನೀಡುವ ಗಿಡಗಳನ್ನು ನೆಡಲು ಆರಂಭಿಸಿದರು. ಈ ಗಿಡ ಮರವಾಗಿ ಬೆಳೆಯುತ್ತಿದ್ದಂತೆ ಅಪಾರ ಸಂಖ್ಯೆಯ ಪಕ್ಷಿಗಳು ಇದರತ್ತ ಆಕರ್ಷಿತಗೊಳ್ಳುತ್ತಿರುವುದನ್ನು ಅವರು ನೋಡಿ ಪುಳಕಿತಗೊಂಡರು.
ಇದೀಗ ಇವರು ಗಿಡಗಳನ್ನು ನೆಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದು, ಪತ್ನಿ ಮತ್ತು ಮಕ್ಕಳು ಸಾಥ್ ನೀಡುತ್ತಾರೆ. ಗಿಡ ತುಸು ಬೆಳೆಯುತ್ತಿದ್ದಂತೆ ಅದಕ್ಕೆ ಪ್ಲಾಸ್ಟಿಕ್ ಬಾಟಲ್ ಕಟ್ಟಿ ಸಣ್ಣ ಹೋಲ್ ಮಾಡುತ್ತಾರೆ. ಅದರ ಮುಖೇನ ನೀರು ಕೆಳಕ್ಕೆ ಹರಿದು ಮಣ್ಣನ್ನು ತೇವವಾಗಿಡುತ್ತದೆ. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ.
ಶ್ಯಾಮ್ ಅವರನ್ನು ನೋಡಿ ಪ್ರೇರಣೆ ಪಡೆದು ಗ್ರಾಮದ ಇತರರೂ ಗಿಡಗಳನ್ನು ನೆಡಲು ಆರಂಭಿಸಿದ್ದಾರೆ. ಅದಕ್ಕಾಗಿ ಶ್ಯಾಮ್ ಅವರ ಸಲಹೆ ಸೂಚನೆಗಳನ್ನು ಪಡೆಯುತ್ತಾರೆ. ಇದೀಗ ಇವರ ಗ್ರಾಮದ ೧೫ ಕಿಲೋಮೀಟರ್ ಸುತ್ತಮುತ್ತ 23 ಸಾವಿರಕ್ಕೂ ಅಧಿಕ ಮರಗಳಿವೆ.
8 ವರ್ಷಗಳ ಹಿಂದೆ ಸ್ವಂತ ಆಟೋ ಖರೀದಿಸಿರುವ ಇವರು ಅದರ ಮೇಲೂ ಇಂಗ್ಲೀಷ್ ಮತ್ತು ಮಲಯಾಳಂನಲ್ಲಿ ನೀರು ಉಳಿಸಿ, ಮರ ಉಳಿಸಿ ಎಂದು ಬರೆಸಿಕೊಂಡಿದ್ದಾರೆ. ಅಲ್ಲದೇ ಆಟೋದಲ್ಲಿ ನೀರಿನ ಕ್ಯಾನ್ನ್ನು ಇಟ್ಟುಕೊಂಡು ಹೋಗುವ ದಾರಿಯಲ್ಲಿ ಸಿಗೂ ಗಿಡಗಳಿಗೆ ನೀರುಣಿಸುತ್ತಾರೆ.
ಅಲ್ಲದೇ ಬೇಸಿಗೆಯ ಉರಿ ಪಕ್ಷಿಗಳನ್ನು ಕಂಗೆಡಿಸಿದ ಅವುಗಳಿಗೆ ನೀರು ಸಿಗುತ್ತಿಲ್ಲ ಎಂಬುದನ್ನು ಅರಿತ ಇವರು ನೀರಿನ ಪಾತ್ರೆಗಳನ್ನು ಅಲ್ಲಲ್ಲಿ ಇಟ್ಟಿದ್ದಾರೆ. ಪಕ್ಷಿಗಳು ತಿನ್ನುವ ಆಹಾರವನ್ನೂ ಮತ್ತೊಂದು ತಟ್ಟಿಯಲ್ಲಿ ಇಡುತ್ತಾರೆ. ಇದರಿಂದಾಗಿ ಅಪಾರ ಸಂಖ್ಯೆಯ ಪಕ್ಷಿಗಳು ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿವೆ.
ಇವರ ಈ ಪರಿಸರ ಪ್ರೇಮವನ್ನು ಕಂಡು ಸ್ವತಃ ಕೊಚ್ಚಿನ್ನಲ್ಲಿನ ಹೈಕೋರ್ಟ್ ಜಡ್ಜ್ ಅವರೇ ಕೋರ್ಟ್ ಸಮೀಪದ ಮಂಗಳವನಂನಲ್ಲಿ ಗಿಡ ನೆಡಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಅಲ್ಲಿಗೆ ಹಲವಾರು ಗಿಡಗಳನ್ನು ಇವರು ಸಾಗಿಸಿ, ಪಕ್ಷಿಗಳಿಗೆ ಆಶ್ರಯ ಸಿಗುವಂತಹ ಮರಗಳನ್ನು ನೆಟ್ಟಿದ್ದಾರೆ.
ಈ ಅಪಾರ ಪರಿಸರ ಕಾಳಜಿಗಾಗಿ ಇವರಿಗೆ ವೃಕ್ಷಮಿತ್ರ, ವನಮಿತ್ರ, ಪ್ರಕೃತಿ ಮಿತ್ರ, ಹರಿತ ವ್ಯಕ್ತಿ ಮುಂತಾದ ಗೌರವ, ಸನ್ಮಾನಗಳು ಸಿಕ್ಕಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.