ಹುಬ್ಬಳ್ಳಿ: ಎಂಥ ಜಟ್ಟಿಯನ್ನು ಬಿಡೆನು ಎಂಬಂತೆ ತೊಡೆ ತಟ್ಟುತ್ತಿದ್ದ ಹುರಿ ಮೀಸೆಯ ಗಟ್ಟಿಗ ಕುಸ್ತಿಪಟು ಸಂತೋಷ, ಜವರಾಯನನ್ನೂ ಬಿಟ್ಟಿಲ್ಲ ಬಿಡಿ. ತನ್ನ ಪಟ್ಟುಗಳ ಗುಟ್ಟು ಬಿಡದೆ ಕಾಡಿದ್ದಾನೆ. ಆದರೂ ವಿಧಿಯೊಂದಿಗೆ ಗೆದ್ದವರು ಎಲ್ಲಿದ್ದಾರೆ? ವಿಧಿಯೊಂದಿಗೆ ಕಾದಾಡಿದ ಸಂತೋಷ ವೀರೋಚಿತ ಸೋಲಿ(ಸಾವಿ)ಗೆ ಶರಣಾಗಿದ್ದಾನೆ.
ಇದೇ 2017 ರ ರಾಜ್ಯ ಓಲಿಂಪಿಕ್ಲ್ಲಿ ಕುಸ್ತಿ ಆಡುವಾಗ ಗಾಯಗೊಂಡು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಪೈಲ್ವಾನ್ ಸಂತೋಷ ಹೊಸಮನಿ ಕೊನೆಗೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿರನಿದ್ರೆಗೆ ಜಾರಿದ್ದಾನೆ.
ಫೆ.8 ರಂದು ಲೀಗ್ ಪಂದ್ಯದಲ್ಲಿ ಕುಸ್ತಿ ಆಡುವಾಗ ಕಾಲಿಗೆ ಪೆಟ್ಟಾಗಿತ್ತು. ಕಿಮ್ಸ್ನ ವೈದ್ಯರು ನಿರಂತರ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದರು. ಆದರೆ ಹೃದಯಾಘಾತದಿಂದ ಇಂದು ಸಂತೋಷ ಕೊನೆಯುಸಿರೆಳೆದಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗವಾಡ ಸಂತೋಷನ ಊರು. ಬಿ.ಕಾಂ ಓದುತ್ತಿದ್ದ ಇವನು ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಕಿರೀಟವನ್ನೂ ಮುಡಿದಿದ್ದ. ಕುಸ್ತಿಯಲ್ಲಿ ಭರವಸೆಯ ಬೆಳಕನ್ನು ಮೂಡಿಸಿದ್ದ ಈತ ಇದೇ ಫೆ.20 ರಂದು ಹರಿಯಾಣದಲ್ಲಿ ನಡೆಯುವ ರಾಷ್ಟ್ರೀಯ ಕುಸ್ತಿ ಪಂದ್ಯಕ್ಕೂ ಆಯ್ಕೆಯಾಗಿದ್ದ. ಗರಿಗೆದರಿದ್ದ ಕನಸುಗಳು ಸದ್ದಿಲ್ಲದೇ ಮಾಯವಾಗಿವೆ.
ವೈದ್ಯರ ಸ್ಪಷ್ಟೀಕರಣ
ಸಂತೋಷನ ಸಾವಿಗೆ ‘ಪ್ಯಾಟ್ ಎಂಬೋಲಿಸಂ’ ಕಾರಣ ಎಂದು ಕಿಮ್ಸ್ ಅಧಿಕ್ಷಕ ಶಿವಪ್ಪ ಅನೂರಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಎಸ್ಡಿಎಂನಲ್ಲಿ ದಾಖಲಾದ ನಂತರ ಕಿಮ್ಸ್ನಲ್ಲಿ ದಾಖಲು ಮಾಡಲಾಗಿತ್ತು. ಇಲ್ಲಿ ದಾಖಲಾದಾಗ ಅವರ ಬಲಗಾಲಿನ ತೊಡೆಯಲ್ಲಿನ 2-3 ಕಡೆ ಮೂಳೆ ಮುರಿದಿದ್ದವು. ಸೋಮವಾರ ನಮ್ಮ ಆಸ್ಪತ್ರೆಯ ನಾಲ್ಕು ಜನ ತಜ್ಞ ವೈದ್ಯರ ತಂಡ 8 ಗಂಟೆಗಳ ಕಾಲ ನಿರಂತರವಾಗಿ ಶಸ್ತ್ರ ಚಿಕಿತ್ಸೆ ಮಾಡಿತ್ತು.
ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ರಾತ್ರಿ ಚೆನ್ನಾಗಿ ಇದ್ದ ಸಂತೋಷ ಅವರಿಗೆ ಬೆಳಗ್ಗೆ 9 ಗಂಟೆಯ ಸುಮಾರಿಗೆ ಹೃದಯ ಸ್ಥಂಭನದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪರಿಹಾರದ ಭರವಸೆ
ಸಂತೋಷನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಧಾರವಾಡ ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ ಕಿಮ್ಸ್ಗೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ ಕೊಡಿಸುವುದಾಗಿಯೂ ಅವರು ಹೇಳಿದರು. ಸರ್ಕಾರದಿಂದ 5 ಲಕ್ಷ ಪರಿಹಾರವನ್ನು ಸರ್ಕಾರದವತಿಯಿಂದ ಕೊಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಹೇಳಿದ್ದಾರೆ. ಉಸ್ತುವಾರಿ ಸಚಿವರಾದ ವಿನಯ್ ಕುಲಕರ್ಣಿ ಅವರು ಸಂತಾಪ ಸೂಚಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಕ್ರೀಡಾಪ್ರೇಮಿಗಳ ದಂಡೇ ಕಿಮ್ಸ್ನತ್ತ ಧಾವಿಸುತ್ತಿದ್ದು, ಪ್ರತಿಭಾನ್ವಿತ ಕ್ರೀಡಾಪಟುವಿನ ಸಾವಿಗೆ ಮಮ್ಮಲ ಮರಗುತ್ತಿದ್ದಾರೆ.
ತಮ್ಮ ಮಗನ ಸಾವಿಗೆ ಜಿಲ್ಲಾಡಳಿತ ಹಾಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದು, ನ್ಯಾಯ ಕೊಡಿಸುವಂತೆ ಅಲ್ಲಿಯೇ ಪ್ರತಿಭಟಿಸುತ್ತಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸಂತೋಷನ ತರುಬೇತುದಾರ ಚಂದ್ರಶೇಖರ ಗರಗ ಅವರು ಕುಸ್ತಿ ಕಮೀಟಿ, ಜಿಲ್ಲಾಡಳಿತ ಹಾಗೂ ವೈದ್ಯರ ವಿರುದ್ಧ ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆರೋಪ, ಪ್ರತ್ಯಾರೋಪ, ಪರಿಹಾರ, ಮರಣೋತ್ತರ ವರದಿ, ಶಿಕ್ಷೆ ಇತ್ಯಾದಿಗಳೆಲ್ಲವೂ ಆಗಬಹುದು. ಆದರೆ ಮನೆ ಬೆಳಗಬೇಕಿದ್ದ ಕುಟುಂಬಕ್ಕೆ ಸಂತೋಷ ಇನ್ನಿಲ್ಲವಾದ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮೆರೆಯಬೇಕಿದ್ದ ಅಪರೂಪದ ಕನಸಿನ ಸಂತೋಷ ಮರೆಯಾಗಿದ್ದು ಕ್ರೀಡಾಲೋಕಕ್ಕೆ ಬಹುದೊಡ್ಡ ನಷ್ಟ.
ಕಪ್ಪು ಚುಕ್ಕೆ
3 ದಶಕಗಳ ನಂತರ ರಾಜ್ಯ ಒಲಿಂಪಿಕ್ಗೆ ಆತಿಥ್ಯ ವಹಿಸಿದ್ದ ಅವಳಿನಗರ ಹುಬ್ಬಳ್ಳಿ-ಧಾರವಾಡ ನಿಜಕ್ಕೂ ಅಚ್ಚುಕಟ್ಟಾಗಿ ಎಲ್ಲವನ್ನೂ ನಿರ್ವಹಿಸಿ ಭೇಷ್ ಎನಿಸಿಕೊಂಡಿತ್ತು. ಇದೀಗ ಸಂತೋಷನ ಸಾವೊಂದು ಮೂರನೇ ಒಲಿಂಪಿಕ್ಗೆ ಒಂದು ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದ್ದು ವಿಧಿಯ ಲೀಲೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.