ಬೆಳ್ತಂಗಡಿ : ಕಾರ್ತಿಕ ಮಾಸದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಲಕ್ಷದೀಪೋತ್ಸವ ಗುರುವಾರ ಶುಭಾರಂಭ ಕಂಡ ಸಂದರ್ಭದಲ್ಲಿ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಕನ್ನಡ ಡಿಂಡಿಮ ಮೊಳಗಿಸಿದರು. ಸಾಮಾಜಿಕ ಹಿತರಕ್ಷಣೆಯ ಸಂಕಲ್ಪದ ಪ್ರತಿಜ್ಞೆಯ ಪ್ರಜ್ಞೆಯನ್ನು ಮೂಡಿಸಿದರು. ಆ ಮೂಲಕ ನಾಡು-ನುಡಿಯ ಬೆಳವಣಿಗೆಯ ಸ್ಟಷ್ಟ ಹಾದಿಯನ್ನು ತೋರಿದರು.
ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿದ ಸಾವಿರಾರು ಭಕ್ತಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರ ನುಡಿನಮನ ಭಿನ್ನವಾಗಿತ್ತು. ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಿಗರ ಹೊಣೆಗಾರಿಕೆ ಏನಾಗಬೇಕು ಎಂಬುದನ್ನು ಅವರ ಮಾತುಗಳು ನೆನಪಿಸಿದವು. ಕನ್ನಡದ ಭಾಷಿಕ ಸೊಗಡನ್ನು ಉಳಿಸಿಕೊಳ್ಳುವ ಸದಾಶಯದೊಂದಿಗೆ ಅವರು ಸಾಮಾಜಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ರೂಢಿಸಿಕೊಳ್ಳುವ ಅವಶ್ಯಕತೆಯನ್ನು ಮನಗಾಣಿಸಿದರು. ನಾಡು-ನುಡಿ, ಆರಾಧನಾ ಭಾವದ ಮಹತ್ವದ ಬಗ್ಗೆ ಮಾತನಾಡುತ್ತಲೇ ದೇಶದಲ್ಲಿ ನಡೆದಿರುವ ಬದಲಾವಣೆಯ ಪ್ರಕ್ರಿಯೆಗೆ ಪ್ರಾಮಾಣಿಕ ಪ್ರಜೆಯಾಗಿ ಹೇಗೆ ಸಾಥ್ ನೀಡಬೇಕು ಎಂಬುದರ ಬಗ್ಗೆ ಮೌಲಿಕ ಸಲಹೆ ನೀಡಿದರು.
ಕೃತಜ್ಞತೆಗಳನ್ನು ಹೇಳುವಾಗ ಅನೇಕ ಜನರು ಇಂಗ್ಲಿಷ್ ಭಾಷೆಯನ್ನೇ ಅವಲಂಬಿಸುತ್ತಾರೆ. ಥ್ಯಾಂಕ್ಸ್ ಎನ್ನುತ್ತಾರೆ. ಧನ್ಯವಾದಗಳು ಎಂದು ಹೇಳುವುದಿಲ್ಲ. ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುವ ಸಂದರ್ಭದಲ್ಲೂ ಅನ್ಯಭಾಷೆಯನ್ನೇ ನೆಚ್ಚಿಕೊಳ್ಳುತ್ತಾರೆ. ಹ್ಯಾಪಿ ಬರ್ತ್ ಡೇ ಎನ್ನುತ್ತಾರೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳುವುದಿಲ್ಲ. ನಮ್ಮ ಭಾಷೆಯಲ್ಲಿಯೇ ಶುಭಾಶಯ-ಕೃತಜ್ಞತೆಯ ಭಾವಗಳನ್ನು ವ್ಯಕ್ತಪಡಿಸುವ ಅವಶ್ಯಕತೆ ಇದೆ. ಅದು ನಮ್ಮ ನುಡಿಯನ್ನು ಉಳಿಸಿಕೊಳ್ಳುವ ಹಾದಿ ಎಂದು ಅವರು ಅಭಿಪ್ರಾಯಪಟ್ಟರು.
