ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಏನು ಎಂದು ಕೇಳಿದರೆ ಅದಕ್ಕೆ ಉತ್ತರಿಸುವಷ್ಟು ಯೋಗ್ಯತೆ ಬಹುಶಃ ಇಲ್ಲದಿದ್ದರೂ ಅದನ್ನು ವ್ಯಕ್ತಪಡಿಸುವುದು ಕಷ್ಟವೇ. ಸ್ವಾತಂತ್ರ್ಯ ಸಂಗ್ರಾಮವಿರಬಹುದು ಅಥವ ಭಾರತದ ನಿರ್ಮಾಣವಿರಬಹುದು ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯ ಪಾತ್ರ ಅತ್ಯಪಾರ.
ಪ್ರಸ್ತುತ ಸಮಾಜವು ಸಮಾಜಮುಖಿಯಾಗಿದ್ದು ಮಾಧ್ಯಮಗಳು ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹೆಣ್ಣು ಈ ಜಗತ್ತಿನ ಕಣ್ಣು ಆಕೆಯನ್ನು ನಾವು ಹೇಗೆ ಬಿಂಬಿಸುತ್ತೇವೆಯೋ ಸಮಾಜ ಅವಳನ್ನು ಹಾಗೆ ಕಾಣುತ್ತದೆ. ಮಾಧ್ಯಮ ಇದರಲ್ಲಿ ಒಂದು ಪ್ರಮುಖ ಅಂಶವಾಗಿದೆ.
ಮಾಧ್ಯಮಗಳಲ್ಲಿ ಮಹಿಳೆಯನ್ನು ಬಿಂಬಿಸುವ ಪಾತ್ರ ಇಂದು ಅತ್ಯಂತ ಮುಖ್ಯ ಸಂಗತಿಯಾಗಿದೆ.
ಮಾಧ್ಯಮಗಳನ್ನು ಕಾನೂನು ಮೂಲಕ ನಿಯಂತ್ರಿಸುವ ಬದಲು ಮಾಧ್ಯಮಗಳು ತಮ್ಮ ಮೇಲೆಯೇ ಲಕ್ಷ್ಮಣರೇಖೆ ಹಾಕಿಕೊಳ್ಳಬೇಕಾದ ಅಗತ್ಯವಿದೆ ಹಾಗು ಅತ್ಯಂತ ಅವಶ್ಯಕವಾದ ಸಂಗತಿಯಾಗಿದೆ.
ಅನಾರೋಗ್ಯಕರ ಪೈಪೋಟಿಯ ಕಾರಣದಿಂದ ಮಹಿಳೆಯರ ವಿಚಾರದಲ್ಲಿ ಮಾಧ್ಯಮಗಳು ಸಾಮಾಜಿಕ ಬದ್ಧತೆಯನ್ನು ಮೀರುತ್ತಿದ್ದಾರೆ. ಇದು ಮಾಧ್ಯಮಗಳ ಆಂತರಿಕ ಜವಾಬ್ದಾರಿಯೇ ಹೊರತು ಇಲ್ಲಿ ಬಾಹ್ಯ ಶಕ್ತಿ ಏನೂ ಮಾಡಲಾಗದು.
ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುತ್ತಿರುವುದಕ್ಕೆ ಮಾಧ್ಯಮಗಳು ಮಾತ್ರ ಕಾರಣವಲ್ಲ ಎಂಬುದೂ ಒಂದು ಅಂಶ. ಮಾಧ್ಯಮಗಳ ಮೇಲೆ ವಾಣಿಜ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಭಾವವೂ ದಟ್ಟವಾಗಿದೆ. ಪ್ರಸ್ತುತ ಯಾಂತ್ರೀಕರಣದ ಜೀವನದಲ್ಲಿ ನಮ್ಮ ಪರಂಪರೆಯನ್ನು ನಾವು ಮರೆತಿರುವುದು ಈ ಸಮಸ್ಯೆಗಳು ಬೆಳೆಯಲು ಕಾರಣವಾಗಿದೆ. ಟಿ.ಆರ್.ಪಿ.ಯ ಪೆಡಂಭೂತದ ಕಾರಣದಿಂದಾಗಿ ಮಾಧ್ಯಮಗಳು ತಮ್ಮ ಮೂಲ ಕರ್ತವ್ಯವನ್ನು ಮರೆತಿರುವಂತಿದೆ. ಅನೇಕ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ.
