ಹುಬ್ಬಳ್ಳಿ: ನಗರದ ಸತ್ವರೂಪ ಫೌಂಡೇಶನ್ ಇವರ ಸಂಸ್ಕೃತಿ ಕಾಲೇಜಿನ ವಿಜುವಲ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ 2016-17 ನೇ ಸಾಲಿನ ರಂಗಶಿಕ್ಷಣ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ನಾಟಕ ಹದ್ದು ಮೀರಿದ ಹಾದಿ ಇತ್ತೀಚೆಗೆ ಪ್ರದರ್ಶನಗೊಂಡಿತು.
ಹಿಂದಿಯ ಪ್ರಸಿದ್ಧ ನಾಟಕಕಾರ ಭರತೇಂದು ಹರಿಶ್ಚಂದ್ರರನ್ನು ಕುರಿತಾದ ನಾಟಕ ಎನ್ನಲಾಗಿದ್ದು, ಇದರ ರಚನೆಕಾರ ಪ್ರಸನ್ನ. ಕಾಶಿ ನಗರದ ಹಿನ್ನೆಲೆಯಲ್ಲಿ ಸಾವು ಮತ್ತು ಪ್ರೀತಿಯ ನಾಟಕ ಈ ಹದ್ದು ಮೀರಿದ ಹಾದಿ.
ಕಾಶಿಯಲ್ಲಿ ನಡೆಯುವ ಈ ನಾಟಕದಲ್ಲಿ ಇಡೀ ಕಾಶಿಯೇ ರೂಪಕವಾಗಿ ಬರುತ್ತದೆ. ಪ್ರೀತಿ, ಪ್ರೇಮ, ಪ್ರಣಯ, ಸಾವು, ಸಂಭೋಗ, ಬದುಕು, ಕಳ್ಳತನ, ಲಂಪಟತನ ಎಲ್ಲವೂ ಈ ಕಾಶಿಯ ಹಿನ್ನೆಲೆಯಲ್ಲೇ ನಡೆಯುತ್ತದೆ. ನಾಟಕಕಾರ ಭರತೇಂದುವನ್ನು ಮೃತ್ಯು ಆವರಿಸಿಕೊಳ್ಳುತ್ತದೆ. ವೈವಿಧ್ಯಮಯ ವ್ಯಕ್ತಿತ್ವದ ಭರತೇಂದುವನ್ನು ಮೃತ್ಯು ಭೇಟಿಮಾಡುತ್ತದೆ. ಅದು ಅವನನ್ನು ಕರೆದೊಯ್ಯಲೂ ಸಹ ಬಂದಿರುತ್ತದೆ. ಅವರಿಬ್ಬರ ನಡುವೆ ನಡೆವ ಪಗಡೆಯಾಟ ನಿರ್ಣಾಯಕ. ಕಡೆಗೆ ಈ ಸ್ಫರ್ಧೆಯಲ್ಲಿ ಭರತೇಂದು ಸೋತು ಸಾವಿನ ಕಡೆ ಹೊರಡುತ್ತಾನೆ. ಅವನ ಗೆಳತಿ ಮಲ್ಲಿಕಾ ಮತ್ತೊಮ್ಮೆ ಒಂಟಿಯಾಗುತ್ತಾಳೆ. ಮೃತ್ಯು ಮತ್ತು ಭರತೇಂದು ನಡುವೆ ನಡೆಯುವ ಸಂವಾದ ಬದುಕು ಮತ್ತು ಸಾವನ್ನು ಕುರಿತ ಜಿಜ್ಞಾಸೆಯೇ ಈನಾಟಕದ ಕಥಾ ಭಿತ್ತಿ. ಸಾವಿನ ಹಾದಿಯೂ, ಬದುಕಿನ ಹಾದಿಯೂ ಎರಡಕ್ಕೂ ಈ ಹದ್ದು ಮೀರಿದ ಹಾದಿಯೇ ಉತ್ತರವಾಗಿ ಉಳಿಯುತ್ತದೆ.
ಮಹದೇವ ಹಡಪದ ನಾಟಕ ನಿರ್ವಹಣೆ ಮಾಡಿದರು. ಸತ್ವರೂಪ ಫೌಂಡೇಶನ್ ಅಧ್ಯಕ್ಷೆ ಉಷಾ ಶೆಟ್ಟರ್, ಸಂಸ್ಥೆಯ ಡೇನಿಯಲ್ ಹೊಸಕೇರಿ, ಡಾ.ವೀಣಾ ಡೇನಿಯಲ್, ನಟರಾಜ ಹೊನ್ನವಳ್ಳಿ ಮತ್ತು ನಿರ್ದೇಶಕ ಶಿವಯೋಗಿ ಕೆರೂಡಿ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.