ಗುರುಗಳ ಆಶಯದಂತೆ ಜಿ.ಎಸ್.ಬಿ. ಸಮಾಜ ಐಕ್ಯತೆಯೊಂದಿಗೆ ಬಲಿಷ್ಠವಾಗಲಿ: ಪಿ.ದಯಾನಂದ ಪೈ
ಮಂಗಳೂರು: ಶ್ರೀ ಕಾಶೀಮಠದ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಯುಗಪುರುಷ. ನಮ್ಮ ಜೀವಿತಾವಧಿಯಲ್ಲಿ ಭಗವಂತನನ್ನು ಈ ಸದ್ಗುರುವಿನಲ್ಲಿ ಕಂಡ ಸೌಭಾಗ್ಯ ನಮ್ಮದಾಯಿತು. ಮಂದಹಾಸದ ನಗುಮೊಗ, ಸಮಾಜದ ಒಳಿತಿಗಾಗಿ ಉನ್ನತಿಗಾಗಿ ಅನುಕರಣೀಯ ಆದರ್ಶವನ್ನು ತಮ್ಮದಾಗಿಸಿಕೊಂಡ ಗುರುವರ್ಯರು ಇತಿಹಾಸವನ್ನೇ ಬರೆದವರು. ಅವರ ಆಶಯದಂತೆ ಜಿ.ಎಸ್.ಬಿ. ಸಮಾಜ ಐಕ್ಯತೆಯೊಂದಿಗೆ ಬಲಿಷ್ಠವಾಗಬೇಕು. ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಉದ್ಯಮಿ ಪಿ.ದಯಾನಂದ ಪೈ ಹೇಳಿದರು. ಅವರು ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ವತಿಯಿಂದ ರವಿವಾರ ಸಂಘನಿಕೇತನದಲ್ಲಿ ನಡೆದ ಶ್ರೀಮದ್ ಸುಧೀಂದ್ರ ತೀರ್ಥ ಗುರುವಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆ ಸ್ವಾರ್ಥದಿಂದ ಕೂಡಿರಬಾರದು. ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಸಂತಸ,ಪ್ರೀತಿ, ಗೌರವವನ್ನು ನಾವು ಇತರರಿಗೆ ನೀಡಿದಾಗ ಅದರ ನಿಜವಾದ ಆನಂದ ಮರಳಿ ದೊರೆಯುತ್ತದೆ ಎಂದ ಅವರು ಗುರುವರ್ಯರು ನೀಡಿದ ಸಂಸ್ಥಾನದ ಉತ್ತರಾಧಿಕಾರಿ ಶ್ರೀಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಬಾಗೇಮಂಡಲದಲ್ಲಿ ಗುರುಗಳ ಮಹದಾಸೆಯಾಗಿದ್ದ ಆಯುರ್ವೇದ ವಾಟಿಕಾ ನಿರ್ಮಾಣ ಕಾರ್ಯದ ಜತೆಗೆ ಸಮಾಜವನ್ನು ಉನ್ನತಿಯ ಪಥದಲ್ಲಿ ಮುನ್ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಸಮಾಜದ ‘ಯೋಜನೆ’
ಶ್ರೀನಿವಾಸ ನಿಗಮಾಮಗಮ ಪಾಠ ಶಾಲೆಯ ಪ್ರಾಂಶುಪಾಲ ವೇ,ಮೂ. ಶೃಂಗೇರಿ ಸುಧಾಕರ ಭಟ್ ಗುರುಗುಣಗಾನದಲ್ಲಿ ಗುರು ಸುಧೀಂದ್ರರು ಪೂವರ್ಾಶ್ರಮದಲ್ಲಿ ಬಯಸಿದಂತೆ ಎಂಜಿನಿಯರ್ ಆಗಿದ್ದರೆ ಒಂದಷ್ಟು ಮನೆ, ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಆದರೆ ಅವರು ಗುರುವಾಗಿ ಸಮಾಜದ ಜವಾಬ್ದಾರಿ ಪಡೆದದ್ದರಿಂದಾಗಿ ಸಮಾಜದ ನಕ್ಷೆ, ಯೋಜನೆ, ಚಿಂತನೆ ಬದಲಾಯಿಸಿ ಉನ್ನತಿಗೆ ಕೊಂಡೊಯ್ದಿದ್ದಾರೆ. ಸಮಾಜದಲ್ಲಿ ವ್ಯಾಸಪೂಜೆಗೆ ಅವಕಾಶಮಾಡಿಕೊಟ್ಟ ವ್ಯಾಸಮಂದಿರವನ್ನು ಹರಿದ್ವಾರದಲ್ಲಿ ಅಷ್ಟಕೋನಾಕೃತಿಯಲ್ಲಿ ರೂಪಿಸಿ ಸಮಾಜವು ಅಷ್ಟೈಶ್ವರ್ಯ ಮತ್ತು ಅಷ್ಟಾಂಗಯೋಗ ಸಂಪನ್ನವಾಗುವಂತೆ ಮಾಡಿದವರು. ಕುಂಡಲಿಯಲ್ಲಿ ಗುರು ರಾಶಿ ಬದಲಿಸಿದಾಲೆಲ್ಲ ಅಲ್ಲಲ್ಲಿ ಮೇಳಗಳಾಗುತ್ತವೆ. ಜಿ.ಎಸ್.ಬಿ. ಸಮಾಜಕ್ಕೆ ಗುರುಗಳು ಮೊಕ್ಕಾಂ ಮಾಡಿದಲ್ಲೆಲ್ಲ ಕುಂಭ ಮೇಳದ ಅನುಭವವಾಗಿದೆ ಎಂದರು.
