ಧಾರವಾಡ: ಭೂಮಿಯ ಮಾಲಿಕರಿಗೆ ಅಲ್ಲಿನ ನೀರಿನ ಮೇಲಿನ ಸಂಪೂರ್ಣ ಹಕ್ಕು ಬಿಟ್ಟುಕೊಟ್ಟು, ನೀರಿನ ಖಾಸಗಿಕರಣ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಧಾರವಾಡ ಸಾಹಿತ್ಯ ಸಂಭ್ರಮದ ಗೋಷ್ಠಿಯಲ್ಲಿ ಕೇಳಿಬಂತು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸಾಹಿತ್ಯ ಸಂಭ್ರಮದ 2ನೇ ದಿನದ ಮೊದಲ ಗೋಷ್ಠಿ ’ರಾಷ್ಟ್ರೀಯ ಜಲ ನೀತಿ’ ಕುರಿತಾಗಿತ್ತು. ಸಂಪನ್ಮೂಲ ವ್ಯಕ್ತಿಗಳು ನೀರಿನ ಬಳಕೆ, ಇರುವ ಪ್ರಮಾಣ, ಅಂತರ್ಜಲ, ಅಂತಾರಾಜ್ಯ ನದಿ ವಿವಾದಗಳು, ನದಿ ನೀರಿನ ಹಂಚಿಕೆ ಹಾಗೂ ಹಕ್ಕುಗಳ ಕುರಿತು ಚರ್ಚಿಸಿದರು.
ನದಿ ವಿವಾದ ಅಥವಾ ನೀರಿನ ಹಂಚಿಕೆ ವಿಷಯ ಬಂದಾಕ್ಷಣ ಅನೇಕರು ರಾಷ್ಟ್ರೀಯ ಜಲ ನೀತಿ ಜಾರಿಯಾಗಲಿ ಎನ್ನುತ್ತಾರೆ. ಆದರೆ, ಜಲ ನೀತಿ ಎಂದರೆ ಅದೊಂದು ಅಧಿನಿಯಮ ಅಥವಾ ಕಾನೂನಲ್ಲ. ಅದೊಂದು ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡಿರುವ ವಿಧಾನ ಎಂದು ರಾಜೇಂದ್ರ ಪೋದ್ದಾರ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಜಲನೀತಿಯಲ್ಲಿ, ರಾಜ್ಯಗಳ ನದಿ ನೀರಿನ ಹಕ್ಕಿನ ಸ್ಪಷ್ಟತೆ, ಜಲ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲುದಾರಿಕೆಗೆ ಆದ್ಯತೆ, ನೀರಿನ ಕೊಡುಗೆ, ಹರಿವು ಮತ್ತು ಲಭ್ಯತೆ ವಿವರಗಳ ಮುಕ್ತತೆ ಹೀಗೇ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡದ್ದು ರಾಷ್ಟ್ರೀಯ ಜಲನೀತಿ. ಇದು 1982 ರಲ್ಲಿಯೇ ಸಿದ್ಧವಾಗಿದ್ದು, ನಂತರ ತಿದ್ದುಪಡಿಗೊಂಡು ಸದ್ಯ 2016 ರ ರಾಷ್ಟ್ರೀಯ ಜಲನೀತಿಯ ಹಂತದಲ್ಲಿದ್ದೇವೆ ಎಂದರು.
ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶ, ಕೃಷ್ಣಾ ಬೇಸನ್ ಹಾಗೂ ಅದರ ಉಪ ಬೇಸನ್ಗಳ ಗಾತ್ರ, ಸಾಮರ್ಥ್ಯಗಳ ಕುರಿತು ಚರ್ಚೆಯಾಯಿತಲ್ಲದೇ, ನೀರಿನ ಹಂಚಿಕೆ ಕುರಿತು ವಿವಿಧ ಸಿದ್ಧಾಂತಗಳೂ(Doctrine of water Distribution) ಬಂದಿವೆ ಎಂದು ಪೋದ್ದಾರ ಹಾಗೂ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಹುಗ್ಗಿ ಅವರು ಹೇಳಿದರು.
ನದಿ ನೀರಿನ ಬಳಕೆಯ ಕುರಿತು ಅನುಭೋಗದ (ಈಸ್ಮೆಂಟ್ ರೈಟ್) ಹಕ್ಕು, ನದಿ ತೀರಗಳ ಹಕ್ಕುಗಳ ಬಗ್ಗೆ ಸ್ಪಷ್ಟತೆ ಇರಬೇಕಲ್ಲದೇ, ಅಂತರ್ಜಲ ಬಳಕೆಗೆ ಸಂಬಂಧಿಸಿದಂತೆ ಅದನ್ನು ನಿಯಂತ್ರಿಸಲು ಸೂಕ್ತ ಕಾನೂನಿನ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪಾಟೀಲ್ ಅವರು ಹೇಳಿದರು.
ಗಂಗಾ ಮತ್ತು ಕಾವೇರಿ ನದಿ ಜೋಡಣೆ, ಕಾವೇರಿ, ಮಹದಾಯಿ ವಿವಾದ, ನೀರಿನ ಮಾರಾಟದ ಸಾಧಕ ಬಾಧಕಗಳ ಕುರಿತು ಕೇಳುಗರ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.
ನೀರು ಮಾರಾಟದ ವಸ್ತುವಾಗಕೂಡದು. ಏಕೆಂದರೆ ನೀರಿನ ಬೆಲೆ ಏರಿದಂತೆಲ್ಲ ಬಡವರೇನು ಮಾಡಬೇಕು ? ಆದ್ದರಿಂದ ನೀರು ಉಳ್ಳವರ ಪಾಲಷ್ಟೇ ಅಲ್ಲ, ಅದು ನೈಸರ್ಗಿಕ ಹಕ್ಕು. ಅದನ್ನು ಉಳಿಸಿ, ಅಂತರ್ಜಲ ಹೆಚ್ಚಿಸಿ ಸರ್ವರಿಗೂ ಸಮಾನವಾಗಿ ಲಭಿಸುವಂಥ ವಾತಾವರಣ ನಿರ್ಮಾಣ ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸರ್ಕಾರಗಳ ಪ್ರಯತ್ನ ಅಗತ್ಯ ಎಂಬ ಆಶಯದೊಂದಿಗೆ ಗೋಷ್ಠಿ ವಿರಾಮಗೊಂಡಿತು.
ಗೋಷ್ಠಿಯಲ್ಲಿ ರಾಜೇಂದ್ರ ಪೋದ್ದಾರ, ವಿ.ಪಿ.ಹುಗ್ಗಿ, ಸಿ.ಸಿ ಪಾಟೀಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಲೋಹಿತ ನಾಯ್ಕರ್ ಅವರ ನಿರ್ದೇಶನದಲ್ಲಿ ಗೋಷ್ಠಿ ಜರುಗಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.