ಧಾರವಾಡ: ಮನುಷ್ಯನ ಬದುಕಿಗೆ ಶ್ರೀಮಂತಿಕೆ ಬರುವುದು ಭಾವದಿಂದ. ಉಳಿದ ಸಂಪತ್ತಿಗಿಂತ ಭಾವ ಸಂಪತ್ತು ಮುಖ್ಯ. ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರ ನಿಂತಿರುವುದೇ ಭಾವದ ಮೇಲೆ. ಇದು ಯಾವುದೇ ಪುಸ್ತಕದಲ್ಲಿಲ್ಲ, ಯಾರೂ ಹೇಳಿಕೊಡಲ್ಲ. ಅದು ಹೂವಿನ ಸುಗಂಧದಂತೆ. ಮನುಷ್ಯನ ದೇಹ ಬೆಳೆದಂತೆ ಬೆಳೆಯಬೇಕು.
ಸುತ್ತ-ಮುತ್ತಲಿನ ವಿಶ್ವದಲ್ಲಿ ಸ್ಥೂಲ-ಸೂಕ್ಷ ಸಂಗತಿಗಳಿವೆ. ಅವುಗಳನ್ನು ಅರಿತು, ಅನುಭವಿಸಿರಿ. ದೇಹದಿಂದ ಕಾರ್ಯ, ಬುದ್ಧಿಯಿಂದ ಆಲೋಚನೆ ಹಾಗೂ ಭಾವದಿಂದ ಅನುಭವಿಸಬೇಕು. ಭಾವ ಸಂಪತ್ತಿನಿಂದ ನಿಸರ್ಗದ ಸೌಂದರ್ಯ ಹೆಚ್ಚುತ್ತದೆ. ಈ ಸೌಂದರ್ಯದ ಅನುಭವವೇ ಇಲ್ಲವಾದರೆ, ಜೀವನದಲ್ಲಿ ಆನಂದ ಇಲ್ಲ.
ದೇಹ, ಬುದ್ಧಿ ಹೆಚ್ಚು ಕಡಿಮೆ ಇದ್ದರೂ ನಡೆಯುತ್ತೆ. ಭಾವ ದೇಹ ಬೆಳೆದಂತೆ ವಿಶಾಲವೂ ಆಗಬೇಕು. ಭಾವ ಮತ್ತು ಆನಂದಕ್ಕೆ ನಿಕಟ ಸಂಪರ್ಕ ಇದೆ. ದೊಡ್ಡ ಪದವಿ, ಡಿಗ್ರಿ ತಗೊಂಡು ಮಾಡೋದು ಏನು? ಮುಖದಲ್ಲಿ ಮುಗಳ್ನಗೆ, ಪ್ರಸನ್ನತೆ, ಸಂತೋಷ ಇರದಿದ್ದರೆ ಪ್ರಯೋಜನ ಇಲ್ಲ. ಭಾವದ ಮುಂದೆ ಎಲ್ಲ ನಿರರ್ಥಕ.
ಹಿಮಾಲಯದಿಂದ ಕನ್ಯಾಕುಮಾರಿವರಿಗೆ ಭಾರತ ಎಂದು ಹಿರಿಯರು ಸುಮ್ಮನೆ ಮಾಡಿಲ್ಲ. ತಲೆಯ ಮ್ಯಾಲ್ ಸಾಗರ, ತಲೆಯ ಕೆಳಗೆ ಸಾವಿರಾರು ನದಿಗಳು. ಗಂಗಾ, ಯಮುನಾ, ಸಿಂಧೂ, ಗೋದಾವರಿ, ನರ್ಮದಾ, ಕೃಷ್ಣೆ, ಗೋದಾವರಿ-ಕಾವೇರಿ ಇವೆಲ್ಲ ನಮ್ಮವು ಎಂಬ ಭಾವ. ಅದುವೇ ಸಮೃದ್ಧ ಭಾವ ಭಾರತವಾಗಿದೆ.
ಗಂಗೇಚ್ಛ, ಯಮುನೇಚ್ಛ, ಗೋದಾವರಿ, ಬ್ರಹ್ಮಪುತ್ರಾ, ಕೃಷ್ಣೆ, ತುಂಗೆ, ಕಾವೇರಿ ಅಂತೇಳಿ ಅಖಂಡ ಭಾರವನ್ನು ಅರವಿಂದ ಮಹರ್ಷಿಗಳು ಕರೆದಿದ್ದು ಭಾವ ಭಾರತದ ಕಲ್ಪನೆಯಿಂದ. ಭಾವದಿಂದ ಎಲ್ಲವನ್ನು ಬದಲಾಯಿಸಬಹುದು. ಮನುಷ್ಯನ ಬದುಕಿಗೆ ಬೆಲೆ ಬರುವುದೇ ಭಾವ(ಹೃದಯವಂತಿಕೆ). ಇಲ್ಲವಾದ್ರೆ ಜೀವನ ನರಕ.
