ತಮಿಳುನಾಡಿನಲ್ಲಿ ಈ ಕ್ಷೇತ್ರವು ಶಿವ ಮತ್ತು ವಿಷ್ಣುವಿಗೆ ಪವಿತ್ರ ಮತ್ತು ದಿವ್ಯ ಸ್ಥಳವೆಂದು ಭಾವಿಸಲಾಗಿದೆ. ಹಿಂದೂಗಳ ಯಾತ್ರಾ ಸ್ಥಳ ಕೂಡಾ. ಶಂಖು ಆಕಾರವನ್ನು ಹೋಲುವ ಈ ಕ್ಷೇತ್ರವು ರಾಮಾಯಣ ಕಾಲದ ಹಿನ್ನೆಲೆ ಇದೆ.
ಶ್ರೀ ರಾಮೇಶ್ವರವು ಪಾಂಬನ್ಗೆ ಈಶಾನ್ಯ ಭಾಗವಾಗಿಯೂ ಧನುಷ್ಕೋಟಿಯು ಆಗ್ನೇಯ ಭಾಗವಾಗಿಯೂ ಸ್ಥಾಪಿತವಾಗಿದೆ. ಶ್ರೀ ಮಹಾವಿಷ್ಣುವು ರಾಮಾವತಾರ ತಾಳಿದಾಗ ಎರಡೂ ಕೈಗಳಲ್ಲಿ ಶಂಖ ಮತ್ತು ಚಕ್ರವಿತ್ತಲ್ಲವೆ? ಆದ್ದರಿಂದ ವಿಷ್ಣುವಿಗೆ ಪ್ರಿಯವಾದ ರಾಮೇಶ್ವರವು ಶಂಖು ಆಕಾರವನ್ನು ಹೋಲುತ್ತಿದೆ.
ಶ್ರೀ ರಾಮನು ಈಶ್ವರನನ್ನು ಪ್ರತಿಷ್ಠಾಪಿಸಿರುವುದರಿಂದ ಈ ಕ್ಷೇತ್ರಕ್ಕೆ ರಾಮೇಶ್ವರವೆಂದು ಕರೆಯುತ್ತಾರೆ. ಇಲ್ಲಿ ಭಗವಂತನನ್ನು ರಾಮೇಶ್ವರ, ರಾಮ ಲಿಂಗ,ರಾಮನಾಥ ಎಂದು ಕರೆಯುತ್ತಾರೆ. ಲಂಕಾಧಿಪತಿಯಾದ ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧಿಸಿದ್ದರಿಂದ ಆಕೆಯನ್ನು ರಕ್ಷಿಸಲು ಶ್ರೀ ರಾಮನು ರಾಮೇಶ್ವರದಿಂದ ಲಂಕೆಗೆ ಹೊರಟನೆಂದು ರಾಮಾಯಣ ಹೇಳುತ್ತದೆ. ರಾಮನು ಸಮುದ್ರ ದೇವನನ್ನು ಹನುಮಂತನಿಗೆ ದಾರಿ ಕೊಡೆಂದು ಕೇಳಿದಾಗ ಆಜಂನೇಯನು ವಾನರ ಸೈನ್ಯದ ಸಹಾಯದಿಂದ ದೊಡ್ಡ ದೊಡ್ಡ ಬಂಡೆಗಳಿಂದ ಸೇತುವೆ ನಿರ್ಮಿಸಿ ಲಂಕೆಗೆ ಮಾರ್ಗ ಏರ್ಪಡಿಸಿದನು. ರಾಮನು ಸೀತೆಯನ್ನು ಬಿಡಿಸಿ ನಂತರ ಸೀತೆಯೊಂದಿಗೆ ರಾಮೇಶ್ವರಕ್ಕೆ ಬಂದು ರಾವಣನನ್ನು ಕೊಂದ ಬ್ರಹ್ಮಹತ್ಯಾ ಪಾಪ ತೊಲಗಿಸೆಂದು ಶಿವನನ್ನು ಪ್ರಾರ್ಥಿಸಿದನು.
