ಹುಬ್ಬಳ್ಳಿ: ಯಾರೋ ಹೇಳಿದ್ದನ್ನು ನಂಬಿ ಬದುಕುವುದಕ್ಕಿಂತ, ಮೊದಲು ನಿನ್ನಲ್ಲೇ ನಿನಗೆ ನಂಬಿಕೆ ಇರಲಿ, ಅಂದರೆ ನೀನೇ ಅಗಾಧವಾದುದನ್ನು ಸಾಧಿಸುತ್ತೀಯಾ ಎಂದಿರುವ ಸ್ವಾಮಿ ವಿವೇಕಾನಂದರು ನಿಜಕ್ಕೂ ’ಪ್ರಾಕ್ಟಿಕಲ್ ವೇದಾಂತಿ’ ಎಂದು ಖ್ಯಾತ ವಾಗ್ಮಿ ತೇಜಸ್ವಿ ಸೂರ್ಯ ಹೇಳಿದರು.
ನಗರದ ಬಿವಿಬಿ ಕಾಂಪಸ್ನಲ್ಲಿರುವ ಬಿ.ಟಿ ಅಡಿಟೋರಿಯಮ್ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶತಮಾನೋತ್ಸವ ವರ್ಷಾಚರಣೆ ನಿಮಿತ್ತ ಸಮರ್ಥ ಭಾರತ ಸಂಸ್ಥೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿವೇಕ್ ಬ್ಯಾಂಡ್ ಅಭಿಯಾನ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಪ್ರಸ್ತುತತೆ ಕುರಿತು ಪ್ರಖರವಾಗಿ ವಿಚಾರ ಮಂಡಿಸಿದ ಅವರು, ವಿವೇಕಾನಂದರು ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಅಂಕಗಳ ಬೆನ್ನು ಹತ್ತಿದವರಲ್ಲ, ಪ್ರಶ್ನೆ ಕೇಳದೇ ಯಾವುದನ್ನು ಏಕಪಕ್ಷೀಯವಾಗಿ ಒಪ್ಪಿಕೊಂಡವರಲ್ಲ, ಏಕೆಂದರೆ ಅವರಲ್ಲಿ ಬೌದ್ಧಿಕ ದಾರಿದ್ರ್ಯತೆ ಇರಲಿಲ್ಲ. ಅಷ್ಟೇ ಏಕೆ ಅವರು ಅಪ್ಪಟ ಮಹಿಳಾವಾದಿಯೂ ಆಗಿದ್ದರು ಎಂದರು.
ಶಿಕ್ಷಣದಿಂದಲೇ ಸಕಲ ಸಮಸ್ಯೆಗೂ ಪರಿಹಾರ ಎಂದು ನಂಬಿದ್ದ ಅವರು, ಮಾತೃಭೂಮಿಯೊಂದಿಗೆ ಸಂಬಂಧವೇ ಇಲ್ಲದ ಪಾಶ್ಚಾತ್ಯ ಶಿಕ್ಷಣದಿಂದ ನೈತಿಕತೆ ವೃದ್ಧಿಯನ್ನು ಅಪೇಕ್ಷಿಸುವುದು ಹುಚ್ಚುತನ ಎಂದು ವಿವೇಕಾನಂದರು ಭಾವಿಸಿದ್ದರು. ಪೂರ್ವ ಹಾಗೂ ಪಶ್ಚಿಮದ ನಡುವಿನ ಶೈಕ್ಷಣಿಕ, ಸಾಂಸ್ಕೃತಿಕ ಸೇತುವೆಯಾಗಿಯೂ ಬದುಕಿದ ಅವರು, ಧರ್ಮ ಹಾಗೂ ವಿಜ್ಞಾನದ ಸಮ್ಮಿಳತದ ಕುರಿತು ಕುತೂಹಲಿಯಾಗಿದ್ದರು ಎಂದು ಹೇಳಿದರು.
ವೇದ, ಶಾಸ್ತ್ರ, ಉಪನಿಷತ್ಗಳಲ್ಲಿ ಪಾಂಡಿತ್ಯ ಹೊಂದಿದ್ದ ವಿವೇಕಾನಂದರು, ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲೂ ವಿಶೇಷ ಪ್ರಭುತ್ವ ಹೊಂದಿದ್ದರು. ಬಡತನ, ಮೂಢ ನಂಬಿಕೆಯ ದೇಶ ಎಂದು ಭಾರತ ಜರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಸಾಗರದಾಚೆಯೂ ಭಾರತದ ನೈಜ ಅಂತಃಸತ್ವದ ಪ್ರಖರ ಬೆಳಕನ್ನು ಹರಿಸಿದರು ಎಂದರು.
ಯುವ ಶಕ್ತಿಯ ಮೇಲೆ ವಿವೇಕಾನಂದರು ಅಪಾರ ವಿಶ್ವಾಸ ಹೊಂದಿದ್ದರು. ಆದ್ದರಿಂದ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕಿದೆ. ಅವರ ಬದುಕಿನ ಕೆಲ ಅಂಶಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದ ಅವರು, ಯುವಜನತೆಯು ಧನಾತ್ಮಕ ಚಿಂತನೆಯಲ್ಲಿ ಬದುಕಬೇಕು ಎಂದು ತೇಜಸ್ವಿ ಸೂರ್ಯ ಕಿವಿಮಾತು ಹೇಳಿದರು.
ಸುನೀಲ್ ಗೋಖಲೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಅಂಧತ್ವ ನಿವಾರಣೆ, ಕಣ್ಣಿನ ದಾನದ ಮಹತ್ವ ಕುರಿತು ಮಾತನಾಡಿದರು. ಮುಖ್ಯ ಅತಿಥಿ ರವೀಂದ್ರ ಭೂಸನೂರ ಅವರು ಮಾತನಾಡಿ ರಾಷ್ಟ್ರನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಕುರಿತು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವೇಕ ಬ್ಯಾಂಡ್ ಹಾಗೂ ಟೀ ಶರ್ಟ್ ಬಿಡುಗಡೆ ಮಾಡಲಾಯಿತು. ಆರೂಢ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಪ್ರಸ್ತುತಪಡಿಸಿದರು. ಪೂರ್ಣಾನಂದ ಮಳಲಿ ಅವರು ಸ್ವಾಗತ, ಪರಿಚಯ ಹಾಗೂ ಪ್ರಸ್ತಾವನೆಯನ್ನು ನಿರ್ವಹಿಸಿದರು. ಶ್ರೀನಿವಾಸ ಪಾಟೀಲ್ ವಂದಿಸಿದರು. ವಿಜಯ ಹಿರೇಮಠ ವಂದೇ ಮಾತರಂ ಪ್ರಸ್ತುತಪಡಿಸಿದರು.
ಸಮುತ್ಕರ್ಷದ ಜಿತೇಂದ್ರ ನಾಯಕ, ಉಚಿತ ಮನೆ ಪಾಠದ ಚಂದ್ರಶೇಖರ ಗೋಕಾಕ, ವೀಣಾ ಭಟ್, ಜಸ್ಮೀರ್ ಸಿಂಗ್, ವಿನಾಯಕ ತಲಗೇರಿ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.