ಸುದ್ದಿಯ ವ್ಯಾಮೋಹಕ್ಕೆ ಬಿದ್ದ ಕೆಲವು ಮಾಧ್ಯಮಗಳು ಮಾನವೀಯತೆಯನ್ನು ಮರೆಯುತ್ತಿವೆ. ಆದ ಕಾರಣ ಮಹಿಳಾ ದೌರ್ಜನ್ಯ ವೈಭವೀಕರಿಸುತ್ತುವೆ. ಮಾಧ್ಯಮಗಳು ಪ್ಯಾಷನ್ ಜಗತ್ತಿಗೆ ನೀಡುವ ಮಹತ್ವವನ್ನು ಮಹಿಳೆಯರ ಸಮಸ್ಯೆಗಳಿಗೆ ನೀಡುತ್ತಿಲ್ಲ. ಮಹಿಳೆಯ ಮೂಲಭೂತ ಸಮಸ್ಯೆಗಳನ್ನು ಅದರ ಪರಿಹಾರವನ್ನು ತೋರಿಸಿಕೊಡಬೇಕಿದ್ದ ಮಾಧ್ಯಮಗಳು ಟಿ.ಆರ್.ಪಿ.ಗಾಗಿ ಅಗತ್ಯವಿಲ್ಲದ ವಿಷಯವನ್ನೇ ದಿನವಿಡೀ ತೋರಿಸುತ್ತಿದ್ದಾರೆ. ಅಶ್ಲೀಲತೆ ತುಂಬಿದ ಜಾಹಿರಾತುಗಳು, ಹೆಣ್ಣನ್ನು ತುಚ್ಛವಾಗಿ ತೋರುವ ಸೀರಿಯಲ್-ಸಿನಿಮಾ ಕಡಿಮೆಯಾಗಬೇಕಿದೆ. ಇಂತಹ ಅಸಭ್ಯತೆ ಮೊದಲು ದೂರವಾಗಿ ನಮ್ಮ ಸಭ್ಯ ಸಮಾಜವನ್ನು ಕೆಡಿಸುವ ಪ್ರಯತ್ನ ನಿಲ್ಲಬೇಕಿದೆ.
ಮಾಧ್ಯಮಗಳು ಜನರಿಗೆ ಗುಣಮಟ್ಟದ ಸಮಾಜಮುಖಿಯಾದ ವಿಷಯವನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನಮಾಡಬೇಕೆ ಹೊರತು ಮಹಿಳೆಯರನ್ನು ಟಿ.ಆರ್.ಪಿ.ಗೆ ಬಳಸಬಾರದು.
ಇಂದು ಯಾವುದೇ ಚಿತ್ರನಟರ ಮದುವೆ ಮುಂಜಿ ಇತ್ಯಾದಿ ಕಾರ್ಯಕ್ರಮ ಇರಬಹುದು ಅದನ್ನು ಇಡೀ ದಿನ ತೋರಿಸುವ ಅವಶ್ಯಕತೆ ಏನಿದೆ. ಅದರಿಂದ ಸಿಗುವ ಪ್ರಯೋಜನವಾದರೂ ಏನು ಎಂಬುದನ್ನು ಚಿಂತಿಸುವುದು ಒಳಿತು.
ಮಾಧ್ಯಮಗಳ ಹೊಣೆಗಾರಿಕೆ ಯಾವುದೆಂದರೆ:
1) ಹೆಣ್ಣಿನ ದೇಹದ ಸೌಂದರ್ಯದ ಸುದ್ದಿಗಳ ಬದಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರ ಕುರಿತ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು.
2) ಮಹಿಳೆಯ ಅಶ್ಲೀಲ ಚಿತ್ರವನ್ನು ಪ್ರಕಟಿಸುವುದನ್ನು ನಿಲ್ಲಿಸಬೇಕು.