ರಾಮನಾಥನ ಪ್ರತಿಷ್ಠೆಗೆ ಕೈಲಾಸ ಪರ್ವತದಿಂದ ಶಿವ ಲಿಂಗವನ್ನು ತರಲು ರಾಮನಾಜ್ಞೆಯಂತೆ ಹೊರಟ ಹನುಮಂತ. ಅವನು ಬರುವಷ್ಟರಲ್ಲೆ ಸೀತಾ ಮಾತೆಯು ಮರಳಿನ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿ ಅದು ಗಟ್ಟಿಯಾಗಿ ಅಲ್ಲೆ ನೆಲೆನಿಂತಿತು. ಇತ್ತ ಹನುಮಂತ ಕುಪಿತಗೊಂಡು ಲಿಂಗವನ್ನು ಛಿದ್ರಗೊಳಿಸುವಲ್ಲಿ ವಿಫಲನಾದಾಗ ರಾಮನು ಸಂತೈಸಿ, ನೀನು ತಂದ ಲಿಂಗಕ್ಕೆ ಮೊದಲ ಪೂಜೆ ಇದು ವಿಶ್ವಲಿಂಗವೆಂದೂ, ಸೀತಾ ದೇವಿಯಿಂದ ನೆಲೆಗೊಂಡ ಲಿಂಗಕ್ಕೆ ರಾಮ ಲಿಂಗವೆಂದೂ ಕರೆಯಲ್ಪಡುತ್ತದೆ ಎಂದನಂತೆ.
ವಿಶ್ವ ಲಿಂಗ ದೇವಾಲಯವು ರಾಮ ಲಿಂಗ ದೇವಾಲಯಕ್ಕೆ ಉತ್ತರದಲ್ಲಿದೆ. ವಿಶಾಲಾಕ್ಷಿ ಗುಡಿಯೂ ಪಕ್ಕದಲ್ಲಿ ಇದೆ. ಏಕ ಕಾಲದಲ್ಲಿ ಪೂಜೆ ನಡೆಯುತ್ತದೆ. ಈಶ್ವರ ಮತ್ತು ದೇವಿಯ ಬಂಗಾರದ ವಿಗ್ರಹಗಳು ರಾತ್ರಿ ಪೂಜೆಯ ನಂತರ ಪ್ರಾಕಾರವನ್ನು ಸುತ್ತಿ ವಿಶಾಲಾಕ್ಷಿ ಗುಡಿಯಲ್ಲಿ ಉಯ್ಯಾಲೆ ಸೇವೆ ಪಡೆಯುತ್ತದೆ. ಇಲ್ಲಿ ಅಷ್ಟ ಲಕ್ಷ್ಮಿ, ಸಂತಾನ ಗಣಪತಿ, ನಟರಾಜ ಸ್ವಾಮಿ,ಆಂಜನೇಯ ಸ್ವಾಮಿ ದೇವರುಗಳನ್ನು ಕಾಣಬಹುದು. ದೇವರ ಗುಡಿಗೆ ಎದುರಾಗಿ ವಿಶಾಲವಾದ ಹಜಾರ.
ನಂದಿ ವಿಗ್ರಹ
ಒಳಕ್ಕೆ ಹೋಗುವಾಗ ದಾರಿಯಲ್ಲಿ ೧೨ ಅಡಿ ಉದ್ದ ೯ ಅಡಿ ಎತ್ತರವಾದ ನಂದಿ ವಿಗ್ರಹವನ್ನು ದೇವರಿಗೆ ಎದುರಾಗಿ ನಿರ್ಮಿಸಿದ್ದಾರೆ. ಇದನ್ನು ಶಂಖ, ಪಾಷಾಣ ಪುಡಿಯಿಂದ ಮಾಡಿದ್ದಾರೆ. ನಂದಿಯ ಹಿಂದೆ ಧ್ವಜ ಸ್ಥಂಭವೂ ಇದೆ. ಮೂರ್ತ, ಸ್ಥಳ, ತೀರ್ಥ ಈ ಮೂರೂ ಲಕ್ಷಣಗಳೂ ಈ ಕ್ಷೇತ್ರದಲ್ಲಿ ಕಂಡುಬರುತ್ತದೆ. ನಮ್ಮ ದೇಶದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ರಾಮೇಶ್ವರವೂ ಒಂದು.
