ಸುಂದರವಾದ ಈ ಜಗತ್ತಿನಲ್ಲಿ ಅನೇಕ ಸಂಗತಿಗಳು, ವಸ್ತುಗಳು, ಜೀವಿಗಳು ಇವೆ. ಭಗವಂತ ಸೃಷ್ಟಿ ಮಾಡಿದ ಇಂತಹ ಜಗತ್ತಿನಲ್ಲಿ ಬದುಕುವ ಒಂದು ಸುವರ್ಣಾವಕಾಶ ನಮಗೆ ಸಿಕ್ಕಿದೆ, ಅದು ನಮ್ಮ ಪುಣ್ಯವೇ ಸರಿ. ಇಂತಹ ಜಗತ್ತಿನಲ್ಲಿ ನಾವು ಎಂದಿಗೂ ಒಬ್ಬರೇ ಜೀವಿಸಲು ಸಾಧ್ಯವಿಲ್ಲ, ನಾವುಗಳು ಅನೇಕ ಸಂಗತಿಗಳನ್ನು ಅವಲಂಬಿಸಿದ್ದೇವೆ.
ಭೂಮಿ ಮೇಲಿನ ಈ ಎಲ್ಲ ಸಂಗಗಳಿಂದ ದೂರವಿರಲು ಸಾಧ್ಯವಿಲ್ಲ. ನಾವೆಲ್ಲ ಬದುಕಿರುವುದೇ ಇಂತವುಗಳ ಸತ್ಸಂಗದಿಂದ, ಸತ್ಸಂಗವಿಲ್ಲದಿದ್ದರೆ ಜೀವನಕ್ಕೆ ಅರ್ಥವಿಲ್ಲ. ಆದರೆ ಜೀವನಕ್ಕೆ ಅರ್ಥ ಮತ್ತು ಪ್ರಾಮುಖ್ಯತೆ ಬರಲು ಉತ್ತಮರ ಸಂಗವನ್ನು ಮಾಡಬೇಕು. ಯಾರೊಂದಿಗೆ ಸಂಘ ಮಾಡಿದರೆ ಬದುಕು ಶ್ರೇಷ್ಠವಾಗುತ್ತದೆಯೋ ಅಂತವರೊಂದಿಗೆ ಸಂಘವನ್ನು ಮಾಡಬೇಕು. ಆ ತಿಳಿವಳಿಕೆ ನಮಗೆ ಇರಬೇಕು.
ಜೀವನದಲ್ಲಿ ವಿವೇಕ ಮತ್ತು ಸತ್ಸಂಗಗಳು ನಮ್ಮ ಎರಡು ಪವಿತ್ರ ಕಣ್ಣುಗಳು ಇದ್ದ ಹಾಗೆ, ಇವುಗಳು ನಮಗೆ ಕೊನೆಯವರೆಗೂ ಉತ್ತಮವಾದುದ್ದನ್ನೇ ತೋರಿಸುತ್ತವೆ. ಆದರೆ ಆಯ್ಕೆ ಮಾಡಿಕೊಳ್ಳುವುದು ಮಾತ್ರ ನಮ್ಮ ಮನಸ್ಸಿಗೆ ಬಿಟ್ಟದ್ದು. ಶಿವಶರಣೆ ಅಕ್ಕಮಹಾದೇವಿ ಸಣ್ಣ ವಯಸ್ಸಿನಲ್ಲೆ ಅತ್ಯಂತ ಉತ್ತಮವಾದ ಜೀವನ ನಡೆಸಿದಳು, ಅದಕ್ಕೆ ಕಾರಣ ಆಕೆ ಸಂಗ ಮಾಡಿದ್ದು ಉತ್ತಮ ವಿಚಾರಗಳದ್ದು.
ತನು, ಮನಗಳೆರಡು ಶುದ್ಧವಾಗಿರಬೇಕು. ಇವುಗಳೆರಡು ಶುದ್ಧವಾಗುವುದು ಅನುಭಾವಿಗಳ ಸಂಘದಿಂದ, ಹೀಗಾಗಿ ಉತ್ತಮ ವಿಚಾರಗಳ, ಉತ್ತಮರ ಸಂಘವನ್ನು ಮಾಡಿ ನಮ್ಮ ದೇಹ ಮತ್ತು ಮನಸ್ಸುಗಳನ್ನು ಶುದ್ಧ ಮತ್ತು ಸ್ವಚ್ಚವಾಗಿಟ್ಟುಕೊಳ್ಳಬೇಕು. ನೀರಿಗೆ ಸ್ವಲ್ಪ ಉಪ್ಪು ಬೆರೆತರೆ ಇಡೀ ನೀರೆ ಉಪ್ಪಾಗುತ್ತದೆ, ಅಂತೆಯೇ ಅದೇ ನೀರಿಗೆ ಸಿಹಿ ಬೆರೆತರೆ ಇಡೀ ನೀರು ಸವಿಯಾಗಿ ಸಕಲ ಜೀವಾತ್ಮಗಳಿಗೂ ಉಪಯೋಗವಾಗುತ್ತದೆ. ಇದು ನಾವುಗಳು ಮಾಡುವ ಸತ್ಸಂಗದ ಪರಿಣಾಮವನ್ನು ತಿಳಿಸುತ್ತದೆ.