ಕೋಟೇಶ್ವರ ಪಟ್ಟಾಭಿರಾಮಚಂದ್ರ ದೇವಳದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್ ಮಾತನಾಡಿ ಗುರು ಸುಧೀಂದ್ರರು ಸ್ವಾವಲಂಬಿ ಮತ್ತು ಇತರರಿಗೆ ನೆರವಾಗುವ ಶಕ್ತಿಯುಳ್ಳ ಸಮಾಜವನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ನಡು ಹಗಲು ಎಲ್ಲರಿಗೂ ಸೂರ್ಯ ನೆತ್ತಿಯ ಮೇಲೆ ಕಂಡಂತೆ ಗುರುಗಳು ಎಲ್ಲರಿಗೂ ತಮ್ಮವರೆಂಬ ಭಾವನೆ ತುಂಬಿದರು ಎಂದರು.
ಚಿನ್ನದಂಥಹ ಸಮಾಜ:
ಸುಧೀಂದ್ರ ತೀರ್ಥರು ಮುಟ್ಟಿದ್ದೆಲ್ಲವೂ ಚಿನ್ನವಾಗಿದೆ. ಸಮಾಜವೂ ಅದೇ ರೀತಿ ಬೆಳೆದಿದೆ. ಸಂಸ್ಕೃತದಿಂದಲೇ ಸಂಸ್ಕಾರ ಎಂದಿದ್ದ ಗುರುವರ್ಯರ ಆಶಯದ ಅನುಷ್ಠಾನ ನಮ್ಮಿಂದಾಗಬೇಕು. ದೇಶ,ಧರ್ಮ, ಸಮಾಜಕ್ಕೆ ಶಕ್ತಿ ತುಂಬುವ ಆಚಾರ ವಿಚಾರ ನಮ್ಮದಾಗಬೇಕು ಎಂದು ಅಖಿಲ ಭಾರತ ಸಂಸ್ಕಾರ ಭಾರತಿ ಸಂಘಟನಾ ಪ್ರಮುಖ ದಿನೇಶ್ ಕಾಮತ್ ಹೇಳಿದರು.
ಮಂಗಳೂರಿನ ಆಚಾರ್ಯ ಮಠದ ಪಂಡಿತ ನರಸಿಂಹ ಆಚಾರ್ಯ ಮಾತನಾಡಿ ಗುರುಕ್ಷೇತ್ರವೇ ಶ್ರೇಷ್ಠವಾದದ್ದು. ಶರಣಾಗತಿಯಿಂದ ಗುರುಕೃಪೆ ಪಡೆದುಕೊಳ್ಳಬೇಕು ಎಂದರು. ಅವರ ನೇತೃತ್ವದಲ್ಲಿ ಸಾಮೂಹಿಕ ಗುರು ಪ್ರಾರ್ಥನೆ ನಡೆಯಿತು.
ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಪದ್ಮನಾಭ ಪೈ, ಮಾಜಿ ಆಡಳಿತ ಮೊಕ್ತೇಸರ ಸಿ.ಎಲ್.ಶೆಣೈ, ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಧಾಕೃಷ್ಣ ಭಕ್ತ, ಜಿ.ಎಸ್.ಬಿ.ದೇವಾಲಯಗಳ ಒಕ್ಕೂಟದ ಕಾರ್ಯದರ್ಶಿ ಟಿ.ಗಣಪತಿ ಪೈ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವೇದವ್ಯಾಸ ಶೆಣೈ, ಮಾಜಿ ಶಾಸಕ ಎನ್, ಯೋಗೀಶ ಭಟ್, ಶಿರಾಲಿ ಮಹಾಮಾಯಾ ಮಹಾಗಣಪತಿ ದೇವಸ್ಥಾನದ ಟ್ರಸ್ಟಿ ವಾಮನ ಕಾಮತ್ ಉಪಸ್ಥಿತರಿದ್ದರು.