ಈ ಕ್ಷೇತ್ರವು ಆಳವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ಪಂಬನ್ ರೈಲ್ವೆ ಸ್ಟೇಷನ್ನನ್ನು ಮತ್ತು ಮಂಟಪಂ ರೈಲ್ವೆ ಸ್ಟೇಷನ್ನನ್ನು ಸೇರಿಸಲು ಬ್ರಿಟಿಷರ ಕಾಲದ ಅತ್ಯಂತ ಉದ್ದವಾದ ಸೇತುವೆ ಇದೆ. ಈ ಕ್ಷೇತ್ರಕ್ಕೆ ಹೋಗುವಾಗ ಇದರ ಮೇಲೆ ವಾಹನ ಸಾಗುತ್ತಿದ್ದರೆ ಒಮ್ಮೆ ಇಳಿದು ನೋಡದೆ ಮುಂದಡಿಯಿಡಲಾರಿರಿ. ಎರಡೂ ಕಡೆ ದಟ್ಟ ನೀಲ ನೀರು, ಸ್ವಚ್ಚಂದ ಆಕಾಶ, ಸಮತಟ್ಟಾದ ಹಾದಿ. ವಾವ್! ಸೂಯರ್ಯಾಸ್ತಮಾನ ಅಥವಾ ಸೂರ್ಯೋದಯದಲ್ಲಿ ಅದೆಷ್ಟು ರುದ್ರ ರಮಣೀಯವಾಗಿರುವುದೊ ವರ್ಣಿಸಲಸಾಧ್ಯ.
ಶ್ರೀ ಕ್ಷೇತದಲ್ಲಿ ದೇವರಿಗೆ ಬೆಳಗಿನ ಜಾವ ನಾಲ್ಕು ಗಂಟೆಗೆ ದೇವರ ಸನ್ನಿಧಿಯಲ್ಲೇ ಹಸುವಿನ ಹಾಲು ಕರೆದು ಅಭಿಷೇಕ ಮಾಡಲಾಗುತ್ತದೆ. ದೀಪಾರಾಧನೆ ನಡೆಯುತ್ತದೆ. ಭಕ್ತರು ದರ್ಶನಕ್ಕೆ ಆಗಲೇ ತಂಡೋಪತಂಡವಾಗಿ ಬರಲು ಶುರು ಮಾಡುತ್ತಾರೆ. ಭಕ್ತರಿಗೆ ಬೆಳಗಿನ ಆರು ಗಂಟೆಗೆ ದೇವಸ್ಥಾನದ ಪ್ರಾಂಗಣದೊಳಗಿರುವ 22ತೀರ್ಥಗಳ ಸ್ನಾನದ ವ್ಯವಸ್ಥೆಯಿದೆ. ಆ ತೀರ್ಥಗಳ ಹೆಸರು ಹೀಗಿವೆ ;
1. ಮಹಾಲಕ್ಷ್ಮಿ ತೀರ್ಥ, 2. ಸಾವಿತ್ರಿ ತೀರ್ಥ, 3 ಗಾಯತ್ರಿ ತೀರ್ಥ, 4. ಸರಸ್ವತಿ ತೀರ್ಥ 5. ಸೇತು ಮಾಧವ ತೀರ್ಥ 6. ಗಂಧ ಮಾಧವ ತೀರ್ಥ 7. ಕವಚ ತೀರ್ಥ 8. ಗವಯ ತೀರ್ಥ 9.ಸಳ ತೀರ್ಥ 10.ನೀಲ ತೀರ್ಥ 11.ಶಂಕರ ತೀರ್ಥ 12.ಚಕ್ರ ತೀರ್ಥ 13. ಬ್ರಹ್ಮ ಹತ್ಯಾ ಪಾತಕ ವಿಮೋಚನಾ ತೀರ್ಥ 14. ಸೂರ್ಯ ತೀರ್ಥ 15. ಚಂದ್ರ ತೀರ್ಥ 16. ಗಂಗಾ ತೀರ್ಥ 17. ಯಮುನಾ ತೀರ್ಥ 18.ಗಯಾ ತೀರ್ಥ 19.ಶಿವ ತೀರ್ಥ 20. ಸತ್ಯಾಮೃತ ತೀರ್ಥ 21. ಸರ್ವ ತೀರ್ಥ 22.ಕೋಟಿ ತೀರ್ಥ.
ಪ್ರತಿಯೊಂದು ತೀರ್ಥದಲ್ಲೂ ತಲೆಯ ಮೇಲೆ ನೀರು ಹಾಕಿಸಿಕೊಳ್ಳುತ್ತಾ ಸಾಗಿದಂತೆ ಮನಸ್ಸು ಪ್ರಶಾಂತವಾದಂತೆ ಭಗವಂತನಲ್ಲಿ ಭಕ್ತಿಯು ತನ್ನಷ್ಟಕ್ಕೆ ಉದ್ಭವ ಆಗುವುದಂತೂ ದಿಟ. ಇಡೀ ದೇಹ ತಣ್ಣೀರ ಅಭಿಷೇಕ. ಮನಸ್ಸಿನ ಕಾಮನೆಗಳು ದೂರ ತಳ್ಳಿ ಸಮರ್ಪಣಾ ಭಾವದೆಡೆಗೆ ತನು ಬಾಗುವ ಪರಿ ಇಲ್ಲಿ ಬಂದು ಅನುಭವಿಸಿಯೇ ಅರಿಯಬೇಕು. ಕೊನೆಯ ತೀರ್ಥ ಕೋಟಿ ತೀರ್ಥದಲ್ಲಿ ಸ್ನಾನವಾದ ನಂತರ ಸರತಿ ಸಾಲಿನಲ್ಲಿ ಸ್ಪಟಿಕ ಲಿಂಗದ ರೂಪಿ ಆ ಮಹಾ ಶಿವನ ದರ್ಶನ.
