ಸುಳ್ಯ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ ವಿತರಿಸಲು ಮೀಸಲಿರಿಸಿದ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಸುಳ್ಯ ತಾಲೂಕು ಡಿ.ಸಿ.ಮನ್ನಾ ಹೋರಾಟ ಸಮಿತಿ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಅಚ್ಚುತ ಮಲ್ಕಜೆ ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸುಮಾರು 2500 ಎಕ್ರೆಗಳಷ್ಟು ಡಿ.ಸಿ.ಮನ್ನಾ ಭೂಮಿ ಇದೆ. ಎಲ್ಲಾ ಗ್ರಾಮಗಳಲ್ಲಿರುವ ಜಾಗದ ವಿವರ ನೀಡಬೇಕು, ಜಾಗದ ಅಡಂಗಲ್ಲನ್ನು ಪರಿಶೀಲಿಸಲು ಸಮಿತಿಯ ಸದಸ್ಯರಿಗೆ ಅನುಮತಿ ನೀಡಬೇಕು.
ಗುರುತಿಸಲಾದ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು, ಡೀಮ್ಡ್ ಫಾರೆಸ್ಟ್ನಲ್ಲಿರುವ ಡಿ.ಸಿ.ಮನ್ನಾ ಭೂಮಿಯನ್ನು ಪ್ರತ್ಯೇಕಿಸಿ ಗುರುತಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಮೇ.ಏಳರಂದು ಹೋರಾಟ ಸಮಿತಿಯ ವತಿಯಿಂದ ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ಸಭೆ ಸೇರಿ ಚರ್ಚಿಸಿ ತಾಲೂಕು ಕಚೇರಿಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.
ಸುಳ್ಯ ತಾಲೂಕಿನಲ್ಲಿ ಮೀಸಲಿಟ್ಟ ಡಿ.ಸಿ.ಮನ್ನಾ ಭೂಮಿ ಬಹುತೇಕ ಆಕ್ರಮಣ ಆಗಿದೆ. ಆಕ್ರಮಣ ಮಾಡಿರುವ ಜಾಗಕ್ಕೆ ಬದಲಾಗಿ ಸೂಕ್ತವಾದ ಸ್ಥಳವನ್ನು ಬೇರೆಡೆ ಗುರುತಿಸಿ ವಿತರಿಸಬೇಕು. ಈಗಾಗಲೇ ಸುಮಾರು ೨೦೦ ಕ್ಕೂ ಹೆಚ್ಚು ನಿವೇಶನ ರಹಿತರು ಡಿ.ಸಿ.ಮನ್ನಾ ಭೂಮಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಅರ್ಜಿ ಸಲ್ಲಿಸಲಿದ್ದಾರೆ ಅವರಿಗೆ ಭೂಮಿಯನ್ನು ಗುರುತಿಸಿ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜಯಕುಮಾರ್ ಪೈಚಾರ್, ಪದಾಧಿಕಾರಿಗಳಾದ ನಾರಾಯಣ ಜಟ್ಟಿಪಳ್ಳ, ನಂದರಾಜ ಸಂಕೇಶ, ಶಂಕರ್ ಪೆರಾಜೆ, ಆನಂದ ಕೆಂಬಾರೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.