ಹುಬ್ಬಳ್ಳಿ : ಒಂದೊಂದು ಗೋವು ಕಡಿಮೆಯಾದ ಹಾಗೆ ಭಾರತದ ಪ್ರಾಣ ಕ್ಷೀಣಿಸಿದಂತಾಗಿ, ಅಸ್ತಿತ್ವವೇ ಅಲುಗಾಡಿದಂತಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಗೋ ರಕ್ಷಣೆ ಸಂಕಲ್ಪ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದರು.
ನಗರದ ಮೂರುಸಾವಿರಮಠ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಗಲಗೋಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋಟಿ ದೇವರಿಗಿಂದ ಶ್ರೇಷ್ಠಳಾದ ಗೋ ಮಾತೆ ನಮ್ಮೆಲ್ಲರ ಬದುಕಿನ ಆದಿಯಾಗಿದ್ದಾಳೆ. ಗುರು, ಸಂತರಿಗಿಂತಲೂ ಆಕೆಯೇ ಶ್ರೇಷ್ಠ ಎನ್ನುವ ಕಾರಣಕ್ಕೆ ಗೃಹ ಪ್ರವೇಶದ ಸಂದರ್ಭದಲ್ಲಿ ಅವಳೇ ಮೊದಲು ಗೃಹ ಪ್ರವೇಶಿಸುವಂತೆ ಮಾಡುತ್ತೇವೆ. ಹೆತ್ತಾಕೆ ನಮಗೆ ಹಾಲುಣಿಸಿದರೆ, ಆಕೆಗೆ ಗೋವು ಹಾಲು ನೀಡುತ್ತಾಳೆ. ಹೀಗೆ ಬದುಕಿನ ಮೂಲವಾದ ಅವಳನ್ನು ಯಾರೂ ಮರೆಯಬಾರದು. ಮರೆತರೆಂದರೆ ಅವರಿಗೆ ಭವಿಷ್ಯವೇ ಇಲ್ಲ. ನೆಲತಾಯಿಯ ಬೇರಾದ ಆಕೆಯ ಬದುಕು ಕ್ಷೀಣಿಸುತ್ತಿದೆ. ಇದು ಹೀಗೆ ಮುಂದುವರಿದರೆ ಮನುಜನ ಭವಿಷ್ಯವೇ ಕಗ್ಗತ್ತಲಾಗುತ್ತದೆ ಎಂದರು.
ತಾಯಿಗೆ ತನ್ನ ಮಕ್ಕಳು ಎಂದೂ ಭಾರವಲ್ಲ. ಹಾಗೆಯೇ ಗೋ ಮಾತೆಗೆ ನಾವು ಎಂದೂ ಭಾರವಾಗಿಲ್ಲ. ಅವಳ ಮೇಲೆ ಎಷ್ಟು ಸಾಧ್ಯವೋ ಅಷ್ಟು ಭಾರ ಹಾಕಿzವೆ. ಅವೆಲ್ಲವನ್ನು ಅವಳು ತಾಳ್ಮೆಯಿಂದ ಸಹಿಸಿಕೊಂಡು ಪರೋಪಕಾರಕ್ಕಾಗಿ ತನ್ನ ಜೀವವನ್ನು ಸವೆಸುತ್ತಿದ್ದಾಳೆ. ಆದರೆ ನಮಗೆ ಆಕೆ ಭಾರವಾಗುತ್ತಿದ್ದಾಳೆ. ಅವಳನ್ನು ಸಲುಹಲು ಸಾಧ್ಯವಾಗದೆ ಕಟುಕನ ಕೈಗೆ ನೀಡುತ್ತಿzವೆ. ಕ್ಷಣ ಕ್ಷಣಕ್ಕೂ ಗೋವಿನ ಸಂಖ್ಯೆ ಕಡಿಮೆಯಾಗುತ್ತಿದ್ದು, ದೇಶದ ಪ್ರಾಣವೇ ಕಡಿಮೆಯಾದಂತಾಗಿದೆ. ಇದನ್ನು ತಡೆಗಟ್ಟಲು ದೇಶದಲ್ಲಿ ಸೂಕ್ತ ಕಾನೂನು ಇಲ್ಲದಿರುವುದು. ಈ ಹಿನ್ನಲೆಯಲ್ಲಿ ಶ್ರೀ ರಾಮಚಂದ್ರಾಪುರಮಠ ಗೋ ಮಂಗಲಯಾತ್ರೆ ಮುಖಾಂತರ, ಗೋ ರಕ್ಷಣೆ ಸಂಕಲ್ಪಕ್ಕಾಗಿ ಸಾರ್ವಜನಿಕರ ಮುಂದೆ ಬಂದಿದೆ ಎಂದು ಶ್ರೀಗಳು ಹೇಳಿದರು.
