ಭಾರತದಲ್ಲಿ ಶ್ರೇಷ್ಠ ಅನುಭಾವಿಗಳು ಆಗಿ ಹೋಗಿದ್ದಾರೆ. ಸಾವಿರಾರು ವರ್ಷಗಳಿಂದ ಈ ಭೂಮಿಯ ಮೇಲೆ ಶ್ರೇಷ್ಠ ಸಂತರು, ಮಹನೀಯರು ಬಾಳಿ ಬದುಕಿದ್ದರು. ಅವರಲ್ಲಿ ಇದ್ದದ್ದು ಉತ್ತಮ ವಿಚಾರಗಳು. ಹೀಗಾಗಿ ಅವರು ಉತ್ತಮರೆನಿಸಿಕೊಂಡರು. ಯಾರು ಸಂಪತ್ತು, ಆಸ್ತಿ, ಹಣ ಗಳಿಕೆಯಲ್ಲಿ ತೊಡಗುತ್ತಾರೋ ಅವರಿಗೆ ನೆಮ್ಮದಿ, ಶಾಂತಿ ಸಿಗಲು ಸಾಧ್ಯವಿಲ್ಲ.
ಒಂದು ಪಕ್ಷಿ ಅರಮನೆ, ಸಂಪತ್ತು ಪದವಿ, ಅಧಿಕಾರಗಳಿಸದೆ ಸ್ವಚ್ಚಂದವಾಗಿ ಮೋಡಗಳ ಮೇಲೆ ಹಾರಾಡುತ್ತದೆ, ಕೊನೆಯವರೆಗೂ ಹಾಡುತ್ತದೆ. ಅದರಲ್ಲಿಯೇ ಅದು ಸಂತೋಷ, ಸುಖ ಕಾಣುತ್ತದೆ. ಆದರೆ ಮನುಷ್ಯ ಮಾತ್ರ ಸಂಗ್ರಹದಲ್ಲಿ ತೊಡಗಿ, ಸ್ವಾರ್ಥಿಯಾಗಿದ್ದಾನೆ. ಆದರೆ ಸಂತರು, ಶರಣರು, ಋಷಿ ಮುನಿಗಳು ಆನಂದಿಂದ ಇದ್ದು ಜೀವನ ನಡೆಸಿ ಜೀವನದಲ್ಲಿ ಪರಮ ಸುಖ ಆನುಭವಿಸಿದರು. ನಾವುಗಳೂ ಕೂಡ ಇಂದು ಹಾಗೆಯೇ ಬದುಕಬೇಕು. ಸುಖವನ್ನು ಹುಡುಕಿಕೊಂಡು ಬೇರೆ ಲೋಕದಲ್ಲಿ ಹೋಗುವುದಲ್ಲ, ಬದಲಾಗಿ ಈ ಲೋಕದಲ್ಲೇ ಸುಂದರವಾಗಿ ಬದುಕು ಸಾಗಿಸಬೇಕು. ಭೂಮಿಗಿಂತ ಸ್ವರ್ಗ ಬೇರೊಂದಿಲ್ಲ, ಮಣ್ಣಿಗಿಂತ ಶ್ರೇಷ್ಠವಾದ ಸಿಂಹಾಸನ ಮತ್ತೊಂದಿಲ್ಲ. ನೆಲದ ಮೇಲೆ ಕುಳಿತಾಗ ನಮಗೆ ಸಿಗುವ ಆನಂದ, ತಣ್ಣನೆಯ ಸುಖ ಯಾವುದೇ ಅಧಿಕಾರದ ಖುರ್ಚಿಯ ಮೇಲೆ ಕುಳಿತಾಗ ಸಿಗದು. ನಮ್ಮ ಮನೆಗಳಲ್ಲಿನ ಖುರ್ಚಿಗಳ ಮೇಲೆ ಕುಳಿತಾಗ ಜೀವನದ ತಲ್ಲಣಗಳ ಉಷ್ಣ ಇರುತ್ತದೆ, ಅದೇ ನೆಲದ ಮೇಲೆ ಕುಳಿತಾಗ ತಣ್ಣನೆಯ ಸುಖ ಸಿಗುತ್ತದೆ. ಇದೇ ಜೀವನ.
