ಮೂಡುಬಿದಿರೆ: ರಸ್ತೆ ಸುರಕ್ಷೆಯ ಬಗ್ಗೆ ಮೂಡಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಮ್ಮಿಕೊಂಡಿರುವ ‘ಆಳ್ವಾಸ್ ಸ್ವಸ್ಥ ರಸ್ತೆ’ ಕಾರ್ಯಕ್ರಮವನ್ನು ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಗರಗಳು ಬೆಳೆಯುತ್ತಿದ್ದು ವಾಹನ ಬಳಕೆದಾರರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ವಾಹನ ಅವಘಡಗಳೂ ಹೆಚ್ಚಾಗುತ್ತಿವೆ. ಜನರಿಗೆ, ವಾಹನ ಚಾಲಕರಿಗೆ ರಸ್ತೆ ನಿಯಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ತೀರಾ ಅಗತ್ಯವಾಗಿ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ಹಮ್ಮಿಕೊಂಡಿರುವ ಸ್ವಸ್ಥ ರಸ್ತೆ ಕಾರ್ಯಕ್ರಮ ಬಹಳ ಉಪಯುಕ್ತ ಎಂದರು.
ಮಿಜಾರುಗುತ್ತು ಆನಂದ ಆಳ್ವ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಯಶ್ರೀ ಎ. ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್ ಬಾವುಟ ಬೀಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಜಿ.ಪ. ಸದಸ್ಯ ಕೆ.ಪಿ. ಜಗದೀಶ ಅಧಿಕಾರಿ, ಜಿಲ್ಲಾ ಮಟ್ಟದ ‘ಜೀವ ರಕ್ಷಕ ‘ ಪ್ರಶಸ್ತಿ ಪುರಸ್ಕೃತ ಸಿ.ಎಚ್. ಅಬ್ದುಲ್ ಗಫೂರ್, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಆಳ್ವಾಸ್ ಹೆಲ್ತ್ ಸೆಂಟರ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಟ್ರಸ್ಟಿ ಡಾ. ವಿನಯ ಆಳ್ವ ಸ್ವಾಗತಿಸಿದರು. ‘ಆಳ್ವಾಸ್ ಆಸ್ಪತ್ರೆಗೆ ಬರುವ ಸುಮಾರು 90 ರಷ್ಟು ರಸ್ತೆ ಅವಘಡ ಪ್ರಕರಣಗಳು ಬಹಳ ತಿರುವುಗಳಿರುವ ಹಂಡೇಲು ಸುತ್ತಿನ ರಸ್ತೆಯಲ್ಲಾಗುತ್ತಿರುವುದನ್ನು ಗಮನಿಸಲಾಗಿದ್ದು ಇದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ದಿಸೆಯಲ್ಲಿ ಆಳ್ವಾಸ್ ಸ್ವಸ್ಥ ರಸ್ತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಸ್ತೆಗಳ ತಿರುವುಗಳನ್ನು ಆದಷ್ಟು ಕಡಿಮೆ ಮಾಡುವ, ತಿರುವುಗಳಲ್ಲಿ ಇದಿರಾಗುವ ಮರಗಿಡಗಳ ಕೊಂಬೆರೆಂಬೆಗಳನ್ನು ನಿವಾರಿಸುವ, ಹೆಲ್ಮೆಟ್ ಧಾರಣೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಜತೆಗೆ ಅಟೋ ಚಾಲಕರು ಮತ್ತು ಪೊಲೀಸರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ನೀಡುವುದೇ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರಕಾರ ಜಾರಿಗೊಳಿಸುವ ಕಾಯಿದೆಯಂತೆ ರಸ್ತೆ ಅವಘಡದಲ್ಲಿ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲು ಜನರು ಹಿಂಜರಿಯಬಾರದು, ಆಸ್ಪತ್ರೆಯವರೂ ಇಂಥ ದಾಖಲಾತಿಗೆ ನಿರಾಕರಿಸಬಾರದು ಎಂಬಿತ್ಯಾದಿ ಮಾಹಿತಿಯನ್ನು ಜನರಿಗೆ ನಾವು ವಿದ್ಯಾರ್ಥಿಗಳ ಮೂಲಕ ನೀಡುತ್ತಿದ್ದೇವೆ’ ಎಂದ ಅವರು ಆಳ್ವಾಸ್ನಲ್ಲಿ ಅಪಘಾತ ಚಿಕಿತ್ಸಾ ವಿಭಾಗವನ್ನು ಸುಸಜ್ಜಿತವಾಗಿರಿಸಲಾಗಿದ್ದು ದಿನದ 24 ತಾಸೂ ತೆರೆದಿಡಲಾಗಿದೆ; 3 ಮಂದಿ ಎಲುಬು ಕೀಲು ತಜ್ಞರು, ನರರೋಗ ತಜ್ಞರು, ಅವಘಡ ಚಿಕಿತ್ಸೆಯಲ್ಲಿ ಮುಂಬೈಯಲ್ಲಿ ವಿಶೇಷ ತರಬೇತಿ ಪಡೆದಿರುವ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ‘ ಎಂದು ಸಾಂದರ್ಭಿಕವಾಗಿ ತಿಳಿಸಿದರು.