ಇಬ್ಬರು ಉತ್ತಮ ಗೆಳೆಯರಿರುತ್ತಾರೆ ಒಬ್ಬ ಬಟ್ಟೆ ತೊಳೆಯುವವ ಮತ್ತೊಬ್ಬ ಇದ್ದಲಿ ಮಾರುವವ, ಅವರಿಬ್ಬರೂ ಒಂದೇ ಅಂಗಡಿಯಲ್ಲಿ ತಮ್ಮ ವ್ಯಾಪಾರ ಮಾಡುತ್ತಾರೆ, ಇದ್ದಲಿಯ ಧೂಳಿನಿಂದಾಗಿ ಶುಭ್ರವಾಗಿ ತೊಳೆದ ಬಟ್ಟೆಗಳೆಲ್ಲ ಕಪ್ಪಾಗುತ್ತವೆ ಇದರಿಂದಾಗಿ ಬಟ್ಟೆ ತೊಳೆಯುವವನ ವ್ಯಾಪಾರ ಕಡಿಮೆಯಾಗಿ ಅವನಿಗೆ ಊಟಕ್ಕೂ ಇಲ್ಲದಾಗುತ್ತದೆ, ಆಗ ಅವನ ಸ್ನೇಹಿತನನ್ನು ಕೇಳಿದಾಗ ಅವನು ಬೇರೆ ಅಂಗಡಿ ಮಾಡುವಂತೆ ಹೇಳುತ್ತಾನೆ. ನಮ್ಮ ಗೆಳೆತನ ಉತ್ತಮವಾದುದಾರೂ ನಾವು ಮಾಡುವ ಕಾಯಕ ಒಂದಕ್ಕೊಂದು ಒಪ್ಪುವುದಿಲ್ಲ ಎಂದು ತಿಳಿಸುತ್ತಾನೆ. ಮಿತ್ರುತ್ವ ಸರಿ ಇದ್ದರೂ, ಅದು ಬದುಕಿಗೆ ಮಾರಕವಾಗುವಂತೆ ಇರಬಾರದು. ನಮಗೆ ಬಾಧಕವಾಗುವಂತಿದ್ದರೆ ಎಂತಹ ದೊಡ್ಡ ವ್ಯಕ್ತಿ, ಶ್ರೀಮಂತನಿದ್ದರೂ ಅವನೊಂದಿಗೆ ಸಂಘ ಮಾಡಬಾರದು. ದ್ರಾಕ್ಷಿಯೂ ಒಂದೇ, ದ್ರಾಕ್ಷಿಯ ರಸವೂ ಅದರಿಂದಾಗಿದೆ. ದ್ರಾಕ್ಷಿ ಹಣ್ಣು ಬುದ್ಧಿಯನ್ನು ಪ್ರಕಾಶಮಾನಗೊಳಿಸಿದರೆ, ದ್ರಾಕ್ಷಿರಸ ಬುದ್ಧಿಯನ್ನು ಮಂಕಾಗಿಸುತ್ತದೆ. ಇಲ್ಲಿ ಯಾವುದರ ಸಂಘ ಮಾಡಬೇಕು ಎಂದು ವಿವೇಕ ಕೆಲಸ ಮಾಡುತ್ತದೆ.
ಪ್ರಸ್ತುತ ದೇಶದ ಎಲ್ಲಾ ಸಮಸ್ಯೆಗಳಿಗೆ ಸತ್ಸಂಗ ಮತ್ತು ವಿವೇಕಗಳಿಂದ ಪರಿಹಾರ ಸಿಗುತ್ತದೆ. ಅದರತ್ತ ನಾವುಗಳು ಗಮನ ಹರಿಸಬೇಕು. ಭ್ರಾತೃಹರಿ ಹೇಳುತ್ತಾನೆ, ಸತ್ಸಂಗ ಅಪ್ರತಿಮ ಸಂಗತಿ ಬುದ್ಧಿಯನ್ನು ಪ್ರಜಾಗ್ರಗೊಳಿಸುತ್ತದೆ. ಸತ್ಸಂಗದಿಂದ ಸುಜ್ಞಾನದ ಗಾಳಿ ಬೀಸುತ್ತದೆ. ಬುದ್ಧನ ಸಂಘದಿಂದ ಆಸೆಯೇ ದುಃಖಕ್ಕೆ ಮೂಲ ಎಂಬ ಜ್ಞಾನ ತಿಳಿಯಿತು, ಸಾಕ್ರಟಿಸನ ಸಂಘದಿಂದ ಸತ್ಯವೇ ಜೀವನ ಎಂದು ತಿಳಿಯಿತು. ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳಿದ್ದರೆ ಸತ್ಸಂಗ ಅವುಗಳನ್ನು ಸ್ವಚ್ಚ ಮಾಡುತ್ತದೆ. ಹೀಗಾಗಿ ಶರಣೆ ಅಕ್ಕಮಹಾದೇವಿ ಮಾಡಿದ ಸತ್ಸಂಗದಂತೆ ನಾವು ಕೂಡ ಜೀವನದಲ್ಲಿ ಉತ್ತಮ ವಿಚಾರ, ಉತ್ತಮ ಪುಸ್ತಕ, ಉತ್ತಮ ವ್ಯಕ್ತಿ, ಉತ್ತಮ ಸಂಗತಿಗಳ ಸಂಘವನ್ನು ಮಾಡಿ ಸಾರ್ಥಕ ಜೀವನ ನಡೆಸೋಣ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 3 ನೇ ದಿನ 27-2-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.