ಪಾದಯಾತ್ರೆಗೆ ಧಾರ್ಮಿಕತೆಯ ಜೊತೆಗೆ ಆರೋಗ್ಯ ಪ್ರಜ್ಞೆಯ ಆಯಾಮವೂ ಇದೆ. ಇದರಿಂದ ದೇಹ ಮತ್ತು ಮನಸ್ಸುಗಳೆರಡರ ನಿಯಂತ್ರಣ ಸಾಧ್ಯವಾಗುತ್ತದೆ. ದೈಹಿಕ-ಮಾನಸಿಕ ಸಶಕ್ತತೆಗೆ ಪೂರಕವಾಗುತ್ತದೆ. ಆ ಮೂಲಕ ವ್ಯಕ್ತಿತ್ವ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಮನಸ್ಸಿನ ಮಾಲಿನ್ಯದೊಂದಿಗಿನ ವ್ಯಕ್ತಿಗಳಿಂದ ಪ್ರಯೋಜನವಿಲ್ಲ. ದೇವಸ್ಥಾನದಂತಹ ಧಾರ್ಮಿಕ ಕೇಂದ್ರಗಳು ಮನಸ್ಸಿನ ಮಾಲಿನ್ಯವನ್ನು ತೊಳೆದು ವ್ಯಕ್ತಿತ್ವಗಳನ್ನು ಶುದ್ಧೀಕರಿಸುತ್ತವೆ. ಸಾಮಾಜಿಕ ಶುದ್ಧೀಕರಣಕ್ಕೆ ನೆರವಾಗುತ್ತವೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶುದ್ಧೀಕರಣ ಪ್ರಕ್ರಿಯೆ ಶುರುವಾಗಿದೆ. ಸ್ವಚ್ಛಭಾರತದ ವಿನೂತನ ಪರಿಕಲ್ಪನೆಯೊಂದಿಗೆ ಹೆಜ್ಜೆಯಿರಿಸಿರುವ ಅವರ ಪ್ರಯತ್ನಗಳಿಗೆ ಪ್ರಜೆಗಳೆಲ್ಲರೂ ಬೆಂಬಲ ನೀಡಬೇಕಿದೆ. ನೋಟುಗಳನ್ನು ಬದಲಾಯಿಸಿ ಕಪ್ಪುಹಣದ ವಿರುದ್ಧದ ಆಡಳಿತಾತ್ಮಕ ಪ್ರಯತ್ನಗಳಿಗೆ ಚಾಲನೆ ನೀಡಿದ್ದಾರೆ. ಬದಲಾವಣೆ ಬಯಸುವ ಪ್ರತಿಯೊಬ್ಬರೂ ಪ್ರಧಾನಿಯವರ ದಿಟ್ಟತನದ ಕ್ರಮಗಳನ್ನು ಬೆಂಬಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶ್ರೀಮತಿ ಹೇಮಾವತಿ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್, ಡಾ.ಬಿ.ಯಶೋವರ್ಮ, ಡಾ.ಮೋಹನ ನಾರಾಯಣ ಉಪಸ್ಥಿತರಿದ್ದರು. ಬೆಳ್ತಂಗಡಿಯ ವಕೀಲ ಬಿ.ಕೆ ಧನಂಜಯ್ ರಾವ್ ಸ್ವಾಗತಿಸಿದರು. ಕಿಶೋರ್ ಕುಮಾರ್ ವಂದಿಸಿದರು. ಶ್ರೀನಿವಾಸ್ರಾವ್ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಸುಷ್ಮಾ ಉಪ್ಪಿನ್ ಇಸಳೂರು
ಚಿತ್ರಗಳು: ಚೈತನ್ಯ ಕುಡಿನಲ್ಲಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.