ಶ್ರೀ ವೀರವೆಂಕಟೇಶ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮಾಜದ 20 ಕುಟುಂಬಗಳಿಗೆ ತಲಾ ಹತ್ತು ಸಾವಿರ ಆರ್ಥಿಕ ನೆರವು ವಿತರಿಸಲಾಯಿತು.
ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಟ್ರಸ್ಟಿ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಕೊಂಚಾಡಿ ದೇವಳದ ಕಾರ್ಯದರ್ಶಿ ರತ್ನಾಕರ ಕಾಮತ್ ವಂದಿಸಿದರು. ಶಕುಂತಲಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು. ಕಿರುಚಿತ್ರ ಪ್ರದರ್ಶನ, ಸುರಮಣಿ ಮಹಾಲಕ್ಷ್ಮೀ ಶೆಣೈ ಬಳಗದಿಂದ ಗುರು ಗುಣಗಾಯನ, ಪಾಲ್ಗೊಂಡ ಸಮಾಜ ಬಾಂಧವರಿಂದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನಮನ ಸಲ್ಲಿಸಲಾಯಿತು. ಸಮಾರಂಭಕ್ಕೆ ಮೊದಲು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗುರುಪ್ರಾರ್ಥನೆ, ಅಲಂಕೃತ ರಜತ ಪಲ್ಲಕ್ಕಿಯಲ್ಲಿ ಗುರುಗಳ ಭಾವಚಿತ್ರದೊಂದಿಗೆ ಸಕಲ ಬಿರುದಾವಳಿ ಸಹಿತ ಸಂಘನಿಕೇತನದವರೆಗೆ ಮೆರವಣಿಗೆ ನಡೆಯಿತು.
ಗುರು ಸಂಯಮೀಂದ್ರ ತೀರ್ಥರಿಗೇ ನಿಷ್ಠರಾಗಿ…
ಸುಧೀಂದ್ರ ತೀರ್ಥ ಸ್ವಾಮೀಜಿಯವರು ನೀಡಿರುವ ಸ್ಪಷ್ಟ ಸಂದೇಶದಂತೆ ಅವರ ಉತ್ತರಾಧಿಕಾರಿಯಾಗಿ ಮಠಾಧಿಪತಿಯಾಗಿ ಗುರು ಸಂಯಮೀಂಧ್ರ ತೀರ್ಥ ಸ್ವಾಮೀಜಿಯವರು ಸಮಾಜವನ್ನು ಸರಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಅಂದು ಗುರು ಸುಧೀಂದ್ರರ ಮನಸ್ಸು ನೋಯಿಸಿದವರು ಇಂದಿಗೂ ಸಮಾಜವನ್ನು ವಿಂಗಡಿಸುವ ಕೆಲಸದಲ್ಲಿ ಸಕ್ರಿಯರಾಗಿ ಅರ್ಥಹೀನ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಲೇ ಇದ್ದಾರೆ ಎಂದು ಬೆಂಗಳೂರು ಶ್ರೀ ಕಾಶೀಮಠದ ಕಾರ್ಯದರ್ಶಿ ನಾರಾಯಣ ಶೆಣೈ ಹೇಳಿದರು.
ಶ್ರೀ ಕಾಶೀಮಠ ಸಂಸ್ಥಾನದ ಆರ್ಥಿಕ ವ್ಯವಹಾರಗಳು ಪಾರದರ್ಶಕವಾಗಿದ್ದು ಯಾವುದೇ ಆರೋಪ ಎದುರಾದಾಗಲೂ ಕಾನೂನನ್ನು ಗೌರವಿಸಿ ಯಶಸ್ಸು ಕಂಡಿದ್ದೇವೆ. ಸಮಾಜವು ಇಂತಹ ಆರೋಪಗಳಿಗೆ ವಿಚಲಿತರಾಗುವ ಅಗತ್ಯವಿಲ್ಲ. ಸತ್ಯದ ಹಾದಿಯಲ್ಲಿ ವಂಚನೆಯಿಲ್ಲದೇ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದಿರುವ ಸಮಾಜವು ವಿಘಟನೆಯ ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಗುರುವರ್ಯರ ಆಶಯದಂತೆ ಅವರ ಉತ್ತರಾಧಿಕಾರಿಯಾಗಿರುವ ಶ್ರೀ ಕಾಶೀಮಠಾಧೀಶರ ಮಾರ್ಗದರ್ಶನದಲ್ಲೇ ಮುನ್ನಡೆಯಲಿದೆ ಎಂದಾಗ ಸಭೆ ಜಯಘೋಷಗಳಿಂದ ನಿರ್ಧಾರವನ್ನು ಬೆಂಬಲಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.