ಬಂಟ್ವಾಳ : ಬಿ.ಸಿ.ರೋಡಿನ ಹಳೆ ತಾಲೂಕು ಪಂಚಾಯತ್ ಕಚೇರಿ ಬಳಿ ಖಾಸಗಿ ದ್ವಿಚಕ್ರ ವಾಹನಗಳದ್ದೆ ಕಾರುಬಾರು. ಇದರಿಂದಾಗಿ ಇಲ್ಲಿನ ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರು ನಿತ್ಯ ತೊಂದರೆ ಪಡುವಂತಾಗಿದೆ.
ದಿನಬೆಳಗಾದರೆ ಸಾಕು ದ್ವಿಚಕ್ರ ವಾಹನಗಳು ಇಲ್ಲಿ ಸಾಲುಗಟ್ಟಿ ನಿಲ್ಲುತ್ತದೆ. ಇವುಗಳಲ್ಲಿ ಕೆಲವು ನಾಡಕಚೇರಿ, ಆಧಾರ್ ನೋಂದಾಣಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಗೆ ಬರುವ ಸಾರ್ವಜನಿಕರಿಗೆ ಸೇರಿದ ದ್ವಿಚಕ್ರವಾಹನಗಳಾದರೆ ಬಹುತೇಕ ಇಲ್ಲಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುವ ಮಂದಿಯದ್ದಾಗಿರುತ್ತದೆ. ಗ್ರಾಮೀಣ ಭಾಗಗಳಿಂದ ತಮ್ಮ ದ್ವಿಚಕ್ರ ವಾಹನಗಳಲ್ಲಿ ಬಂದು ಹಳೇ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳುತ್ತಾರೆ.
ಮತ್ತೆ ವಾಪಸ್ಸಾಗುವುದು ಸಂಜೆ ಕಳೆದ ಬಳಿಕವೇ.ಇನ್ನೂ ಕೆಲವು ವಾಹನಗಳು ವಾರಗಟ್ಟಲೆ ಇಲ್ಲೇ ಇರುತ್ತದೆ. ಇದರೊಂದಿಗೆ ಪ್ರತಿನಿತ್ಯ ವಿವಿಧ ಕಚೇರಿಗೆಳಿಗೆ ಭೇಟಿ ನೀಡುವ ಸಾರ್ವಜನಿಕರು ಇಲ್ಲೇ ಪಾರ್ಕಿಂಗ್ ಮಾಡುವುದರಿಂದ ಇಲ್ಲಿರುವ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ವಾಹನ ಪಾರ್ಕಿಂಗ್ ಮಾಡಲು ಪ್ರತ್ಯೇಕ ಸ್ಥಳ ಹುಡುಕಿಕೊಳ್ಳುವಂತಾಗಿದೆ. ಹಳೆ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನಗಳೇ ತುಂಬಿ ಹೋಗಿರುವುದರಿಂದ ಸಾರ್ವಜನಿಕರು ಪರದಾಡಬೇಕಾಗಿದೆ. ಇಲ್ಲಿಗೆ ತಾಲೂಕು ಕಚೇರಿಯ ಕೆಲ ಶಾಖೆಗಳು ಸ್ಥಳಾಂತರಗೊಂಡ ಬಳಿಕ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ.
ತಹಶೀಲ್ದಾರ್ ಸೂಚನೆ: ಈ ಕಟ್ಟಡಕ್ಕೆ ವಿವಿಧ ಕಛೇರಿ ಸ್ಥಳಾಂತರ ಗೊಂಡ ಬಳಿಕ ಈ ಆವರಣದಲ್ಲಿ ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಆವರಣದೊಳಗೆ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು ಎಂದು ತಾಲೂಕು ತಹಶೀಲ್ದಾರರು ಸಹಿಮಾಡಿದ ನೋಟಿಸ್ ಹಚ್ಚಲಾಗಿದೆ ಆದರೆ, ಇಲ್ಲಿನ ದ್ವಿಚಕ್ರವಾಹನ ಸವಾರರು ಇದಕ್ಕೆ ಬಲೆ ನೀಡುತ್ತಿಲ್ಲ, ನೋಟಿಸ್ ನ ಪಕ್ಕದಿಂದಲೇ ವಾಹನ ನುಗ್ಗಿಸಿ ಆವರಣದಲ್ಲೇ ಪಾರ್ಕ್ ಮಾಡಿದ್ದಾರೆ.
ಸೂಚನೆಯನ್ನು ಓದಿಯೂ ಅದು ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ವರ್ತಿಸುವವರಿಂದಲೇ ಇಲ್ಲಿ ವಾಹನಗಳ ಸಂಖ್ಯೆ ಇಮ್ಮಡಿಗೊಳ್ಳುತ್ತಿದೆ. ತಹಸೀಲ್ದಾರ ರ ಆದೇಶವನ್ನು ಪಾಲಿಸದ ದ್ವಿಚಕ್ರ ವಾಹನ ಸವಾರರ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲಾಗದೆ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಕೇವಲ ಸೂಚನ ಫಲಕ ಅಳವಡಿಸುವ ಬದಲು ಇಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸುವ ಅಥವಾ ಪೊಲೀಸ್ ಇಲಾಖೆಗೆ ಒಪ್ಪಿಸುವ ಕೆಲಸ ಮಾಡಿದರೆ ಅಕ್ರಮ ವಾಹನ ಪಾರ್ಕಿಂಗ್ನಿಂದ ಮುಕ್ತಿ ಸಿಗಬಹುದು ಎನ್ನುವುದು ನಾಗರಿಕರ ಸಲಹೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.