ಕಾಸರಗೋಡು : ಜೊತೆಗಾರರಿಬ್ಬರ ಸಾವನ್ನು ಹತ್ತಿರದಿಂದ ಕಂಡು, ಮೃತ್ಯು ಭಯದ ಬಂಧನದಲ್ಲಿದ್ದ ಓಂಗೋಲ್ ನಂದಿಯೊಂದು ಗೋಪ್ರೇಮಿಗಳ ನೆರವಿನಿಂದ ಅಮೃತಬಂಧುವಿನೆಡೆಗೆ ಸಾಗಿ ಬಂದ ಕ್ಷಣಗಳು ಅವಿಸ್ಮರಣೀಯ.
ಅನ್ಯಮತೀಯರು ಬಹುಸಂಖ್ಯಾತರಾಗಿರುವ ಕಾಸರಗೋಡು ಮೊಗ್ರಾಲ್ ಪುತ್ತೂರಿನ ವಧಾಗೃಹದಲ್ಲಿ ಒಂಟಿಯಾಗಿ, ಮೃತ್ಯು ಭಯದಿಂದ ತನ್ನ ಸರದಿಗಾಗಿ ಕಾಯುತ್ತಿದ್ದ ಓಂಗೋಲ್ ನಂದಿ, 2017 ರ ಫೆಬ್ರುವರಿ 11ರ ಶನಿವಾರದಂದು, ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಕಾಸರಗೋಡು ವಲಯ ಸಹಾಯ ಪ್ರಧಾನರಾದ ಮುರಳಿ ಮೊಗ್ರಾಲ್ರವರ ಕಣ್ಣಿಗೆ ಬಿತ್ತು. ತಕ್ಷಣ ಇವರಿಂದ ಸುದ್ದಿ ತಿಳಿದ ಕಾಸರಗೋಡು ವಲಯ ಗೋಸೇವಕರು, ಅಲ್ಲಿನ ಮುಖ್ಯಸ್ಥನನ್ನು ಸಂಪರ್ಕಿಸಿ ನಂದಿಯನ್ನು ಖರೀದಿಸುವ ಇಂಗಿತ ವ್ಯಕ್ತಪಡಿಸಿದರು. ಖರೀದಿಯ ಮೊತ್ತ, ಸಾಗಾಟ ವೆಚ್ಚವೂ ಸೇರಿ ಸುಮಾರು ಒಂದು ಲಕ್ಷದಷ್ಟು ಬೇಕಾಗಬಹುದೆಂದು ಮನಗಂಡು, ಒಂದು ದಿನದ ಸಮಯಾವಕಾಶವನ್ನು ಕೇಳಿದರು. ಇಳಿಸಂಜೆಯ ವೇಳೆಗೆ ಅಂತರ್ಜಾಲದ ಮುಖಾಂತರ ಮಾಡಿದ ತುರ್ತು ಮನವಿಗೆ ಅಭೂತಪೂರ್ವವಾದ ಸ್ಪಂದನವೇ ದೊರೆಯಿತು. ರಾತ್ರಿ ಕಳೆದು ಆದಿತ್ಯವಾರ ಬೆಳಗಾಗುವುದರೊಳಗೆ ನಾಡಿನಾದ್ಯಂತ ಗೋಪ್ರೇಮಿಗಳಿಂದ ನೆರವಿನ ಮಹಾಪೂರವೇ ಹರಿದು ಬಂತು.
ಕಾಸರಗೋಡು ವಲಯ ಪ್ರಧಾನರಾದ ರಮೇಶ್ ವೈ. ವಿ, ಈಶ್ವರ ಭಟ್ ಉಳುವಾನ, ಮುರಳಿ ಮೊಗ್ರಾಲ್, ಗಣೇಶ ಭಟ್ ಮುಣ್ಚಿಕಾನ, ಕೃಷ್ಣ ಪ್ರಸಾದ್ ತಲೆಂಗಳ ಇವರನ್ನೊಳಗೊಂಡ ನಮ್ಮ ತಂಡ ಪೂರ್ವ ನಿಗದಿಯಾದಂತೆ, ಆದಿತ್ಯವಾರ ಬೆಳಿಗ್ಗೆ ಮೊಗ್ರಾಲ್ ಪುತ್ತೂರನ್ನು ತಲುಪಿದೆವು. ನಂದಿಯ ಆವಶ್ಯಕತೆ ಇರುವ ದೇವಸ್ಥಾನದ ಪದಾಧಿಕಾರಿಗಳ ಸೋಗಿನಲ್ಲಿ, ಅಲ್ಲಿನ ಮುಖ್ಯಸ್ಥನಲ್ಲಿ ಮಾತುಕತೆ – ಚೌಕಾಸಿ ಮಾಡಿ, ಹಣ ಪಾವತಿಸಿ ಓಂಗೋಲ್ ನಂದಿಯನ್ನು ಖರೀದಿಸಿದೆವು. ದೇವಸ್ಥಾನಕ್ಕೆ ಹೋಗಲಿರುವ ನಂದಿಯೆಂಬ ಭಾವನೆಯಿಂದ ಸ್ನಾನ ಮಾಡಿಸಿ, ನಂದಿಯನ್ನು ವಾಹನವನ್ನೇರಿಸಿಕೊಟ್ಟರು..!
