ಸಮ್ಮೇಳನಗಳಿಂದ ಸಾಂಸ್ಕೃತಿಕ ಹೆಮ್ಮೆಯ ಮನೋಭಾವ: ಗಣೇಶ್ ಕಾರ್ಣಿಕ್
ಬೆಳ್ತಂಗಡಿ : ಜಗತ್ತಿನ ಗಮನ ಸೆಳೆಯುವಂತಹ ವಿಭಿನ್ನ ಸಂಸ್ಕೃತಿಯೊಂದಿಗೆ ಗುರುತಿಸಿಕೊಂಡಿರುವ ಭಾರತದ ಕುರಿತು ಹೆಮ್ಮೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಕಾಣ್ಕೆ ನೀಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ, ಅನಿವಾಸಿ ಭಾರತೀಯ ಸಂಘದ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಉಜಿರೆಯಲ್ಲಿ ಶುಕ್ರವಾರ ಆರಂಭಗೊಂಡ 21 ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಸಂದರ್ಭದಲ್ಲಿ ಅವರು ಮಾತನಾಡಿದರು.
ನಾವು ಭಾರತೀಯರೆಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಇರಬೇಕು. ಈ ದೇಶದ ಸಂಸ್ಕೃತಿಯ ವಿಶೇಷತೆಯನ್ನು ಸಾಹಿತ್ಯದ ಮೂಲಕ ಕಂಡುಕೊಳ್ಳಬಹುದು. ಅಪಾರ ಜ್ಞಾನಭಂಡಾರ ಹೊಂದಿದ ಸಾಹಿತ್ಯದ ಸತ್ವದ ಕುರಿತು ಸಮ್ಮೇಳನಗಳಲ್ಲಿ ಚರ್ಚೆ ನಡೆಯುವುದರಿಂದ ಹೊಸ ಪೀಳಿಗೆಗೆ ಪರಂಪರೆಯ ಪ್ರಜ್ಞೆ ದಾಟಿಕೊಳ್ಳುತ್ತದೆ ಎಂದರು.
ಹಲವು ಕಡೆಗಳಿಂದ ಭಾರತ ದಾಳಿಗೀಡಾದರೂ ಇಲ್ಲಿಯ ಸತ್ವಕ್ಕೆ ಚ್ಯುತಿಯುಂಟಾಗಿಲ್ಲ. ಆಕ್ರಮಣದ ನಡುವೆಯೂ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿ ಬೇರೂರಿರುವುದು ವಿಶೇಷವಾದುದು. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಹೊಸ ನಾಡು ಕಟ್ಟುವ ಕೆಲಸ ಯುವ ಮನಸ್ಸುಗಳಿಂದಾಗಬೇಕು ಎಂದು ನುಡಿದರು.
18 ವರ್ಷಗಳ ಬಳಿಕ ಉಜಿರೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಬಹಳ ಸಂಭ್ರಮದ ವಿಚಾರ. ಉಳಿದೆಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಇಲ್ಲಿ ನಡೆಯುವ ಸಮ್ಮೇಳನವು ಮಾದರಿಯಾಗಬೇಕು. ಜಗತ್ತಿಗೆ ಬೆಳಕಿನ ಸಂದೇಶ ನೀಡುವುದೇ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದರು.
ಸಮ್ಮೇಳನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಜಿರೆಯ ಜುಮ್ಮಾ ಮಸೀದಿಯ ಮುಖ್ಯ ಗುರುಗಳಾದ ಅಬುಸುಫಿಯಾನ್ ಎಚ್. ಐ. ಇಬ್ರಾಹಿಂ ಮದನಿ ಕನ್ನಡ ಸಾಹಿತ್ಯದ ಸಮೃದ್ಧ ಪರಂಪರೆಯನ್ನು ನೆನಪಿಸಿಕೊಂಡರು. ಮಾನವೀಯ ಮೌಲ್ಯಗಳೊಂದಿಗಿನ ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಮನ್ನಣೆ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.
ಕನ್ನಡದ ನೆಲದಲ್ಲಿ ಬಸವಣ್ಣ, ಸಂತ ಶಿಶುನಾಳ ಷರೀಫ, ಕನಕದಾಸರಂಥ ದಾರ್ಶನಿಕರು ಆಗಿಹೋಗಿದ್ದಾರೆ. ಅವರು ನೀಡಿದ ವೈಚಾರಿಕ ಕಾಣ್ಕೆಗಳನ್ನು ನೆನಪಿಸಿಕೊಂಡು ಯುವ ಪೀಳಿಗೆಗೆ ಮಾನವೀಯ ಮೌಲ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕೆಲಸ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಉಜಿರೆ ಗ್ರಾಮಪಂಚಾಯತ್ ಅಧ್ಯಕ್ಷ ಕೆ. ಶ್ರೀಧರ ಪೂಜಾರಿ ರಾಷ್ಟ್ರಧ್ವಜಾರೋಹಣವನ್ನು ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ನೆರವೇರಿಸಿದರು.
ವರದಿ: ಭರತ್ ಭಾರದ್ವಾಜ್. ಹೆಚ್ ಎಸ್
ಚಿತ್ರಗಳು: ಚೈತನ್ಯ ಕುಡಿನಲ್ಲಿ
ಸಮ್ಮೇಳನದ ಮಾಧ್ಯಮ ಕೇಂದ್ರಕ್ಕೆ ಚಾಲನೆ
ಭಾಷೆ ಮತ್ತು ಸಾಹಿತ್ಯದಬೆಳವಣಿಗೆಗೆ ಪೂರಕವಾಗುವ ಸಮ್ಮೇಳನಗಳ ಆಶಯಗಳನ್ನು ಪ್ರಚುರಪಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಜನಾರ್ಧನಸ್ವಾಮಿ ದೇವಸ್ಥಾನದಪ್ರಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 21 ನೇ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಾಧ್ಯಮ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮಾಧ್ಯಮ ಕೇಂದ್ರದ ಮೂಲಕ ಕಳುಹಿಸಲಾಗುವ ಸಮ್ಮೇಳನ ಸಂಬಂಧಿತ ವರದಿಗಳು ಹಲವರನ್ನು ತಲುಪಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಡಾ.ಬಿ.ಯಶೋವರ್ಮ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ವಿಧಾನಪರಿಷತ್ತಿನ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗೌರವ ಕಾರ್ಯದರ್ಶಿ ಡಾ.ಎಂ.ಪಿ.ಶ್ರೀನಾಥ್, ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ್ ಹೆಗ್ಡೆ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಪವಿತ್ರ ಬಿದ್ಕಲ್ಕಟ್ಟೆ
ಅನ್ನಛತ್ರ ಉದ್ಘಾಟನೆ
ಉಜಿರೆಯಲ್ಲಿ ಶುಕ್ರವಾರ ಆರಂಭಗೊಂಡ ದ.ಕ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ ಭೋಜನ ಸಿದ್ಧಪಡಿಸಲು ನಿರ್ಮಿಸಲಾದ ’ಅನ್ನಪೂರ್ಣ’ ಪಾಕಶಾಲೆಗೆ ಶ್ರೀ ಜನಾರ್ಧನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಚಾಲನೆ ನೀಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.