ಸಮೃದ್ಧ ಭಾರತದಲ್ಲಿ ಕೋಟಿ-ಕೋಟಿ ಭಾವ ನದಿಗಳು ಹರಿಯಲಿ. ಹೂವು ಒಂದು ಗಂಟೆ ಇದ್ದರೂ, ತನ್ನ ಸುಗಂಧ-ಪರಿಮಳ ಜಗತ್ತಿಗೆ ಹರಡುತ್ತದೆ. ಹಾಗೆಯೇ ಮನುಷ್ಯನ ಎದೆಯ (ಭಾವ) ಸುಗಂಧ ಹರಡಬೇಕು. ಮನಸಲ್ಲಿ ವಿರಸ ಇದ್ದರೆ ಎದೆಯ ಭಾವ ಕಡಿಮೆ ಆದೀತು. ಇದು ಎಂದಿಗೂ ಶ್ರೀಮಂತಿಕೆಯಿಂದ ಕೂಡಿರಬೇಕು.
ಮಾಡುವ ಕಾರ್ಯದಲ್ಲಿ ಭಾವ ಬೆರೆತಾಗಲೇ ಸತ್ಫಲ ಕೊಡುತ್ತವೆ. ಇದರಿಂದ ಸಂತೋಷ ಸಿಗುತ್ತದೆ. ಭಾವವನ್ನು ತೆಗೆದು ಹಾಕಿದರೆ ಜೀವನ ವಿರಸ. ಭಾವದಲ್ಲಿ ವಿಕಾಸ ಸೇರಿ ಸದ್ಭಾವ, ಕಾರ್ಯದಲ್ಲಿ ಸತ್ಯ ಸೇರಿ ಸತ್ಕಾರ್ಯ, ಜ್ಞಾನದಲ್ಲಿ ಉತಮ ಸೇರಿ ಸುಜ್ಞಾನ ಆಗಿವೆ. ಇವು ಮೂರು ಮನುಷ್ಯನ ಬದುಕಿಗೆ ಅತ್ಯವಶ್ಯಕ.
ಭಾವ ಮಧುರ ಹಾಲು ಇದ್ದಂತೆ, ಸಂದೇಶ ಹುಳಿ ಇದ್ದಂತೆ. ಭಾವ ಎಂಬ ಮಧುರ ಹಾಲಿನಲ್ಲಿ ಸಂದೇಶದ ಹುಳಿ ಬಿದ್ದರೆ ಬದುಕು ನಿರರ್ಥಕ. ಇದರಿಂದ ವಿಶ್ವಾಸ ಹೋಗುತ್ತೆ. ಭಾವವನ್ನು ಬುದ್ಧಿಯಿಂದ ಕಟ್ಟೋದಲ್ಲ. ಹೃದಯದಿಂದ ಬೆಸೆಯೋದು. ನೀವು ಅಂದ್ರ ಭಾವ ಉಳಿತು, ನಾನು ಅಂದ್ರೆ ಭಾವ ಅಳಿತು.
ಬಡವ-ಬಲ್ಲದ-ಶ್ರೀಮಂತ ಎಂಬ ಕಲ್ಪನೆ ಭಾವದಿಂದ. ಹಣ, ವಸ್ತುಗಳಿಂದಲ್ಲ. ಭಾವಕ್ಕೆ ಬೆಲೆ ಇದ್ದಾಗಲೇ ಈ ಕಲ್ಪನೆ. ಮಕ್ಕಳ ಮನಸ್ಸು ಬಿಳಿಯ ಹಾಳೆಯಂತೆ ಸ್ವಚ್ಛ. ಆಗಲೇ ಅವರಲ್ಲಿ ಭಾವ ತುಂಬಬೇಕು. ಇದಕ್ಕೆ ತಾಯಿ ಶಿಕ್ಷಣ ಮುಖ್ಯ. ಇಂಥ ಶಿಕ್ಷಣ ಶಾಲೆಗಳಲ್ಲೂ ಸಿಕ್ಕಲ್ಲಿ ಭಾರತ ಭಾವದಿಂದ ಸಮೃದ್ಧಗೊಳ್ಳಲಿದೆ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 6 ನೇ ದಿನ 02-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.