ಗರ್ಭ ಗುಡಿಯ ಹೊರಗಿನಿಂದ ಶಿವಲಿಂಗ ದರ್ಶನ. ಹಳೆಯ ಕಾಲದ ದೇವಸ್ಥಾನದ ಗರ್ಭ ಗುಡಿ ನಿರಾಭರಣ ಸುಂದರಿ. ದ್ರಾವಿಡ ಶಿಲ್ಪಕ್ಕೆ ಗುರುತಾಗಿ ದೇವಾಲಯವು ನಿಂತಿದೆ. ದ್ವೀಪದ ಒಂದು ಸಮುದ್ರ ತೀರದಲ್ಲಿ ಮೂರು ಮಂಟಪಗಳಿವೆ. ದೇವಾಲಯವು 865 ಅಡಿ ಉದ್ದ 657 ಅಡಿ ಅಗಲ 49 ಅಡಿ ಎತ್ತರವನ್ನು ಹೊಂದಿದೆ. ಗ್ರಾನೈಟ್ ಕಲ್ಲಿನಿಂದ ಕಟ್ಟಲ್ಪಟ್ಟಿದೆ. ದೇವಾಲಯದ ಪಕ್ಕದ ಮೂರು ಮಂಟಪಗಳು ೪೦೦೦ ಅಡಿಗಳ ಉದ್ದ ಹೊಂದಿರುವುದರಿಂದ ಪ್ರಪಂಚದ ಅದ್ಭುತದಲ್ಲಿ ಸೇರಿದೆ. ಮಂಟಪಕ್ಕೆ 5 ಅಡಿ ಎತ್ತರ, ಅದರ ಮೇಲಿನ ಸ್ಥಂಭಗಳು 25 ಅಡಿಗಳು. ದೇವಾಲಯದ ಮಂಟಪವು 1200 ಸ್ಥಂಭಗಳ ಭಾರವನ್ನು ಹೊತ್ತಿದೆ. ಪೂರ್ವ ಗೋಪುರ 130 ಅಡಿ ಎತ್ತರ ಮತ್ತು ಪಶ್ಚಿಮ ಗೋಪುರ 80 ಅಡಿ ಎತ್ತರವದೆ. ಸೀತಾ ರಾಮರು ಪ್ರತಿಷ್ಠಾಪಿಸಿದ ಲಿಂಗಗಳು ಮೊದಲಿನಂತೆಯೆ ಇವೆ. 12 ನೆ ಶತಮಾನದ ಈ ದೇವಾಲಯವನ್ನು ಕಾಲಾ ನಂತರ ಭಕ್ತರು ಅಭಿಮಾನಿಗಳು ವಿಸ್ತೀರ್ಣವಾದ ಗರ್ಭ ಗುಡಿಯನ್ನು ಕಟ್ಟಿಸಿದರೆಂದು ಚರಿತ್ರೆ ಹೇಳುತ್ತದೆ. ಈ ದೇವಾಲಯದಲ್ಲಿ ಶ್ರೀ ಚಕ್ರವಿದೆ. ಪ್ರತಿ ಶುಕ್ರವಾರ ಬಂಗಾರದ ಪಲ್ಲಕ್ಕಿಯಲ್ಲಿ ತಾಳ ಮೇಳದೊಂದಿಗೆ ಮೆರವಣಿಗೆ ನಡೆಯುತ್ತದೆ.
ದೇವಾಲಯದ ನೂರು ಮೀಟರ್ ದೂರದಲ್ಲಿ ಸಮುದ್ರವಿದೆ. ಗುಡಿಯ ಮುಖ್ಯ ದ್ವಾರ ಸಮುದ್ರದ ಕಡೆಗಿದೆ. ಇಲ್ಲಿಯ ನೀರಿಗೆ ಅಗ್ನಿ ತೀರ್ಥವೆಂದು ಹೆಸರು.
ಮುಂದುವರಿಯುವುದು ಭಾಗ- 3 ರಲ್ಲಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.