‘ನಿನ್ನ ತಾಯಿಯ ಕೊಬ್ಬು ನೀನೇ ತಿನ್ನು’ ಎಂದು ಬ್ರಿಟೀಷರು ಹೇಳಿದಾಗ ಅಂದು ಮಂಗಳಪಾಂಡೆ ಎಂಬಾತ, ಬ್ರಿಟೀಷರ ವಿರುದ್ಧ ಧಂಗೆ ಎದ್ದು, ಅವರ ಗುಂಡಿಗೆ ಬಲಿಯಾಗುತ್ತಾನೆ. ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲ್ಪಟ್ಟು, ಮುಂದೊಂದು ದಿನದ ಸ್ವಾತಂತ್ರ್ಯಕ್ಕೆ ಬುನಾದಿಯಾಯಿತು ಎಂದರು.
ಸಾನ್ನಿಧ್ಯವಹಿಸಿದ್ದ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಹೆತ್ತ ತಾಯಿ ಎರಡು ವರ್ಷದವರೆಗೆ ಹಾಲುಣಿಸಿದರೆ, ಗೋ ಮಾತೆ ಜೀವನ ಪರ್ಯಂತ ಹಾಲುಣಿಸುತ್ತಲೇ ಇರುತ್ತಾಳೆ. ಅಂತಹ ತಾಯಿಯ ತಳಿ ಇಂದು ಸಂಕಷ್ಟದಲ್ಲಿವೆ. ಇದನ್ನರಿತ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಗೋ ಸಂಸರಕ್ಷಣೆಯ ಸಂಕಲ್ಪ ಮಾಡಿದ್ದು, ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಕುಂದಗೋಳ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ, ನಾಗಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಲಿಂಗರಾಜ ಪಾಟೀಲ, ರಮೇಶ ಕುಲಕರ್ಣಿ, ನಾಗೇಶ ಕಲಬುರ್ಗಿ, ಭಾರತಿ ಪಾಟೀಲ ಇನ್ನಿತರರು ಇದ್ದರು.
ವ್ಯತಿರಿಕ್ತ ಪರಿಣಾಮ
ದೇಶಿ ತಳಿಯಲ್ಲ ಜರ್ಸಿ ಆಕಳಿನ ಹಾಲು ಕುಡಿದರೆ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಹಾಲನ್ನು ಜಾಸ್ತಿ ಮಾಡುವುದಕ್ಕೋಸ್ಕರವೇ ಅವುಗಳಿಗೆ ಕೆಲವು ರಾಸಾಯನಿಕ ನೀಡಿ ಸಾಕುತ್ತಾರೆ. ಅದು ದೇಶಿ ಆಕಳ ಹಾಲಿಗಿಂದ ತೀರಾ ಭಿನ್ನವಾಗಿರುತ್ತದೆ. ಆ ಕುರಿತು ನೀವು ಅಧ್ಯಯನದ ವರದಿ ಓದಿದರೆಂದರೆ, ಈ ಕ್ಷಣದಿಂದಲೇ ಆ ಹಾಲನ್ನು ಕುಡಿಯುವುದು ಬಿಡುತ್ತೀರಿ. ಅಷ್ಟೊಂದು ವಿಷಕಾರಿಯಾಗಿರುತ್ತದೆ.
-ಶ್ರೀ ರಾಘವೇಶ್ವರ ಶ್ರೀಗಳು, ರಾಮಚಂದ್ರಾಪುರಮಠ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.