ಇಡೀ ಮನುಷ್ಯ ಕುಲಕ್ಕೆ ಆದರ್ಶಪುರುಷ ಶ್ರೀ ರಾಮಚಂದ್ರ ಅವನ ಜೀವನ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಭಗವಂತನಾದರೂ ಸ್ವತಃ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ.
ಅವನ ಒಂದಷ್ಟು ಗುಣಗಳನ್ನು ಮೆಲಕು ಹಾಕುವ ಮೂಲಕ ಆತ ಹೇಗೆ ಆದರ್ಶ ಪುರುಷನಾದ ಎಂಬುದನ್ನು ನೊಡೋಣ.
ವ್ಯಕ್ತಿ ಮತ್ತು ಸಮಾಜ ಇವರ ಜೀವನದಲ್ಲಿ ದುರ್ಗುಣಗಳ ಪ್ರಾಬಲ್ಯವು ಹೆಚ್ಚಾದರೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರ ದುಃಖಮಯ ಮತ್ತು ಒತ್ತಡಯುಕ್ತ ಜೀವನವನ್ನು ಬಾಳುತ್ತಾರೆ. ಇಂದು ನಮ್ಮೆಲ್ಲರ ಜೀವನದಲ್ಲಿ ಇದೇ ಆಗಿದೆ. ಇದಕ್ಕಾಗಿ ನಾವು ಶ್ರೀರಾಮನ ಆದರ್ಶ ಜೀವನ ಮತ್ತು ನಮ್ಮ ಜೀವನದಲ್ಲಿರುವ ವ್ಯತ್ಯಾಸವನ್ನು ತಿಳಿದುಕೊಳ್ಳೋಣ.
ಆದರ್ಶ ಪುತ್ರ
ಶ್ರೀರಾಮನು ತಂದೆ-ತಾಯಿಯ ಪ್ರತಿಯೊಂದು ಆಜ್ಞೆಯನ್ನು ಪಾಲಿಸುತ್ತಿದ್ದನು. ಅವರ ಆಜ್ಞೆಯನ್ನು ಕೂಡಲೇ ಕಾರ್ಯಗತಗೊಳಿಸುತ್ತಿದ್ದನು. ಆದ್ದರಿಂದಲೇ ನಾವು ಇಂದಿಗೂ ಶ್ರೀರಾಮನನ್ನು ‘ಆದರ್ಶಪುತ್ರ’ನೆಂದು ಕರೆಯುತ್ತೇವೆ. ಇಂದಿಗೂ ರಾಮ ಆದರ್ಶ ಪುತ್ರನೇ. ಪ್ರತಿ ತಾಯಿ ತನ್ನ ಮಗನಿಗೆ ಈ ಶ್ರೇಷ್ಠ ಗುಣಗಳನ್ನು ಧಾರೆಯೆರೆಯುತ್ತಾಳೆ.
ರಾಮನು ಆದರ್ಶ ಪುತ್ರನಾಗಿ, ಮರ್ಯಾದಾ ಪುರುಷೋತ್ತಮನಾಗಿ, ಒಬ್ಬ ಶ್ರೇಷ್ಠ ರಾಜನಾಗಿ ತನ್ನ ಪ್ರಜೆಗಳನ್ನು ಸದಾ ಕಾಪಾಡಿ ವಚನಪರಿಪಾಲಕನಾಗಿ ಜೀವನದ ಸುಖ ದುಃಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಅತ್ಯಂತ ಗಾಂಭೀರ್ಯದಿಂದ ಸರಳವಾಗಿ ಎಲ್ಲರಿಗೂ ಪ್ರಿಯನಾಗಿ ಮೆರೆದವನು.
ರಾಮ ರಾವಣರ ಯುದ್ಧ ಎಲ್ಲರಿಗೂ ಚಿರ-ಪರಿಚಿತ. ರಾವಣನ ಸಂಹಾರವಾದ ನಂತರದಲ್ಲಿ ರಾಜ್ಯ ಪಟ್ಟವನ್ನು ಯಾರಿಗೆ ಕಟ್ಟುತ್ತಾರೆ ಎಂಬ ಸಂದರ್ಭದಲ್ಲಿ ರಾಮನು ಹೇಳಿದ ಮಾತು ಇಂದಿಗೂ ಅನೇಕ ದೇಶ ಭಕ್ತರ ಮಂತ್ರವಾಗಿದೆ.
“ಅಪೀ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ|
ಜನನೀ ಜನ್ಮ ಭೂಮಿಸ್ಚ ಸ್ವರ್ಗಾದಪೀ ಗರೀಯಸಿ||”
ಲಂಕಾ ಎಷ್ಟೇ ಸ್ವರ್ಣದಿಂದ ಕೂಡಿದ ನಗರಿಯಾಗಿದ್ದರೂ ನನಗೂ ಲಕ್ಷ್ಮಣನಿಗೂ ಲಂಕೆಯು ಬೇಡ. ತಾಯಿ ಮತ್ತು ತಾಯಿ ನೆಲ ಸ್ವರ್ಗಕ್ಕಿಂತಲೂ ಮಿಗಿಲು.
ಇಂತಹ ಅತ್ಯಂತ ಉನ್ನತ ಜೀವನಾದರ್ಶಗಳನ್ನು ರಾಮನು ಸ್ವತಃ ಮನುಷ್ಯನಾಗಿಯೇ ಹುಟ್ಟಿ ಸಾಮಾನ್ಯ ಮನುಷ್ಯರಂತೆ ಬದುಕಿ ಎಲ್ಲರಿಗೂ ತೋರಿಸಿಕೊಟ್ಟರು.
ಆತನ ಆದರ್ಶವನ್ನು ಇಂದಿಗೂ ಜೀವಂತವಾಗಿಡಬೇಕೆಂದು ಪ್ರತೀ ವರ್ಷ ಚೈತ್ರಮಾಸದ ನವಮಿಯ ದಿನ ಅಂದರೇ ಆತ ಹುಟ್ಟಿದ ದಿನ ರಾಮನವಮಿ ಆಚರಿಸುವ ಮೂಲಕ ಪ್ರತಿಯೊಬ್ಬನಲ್ಲಿಯೂ ಈ ಗುಣಗಳು ಬೆಳೆಯಲಿ. ಈ ಮೂಲಕ ಭಾರತಾಂಬೆ ಮತ್ತೆ ವಿಶ್ವಮಾತೆಯಾಗಿ ಜಗದ್ಗುರುವಾಗಿ ಮೆರೆಯಲಿ ಎಂಬ ಭವ್ಯ ದಿವ್ಯ ಆಶಯ.
ರಾಮನವಮಿಯ ನಿಮಿತ್ತ ಶ್ರೀ ರಾಮನಂತಹ ಗುಣಗಳನ್ನು ಆಳವಡಿಸಿಕೊಂಡು ಆದರ್ಶ ಮತ್ತು ಆನಂದಮಯ ಜೀವನವನ್ನು ಬಾಳುವ ನಿಶ್ಚಯವನ್ನು ಮಾಡೋಣ. ಎಲ್ಲರಿಗೂ ಆದರ್ಶ ಪುರುಷ ಮರ್ಯಾದಾ ಪುರುಷೋತ್ತಮ ಸೀತಾಪತಿ ಶ್ರೀರಾಮಚಂದ್ರನ ಜನ್ಮದಿನದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.