ಆಳ್ವಾಸ್ ಹೆಲ್ತ್ ಸೆಂಟರ್ ಸಿಬ್ಬಂದಿಗಳೊದಿಗೆ ಶಿಕ್ಷಣ ಪ್ರತಿಷ್ಠಾನದ ಆರೋಗ್ಯ ಶಿಕ್ಷಣ ವಿಭಾಗಗಳ ಸುಮಾರು 500 ಮಂದಿ ವಿದ್ಯಾರ್ಥಿಗಳು 20 ತಂಡಗಳಲ್ಲಿ ಮೂಡಬಿದಿರೆ-ವಿದ್ಯಾಗಿರಿ-ಹಂಡೇಲು ಸುತ್ತು -ತೋಡಾರು- ಮಿಜಾರು ಹಾದಿಯಲ್ಲಿ ಸಾಗಿ ತಿರುವುಗಳಲ್ಲಿ ದೂರ ನೋಟಕ್ಕೆ ತೊಡಕಾಗಿರುವ ಮರಗಿಡಗಳ ಕೊಂಬೆರೆಂಬೆಗಳನ್ನು ಕತ್ತರಿಸಿದರು, ಅಗತ್ಯವಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದರು. ಐದಾರು ಕಿ.ಮೀ. ಉದ್ದದ ಹಾದಿಯ ಎರಡೂ ಬದಿಗಳಲ್ಲಿ ಕಸ, ತ್ಯಾಜ್ಯವಸ್ತುಗಳನ್ನು ಹೆಕ್ಕಿ ದೂರ ಸಾಗಿಸಿ ವಿಲೇವಾರಿ ಮಾಡಿದರು. ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರನ್ನು ತಡೆದು ನಿಲ್ಲಿಸಿ ಹೆಲ್ಮೆಟ್ಧಾರಣೆಯ ಬಗ್ಗೆ ತಿಳಿವಳಿಕೆ ಮೂಡಿಸಿದರು.
ಆಳ್ವಾಸ್ ಸ್ವಸ್ಥ ರಸ್ತೆ ಕಾರ್ಯಕ್ರಮ ಆರಂಭವಾದ ಬೆನ್ನಲ್ಲೇ ಸ್ವಯಂಸೇವಕ ವಿದ್ಯಾರ್ಥಿಗಳೊಂದಿಗೆ ಇದ್ದ ಮಿಜಾರು ನಾಗರಿಕರ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜ ಅವರು ರಾ.ಹೆ. ಎಕ್ಸಿಕ್ಯೂಟಿವ್ ಎಂಜಿನಿಯರ್ ರಮೇಶ್ ಅವರನ್ನು ಸಂಪರ್ಕಿಸಿ ಎಡಪದವು ವರೆಗೆ ರಸ್ತೆಗೆ ತೇಪೆ ಹಾಕುವ ಕೆಲಸವಾಗಿದೆ, ಅದರಿಂದೀಚೆಗೆ ಏಕೆ ಆಗಿಲ್ಲ? ಎಂದು ವಿಚಾರಿಸಿದರು. ತಕ್ಷಣ ಪ್ರತಿಕ್ರಿಯೆ ನೀಡಿದ ರಮೇಶ್ ಅವರು ‘ಎಡಪದವು-ಮಿಜಾರು-ಮೂಡಬಿದಿರೆ ರಸ್ತೆಯ ಹೊಂಡ ಗುಂಡಿಗಳನ್ನು ಕೂಡಲೇ ಮುಚ್ಚಿ ರಸ್ತೆ ಸುರಕ್ಷೆಗೆ ಕ್ರಮ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.