3) ಟಿ.ಆರ್.ಪಿ.ಗೆ ಒತ್ತು ಕೊಡದೆ ಸಮಸ್ಯೆಯ ಪರಿಹಾರ ಹಾಗು ವಿಷಯದ ನಿಖರತೆಯನ್ನು ತೋರಿಸಬೇಕು.
4) ಅನಾವಶ್ಯಕ ವಿಷಯಗಳ ಚರ್ಚೆಯ ಬದಲು ಸಕಾರಾತ್ಮಕ ಚಿಂತನೆಯಾಗಬೇಕು.
5) ರಿಯಾಲಿಟಿ ಶೋ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಆಗಬೇಕೆ ಹೊರತು ಹಣ ಲೂಟಿ ಹಾಗು ಸಮಾಜದ ವ್ಯವಸ್ಥೆ ಕೆಡಬಾರದು.(ಬಿಗ್ ಬಾಸ್)ನಂತಹ ಕಾರ್ಯಕ್ರಮದ ಅವಶ್ಯಕತೆ ನಮಗೆ ಇದೆಯಾ ಎಂಬುದು ಚಿಂತಿಸಬೇಕಾದ ವಿಚಾರ.
ರಾಜಕೀಯದವರ ಜಗಳ ಸಿನಿಮಾದವರ ದೈನಂದಿನ ರಂಗು ಬಿಟ್ಟು ಸಮಾಜದಲ್ಲಿ ಉನ್ನತ ಸಾಧನೆ ಮಾಡಿ ಮಾರ್ಗದರ್ಶಿಗಳಾಗಿ ಬದುಕುತ್ತಿರುವವರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕಾಗಿದೆ.
ನಮ್ಮ ಯುವಜನತೆಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕಾದ ಈ ಮಾಧ್ಯಮಗಳು ಹಾಗು ಪತ್ರಿಕೆಗಳು ಈಗ ನಮ್ಮ ಪೀಳಿಗೆಯನ್ನು ಹಾದಿತಪ್ಪಿಸುತ್ತಿರುವುದನ್ನು ಬಿಟ್ಟು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮುಖ್ಯಪಾತ್ರವನ್ನು ವಹಿಸಬೇಕು.
ಆರೋಗ್ಯಪೂರ್ಣ ಸದೃಢ, ಸಶಕ್ತ ಯುವಜನಾಂಗವನ್ನು ನಿರ್ಮಿಸುವ ಹೊಣೆ ಮಾಧ್ಯಮದ ಮೇಲೂ ಇದೆ.
ಮಹಿಳೆಯ ಕೀರ್ತಿ ಸಾಧನೆ ಎಲ್ಲಾ ಮೂಲೆಯಲ್ಲೂ ಹರಡಬೇಕು ಇದಕ್ಕೆ ಮಾಧ್ಯಮಗಳ ಸಹಕಾರವೂ ಅತ್ಯಾವಶ್ಯಕ. ಹೆಣ್ಣು ಈ ಜಗತ್ತಿಗೆ ಕಣ್ಣು ಆಕೆಯನ್ನು ಉನ್ನತ ಸ್ಥಾನದಲ್ಲಿಡುವ ಪ್ರಯತ್ನ ಆಗಬೇಕು.
ಹೆಣ್ಣು ಎಂಬ ಈ ದೀಪ ಪ್ರಜ್ವಲವಾಗಿ ಬೆಳಗಬೇಕು. ಮತ್ತೆ ಆಕೆ ದುರ್ಗೆಯಾಗಿ ಸರ್ವಶಕ್ತಿವಂತಳಾಗಿ ತಾಯಿ ಭಾರತಿಯು ವಿಶ್ವಮಾತೆಯಾಗಿ ಜಗದ್ಗುರುವಿನ ಸ್ಥಾನವನ್ನು ಅಲಂಕರಿಸಲಿ. ಆಕೆ ಮತ್ತೆ ವಿಶ್ವಗುರುವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.