ಭಗವಂತ ಭೂಮಿಯ ಮೇಲೆ ಎಲ್ಲವನ್ನೂ ನೀಡಿದ್ದಾನೆ, ಅದನ್ನು ನೋಡಿ ಅನುಭವಿಸುವಂತೆ ಮಾನವನಿಗೆ ಜೀವ ನೀಡಿದ್ದಾನೆ. ನಿಸರ್ಗದಲ್ಲಿನ ಎಲ್ಲವನ್ನೂ ನೋಡಿ ಆನುಭವಿಸುವಂತೆ ತಿಳಿಸಿದ್ದಾನೆ. ಅದನ್ನು ಅನುಭವಿಸುವ ಕಾರ್ಯ ಮಾತ್ರ ಮನುಷ್ಯನದು. ನಾವುಗಳು ನೋಟ, ದೃಷ್ಟಿಕೋನ ಉತ್ತಮವಾಗಿದ್ದರೆ ಎಲ್ಲವೂ ಚೆನ್ನಾಗಿ ಕಾಣಿಸುತ್ತವೆ. ನಮ್ಮಗಳ ನೋಟ ಮಾತ್ರ ಉತ್ತಮ ದಾರಿಯಲ್ಲಿರಬೇಕು. ಮನುಷ್ಯನ ಮನಸ್ಸು ಅರಳುವಂತಹ ಸತ್ಸಂಗ ನಮಗೆ ಬೇಕು. ಯಾವ ಸಂಗದಿಂದ ಮನಸ್ಸು ಅರಳುತ್ತದೆಯೋ ಅಂತಹ ಸಂಗವನ್ನು ನಾವುಗಳು ಆಯ್ಕೆ ಮಾಡಿಕೊಳ್ಳಬೇಕು. ಕೆಲವರು ನಶೆಯ ಸಂಘವನ್ನು ಆಯ್ಕೆ ಮಾಡಿಕೊಂಡು ಅದರಿಂದ ಪರಮ ಸುಖ ಕಾಣದೇ ಹೋಗಿದ್ದಾರೆ. ಆದರೆ ಒಂದು ಮೊಗ್ಗು ಸೂರ್ಯನ ಬೆಳಕಿನ ಸಂಘವನ್ನು ಮಾಡಿ ಅದು ಅರಳಿ ತನ್ನಲ್ಲಿನ ಸುವಾಸನೆಯನ್ನು ಜಗತ್ತಿಗೆ ನೀಡುತ್ತದೆ. ಮೊಗ್ಗಿಗೆ ಬೇಕಿರುವುದು ಸೂರ್ಯನ ಸಂಘ ಮಾತ್ರ, ಹೀಗಾಗಿ ಅದು ಅದರ ಸಂಘವನ್ನು ಮಾತ್ರ ಮಾಡುತ್ತದೆ. ಆದರೆ ಬುದ್ಧಿವಂತ ಪ್ರಾಣಿಯಾದ ಮಾನವ ಮಾತ್ರ ತನಗೆ ಅವಶ್ಯಕವಿರದ ವಿಷಯಗಳ ಬಗ್ಗೆ ಸಂಘವನ್ನು ಮಾಡಿ ಸುಖ ಕಾಣದೇ ಪರಿತಪಿಸುತ್ತಿದ್ದಾನೆ.
ಶಿವಶರಣೆ ಅಕ್ಕಮಹಾದೇವಿ ತನ್ನ ಜೀವನದಲ್ಲಿ ಉತ್ತಮ ವಿಚಾಗಳ ಸಂಗ ಮಾಡಿ ಎಲ್ಲ ಪರಮ ಸುಖ ಆನುಭವಿಸಿದಳು. ಆಕೆಯೇ ಹೇಳುವಂತೆ ಸಂಗವಿಲ್ಲದೇ ಬೀಜ ಮೊಳೆಯೊಡೆಯಿತು ಹೇಗೆ ಎನ್ನುವಂತೆ ಒಂದು ಬೀಜಕ್ಕೆ ಬೇಕಿರುವುದು ಮಣ್ಣು ಮತ್ತು ನಾಲ್ಕು ಹನಿ ನೀರು ಮಾತ್ರ. ಅವುಗಳ ಸಂಗ ಮಾಡಿಯೇ ಅದು ಹೆಮ್ಮರವಾಗಿ ಬೆಳೆದು, ಮನುಷ್ಯನಿಗೆ ಎಲ್ಲವನ್ನೂ ನೀಡುತ್ತದೆ. ಬೀಜವನ್ನು ನೋಡಿದಾಗ ಅದರಲ್ಲಿ ಮರ, ಹೂ, ಹಣ್ಣು ಕಾಣುವುದಿಲ್ಲ. ಆದರೆ ಅದು ಮಣ್ಣು, ನೀರಿನ ಸಂಗ ಮಾಡುವ ಮೂಲಕ ಎಲ್ಲವನ್ನೂ ನೀಡುತ್ತದೆ. ಹಾಗೆಯೆ ಮನುಷ್ಯನೂ ತನಗೆ ಅವಶ್ಯಕವಿರುವ ಉತ್ತಮ ವಿಚಾರ, ನಡೆ, ನುಡಿಗಳ ಸಂಗ ಮಾಡಬೇಕು. ಆಗ ಮಾತ್ರವೇ ಜೀವನದಲ್ಲಿ ಶಾಂತಿ, ಸುಖ ಕಾಣಲು ಸಾಧ್ಯ. ಮಾನವ ದೇಹ ಪಂಚಭೂತಗಳಿಂದ ರಚಿತವಾಗಿದೆ. ಅವುಗಳ ಸಂಗದಿಂದ ಮಾನವ ರಚನೆಯಾಗಿದ್ದಾನೆ. ಹೀಗಾಗಿ ಮಾನವರಾದ ನಾವುಗಳು ಸುಖ ಕಾಣಲು ನಶೆ, ಸಿಗರೇಟುಗಳ ಸಂಗ ಮಾಡಿ ಜೀವನ ಹಾಳು ಮಾಡಿಕೊಳ್ಳದೇ ಉತ್ತಮ ವಿಚಾರ, ನಿಸರ್ಗದ ಸಂಗ ಮಾಡಿ ಉತ್ತಮರಾಗಬೇಕು. ಆ ಮೂಲಕ ಜೀವನದ ಪರಮ ಸುಖ ಆನುಭವಿಸುವ ಶ್ರೇಷ್ಠರಾಗೋಣ.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 1 ನೇ ದಿನ 25-2-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.