ಮುಣ್ಚಿಕಾನ ಗಣೇಶ ಭಟ್ಟರ ಚಲಿಸುವ ಗೋಆಲಯವನ್ನೇರಿದ ಬೃಹತ್ ಗಾತ್ರದ ಓಂಗೋಲ್ ನಂದಿ, ಮಧ್ಯಾಹ್ನ 12ರ ಸುಮಾರಿಗೆ ಬದಿಯಡ್ಕ ಭಾರತೀ ವಿದ್ಯಾಪೀಠಕ್ಕೆ ಆಗಮಿಸಿದಾಗ, ಅಲ್ಲಿ ಡಿಜಿಟಲೈಸೇಶನ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಗೋಭಕ್ತರೆಲ್ಲರೂ ಸಂತಸದಿಂದ ಸ್ವಾಗತಿಸಿ, ಗೋಗ್ರಾಸವನ್ನಿತ್ತರು.
ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಸಮೀಪದ ಕಾಂಚನದಲ್ಲಿ ಮೊಕ್ಕಾಮಿನಲ್ಲಿರುವುದನ್ನರಿತು, ಸಂಜೆಯ ಗೋಧೂಳಿ ಮುಹೂರ್ತದಲ್ಲಿ ನಂದಿಯನ್ನು ಹೊತ್ತ ವಾಹನ ಅಲ್ಲಿಗೆ ತಲುಪಿತು. ವಾಹನದಿಂದ ಇಳಿದ ನಂದಿಗೆ ಅಲ್ಲಿ ಸೇರಿದ್ದ ಜನರು, ಪರಿವಾರದವರು ಹೃದಯಸ್ಪರ್ಶಿ ಸ್ವಾಗತ ನೀಡಿದರು.
ರಾತ್ರಿ ಪೂಜೆಯನ್ನು ಪೂರೈಸಿ ನಂದಿಯ ವೀಕ್ಷಣೆಗೆ ಚಿತ್ತೈಸಿದ ಶ್ರೀ ಸಂಸ್ಥಾನ, ಓಂಗೋಲ್ ತಳಿಯ ಎಲ್ಲಾ ಶ್ರೇಷ್ಠ ಲಕ್ಷಣಗಳಿಂದ ಕೂಡಿದ ಈ ಬೃಹತ್ ನಂದಿ ಅಪರೂಪದಲ್ಲಿ ಅಪರೂಪವೇ ಸರಿ. ಇಂತಹ ನಂದಿಯನ್ನು ಕೊಲ್ಲುವುದಕ್ಕೆ ಕಟುಕರಿಗೆ ಮನಸ್ಸು ಹೇಗಾದರೂ ಬಂತೆಂದು ಉದ್ಘರಿಸಿದರು. ಇದೊಂದು ಅಮೂಲ್ಯ ರತ್ನ. ಆಂಧ್ರಪ್ರದೇಶದಲ್ಲೇ ಹೋಗಿ ಹುಡುಕಿದರೂ ಇಂತಹ ನಂದಿ ಸಿಗುವುದು ಕಷ್ಟ. ಈ ನಂದಿಯ ಬಿಡುಗಡೆಗಾಗಿ ಶ್ರಮಿಸಿದ ಗೋಸೇವಕರನ್ನೂ, ತುರ್ತು ಕರೆಗೆ ಸ್ಪಂದಿಸಿ ರಾತ್ರಿ ಬೆಳಗಾಗುವುದರೊಳಗೆ ಸಾಗರೋಪಾದಿಯಲ್ಲಿ ಆರ್ಥಿಕ ನೆರವಿತ್ತು ಸಹಕರಿಸಿದ ಗೋಭಕ್ತರನ್ನು ಶ್ರೀಗಳು ಮುಕ್ತಕಂಠದಿಂದ ಶ್ಲಾಘಿಸಿ, ಆಶೀರ್ವದಿಸಿದರು.
ನಂದಿಗೆ ಗೋಗ್ರಾಸವನ್ನೀಯುವಾಗ, ಬಿಗಿಯಾದ ಮೂಗುದಾರದಿಂದ ಅದು ಅನುಭವಿಸುತ್ತಿರುವ ವೇದನೆಯನ್ನು ಕಂಡ ಶ್ರೀಗಳು, ಮೂಗುದಾರವನ್ನು ತೆಗೆಯುವಂತೆ ಸೂಚಿಸಿದರು. ಮೂಗುದಾರ ಮಾತ್ರವಲ್ಲ ಮೃತ್ಯು ಕುಣಿಕೆಯಿಂದಲೂ ಮುಕ್ತನಾದ ಓಂಗೋಲ್ ನಂದಿ ಶ್ರೀಗಳ ಸಾನ್ನಿಧ್ಯದಲ್ಲಿ ನಿಟ್ಟುಸಿರು ಬಿಟ್ಟು ಧನ್ಯನಾದ.!!
ಶ್ರೀ ಸಂಸ್ಥಾನದವರ ನೇತೃತ್ವದಲ್ಲಿ ಮಲೆಮಹದೇಶ್ವರ ಬೆಟ್ಟದ ಗೋಆಂದೋಲನದ ಸಂದರ್ಭದಲ್ಲೇ ಮೃತ್ಯುಂಜಯನಾಗಿ ಶ್ರೀಮಠಕ್ಕಾಗಮಿಸಿದ ಈ ನಂದಿಯು ಶ್ರೀಸಂಸ್ಥಾನದಿಂದ “ಮಹದೇಶ್ವರ” ನೆಂದು ನಾಮಾಂಕಿತನಾದ. ಮೃತ್ಯು ಬಂಧನದಿಂದ ಅಮೃತಬಂಧುವಿನೆಡೆಗೆ ಸಾಗಿ ಬಂದುದು ಮಹದೇಶ್ವರನ ಪೂರ್ವಜನ್ಮದ ಪುಣ್ಯವೇ ಸರಿ.
ಲೇಖನ: ಕುಮಾರ್ ಯಸ್. ಪೈಸಾರಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.