ಕಲಘಟಗಿ: ಪಟ್ಟಣದಲ್ಲಿ ದ್ಯಾಮವ್ವ ದುರಗವ್ವ ಮೂರು ಮುಖದವ್ವಾ ಎಂಬ ಗ್ರಾಮ ದೇವತೆಯರು ಇದ್ದು, ಕೆಂಪು ಬಣ್ಣದಲ್ಲಿ ದ್ಯಾಮವ್ವಾ ಹಸಿರು ಬಣ್ಣದ ದುರಗವ್ವಾ ಮತ್ತು ಮೂರು ಮುಖದವ್ವನ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೊಂದು ಮುಖಕ್ಕೆ ಹಳದಿ ಬಣ್ಣ ಹಚ್ಚುವುದು ವಾಡಿಕೆ.
ಇದೇ ಮಾರ್ಚ್ನಲ್ಲಿ ಗ್ರಾಮದೇವಿ ಜಾತ್ರೆ ನಡೆಯುತ್ತದೆ. ಜಾತ್ರೆಗೂ ಮೊದಲು ಐದು ವಾರಗಳವರೆಗೆ ಹೊರವಾರ ಎಂದು, ಮಂಗಳವಾರ ಹಾಗೂ ಶುಕ್ರವಾರಗಳನ್ನು ಆಚರಿಸುವರು. ಜಾತ್ಯತೀತವಾಗಿ ಈ ಅವಧಿಯಲ್ಲಿ ಮುಂಜಾನೆ ಹತ್ತು ಗಂಟೆಯ ಒಳಗಡೆಗೆ ಅಡುಗೆ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗವಲ್ಲಿ ಹಾಕಿ ಊರ ಹೊರಗಿನ ಹೊಲಗಳಿಗೆ ತೆರಳಿ ಅಲ್ಲಿಯೇ ಊಟ ಮುಗಿಸಿ ಜನರು ಸಂಜೆ 4 ರ ನಂತರ ಮನೆಗೆ ಬರುವುದು ವಾಡಿಕೆ.
ಈ ಅವಧಿಯಲ್ಲಿ ಊರಲ್ಲಿ ದೇವಿ ಸಂಚರಿಸುವರೆಂಬುದು ನಂಬಿಕೆ. ವಾರಗಳು ಮುಗಿದ ನಂತರ ದೇವಿಯರನ್ನು ಪೂಜಾ ವಿಧಾನಗಳನ್ನು ಮುಗಿಸಿ ಬಣ್ಣಕ್ಕೆ ಹಾಕುವುದು ನಂತರ ಬರುವ ಮಂಗಳವಾರದಂದು ದೇವಿಯರ ಪ್ರತಿಷ್ಠಾಪನೆಯನ್ನು ಸಕಲ ಪೂಜಾ ವಿಧಿ ವಿಧಾನಗಳಿಂದ ನಡೆಸುವರು.
ಕಲಘಟಗಿ ಗ್ರಾಮದೇವಿಯು ದಾಸ್ತಿಕೊಪ್ಪ, ಮಾಚಾಪೂರ, ಬೆಂಡಿಗೇರಿ ಹಾಗೂ ಕಲಘಟಗಿಗೆ ಸಂಬಂಧಿಸಿರುತ್ತಾಳೆ. ದಾಸ್ತಿಕೊಪ್ಪ ದೇವಿಯ ತವರು ಮನೆಯಾಗಿದೆ. ಬುಧವಾರ ದಿವಸ ದೇವಿಗೆ ಮಹಾಪೂಜೆ ಸಲ್ಲುತ್ತದೆ. ನಂತರ ದೇವಿಯರಿಗೆ ಕಲಘಟಗಿ ಬಾಬುದಾರರ ಮನೆಯಿಂದ ಮಂಗಳ ಸೂತ್ರವನ್ನು ಕಟ್ಟುವರು. ನಂತರ ಮೂರು ಮುಖದವ್ವನನ್ನು ದೇವಸ್ಥಾನದಲ್ಲಿಯೂ ಪ್ರತಿಷ್ಠಾಪಿಸಿ ದ್ಯಾಮವ್ವ ದುರಗವ್ವರನ್ನು ವಿವಿಧ ಬಾಜಾ ಭಜಂತ್ರಿಗಳೊಂದಿಗೆ ಊರಿನ ಜನರು ಅಕ್ಕ ಓಣಿಯಲ್ಲಿರುವ
ಚೌಲಮನೆಗೆ ಭವ್ಯ ಮೆರವಣಿಗೆಯೊಂದಿಗೆ ಕರೆತಂದು ಅಲ್ಲಿಯೇ ಪ್ರತಿಷ್ಠಾಪಿಸುವರು. ಮೂರನೇ ದಿನ ಗುರುವಾರದಿಂದ ಉಡಿ ತುಂಬುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ನಿರಂತರವಾಗಿ ಒಂಭತ್ತುದಿನಗಳ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ.
ಚೌಲಮನೆಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೂರ್ತಿಗಳ ಎದುರಿನಲ್ಲಿ ಅಕ್ಕಯ ರಾಶಿಯನ್ನು ಹರವಿ ಅದರ ಮೇಲೆ ಐದು ದೀಪಗಳನ್ನು ನಿರಂತರವಾಗಿ ಒಂಭತ್ತುದಿನಗಳವರೆಗೆ ಬೆಳಗುವಂತೆ ರಾಣಿಗರು ಕಾಯುತ್ತಾರೆ. ಶ್ರೀದೇವಿಗೆ ಒಂಭತ್ತನೆಯ ದಿನ ಸಾಂಕೇತಿಕವಾಗಿ ಹುಲ್ಲಿನ ಗುಡಿಸಲು ಹಾಗೂ ಹಿಟ್ಟಿನಿಂದ ಮಾಡಿದ ಕೋಣವನ್ನು ಸುಟ್ಟು ಬಲಿ ನೀಡುತ್ತಾರೆ. ಈ ರೀತಿಯಾಗಿ ದುಷ್ಟರ ನಿಗ್ರಹ ಮಾಡಿ ಶಿಷ್ಟರ ರಕ್ಷಣೆ ಮಾಡಿದಂತಾಗಿ ದೇವಿಯರ ಅವತಾರ ಪರಿಸಮಾಪ್ತಿ ಯಾಯಿ ತೆಂದು ಭಕ್ತರು ದೇವಿಯರು
ಚೌತಮನೆಯಿಂದ ದೇವಿಯರನ್ನು ಹುಬ್ಬಳ್ಳಿ ಕಾರವಾರ ರೋಡಿನ ಹತ್ತಿರವಿರುವ ಪಾದಗಟ್ಟಿಗೆ ತಂದು ಮಧ್ಯರಾತ್ರಿಯವರೆಗೂ ದೇವಿಯರ ಆರಾಧನೆ ಮಾಡಿ ವಿಸರ್ಜಿಸುವರು. ನಂತರ ಯುಗಾದಿವರೆಗೆ ಸೂತಕವೆಂದು ಆಚರಿಸುವರು. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವದಿಲ್ಲ. ಯುಗಾದಿಯಂದು ದೇವಿಯರನ್ನು ಪುನಃ ಪ್ರತಿಷ್ಠಾಪಿಸಿ ಉಡಿತುಂಬುವುದು ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡುವರು.
ಹೀಗೆ ಒಂಭತ್ತು ದಿನಗಳ ಜಾತ್ರೆ ಹಾಗೂ ಒಂದು ತಿಂಗಳವರೆಗೆ ಹೊರವಾರಗಳ ಆಚರಣೆ ಕಲಘಟಗಿ ಹಾಗು ಸುತ್ತಮುತ್ತಲಿನ ಜನರೆಲ್ಲ ಶ್ರದ್ಧಾ ಮನೋಭಾವನೆಯೊಂದಿಗೆ ಏಕತೆಯನ್ನು ಮೂಡಿಸುತ್ತದೆ. ಈ ವೇಳೆಯಲ್ಲಿ ಅನೇಕ ಅಂಗಡಿಗಳು ಆಟಿಕೆ ಸಾಮಾನುಗಳು ನಾಟಕ ಕಂಪನಿಗಳು ಜನರಲ್ಲಿ ಒಂಬತ್ತು ದಿನ ರಾತ್ರಿ ಇಡೀ ಜನರಿಗೆ ಮನರಂಜನೆ ಒದಗಿಸುತ್ತವೆ.
-ಶ್ರೀಧರ ಕ. ಪಾಟೀಲಕುಲಕರ್ಣಿ, ಕಲಘಟಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.