ಧಾರವಾಡ: ಹೊಸಪೇಟೆ ಮಾದರಿಯಲ್ಲಿ ಧಾರವಾಡದಲ್ಲೂ ಬಯೋಲಾಜಿಕಲ್ ಪಾರ್ಕ್ ಸ್ಥಾಪಿಸುವ ಯೋಚನೆ ಸರ್ಕಾರದ ಮುಂದಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದರು.
ಇಲ್ಲಿನ ಕೆ.ಸಿ. ಪಾರ್ಕ್ ಬಳಿಯ ಅರಣ್ಯ ಇಲಾಖೆಯ ಆವರಣದಲ್ಲಿ ಅಂದಾಜು 8 ಕೋಟಿ ರೂಪಾಯಿಗಳ ವೆಚ್ಚದ ನೂತನ ಅರಣ್ಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವನ್ಯ ಮೃಗಗಳನ್ನು ಕೂಡಿ ಹಾಕಬಾರದು ಎಂಬ ವಾದವಿದೆ.ಇದೇ ವೇಳೆ ರಾಷ್ಟ್ರೀಯ ಪ್ರಾಣಿಸಂಗ್ರಹಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸುವುದು ಕಷ್ಟ. ಆದರೆ ವನ್ಯಮೃಗಗಳು ಮುಕ್ತವಾಗಿ ಸಂಚರಿಸುವುದನ್ನು ವೀಕ್ಷಿಸಲು ಅನುಕೂಲವಾಗುವ ರೀತಿಯಲ್ಲಿ ಹೊಸಪೇಟೆಯಲ್ಲಿ ಸುಂದರವಾಗಿ ಜೈವಿಕ ಉದ್ಯಾನ (ಬಯೋಲಾಜಿಕಲ್ ಪಾರ್ಕ್) ಸ್ಥಾಪಿಸಲಾಗಿದೆ. ಇದೇ ಮಾದರಿಯ ಬಯೋಲಾಜಿಕಲ್ ಪಾರ್ಕ್ನ್ನು ಧಾರವಾಡದಲ್ಲಿ ಸ್ಥಾಪಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಈ ಮೊದಲು ಧಾರವಾಡದಲ್ಲಿದ್ದ ಪ್ರಾಣಿಸಂಗ್ರಹಾಲಯವನ್ನು ಪುನಃ ಸ್ಥಾಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಚಿವರು ಪ್ರತಿಕ್ರಿಯಿಸಿದರು.
ಪರಿಸರವನ್ನು ಯಥಾವತ್ತಾಗಿ ಇರಿಸಲು ಇಲಾಖೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದು, ಇಲಾಖೆಯೊಂದಿಗೆ ಸಮಾಜವೂ ಕೈ ಜೋಡಿಸಬೇಕು. ಬರಗಾಲದ ಈ ಸಂದರ್ಭದಲ್ಲಿ ಎಲ್ಲರಿಗೂ ನೀರಿನ ಮಹತ್ವ ಅರಿವಾಗಿದ್ದು, ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಸಮಸ್ಯೆಯೇ ಬರದಂತೆ ತಡೆಯಬೇಕು. ಅದಕ್ಕಾಗಿ ನಾವು ಅರಣ್ಯ ಉಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಶಾಸಕರಾದ ಅರವಿಂದ ಬೆಲ್ಲದ, ಕರ್ನಾಟಕಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಆರ್.ಎಸ್.ಸುರೇಶ, ಕೆಎಫ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಜೆ.ಹೊಸಮಠ,ಅಪರ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಪುನಟಿ ಶ್ರೀಧರ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಎಂ.ಎಸ್.ಗೌಡರ, ಕೆ.ಸಿ.ಕೇಶವಮೂರ್ತಿ,ಅರಣ್ಯ ಅಕಾಡೆಮಿಯ ಎ.ರಾಧಾದೇವಿ,ಮುಖ್ಯ ಅರಣ್ಯಾಧಿಕಾರಿಗಳಾದ ಗೀತಾಂಜಲಿ,ಮಂಜುನಾಥ, ಸಹಾಯಕ ಅರಣ್ಯಾಧಿಕಾರಿ ಎಸ್.ಉಜ್ಜನಪ್ಪ ವೇದಿಕೆಯಲ್ಲಿದ್ದರು.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಡಿ. ಉದಪುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಬಾಕತ್ ಹುಸೇನ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.