ಮತ್ತೊಬ್ಬರ ಶ್ರಮವನ್ನು ನೋಡಿ ಅವರ ಸಣ್ಣ ಸಾಧನೆಯನ್ನೂ ನಾವುಗಳು ಮೆಚ್ಚಿದರೆ ಅವರಿಗೆ ಅದೇ ಖುಷಿ ಕೊಡುತ್ತದೆ. ಓರ್ವ ವ್ಯಕ್ತಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮನೆ ಕಟ್ಟಿಸುತ್ತಾನೆ, ಅದರ ಉದ್ಘಾಟನೆಗೆ ಎಲ್ಲರನ್ನೂ ಕರೆಯುತ್ತಾನೆ, ಅವರಿಗೆ ಆದರ, ಆತಿಥ್ಯ ಮಾಡಿ ಉಣ ಬಡಿಸುತ್ತಾನೆ ಎಲ್ಲರೂ ಊಟ ಮಾಡುವಾಗಲೇ ಆತನು ಮನೆ ಹೇಗಿದೆ ಎಂದು ಕೇಳುತ್ತಾನೆ, ಆಗ ಊಟ ಮಾಡುವವರು ಮನೆಯನ್ನು ತುಂಬ ಸುಂದರವಾಗಿ ಕಟ್ಟಿಸಿದ್ದೀರಿ, ನಿಮ್ಮ ಶ್ರಮ ಸಾರ್ಥಕವಾಯಿತು ಎಂದು ಹೇಳಿದಾಗ ಮನೆಯ ಯಜಮಾನನಿಗೆ ಆಗುವ ಸಂತೋಷ, ಆನಂದಕ್ಕೆ ಪಾರವೇ ಇರುವುದಿಲ್ಲ. ಆದರೆ ಅದೇ ಹೆಂಡತಿ ಮಕ್ಕಳನ್ನು ಕೇಳಿದರೆ ಅವರುಗಳ ಉತ್ತರಗಳು ಸಂತೋಷ ನೀಡುವ ಬದಲು ಯಾಕಾದರೂ ಮನೆಯನ್ನು ಕಟ್ಟಿಸಿದೆ ಎಂದು ಅನಿಸುತ್ತದೆ. ಹೀಗಾಗಿ ಯಾರೆ ಶ್ರಮ ಪಟ್ಟರೂ ಅವರ ಶ್ರಮವನ್ನು ಮೆಚ್ಚುವಂತ ಮಾತುಗಳನ್ನು ಆಡಬೇಕು, ಆ ಮೂಲಕ ಅವರಲ್ಲಿನ ಆನಂದವನ್ನು ನಾವುಗಳು ಕಂಡು ಸಂತೋಷ ಪಡಬೇಕು ಇದೇ ಜೀವನ, ಇದೇ ನಿಸರ್ಗದ ನಿಯಮ.
ಪರರಲ್ಲಿ ಆನಂದ ಕಾಣುವ, ಬೇರೊಬ್ಬರಲ್ಲಿ ಆನಂದ ಉಂಟು ಮಾಡುವ ಮೂಲಕ ಮತ್ತೊಬ್ಬರ ಆನಂದದಲ್ಲಿ ಭಾಗಿಯಾಗಬೇಕು. ನಮ್ಮನ್ನು ನೋಡಿದರೆ ಮತ್ತೊಮ್ಮೆ ನಮ್ಮೊಂದಿಗೆ ಮಾತನಾಡಬೇಕು, ಭೇಟಿಯಾಗಬೇಕು ಎಂದು ಅನಿಸಬೇಕು ಬದಲಾಗಿ ನಮ್ಮನ್ನು ಕಂಡ ತಕ್ಷಣ ದೂರ ಹೋಗಬಾರದು. ಹೀಗೆ ಆಗಬಾರದು ಎಂದರೆ ನಮ್ಮ ಮುಖದಲ್ಲಿ ಯಾವತ್ತೂ ಆನಂದ, ಸಂತೋಷ ಕಾಣುತ್ತಿರಬೇಕು. ಸಂತಸದಿಂದ ಇರುವ ಮನುಷ್ಯನೊಂದಿಗೆ ಮಾತನಾಡಲು ಎಲ್ಲರೂ ಬಯಸುತ್ತಾರೆ.
ಕವಿ ರವೀಂದ್ರನಾಥ ಟ್ಯಾಗೋರರು ತಮ್ಮ ಗೀತಾಂಜಲಿ ಗ್ರಂಥದಲ್ಲಿ ಬರೆಯುತ್ತಾರೆ, ಹೇ ಭಗವಂತ ನೀನು ನಿರ್ಮಿಸಿದ ಈ ಜಗತ್ತು ತುಂಬಾ ಸುಂದರವಾಗಿದೆ, ನಿನ್ನ ಈ ಉತ್ಸವವನ್ನು ನೋಡಿ ಸವಿಯಲು ನನಗೆ ಜನ್ಮ ಕೊಟ್ಟಿರುವೆ ಇದಕ್ಕಾಗಿ ನಾನು ನಿನಗೆ ಋಣಿಯಾಗಿದ್ದೇನೆ ಎಂದು ಬರೆದಿದ್ದಾರೆ. ಅಂತೆಯೇ ಕೆಲವರು ಇರುವುದರಲ್ಲೇ ಆನಂದ ಪಡೆಯುತ್ತಾರೆ. ಪ್ರಾಣಿ, ಪಕ್ಷಿಗಳು ನೀರು, ಆಹಾರ ಸೇವಿಸಿ ಸುಖದಿಂದ ಇರುತ್ತವೆ, ಮನುಷ್ಯ ಮಾತ್ರ ಸಂಪತ್ತಿನ ಗಳಿಕೆಯಲ್ಲಿ ನಿಜವಾದ ಸುಖವನ್ನು ಮರೆಯುತ್ತಾನೆ.
ಆಂಗ್ಲ ಕವಿ ವಿಟ್ಮನ್ ಹೇಳುತ್ತಾನೆ, ಹುಲ್ಲನ್ನು ಮೇಯ್ದು ನೀರು ಕುಡಿದು ಮರದ ಕೆಳಗೆ ಮೆಲುಕು ಹಾಕುತ್ತಾ ಮಲಗಿರುವ ಹಸುವಿನ ಆ ಆನಂದದ ಮುಖವನ್ನು ನೋಡಿದಾಗ ನನಗೆ ಸಂತೋಷ ಎನಿಸುತ್ತದೆ. ಆ ಹಸುವಿನ ಆನಂದಕ್ಕೆ ಕಾರಣ ಹುಲ್ಲು ಮತ್ತು ನೀರು ಮಾತ್ರ, ಆದರೆ ಮನುಷ್ಯ ಯಾವಗಲೂ ಆನಂದ ಇರುವುದು ಬಹಳ ವಿರಳ. ಹೀಗಾಗಿ ನಾವುಗಳು ಹಸುವಿನಂತೆ ಇದ್ದುದರಲ್ಲೇ ಜೀವನ ಸಾಗಿಸಿ ಜೀವನದ ನಿಜವಾದ ಸುಖ, ಸಂತೋಷವನ್ನು ಕಾಣುವತ್ತ ಚಿತ್ತ ಹರಿಸಬೇಕು.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 2 ನೇ ದಿನ 26-2-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.